ಶಾಲೆಯಾಗಬೇಕು ಸಾಮಾಜಿಕ ಪರಿವರ್ತನಾ ಕೇಂದ್ರ, ಶಿಕ್ಷಕರಾಗಬೇಕು ಸಮಾಜ ಪರಿವರ್ತಕರು– ನಂದಿನಿ ಟೀಚರ್ ಅಂಕಣ
ನಂದಿನಿ ಟೀಚರ್ ಬರಹ: ಶಾಲೆಯಲ್ಲಿ ವಿದ್ಯಾರ್ಥಿಯತ್ತ ಸೂಕ್ಷ್ಮತೆಯ ಅರಿವು ಗುರುವಿಗಿರಬೇಕು. ಶಾಲೆ, ಮನೆ ಎರಡೂ ಕೈ ಜೋಡಿಸಿದಾಗ ಮಾತ್ರ ನಮ್ಮ ಮಕ್ಕಳನ್ನು ಮುಂದಿನ ಭವಿಷ್ಯದ ನಂದಾದೀಪಗಳಂತೆ ಬೆಳೆಸಿಕೊಂಡು ಹೋಗಲು ಸಾಧ್ಯ. ಈ ಮಾತು ಹೆತ್ತವರಂತೆ ಶಿಕ್ಷಕರನ್ನೂ ತಟ್ಟಬೇಕು.

ಸಮಾಜದ ಸ್ಥಿತಿಯನ್ನು ಕಂಡು ಕಣ್ಣೀರಿಟ್ಟು, ತಮ್ಮ ಜನರನ್ನು ಎಚ್ಚರಿಸಲು ಶ್ರಮಿಸಿದ ಅನೇಕ ಪ್ರಾತ:ಸ್ಮರಣೀಯರ ಕಥೆಗಳನ್ನು ನಾವು ಕೇಳುತ್ತಾ ಬೆಳೆದಿದ್ದೇವೆ, ನಮ್ಮ ಮಕ್ಕಳಿಗೂ ಹೇಳುತ್ತಾ ಬಂದಿದ್ದೇವೆ. ಕೆಲವೇ ದಿನಗಳ ಹಿಂದಷ್ಟೇ ನಾವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಆಚರಿಸಿ ಕೊಂಚವಾದರೂ ಸಮಾಜದ ಆಗುಹೋಗುಗಳತ್ತ ಎಚ್ಚರದ ಸ್ಥಿತಿಯಲ್ಲಿಯೇ ಇದ್ದೇವೆ ಎಂದು ಭಾವಿಸುವ.
ಸಶಕ್ತ ಗುರುವಿನಡಿಯಲ್ಲಿ ಕಲಿತ ಶಿಕ್ಷಣ ಮಕ್ಕಳ ವ್ಯಕ್ತಿತ್ವದ ಮೇಲೆ ತೀವ್ರವಾದ ಪ್ರಭಾವವನ್ನು ಬೀರುತ್ತದೆಂದು ನಾವೆಲ್ಲರೂ ಒಪ್ಪುತ್ತೇವೆ. ಮನೆ ಮೊದಲ ಪಾಠಶಾಲೆಯಾದರೂ, ದಿನದ ಹೆಚ್ಚಿನ ಸಮಯ ಮಕ್ಕಳು ಶಾಲೆಯಲ್ಲಿ ತಮ್ಮ ಗೆಳೆಯ/ಗೆಳತಿಯರೊಂದಿಗೆ ವ್ಯಯಿಸುವ ಕಾರಣ ಪಾಠಶಾಲೆಯೇ ಮಕ್ಕಳಿಗೆ ಮನೆಯಂತಾಗಿಬಿಡುತ್ತದೆ. ಸಮಾಜದ ವಿವಿಧ ಸ್ತರಗಳ ಮಕ್ಕಳು ಶಾಲೆಯಲ್ಲಿ ಒಂದಾಗಿ ಕಲೆಯುವುದರಿಂದ ಶಾಲೆಯೊಂದು ಸಮಾಜದ ಪರಿವರ್ತನೆಯ ಕೇಂದ್ರ ಹಾಗೂ ಗುರು ಅದರ ಕೇ೦ದ್ರಬಿ೦ದು. ಭಾರತೀಯ ವಿಚಾರಧಾರೆಯನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರನ್ನು ಸೃಷ್ಟಿಸಿದವರು ಗುರು ರಾಮಕೃಷ್ಣರು. ತಮ್ಮ ಶಿಷ್ಯರನ್ನು ರೂಪಿಸುವಾಗ ಶಿಷ್ಯರತ್ತ ಅವರಿಗಿದ್ದ ಸೂಕ್ಷ್ಮತೆಯ ಸಂದರ್ಭಗಳನ್ನು ಗಮನಿಸಿದಾಗ ಶಿಕ್ಷಕ ಸಮುದಾಯಕ್ಕೆ ಶಾಲೆಗಳನ್ನು ಮನೆಗಳಂತಾಗಿಸಲು ಉತ್ತಮ ಉದಾಹರಣೆಗಳು ದೊರೆತಾವು.
