ಪರೀಕ್ಷೆ–ಮೌಲ್ಯಮಾಪನ–ಫಲಿತಾಂಶವೆ೦ಬ ನೀರಸ ಪದ್ಧತಿ; ಇನ್ನಾದರೂ ಬದಲಾಗಲಿ ಶಿಕ್ಷಣ ವ್ಯವಸ್ಥೆ– ನಂದಿನಿ ಟೀಚರ್ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಪರೀಕ್ಷೆ–ಮೌಲ್ಯಮಾಪನ–ಫಲಿತಾಂಶವೆ೦ಬ ನೀರಸ ಪದ್ಧತಿ; ಇನ್ನಾದರೂ ಬದಲಾಗಲಿ ಶಿಕ್ಷಣ ವ್ಯವಸ್ಥೆ– ನಂದಿನಿ ಟೀಚರ್ ಅಂಕಣ

ಪರೀಕ್ಷೆ–ಮೌಲ್ಯಮಾಪನ–ಫಲಿತಾಂಶವೆ೦ಬ ನೀರಸ ಪದ್ಧತಿ; ಇನ್ನಾದರೂ ಬದಲಾಗಲಿ ಶಿಕ್ಷಣ ವ್ಯವಸ್ಥೆ– ನಂದಿನಿ ಟೀಚರ್ ಅಂಕಣ

ನಂದಿನಿ ಟೀಚರ್ ಬರಹ: ನಮ್ಮ ಶಿಕ್ಷಣವೀಗ 21ನೇ ಶತಮಾನಕ್ಕೆ ತಕ್ಕಂತೆ ಸಾಗಬೇಕು ನಿಜ. ಆದರೆ ಮೂಲಭೂತ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಬದಲಾವಣೆ ತಂದುಕೊಳ್ಳದೇ, ಕೇವಲ ಹೊಸ ವಿಷಯಗಳನ್ನು ಶಿಕ್ಷಣದ ಪಠ್ಯಕ್ರಮದಲ್ಲಿ ಜೋಡಿಸುವುದಾದರೆ ಅದರಿಂದ ದೇಶದ ಅಭಿವೃದ್ದಿಗೆ ಯಾವ ಪ್ರಯೋಜನವೂ ಇಲ್ಲ.

ನಂದಿನಿ ಟೀಚರ್ ಅಂಕಣ
ನಂದಿನಿ ಟೀಚರ್ ಅಂಕಣ

ಮಾರ್ಚ್‌ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕೇವಲ ಬೇಸಿಗೆ ಧಗೆಯಲ್ಲ, ಮಕ್ಕಳ ಪರೀಕ್ಷೆ ಮತ್ತು ಫಲಿತಾಂಶವೆಂಬ ಧಗೆಯೂ ಸೇರಿಕೊಳ್ಳುತ್ತದೆ. ಮಕ್ಕಳು ತೆಗೆಯುವ ಅಂಕಗಳ ಮೇಲೆ ಅವರು ಮುಂದಿನ ಜೀವನದಲ್ಲಿ ಹೇಗಿರುತ್ತಾರೆ ಎನ್ನುವ ಲೆಕ್ಕಾಚಾರ ಈ ಧಗೆಯನ್ನು ದುಪ್ಪಟ್ಟುಗೊಳಿಸುತ್ತದೆ. ಅದರಲ್ಲೂ ಮಕ್ಕಳು ಎಸ್‌ಎಸ್‌ಎಲ್‌ಸಿ ಅಥವಾ ದ್ವಿತೀಯಗೆ ಬಂದಿದ್ದರಂತೂ ಅಂತಹ ಮನೆಗಳಲ್ಲಿ ಪಾಲಕರ ಸ್ಥಿತಿಯನ್ನು ವಿವರಿಸಲು ಸಾಧ್ಯವಿಲ್ಲ. ಬೇಡವೇ ಈ ಒತ್ತಡ. ಅದೂ ಎಷ್ಟು ಅಂಕ ತೆಗೆದರೂ ಸಾಲದೆನ್ನುವ ಇಂದಿನ ಸಮಯದಲ್ಲಿ. ಇದೆಲ್ಲದರ ಪರಿಣಾಮ– ಒತ್ತಡವನ್ನು ಅನುಭವಿಸಲಾಗದ ವಿದ್ಯಾರ್ಥಿ ಮಾನಸಿಕವಾಗಿ ಕುಸಿಯುತ್ತಾನೆ.

ಗಮನಿಸಿ, ಈ ಪರೀಕ್ಷಾ ಫಲಿತಾಂಶಗಳು ಕೇವಲ ವಿದ್ಯಾರ್ಥಿಯ ಜೀವನದ ಭವಿಷ್ಯವನ್ನಲ್ಲದೇ ಶಾಲೆ/ಕಾಲೇಜುಗಳ ಬೇಡಿಕೆಯತ್ತಲೂ ತಮ್ಮ ಪ್ರಭಾವ ಬೀರುತ್ತವೆನ್ನುವುದನ್ನು ನಾವು ಮರೆಯುವಂತಿಲ್ಲವಲ್ಲ. ಪ್ರತಿಶತ 100 ಫಲಿತಾಂಶ ನೀಡುವುದರ ಜೊತೆಗೆ ಯಾವ ಶಾಲೆಯಲ್ಲಿ ಮಕ್ಕಳು ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಾರೋ ಅಂತಹ ಶಾಲೆಗಳಿಗೆ/ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪಾಲಕರು ಮುಗಿ ಬೀಳುವುದರಿಂದ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಫೋಟೊಗಳನ್ನೊಳಗೊಂಡ ‘ಫ್ಲೆಕ್ಸ್‘ ಶಿಕ್ಷಣ ಸಂಸ್ಥೆಗಳ ಮುಂದೆ ರಾರಾಜಿಸುತ್ತದೆ. ಯೋಚಿಸಿ, ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆವ ಮಕ್ಕಳನ್ನೇ ದಾಖಲು ಮಾಡಿಕೊಳ್ಳುವ ಕಾಲೇಜುಗಳಲ್ಲಿ ಮಕ್ಕಳು 12ನೇ ತರಗತಿ ಅಥವಾ ಪಿಯುಸಿಯಲ್ಲಿ ಹೆಚ್ಚು ಅಂಕ ತೆಗೆಯುವುದು ಸ್ವಾಭಾವಿಕವಷ್ಟೇ? ಸಾಧಾರಣ ವಿದ್ಯಾರ್ಥಿಗೆ ತರಬೇತಿ ನೀಡಿ ಆ ವಿದ್ಯಾರ್ಥಿ ಹೆಚ್ಚು ಅಂಕ ತೆಗೆಯುವಂತಾದರೆ ಅಂತಹ ಶಿಕ್ಷಣ ಸ೦ಸ್ಥೆಯನ್ನು ಉತ್ತಮವೆನ್ನಬಹುದು ಅಲ್ಲವೇ.

