Digital Skills: ಈ ಐದು ಕೌಶಲಗಳು ನಿಮ್ಮಲ್ಲಿದ್ದರೆ, ಡಿಜಿಟಲ್‌ ಯುಗದಲ್ಲಿ ನೀವಾಗಬಹುದು ಮಾಸ್ಟರ್‌
ಕನ್ನಡ ಸುದ್ದಿ  /  ಜೀವನಶೈಲಿ  /  Digital Skills: ಈ ಐದು ಕೌಶಲಗಳು ನಿಮ್ಮಲ್ಲಿದ್ದರೆ, ಡಿಜಿಟಲ್‌ ಯುಗದಲ್ಲಿ ನೀವಾಗಬಹುದು ಮಾಸ್ಟರ್‌

Digital Skills: ಈ ಐದು ಕೌಶಲಗಳು ನಿಮ್ಮಲ್ಲಿದ್ದರೆ, ಡಿಜಿಟಲ್‌ ಯುಗದಲ್ಲಿ ನೀವಾಗಬಹುದು ಮಾಸ್ಟರ್‌

ನಿಮ್ಮಲ್ಲಿರುವ ಹೊಸ ಬಗೆಯ ಆಲೋಚನೆಗಳು, ಮಾಹಿತಿಗಳನ್ನು ವ್ಯಕ್ತಪಡಿಸುವ ಪ್ರಾವೀಣ್ಯವು ಇಂದಿನ ವೃತ್ತಿಪರ ಜೀವನಕ್ಕೆ ಅತ್ಯಗತ್ಯ. ಅದು ಬೇರೆಯವರೊಂದಿಗೆ ಸಂವಹನ ನಡೆಸಲು, ಯೋಜನೆಗಳನ್ನು ಸಿದ್ಧಪಡಿಸಲು, ಕಾರ್ಯತಂತ್ರಗಳನ್ನು ರೂಪಿಸಲು ನಿಮಗೆ ಸಹಾಯ ಮಾಡುತ್ತದೆ. (ಬರಹ: ಅರ್ಚನಾ ವಿ. ಭಟ್‌)

ಈ ಐದು ಕೌಶಲಗಳು ನಿಮ್ಮಲ್ಲಿದ್ದರೆ, ಡಿಜಿಟಲ್‌ ಯುಗದಲ್ಲಿ ನೀವಾಗಬಹುದು ಮಾಸ್ಟರ್‌
ಈ ಐದು ಕೌಶಲಗಳು ನಿಮ್ಮಲ್ಲಿದ್ದರೆ, ಡಿಜಿಟಲ್‌ ಯುಗದಲ್ಲಿ ನೀವಾಗಬಹುದು ಮಾಸ್ಟರ್‌

ಕಲಿಕೆ ನಿರಂತರ ಪ್ರಕ್ರಿಯೆ. ಇಂದಿನ ಆಧುನಿಕ ಜಗತ್ತಿನಲ್ಲಿ ಕಲಿತು ಮುಗಿಯಿತು ಎನ್ನುವುದೇ ಇಲ್ಲ. ಪ್ರತಿ ದಿನ ಹೊಸ ಹೊಸ ವಿಷಯ, ವಿಚಾರಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತಲೇ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಬೆಳವಣಿಗೆಗಳನ್ನು ಗಮನಿಸಿ ಅರ್ಥಮಾಡಿಕೊಂಡು ಅದನ್ನು ಕಲಿಯಲು ಪ್ರಯತ್ನಿಸುವುದು ಅಗತ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಇಂದಿನ ಎಐ (AI) ಯುಗದಲ್ಲಿ ಕಲಿಕೆಗೆ ಸಂಬಂಧಿಸಿದ ಹೊಸ ವಿಷಯಗಳನ್ನು ಕಲಿಯುವುದು ಅಗತ್ಯವಾಗಿದೆ. ನಮ್ಮಲ್ಲಿರುವ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಸೃಜನಶೀಲತೆ, ಸಂವಹನ, ವಿಭಿನ್ನ ದೃಷ್ಟಿಕೋನ, ಡಿಜಿಟಲ್‌ ಸಾಕ್ಷರತೆಗಳಂತಹ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲೇಬೇಕಾಗಿದೆ. ಏಕೆಂದರೆ ತಂತ್ರಜ್ಞಾನದ ಕಾಲದಲ್ಲಿ ಕಲಿಕೆಯ ಓಟದಲ್ಲಿ ಸದಾ ಮುಂದಿರಲೇಬೇಕಾಗಿದೆ. ಇಲ್ಲವಾದರೆ ಅದೆಷ್ಟೋ ಅವಕಾಶಗಳು ಕೈತಪ್ಪಿ ಹೋಗಬಹುದು. ಅದಕ್ಕಾಗಿ ಪ್ರತಿಯೊಬ್ಬರೂ ಕಲಿಯಲೇಬೇಕಾದ 5 ಕೌಶಲಗಳು ಇಲ್ಲಿವೆ.

