ಎಸ್ಎಸ್ಎಲ್ಸಿ ಫೇಲ್ ಆದರೆ ಚಿಂತೆ ಬೇಡ; ಮೊಬೈಲ್ ಟಿಕ್ನೀಷಿಯನ್ ಕೋರ್ಸ್ ಮಾಡಿ ಉತ್ತಮ ಸಂಪಾದನೆ ಮಾಡಲು ಸಾಧ್ಯ
ಈಗಿನ ಮಕ್ಕಳಿಗೆ ಮೊಬೈಲ್ ಕುರಿತು ಆಸಕ್ತಿ ಹೆಚ್ಚು. ಮೊಬೈಲ್ ರಿಪೇರಿ, ಸೆಟ್ಟಿಂಗ್ ಹಾಗೂ ಸಾಫ್ಟ್ವೇರ್ ಬಗ್ಗೆಯೂ ಆಸಕ್ತಿ ಇರುತ್ತದೆ. ಇಂಥವರು 10ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ, ಟೆಕ್ನೀಷಿಯನ್ ಆಗಿ ಉತ್ತಮ ಸಂಪಾದನೆ ಮಾಡಬಹುದು.

ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಸಾಧಾರಣ ಫಲಿತಾಂಶ ದಾಖಲಾಗಿದೆ. ತೇರ್ಗಡೆಯಾದ ವಿದ್ಯಾರ್ಥಿಗಳು ಮುಂದಿನ ಶಿಕ್ಷಣದ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆದ ಮಾತ್ರಕ್ಕೆ ಎಲ್ಲವೂ ಮುಗಿಯಿತು ಎಂದಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಮುಂದೆಯೂ ಹಲವು ದಾರಿಗಳಿವೆ. ಅದರಲ್ಲಿ ಸೂಕ್ತ ಹಾದಿಯನ್ನು ಆಯ್ಕೆ ಮಾಡಿ ಮುನ್ನಡೆಯುವುದು ಅವರವರಿಗೆ ಬಿಟ್ಟ ನಿರ್ಧಾರ. ನೀವೇನಾದ್ರೂ 10ನೇ ತರಗತಿ ಫೇಲ್ ಅಥವಾ ಪಾಸ್ ಆಗಿಯೂ ಮುಂದೇನು ಎಂಬ ನಿರ್ಧಾರಕ್ಕೆ ಬರದಿದ್ದರೆ, ಈ ಸಲಹೆ ನಿಮಗೆ ನೆರವಾಗಬಹುದು.
ಸಾಮಾನ್ಯವಾಗಿ ಈಗಿನ ಮಕ್ಕಳಿಗೆ ಮೊಬೈಲ್ ಕುರಿತು ಆಸಕ್ತಿ ಹೆಚ್ಚು. ಪುಸ್ತಕದ ಓದು ತಲೆಗೆ ಸಲಭವಾಗಿ ಹತ್ತದಿದ್ದರೂ, ಮೊಬೈಲ್ನಲ್ಲಿ ಬರುವ ಎಲ್ಲಾ ಅಂಶಗಳು ಬೇಗನೆ ಅರ್ಥವಾಗುತ್ತವೆ. ