'ಸ್ವಯಂ'ನಲ್ಲಿವೆ 15910ಕ್ಕೂ ಹೆಚ್ಚು ಉಚಿತ ಕೋರ್ಸ್‌ಗಳು; ಸ್ನಾತಕೋತ್ತರ ಪದವಿಯವರೆಗಿನ ಕಲಿಕೆಗೆ ಆನ್‌ಲೈನ್ ವೇದಿಕೆ
SWAYAM: ಸ್ವಯಂನಲ್ಲಿ 15,910ಕ್ಕೂ ಹೆಚ್ಚು ಉಚಿತ ಕೋರ್ಸ್‌ಗಳಿವೆ. ಸ್ವಯಂ ವೆಬ್‌ಸೈಟ್‌ಗೆ ಎಲ್ಲರೂ ಉಚಿತವಾಗಿ ಭೇಟಿ ನೀಡಬಹುದು. ಈವರೆಗೆ 5 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡು ಕೋರ್ಸ್ ಕಲಿತಿದ್ದಾರೆ. ಬಹುತೇಕ ಎಲ್ಲಾ ವಿಭಾಗಗಳಿಗೆ ಸಂಬಂಧಿಸಿದ ಹಲವು ಕೋರ್ಸ್‌ಗಳಿ ಇಲ್ಲಿವೆ.

ಕಲಿಯುವ ಆಸಕ್ತಿ ಇರುವವರು ಹೇಗಾದರೂ ಕಲಿಯಬಹುದು. ದುಬಾರಿ ಶುಲ್ಕ ಪಾವತಿಸಿ ಪ್ರಮುಖ ಕೋರ್ಸ್ ಮಾಡಬೇಕೆಂದೇನೂ ಇಲ್ಲ. ಹಲವು ಕೋರ್ಸ್‌ಗಳನ್ನು ಉಚಿತವಾಗಿ, ಪ್ರಮಾಣಪತ್ರದೊಂದಿಗೆ ಮುಗಿಸಬಹುದು. ಅದರಲ್ಲೂ ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಪ್ರಮುಖ ವೃತ್ತಿಪರ ಕೋರ್ಸ್‌ಗಳನ್ನು ಕಲಿಯಬಹುದು. ಭಾರತ ಸರ್ಕಾರವೇ ಉಚಿತ ಕೋರ್ಸ್‌ಗಳನ್ನು ನೀಡುತ್ತಿದೆ. ಅದುವೇ ‘ಸ್ವಯಂ’ (SWAYAM). ಇದು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಹಲವು ಶೈಕ್ಷಣಿಕ ಕೋರ್ಸ್‌ಗಳನ್ನು ಒದಗಿಸುವ ಭಾರತ ಸರ್ಕಾರದ ಉಚಿತ ಆನ್‌ಲೈನ್ ಕೋರ್ಸ್‌ಗಳ ಪೋರ್ಟಲ್ ಆಗಿದೆ. ಇದರ ಕುರಿತು ಹಲವರಿಗೆ ತಿಳಿದಿರುವುದಿಲ್ಲ. ಅಂಥವರಿಗಾಗಿ ಈ ಮಾಹಿತಿ.
ಸ್ವಯಂ (SWAYAM) ಎಂಬ ಸಂಸ್ಕೃತ ಪದದ ಇಂಗ್ಲೀಷ್ ಪೂರ್ಣ ರೂಪವೇ Study Webs of Active-learning for Young Aspiring Minds. ಅಂದರೆ, ಯುವ ಮಹತ್ವಾಕಾಂಕ್ಷಿ ಮನಸ್ಸುಗಳಿಗಾಗಿ ಸಕ್ರಿಯ ಕಲಿಕೆಯ ಅಧ್ಯಯನ ಜಾಲಗಳು ಎಂದು ಅರ್ಥ.