ಗುರುವಿನ ವ್ಯಕ್ತಿತ್ವದ ಮೇಲೆ ವಿದ್ಯಾರ್ಥಿಯ ಬೆಳವಣಿಗೆ ಅವಲಂಬಿತವಾಗುವ ಕಾಲವಿತ್ತು. ಆಗ ವಿದ್ಯಾರ್ಥಿ ಗುರು ಪರಿವಾರದ ಸದಸ್ಯನೇ ಆಗಿ ಪರಿವರ್ತನೆಯಾಗಿ ಬಿಡುತ್ತಿದ್ದ. ಗುರುಗಳ ಅನುಚರನಾಗಿದ್ದು, ಅವರು ವಿಧಿಸಿದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುತ್ತ ವಿದ್ಯೆಯಲ್ಲಿ ಪಾರಂಗತನಾಗುತ್ತಿದ್ದನು. ಶ್ರವಣಂ ತು ಗುರೋಃ ಪೂರ್ವಂ ಮನನಂ ತದನಂತರಮ್ ನಿದಿಧ್ಯಾಸನಮಿತ್ಯೇತತ್ಪೂರ್ಣ ಬೋಧಸ್ಯ ಕಾರಣ‌ಂ. ಶ್ರವಣ - ಆಲಿಸಿದ ಪಾಠವನ್ನು, ಮನನ- ಸತತ ಅಧ್ಯಯನ ಮಾಡಿ ನಂತರ ನಿಧಿಧ್ಯಾಸನ - ನಿರಂತರ ಧ್ಯಾನ ಮಾಡುವುದು ಕಲಿಕೆಯ ಭಾಗವಾಗಿತ್ತು. ಶಿಷ್ಯನ ಕಲಿಕೆ ಗುರುವಿಗೆ ಒಪ್ಪಿಗೆಯಾದ ನಂತರವಷ್ಟೇ ಶಿಷ್ಯನಿಗೆ ಮುಂದೆ ಹೋಗಲು ಅವಕಾಶ. ಶಿಷ್ಯನ ಮೌಲ್ಯಮಾಪನ ನಿರಂತರವಾಗಿರುತ್ತಿತ್ತು. ಕಲಿಕೆಯಲ್ಲಿ ವಿಷಯದ ಪರಿಕಲ್ಪನೆಯ ಅರಿವು ಮುಖ್ಯವಾಗಿರುತ್ತಿತ್ತು. ಹಿಂದಿನ ಪಾಠವನ್ನು ಪೂರ್ಣವಾಗಿ ಒಪ್ಪಿಸುವವರೆಗೆ ಮುಂದಿನ ಪಾಠಕ್ಕೆ ಹೋಗಲು ಅವಕಾಶವಿರುತ್ತಿರಲಿಲ್ಲ. ಪಾಣಿನಿಯ ಕಾಲದಲ್ಲಿ ಪಠ್ಯಕ್ರಮವನ್ನು ವೃತ್ತಗಳಲ್ಲಿ ಅಳವಡಿಸಿ ವಿದ್ಯಾರ್ಥಿ ಒಂದು ವೃತ್ತವನ್ನು ಸ೦ಪೂರ್ಣವಾಗಿ ಕಲಿತ ನಂತರವೇ ಎರಡನೇ ವೃತ್ತದ ಪಠಣಕ್ಕೆ ಸಾಗಬಹುದಿತ್ತು. ಕಲಿತು ಮುಂದೆ ಸಾಗುವ ವಿದ್ಯಾರ್ಥಿಗಳು ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ಗುರುಗಳಿಗೆ ನೆರವಾಗುತ್ತಿದ್ದರು. ವಿದ್ಯಾರ್ಥಿಗಳ ಜಾಣ್ಮೆಯ ಮೇರೆಗೆ ಅವರನ್ನು ವಿಂಗಡಿಸುವ ಕ್ರಮವನ್ನು ಕೌಟಿಲ್ಯನೂ ಹೇಳಿದ್ದಾನೆ. ಬೌದ್ಧ-ಕಾಲದಲ್ಲಿಯೂ ಸಹ ಇದೇ ಪದ್ಧತಿಯಿದ್ದ ಬಗ್ಗೆ ನಮಗೆ ಮಾಹಿತಿ ದೊರಕುತ್ತದೆ. ಬೌದ್ಧರಲ್ಲಿ ‘ಸ್ವ ಮೌಲ್ಯಮಾಪನ‘ದ ಪದ್ಧತಿಯೂ ಜಾರಿಯಲ್ಲಿತ್ತು. ಭಿಕ್ಷುಗಳು ಸಾಮೂಹಿಕವಾಗಿ ಪಠನ ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿದ ಭಿಕ್ಷುಗಳಿಗೆ ಶಿಕ್ಷೆಯ ಪ್ರಮಾಣವೂ ಇತ್ತು.