ವಿಮರ್ಶಾತ್ಮಕವಾಗಿ ಯೋಚಿಸುವುದು

ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿರುವ ಕೌಶಲವೆಂದರೆ ಯಾವುದೇ ವಿಷಯವನ್ನಾದರೂ ವಿಮರ್ಶಾತ್ಮಕವಾಗಿ ಯೋಚಿಸುವುದಾಗಿದೆ. ಅದು ಹೇಗೆಂದರೆ ವಿವಿಧ ಮೂಲಗಳಿಂದ ಬಂದ ಮಾಹಿತಿಯನ್ನು ವಿಶ್ಲೇಷಿಸಿ ಅದನ್ನು ಮೌಲ್ಯಮಾಪನ ಮಾಡುವುದು. ಅದರ ಆಧಾರದ ಮೇಲೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಇದರಿಂದ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸುವುದು ಸುಲಭವಾಗುತ್ತದೆ. ಈ ಕೌಶಲವು ವಿದ್ಯಾರ್ಥಿಗಳು ಜ್ಞಾನರ್ಜನೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತದೆ ಮತ್ತು ಇಂದಿನ ಸ್ಪರ್ಧಾತ್ಮಕ ದಿನಗಳನ್ನು ಎದುರಿಸಲು ಅವರನ್ನು ಶಕ್ತಗೊಳಿಸುತ್ತದೆ. ಮಕ್ಕಳಲ್ಲಿ ಪ್ರಶ್ನೆ ಕೇಳುವ, ಪಾಠದಲ್ಲಿ ಬರುವ ಸನ್ನಿವೇಶಗಳನ್ನು ವಿವರಿಸುವ, ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವ ಮೊದಲಾದ ಕೌಶಲಗಳನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಇದು ಭವಿಷ್ಯದಲ್ಲಿ ಅವರ ಜೀವನದಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ನಿಭಾಯಿಸಲು ಉಪಯುಕ್ತವಾಗಿದೆ.

ಸಂವಹನ

ಸಂವಹನ ಎಂಬುದು ಪ್ರತಿಯೊಬ್ಬರೂ ಕಲಿಯಲೇಬೇಕಾದ ಬಹಳ ಮುಖ್ಯವಾದ ಕೌಶಲ. ಇದು ವ್ಯಕ್ತಿಯ ಜ್ಞಾನ ಮತ್ತು ಹೊಸ ವಿಷಯಗಳ ಹುಡುಕಾಟದ ಮನೋಭಾವವನ್ನು ಹೆಚ್ಚಿಸುತ್ತದೆ. ತಮಗೆ ತಿಳಿದಿರುವ ಸಂಗತಿಗಳನ್ನು, ಆಲೋಚನೆಗಳನ್ನು ಮತ್ತು ಮಾಹಿತಿಯನ್ನು ವ್ಯಕ್ತಪಡಿಸುವ ಪ್ರಾವೀಣ್ಯವನ್ನು ಹೊಂದಿರಬೇಕು. ಇದು ಇತರರೊಂದಿಗೆ ಸಂವಹನ ನಡೆಸಲು ನಿಮಗೆ ಸಹಾಯ ಮಾಡುತ್ತದೆ. ವೃತ್ತಿಪರರ ಜೀವನದಲ್ಲಂತೂ ಸಂವಹನ ಕೌಶಲವು ಅತಿ ಮುಖ್ಯವಾಗಿದೆ.

ಸೃಜನಶೀಲತೆ

ವಿದ್ಯಾರ್ಥಿಗಳು ಹೊಸ ರೀತಿಯಲ್ಲಿ ಯೋಚಿಸುವುದನ್ನು ಕಲಿಯುವುದು ಅಗತ್ಯ. ಹೊಸ ಆಲೋಚನೆಗಳನ್ನು ಹುಟ್ಟು ಹಾಕುವುದು, ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಲ್ಲಿ ಉತ್ತರಗಳನ್ನು ಹುಡುಕುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ. ವೇಗವಾಗಿ ಬದಲಾಗುತ್ತಿರುವ ಮತ್ತು ಬೆಳವಣಿಗೆ ಹೊಂದುತ್ತಿರುವ ಜಗತ್ತಿನಲ್ಲಿ ಹೊಂದಿಕೊಳ್ಳಲು ಮತ್ತು ಸ್ಥಿರವಾಗಿ ನೆಲೆಯೂರಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಶೈಕ್ಷಣಿಕ, ವೃತ್ತಿಪರ ಹಾಗೂ ವೈಯಕ್ತಿಕ ಜೀವನದಲ್ಲಿ ಸೃಜನಶೀಲರಾಗಿ ಯೋಚಿಸುವುದು ಸದ್ಯದ ಅಗತ್ಯಗಳಲ್ಲೊಂದಾಗಿದೆ.

ಸಹಭಾಗಿತ್ವ

ಯಾವುದೇ ಕೆಲಸವನ್ನಾದರೂ ಹಂಚಿಕೊಂಡು ಮಾಡಿದಾಗ ಫಲಿತಾಂಶ ಉತ್ತಮವಾಗಿರುತ್ತದೆ. ವೃತ್ತಿಪರ ರಂಗದಲ್ಲಿ ಸಹಕಾರ ಮತ್ತು ಸಹಭಾಗಿತ್ವ ಬಹಳ ಮುಖ್ಯ. ಒಬ್ಬರ ಅಗತ್ಯಗಳನ್ನು ಇನ್ನೊಬ್ಬರು ಅರ್ಥ ಮಾಡಿಕೊಂಡು ಕೆಲಸ ಮಾಡಿದಾಗ ಆ ಕೆಲಸಕ್ಕೆ ವಿಭಿನ್ನ ದೃಷ್ಟಿಕೋನ ಸಿಗುತ್ತದೆ. ಗುರಿ ಮುಟ್ಟುವುದು ಸುಲಭವಾಗಿರುತ್ತದೆ. ಹಾಗಾಗಿ ಸಹಭಾಗಿತ್ವವನ್ನು ರೂಢಿಸಿಕೊಳ್ಳುವುದು ಬೇಡಿಕೆಯಿರುವ ಕೌಶಲವಾಗಿದೆ.

ಡಿಜಿಟಲ್‌ ಸಾಕ್ಷರತೆ

ತಂತ್ರಜ್ಞಾನದ ಯುಗದಲ್ಲಿ ಡಿಜಿಟಲ್‌ ಸಾಕ್ಷರತೆ ಪರಿಣಾಮಕಾರಿಯಾದ ಸಾಧನ. ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿರುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿ ಇರಬೇಕಾದ ಕೌಶಲವಾಗಿದೆ. ಅದು ನಿಮ್ಮ ಗುರಿ ತಲುಪಲು ಇರುವ ಸುಲಭದ ಮಾರ್ಗವಾಗಿದೆ. ಯೋಜನೆಗಳನ್ನು ಸಿದ್ಧಪಡಿಸಲು, ಕಾರ್ಯತಂತ್ರಗಳನ್ನು ರೂಪಿಸಲು, ಸಂವಹನ ನಡೆಸಲು ತಂತ್ರಜ್ಞಾನಗಳನ್ನು ಅರಿಯುವುದು ಮುಖ್ಯವಾಗಿದೆ. ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಹೊಂದಿರಲೇಬೇಕಾದ ಕೌಶಲವಾಗಿದೆ.

Whats_app_banner