ಲಟ್ಟು ಎನ್ನುವ ಹುಡುಗ ಶತದಡ್ಡ. ಅವನ ತಂದೆ ತಾಯಿಗಳು ‘ಇವನೊಬ್ಬ ದಡ್ಡ ನಿಮ್ಮಿಂದ ಬದಲಾಗಬಹುದು‘ ಎಂದು ಅವನನ್ನು ರಾಮಕೃಷ್ಣರ ಬಳಿಗೆ ತಂದು ಬಿಟ್ಟರಂತೆ. ರಾಮಕೃಷ್ಣರ ಸೇವೆಯಲ್ಲಿ, ಅವರ ಪೂಜೆಯಲ್ಲಿ ಶ್ರದ್ಧೆಯಿoದ ನಿರತನಾಗಿದ್ದ ಲಟ್ಟುವಿಗೆ ಅದೊಂದು ದಿನ ಬೆಳಿಗ್ಗೆ ಎದ್ದಾಗ ರಾಮಕೃಷ್ಣರು ತಮ್ಮ ಎಂದಿನ ಜಾಗದಲ್ಲಿ ಕಾಣಲಿಲ್ಲ. ಎಲ್ಲ ಶಿಷ್ಯರು ಪರಮಹಂಸರು ಎಲ್ಲೆಂದು ಯೋಚಿಸುತ್ತಿರುವಾಗ ಅವರು ಪಂಚವಟಿಗೆ ಧ್ಯಾನಕ್ಕೆ ಹೋಗುವುದು ಸಾಮಾನ್ಯವಾದ ಕಾರಣ ಅಲ್ಲಿಗೆ ಹೋಗಿ ನೋಡುವುದೆ೦ದು ಯೋಚಿಸುವಷ್ಟರಲ್ಲಿ ಆ ಕಡೆಯಿಂದಲೇ ಪರಮಹಂಸರು ಬರುತ್ತಿದ್ದರು ಮತ್ತು ಅವರ ಕೈಯಲ್ಲಿ ಒ೦ಟಿ ಚಪ್ಪಲಿಯಿತ್ತು. ಇದೇನು ಬೆಳಗ್ಗೆ ಪಂಚವಟಿಯಿoದ ಚಪ್ಪಲಿ ತರುತ್ತಿದ್ದೀರಿ ಎಂದು ಶಿಷ್ಯರು ಕೇಳಿದಾಗ ಪರಮಹಂಸರು, ಹಿಂದಿನ ದಿನ ಲಟ್ಟುವಿಗೆ ಅವನ ತಂದೆ ಹೊಸ ಚಪ್ಪಲಿಯನ್ನು ತಂದು ಕೊಟ್ಟದ್ದರೆಂದೂ ಅದನ್ನು ನೋಡಿ ರಾತ್ರಿ ಲಟ್ಟು ಕುಣಿದಾಡುತ್ತಿದ್ದನ್ನೂ ಹೇಳಿ, ‘ಮಧ್ಯರಾತ್ರಿ ನಾನು ಎದ್ದಾಗ ಲಟ್ಟುವಿನ ಒಂದೇ ಚಪ್ಪಲಿ ಅಲ್ಲಿತ್ತು ಇನ್ನೊಂದು ಕಾಣುತ್ತಿರಲಿಲ್ಲ ಬೆಳಗ್ಗೆ ಲಟ್ಟು ಬೇಸರ ಮಾಡಿಕೊಳ್ಳುತ್ತಾನೆ ಅವನಿಗೆ ದುಃಖವಾಗುತ್ತದೆ ಎಂದು ಅವನ ಇನ್ನೊ೦ದು ಚಪ್ಪಲಿಯನ್ನು ಹುಡುಕುತ್ತಿದ್ದೆ. ಯಾವುದೋ ನಾಯಿ ಕಚ್ಚಿಕೊಂಡು ಹೋಗಿರಬೇಕು, ಪಂಚವಟಿಗಯ ಪೊದೆಗಳ ಮಧ್ಯೆ ಈ ಚಪ್ಪಲಿ ಸಿಕ್ಕಿತು ನೋಡಿ‘ ಎoದರು.