ಆದರೆ ಇ೦ದು ಕೇವಲ ಪರೀಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಾಗುವ ಬೋಧನಾ ಕ್ರಮ. ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರಿಸುವ ಮಾದರಿಯನ್ನೂ ಶಿಕ್ಷಣ ಸಂಸ್ಥೆಗಳು/ಪರೀಕ್ಷಾ ತರಬೇತಿ ಕೇಂದ್ರಗಳು ಮಕ್ಕಳಿಗೆ ಹೇಳಿ ಕೊಡುವುದರಿಂದ ಮಕ್ಕಳು ವಿಷಯದ ಗಾಢ ಅಧ್ಯಯನಕ್ಕಿಳಿಯದೇ ಪರೀಕ್ಷೆ ದೃಷ್ಟಿಯಿಂದಲೇ ತಯಾರಿ ನಡೆಸಿ ಯಶಸ್ವಿಯಾಗುವವರೇ ಹೆಚ್ಚು. ಪರೀಕ್ಷೆಯ ಸಮಯದಲ್ಲಿ ಉತ್ತರಪತ್ರಿಕೆಯಲ್ಲಿ ಕಲಿತದ್ದನ್ನೆಲ್ಲಾ ಭಟ್ಟಿಯಿಳಿಸಿದ ತಕ್ಷಣವೇ ಮರೆತು ತಲೆ ಹಗುರಾಗಿಸಿಕೊಳ್ಳುವುದೂ ಸಾಮಾನ್ಯ. ಇದರ ಮು೦ದಿನ ಹoತದಲ್ಲಿ ಮಕ್ಕಳು ಬರೆದ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಶಿಕ್ಷಕರ ಕೈಯಲ್ಲೊಂದು ‘ಸ್ಕೀಮ್ ಆಫ್ ವ್ಯಾಲ್ಯುಯೇಷನ್‘ ಸಿದ್ಧವಿರುತ್ತದೆ. ಲಕ್ಷಾನುಗಟ್ಟಲೆ ಉತ್ತರಪತ್ರಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಮೌಲ್ಯಮಾಪನ ಮಾಡಿ ಫಲಿತಾಂಶವನ್ನು ಪ್ರಕಟಿಸಬೇಕಾದ ಒತ್ತಡದಲ್ಲಿರುವ ಶಿಕ್ಷಕ ಮೌಲ್ಯಮಾಪನ ಮಾಡುವಾಗ ವಿದ್ಯಾರ್ಥಿ ವಿಷಯವನ್ನು ಅದೆಷ್ಟು ಆಳವಾಗಿ ಗ್ರಹಿಸಿದ್ದಾನೆ ಅಥವಾ ಗ್ರಹಿಸಿದ್ದಾಳೆ ಎನ್ನುವುದನ್ನು ಗಮನಿಸುವ ತಮ್ಮ ಸೂಕ್ಷ್ಮತೆಯನ್ನು ಪಕ್ಕಕ್ಕಿಡಲೇಬೇಕಾದ ಪರಿಸ್ಥಿತಿ. ಯೋಚಿಸಿ ಕಲಿಕೆಯೆಂಬ ಪ್ರಕ್ರಿಯೆ ಪರೀಕ್ಷೆ ಮತ್ತು ಅoಕಗಳೆಂಬ ವ್ಯವಸ್ಥೆಗೆ ಸೋತು ಹಿಂದೆ ಸರಿದಿದೆ. ಶಿಕ್ಷಣದ ಮೂಲ ಉದ್ದೇಶವೇ ಜ್ಞಾನಾರ್ಜನೆ. ಪಡೆದ ಜ್ಞಾನ ವ್ಯಕ್ತಿಯ ಪ೦ಚಕೋಶಗಳನ್ನು ತಟ್ಟಿ ಉತ್ತಮ ಸಮಾಜದ ನಿರ್ಮಾಣವಾಗಬೇಕಲ್ಲವೇ! ಈ ರೀತಿಯ ಪ್ರಯತ್ನ ನಮ್ಮಿ೦ದಾಗುತ್ತಿದೆಯೇ? ಫಲಿತಾಂಶ ಪ್ರಕಟಣೆಯಾದ ನಂತರ ಹೆಚ್ಚು ಅಂಕ ಗಳಿಸಿದಾತ ಜಾಣ, ಜೀವನದ ಹಾದಿಯಲ್ಲಿ ಗೆಲುವು ಅವನದ್ದೇ ಅಥವಾ ಅವಳದ್ದೇ ಎನ್ನುವ ಭಾವ ಅದೆಷ್ಟು ಸರಿ? ಹೆಚ್ಚಿನ ಜ್ಞಾನಾರ್ಜನೆಗೆ ಅವಕಾಶವಿರದ, ಬಾಯಿ ತುತ್ತಿನ ಮಾದರಿಯಲ್ಲಿ ನಡೆವ 10+2 ವರೆಗಿನ ಶಿಕ್ಷಣ ಪದ್ಧತಿಯಿಂದ ಉನ್ನತ ಶಿಕ್ಷಣದ ಗುಣಮಟ್ಟಕ್ಕೂ ಹೊಡೆತ ಬಿದ್ದಿದೆ. ಸ್ವಯಿಚ್ಛೆಯಿಂದಲೋ ಪಾಲಕರ ಒತ್ತಾಯದಿಂದಲೋ ಪದವಿ ಕೋರ್ಸ್‌ಗಳಿಗೆ ಸೇರುವ ತರಗತಿಯಲ್ಲಿ ವಿದ್ಯಾರ್ಥಿಗಳಲ್ಲಿ ಉಪನ್ಯಾಸ ಕೇಳುವ, ಟಿಪ್ಪಣಿ ಮಾಡಿಕೊಂಡು ಅಧ್ಯಯನಕ್ಕಿಳಿವ ಪ್ರವೃತ್ತಿ ಇಂದಿನ ವಿದ್ಯಾರ್ಥಿಗಳಲ್ಲಿ ಕಾಣಿಸುವುದೇ ಇಲ್ಲ. ಪಾಠ ಮಾಡಿದ ಮೇಷ್ಟ್ರು ಅವರಿಗೆ ತಮ್ಮ ಪಿಪಿಟಿ ನೀಡಿ ಬಿಟ್ಟರೆ ಸಾಕು! ಅಲ್ಲಿಗೆ ಅವರು ಪರೀಕ್ಷೆಗೆ ಸಿದ್ಧರಾದಂತೆ. ಬರೆಯಲು ಸೋಮಾರಿತನ. ವಿಷಯ ಕುರಿತ ಸಂಶೋಧನಾ ಲೇಖನಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿ ಇದನ್ನು ಓದಿಕೊಂಡು ಬನ್ನಿ ಈ ಕುರಿತು ಚರ್ಚಿಸೋಣವೆಂದು ವಿದ್ಯಾರ್ಥಿಗಳಿಗೆ ಹೇಳಿದರೂ ಪ್ರಯೋಜನವಾಗದ ಸ್ಥಿತಿ. ‘ಇಂತಹ ಮಕ್ಕಳಿಗೆ ಪಾಠ ಮಾಡಲು ಮನಸ್ಸು ಬರುವುದಿಲ್ಲವೆಂದು ಅವಲತ್ತುಕೊಂಡರೆ‘ ‘ನಮ್ಮ ಕೆಲಸ ಪಾಠ ಮಾಡುವುದು ಅವರು ಕೇಳಿಸಿಕೊಳ್ಳದಿದ್ದರೆ ತಲೆ ಬಿಸಿ ನಮ್ಮದಲ್ಲ‘ ಎನ್ನುವ ಮನೋಭಾವ ಉಪನ್ಯಾಸಕರದ್ದು!