2017ರ ಜುಲೈ 9ರಂದು ಭಾರತದ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸ್ವಯಂ (SWAYAM) ಎಂಬ ಉಪಕ್ರಮವನ್ನುಆರಂಭಿಸಿದರು. ಇದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಈಗಿನ ಶಿಕ್ಷಣ ಸಚಿವಾಲಯ), ಡಿಜಿಟಲ್ ಇಂಡಿಯಾ ಅಡಿಯಲ್ಲಿ ಆರಂಭವಾಯ್ತು. ಇದರಲ್ಲಿ ಎಲ್ಲಾ ಮುಂದುವರಿದ ಶಿಕ್ಷಣ, ಪ್ರೌಢಶಾಲೆ ಮತ್ತು ಕೌಶಲ್ಯ ವಲಯದ ಕೋರ್ಸ್‌ಗಳನ್ನು ಉಚಿತವಾಗಿ ಪೂರ್ಣಗೊಳಿಸಬಹುದು.
ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಉಚಿತ
ಸ್ವಯಂ ವೆಬ್‌ಸೈಟ್‌ಗೆ ಎಲ್ಲರೂ ಉಚಿತವಾಗಿ ಭೇಟಿ ನೀಡಬಹುದು. ಭಾರತೀಯರು ಮಾತ್ರವಲ್ಲದೆ ವಿಶ್ವದ ಯಾವುದೇ ಮೂಲೆಯಿಂದಲೂ ಇಲ್ಲಿರುವ ಕೋರ್ಸ್ ಮಾಡಬಹುದು. 9ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಇಲ್ಲಿ ಕೋರ್ಸ್‌ಗಳಿವೆ. ಇದು IIT ಗಳು, IIM ಗಳು, IISER ಗಳು ಮುಂತಾದ ಕೇಂದ್ರ ಅನುದಾನಿತ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಅಧ್ಯಾಪಕರಿಗೆ ವಿದ್ಯಾರ್ಥಿಗಳಿಗೆ ಕಲಿಸಲು ಅನುವು ಮಾಡಿಕೊಡುತ್ತದೆ.
15,910ಕ್ಕೂ ಹೆಚ್ಚು ಕೋರ್ಸ್
ಸ್ವಯಂನಲ್ಲಿ 15,910ಕ್ಕೂ ಹೆಚ್ಚು ಕೋರ್ಸ್‌ಗಳಿವೆ. ಈವರೆಗೆ 5 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡು ಕೋರ್ಸ್ ಕಲಿತಿದ್ದಾರೆ. ಶಿಕ್ಷಣ ಸಚಿವಾಲಯ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)ಯು ಮೈಕ್ರೋಸಾಫ್ಟ್ ಸಹಯೋಗದೊಂದಿಗೆ SWAYAM ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದರಲ್ಲಿ ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ವಿಜ್ಞಾನ, ಗಣಿತ, ಮಾನವಿಕ, ಭಾಷೆ, ಕಲೆ ಮತ್ತು ಮನರಂಜನೆ, ಡಿಸೈನ್, ಆರೋಗ್ಯ ವಿಜ್ಞಾನ, ಹೀಗೆ ಬಹುತೇಕ ಎಲ್ಲಾ ವಿಭಾಗಗಳಿಗೆ ಸಂಬಂಧಿಸಿದ ಹಲವು ಕೋರ್ಸ್‌ಗಳಿವೆ.
ಸ್ವಯಂ ಮೂಲಕ ನೀಡಲಾಗುವ ಕೋರ್ಸ್‌ಗಳು ಉಚಿತವಾಗಿ ಲಭ್ಯವಿದೆ. ಆದರೆ ಪ್ರಮಾಣಪತ್ರದ ಅಗತ್ಯವಿರುವ ವಿದ್ಯಾರ್ಥಿಗಳು ನಾಮಿನಲ್ ಫೀಸ್ ಇರುವ ಪ್ರೊಕ್ಟರ್ಡ್ ಪರೀಕ್ಷೆ ಬರೆಯಬೇಕಾಗುತ್ತದೆ. ಅಧಿಕೃತ ವೆಬ್‌ಸೈಟ್‌ಗೆ (https://swayam.gov.in/) ಹೋಗಿ ನೀವಾಗಿಯೇ ನೋಂದಾಯಿಸಿಕೊಳ್ಳಬಹುದು. Register as Student ಮೇಲೆ ಕ್ಲಿಕ್ ಮಾಡಿ. ನೋಂದಣಿಗೆ ನಿಮ್ಮ ಹೆಸರು, ಇಮೇಲ್ ಐಡಿಯ ಅಗತ್ಯವಿದೆ.