ಶಿಷ್ಯನತ್ತದ ಸೂಕ್ಷ್ಮಭಾವವನ್ನ ಇಲ್ಲಿ ಗಮನಿಸಿ. ಶಿಷ್ಯನಿಗೆ ಬೇಸರವಾಗಬಾರದು ಎಂದು ಸ್ವತಃ ತಾವೇ ಅವನ ಚಪ್ಪಲಿ ಹುಡುಕಲು ಹೋದ ಶ್ರೀರಾಮಕೃಷ್ಣ ಪರಮಹಂಸರು, ವಿವೇಕಾನಂದರನ್ನು ಸಿದ್ಧಪಡಿಸಿದರು. ನಿಜವಲ್ಲವೇ ಪ್ರೀತಿಯ ಕಾಳಜಿ ತೋರಿದಾಗ ಶಿಷ್ಯರ ಮನ ಮುಟ್ಟುತ್ತೇವೆ - ಅವರ ಹೃದಯಕ್ಕೆ ತಟ್ಟುತ್ತೇವೆ ಎನ್ನುವ ಅನುಭವ ಶಿಕ್ಷಕ ವೃತ್ತಿಯಲ್ಲಿರುವ ಇಂದಿನ ನಮಗೂ ಆಗಿದೆ. ತನ್ನನ್ನು ಗಮನಿಸುತ್ತಿದ್ದಾರೆ ಎಂಬರಿವು ವಿದ್ಯಾರ್ಥಿಗೆ ಬಂದರೆ ಸಾಕು ಶಾಲೆಯಲ್ಲಿ ಅವರ ನಡತೆಯಲ್ಲಿ ಬದಲಾವಣೆ ಕಾಣುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ಮನೆಯಲ್ಲಿ ಅದೆಷ್ಟೇ ಗಡಿಬಿಡಿಯಲ್ಲೂ ಪ್ರತಿಯೊಬ್ಬರ ಅಗತ್ಯಗಳನ್ನು ತಾಯಿ ಪೂರೈಸುವುದಿಲ್ಲವೇ ಹಾಗೆಯೇ! ವಿದ್ಯಾರ್ಥಿಗಳ ಸಂಖ್ಯೆ ಅದೆಷ್ಟೇ ಇದ್ದರೂ ಒಂದು ಮುಗುಳ್ನಗು, ಶಾಲೆಗೆ ಮಗು ಒಂದೆರೆಡು ದಿನ ಬಾರದಿದ್ದರೆ, ಯಾವ ವಿದ್ಯಾರ್ಥಿಯೇ ಆದರೂ ಮಂಕಾಗಿದ್ದರೆ, ಯಾಕೆಂದು ಕೇಳುವಾಗಿನ ಕಳಕಳಿಯ ಭಾವ, ಮಕ್ಕಳ ಮನ ತಟ್ಟಲು ಸಾಕಲ್ಲವೇ? ಒಬ್ಬ ಪ್ರಖ್ಯಾತ ಮನಃಶಾಸ್ತ್ರಜ್ಞರ ಬಳಿ ತಂದೆ-ತಾಯಿಗಳು ತಮ್ಮ ಮಗನನ್ನು ಕರೆದುಕೊಂಡು ಹೋಗಿ ‘ಇವನು ಹಠಮಾರಿ, ಶಾಲೆಗೆ ಹೋಗಲು ಇಷ್ಟಪಡುವುದಿಲ್ಲ, ಮನೆಯಲ್ಲೂ ಏತಿ ಎಂದರೆ ಪ್ರೇತಿ‘ ಎಂದರಂತೆ. ವೈದ್ಯರು ಮಗುವನ್ನು ಪರೀಕ್ಷಾ ಕೊಠಡಿಯೊಳಗೆ ಕರೆದುಕೊಂಡು ಹೋಗಿ ಒಂದಿಷ್ಟು ಮಾತನಾಡಿ ನಂತರ ದೇವರು ನಿನಗೆ ಪ್ರತ್ಯಕ್ಷನಾಗಿ ಮೂರು ವರ ನೀಡಿದರೆ ನೀನು ಏನು ಕೇಳುವೆ ಎಂದು ಪ್ರಶ್ನಿಸಿದಾಗ, ಮಗು ನಾನು ದೇವರಲ್ಲಿ ಅಮ್ಮ, ಅಪ್ಪ ಮತ್ತು ಶಾಲೆಯ ಗುರುಗಳು ಮೂವರೂ ಸಾಯಲಿ ಎಂದು ಕೇಳಿಕೊಳ್ಳುವೆ ಎಂದು ಹೇಳಿತಂತೆ. ಈ ವಿಚಿತ್ರ ಬಯಕೆಗೆ ಕಾರಣವನ್ನು ಹುಡುಕಿದಾಗ ಸರಿಯಾದ ಪುಸ್ತಕ ತಂದು ಕೊಡದ ಅಪ್ಪ, ಶಾಲೆಗೆ ಹೊತ್ತಾದರೂ ಹೊಟ್ಟೆಗೆ ಆಹಾರ ನೀಡದ ತಾಯಿ, ಹಿಂದು ಮುಂದೆ ಯೋಚಿಸದೇ ಶಾಲೆಯಲ್ಲಿ ಸರಿಯಾಗಿ ಕಲಿಯುತ್ತಿಲ್ಲವೆಂದು ಶಿಕ್ಷಿಸುವ ಗುರು, ಎಲ್ಲರ ಕುರಿತು ರೋಷ ಆ ಮಗುವಿನಲ್ಲಿತ್ತು. ‘ಶಾಲೆ ಸಾಮಾಜಿಕ ಪರಿವರ್ತನೆ ಕೇಂದ್ರ‘ ಎಂಬ ಶೀರ್ಷಿಕೆಯಡಿ ಶಿಕ್ಷಕರನ್ನುದ್ದೇಶಿ ಮಾತನಾಡುತ್ತ ಹೊ.ವೆ. ಶೇಷಾದ್ರಿಯವರು ನೀಡುವ ಈ ಉದಾಹರಣೆ ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ. ಕಾರಣ ಇಲ್ಲಿ ಚಿಕಿತ್ಸೆ ಮಗುವಿಗಲ್ಲದೇ ತಂದೆ -ತಾಯಿ, ಶಿಕ್ಷಕರಿಗೆ. ಶಾಲೆಯಲ್ಲಿ ವಿದ್ಯಾರ್ಥಿಯತ್ತ ಸೂಕ್ಷ್ಮತೆಯ ಅರಿವು ಗುರುವಿಗಿರಬೇಕು. ಶಾಲೆ ಮನೆ ಎರಡೂ ಕೈ ಜೋಡಿಸಿದಾಗ ಮಾತ್ರ ನಮ್ಮ ಮಕ್ಕಳನ್ನು ಮುಂದಿನ ಭವಿಷ್ಯದ ನಂದಾದೀಪಗಳಂತೆ ಬೆಳೆಸಿಕೊಂಡು ಹೋಗಲು ಸಾಧ್ಯ ಎನ್ನುವ ಅವರ ಮಾತು ಹೆತ್ತವರಂತೆ ಶಿಕ್ಷಕರನ್ನೂ ತಟ್ಟಬೇಕು.
ಇತ್ತೀಚೆಗೆ ಕಾಕನಕೋಟೆಯ ವಿಭಾಗದಲ್ಲಿ ಸುತ್ತುತ್ತಿದ್ದಾಗ ಹಾಡಿಯೊಂದರ ಮುಖಂಡರ ಮಾತು ಇಂದಿಗೂ ಕಿವಿಯ ಸುತ್ತಲೇ ಸುತ್ತುತ್ತಿದೆ. ‘ದೇವರು ಎಲ್ಲ ಕಡೆಯೂ ಇದ್ದಾನೆ, ನಮ್ಮಿಂದ ನಾಲ್ಕು ಜನರಿಗೆ ಒಳ್ಳೆಯದಾದರೆ ಜನುಮ ನೀಡಿದ ದೇವರು ಮೆಚ್ಚುತ್ತಾನೆ‘ ಎಂದು ಆಕಾಶಕ್ಕೆ ಕೈ ಮುಗಿದರು. ಇದನ್ನಲ್ಲವೇ ನಾವು ‘ಈಶಾವಾಸ್ಯಮಿದo ಸರ್ವಂ‘ ಎನ್ನುವುದು. ತಾನು ಬೆಳೆದ -ಪ್ರೀತಿಸಿದ ಕಾಡಿನಿಂದ ಬಲವಂತದಿ೦ದ ಹೊರ ತರಲ್ಪಟ್ಟ ಈ ಹಿರಿಯ ಶಾಲೆಯ ಮುಖವನ್ನೂ ನೋಡಿಲ್ಲ. ಆದರೆ ಅವರ ಆಲೋಚನಾ ಭಾವಕ್ಕೆ 'ನಾನು ನನ್ನದು' ಎoಬ ಭಾವದ ಪದವೀಧರರನ್ನು ಸೃಷ್ಟಿಸುತ್ತಿರುವ ನಾವು ಶಿಕ್ಷಣ ಸಾಗುತ್ತಿರುವ ದಾರಿ ಸರಿಯೇ ಎಂದು ಯೋಚಿಸಬೇಕಿದೆ. ಈ ಭಾವವನ್ನು ನಾವು ತರಗತಿಗಳಲ್ಲಿ ಹೊಂದಿಸಿಕೊಳ್ಳುವಾಗ ಮಕ್ಕಳತ್ತ ದೃಷ್ಟಾಂತಗಳ ಮೂಲಕ, ಕಥೆಗಳ ಮೂಲಕವಷ್ಟೇ ಅಲ್ಲದೇ ನಮ್ಮ ನಡವಳಿಕೆಯ ಮೂಲಕವೂ ತೆಗೆದುಕೊಂಡು ಹೋಗಬೇಕು. ಇದಕ್ಕೆ ಧೀರೋದತ್ತ ಸಾಮಾಜಿಕ ಮೌಲ್ಯಗಳ ಪಠ್ಯಗಳ ಹೊಂದಿಕೆಯಾದರೆ ಚೆನ್ನ.
ರಾಜಸ್ತಾನದ ಒಂದು ಚಿಕ್ಕ ಹಳ್ಳಿ ಜಿಬಿ. ಈ ಹಳ್ಳಿಯ ವಿದ್ಯಾಭಾರತಿಯ ಶಾಲಾ ಶಿಕ್ಷಕರು ತಮ್ಮ ಸುತ್ತಮುತ್ತಲಿನ ಹಳ್ಳಿಯ ಇತರ ಶಾಲೆಗಳ ಶಿಕ್ಷಕರೆಲ್ಲರನ್ನೂ ಒಗ್ಗೂಡಿಸಿ ಹಳ್ಳಿಯ ಜನರಿಗೆ ಏಕ ಬಳಕೆ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರಷ್ಟೇ ಅಲ್ಲ ತಮ್ಮ ಹಳ್ಳಿಗಳನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವಲ್ಲಿ ಯಶಸ್ವಿಯಾದರು. ಇದೇ ತರಹದ ಪ್ರಯತ್ನವೊಂದು ಪಂಜಾಬಿನ ಮೋಹಲಿಯ ಶಾಲೆಗಳ ಶಿಕ್ಷಕರು ಒಟ್ಟಾಗಿ ಒಂದು ಸಾವಯವ ನರ್ಸರಿಯನ್ನು ಆರಂಭಿಸಿ, ಅಲ್ಲಿ ತಾವು ಬೆಳೆಸಿದ ಸಸಿಗಳನ್ನು ಎಲ್ಲ ಶಿಕ್ಷಣ ಸoಸ್ಥೆಗಳಿಗೆ ನೀಡಿದರಷ್ಟೇ ಅಲ್ಲದೆ, ಹೋಳಿ ಹಬ್ಬದ ಸಮಯದಲ್ಲಿ ರಾಸಾಯನಿಕ ಬಣ್ಣಗಳ ಬದಲಾಗಿ ಗಿಡಮೂಲಿಕೆಗಳ ಮೂಲದ ಬಣ್ಣಗಳನ್ನು ಜನರಲ್ಲಿ ವಿತರಿಸಿ ಮಕ್ಕಳಿಗೆ ಮತ್ತು ಸಮಾಜಕ್ಕೆ ಮಾದರಿಯಾದರು. ಇಂತಹ ಸಮಾಜಮುಖಿ ಪ್ರಯತ್ನಗಳು ದೇಶದ ಎಲ್ಲ ಶಾಲೆಗಳಲ್ಲಿ ನಡೆದರೆ ಅದೆಷ್ಟು ಚೆನ್ನ. ಎಳ್ಳು ಬೆಲ್ಲ ಸವಿಯುತ್ತ ಸುಂದರ ಮನಸ್ಸನ್ನೂ ಸೃಷ್ಟಿಸಿಕೊಳ್ಳೋಣ.
ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ
ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.
ಜರ್ಮನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕರ್ತೆಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ನಂದಿನಿ ಟೀಚರ್‘ ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.