ನಮ್ಮ ಶಿಕ್ಷಣವೀಗ 21ನೇ ಶತಮಾನಕ್ಕೆ ತಕ್ಕಂತೆ ಸಾಗಬೇಕು. ಅದಕ್ಕಾಗಿ ಭಾರತದ ನಾವೀನ್ಯತೆ ಸಾಮರ್ಥ್ಯ ಮತ್ತು ಆಳವಾದ ತಂತ್ರಜ್ಞಾನದಲ್ಲಿ ಅದರ ಪಾತ್ರವನ್ನು ಹೆಚ್ಚಿಸುವ ಪ್ರಯತ್ನಗಳತ್ತ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೇಶದ ಶಿಕ್ಷಣ ತಜ್ಞರ ಗಮನ ಸೆಳೆದಿದ್ದಾರೆ. ಅಲ್ಲಿಗೆ AI, ಜೈವಿಕ ವಿಜ್ಞಾನಗಳು, ಜೈವಿಕ ತಂತ್ರಜ್ಞಾನ, ಆರೋಗ್ಯ ಮತ್ತು ವೈದ್ಯಕೀಯದ ಮೇಲೆ ಕೇಂದ್ರೀಕರಿಸುವ ಶಿಕ್ಷಣ ನಮ್ಮ ಸ೦ಸ್ಥೆಗಳಲ್ಲಿ ಮಕ್ಕಳಿಗೆ ದೊರಕುವಂತಾಗಬೇಕೆಂದಾಯ್ತು. ಮುಂದಿನ ತಂತ್ರಜ್ಞಾನ ಮಕ್ಕಳಿಗೆ ದೊರೆತರೆ ಚೆಂದವೇ, ಆದರೆ ಮೂಲಭೂತ ಶಿಕ್ಷಣದ ವ್ಯವಸ್ಥೆಯಲ್ಲಿ ನಾವು ಬದಲಾವಣೆ ತಂದುಕೊಳ್ಳದೇ ಕೇವಲ ಹೊಸ ವಿಷಯಗಳನ್ನು ಶಿಕ್ಷಣದ ಪಠ್ಯಕ್ರಮದಲ್ಲಿ ಜೋಡಿಸುವುದೆಂದಾರೆ ಅದರಿಂದ ದೇಶದ ಅಭಿವೃದ್ದಿಗೆ ಯಾವ ಪ್ರಯೋಜನವೂ ಕಾಣುವುದಿಲ್ಲ.

ಕಾಲವೊಂದು ಬರಬೇಕು ‘ನಮ್ಮಲ್ಲಿರುವ ಶಿಕ್ಷಕರು ಇಂತಹ ವಿಷಯಗಳಲ್ಲಿ ಸ೦ಶೋಧನೆಯಲ್ಲಿ ನಿರತರಾಗಿದ್ದು ಅವರ ಸ೦ಶೋಧನಾ ಲೇಖನಗಳು ಇಂತಲ್ಲಿ ಪ್ರಕಟವಾಗಿವೆ, ಇಂತಹ ನಮ್ಮ ಶಿಕ್ಷಕರ ತಂಡ ನಿಮ್ಮ ಮಗುವಿನ ಜ್ಞಾನದ ಹಾದಿಯಲ್ಲಿ ಬೆಳಕಾಗಿ ನಿಲ್ಲಲಿದ್ದಾರೆ‘ ಎ೦ದು ಶಿಕ್ಷಣ ಸಂಸ್ಥೆ ತಮ್ಮ ಶಾಲೆಗಳ ಮುಂದೆ ಫಲಕಗಳನ್ನು ಹಾಕಬೇಕು. ಆಗ ಶಿಕ್ಷಣ ವ್ಯವಸ್ಥೆ ಬದಲಾದಂತೆ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.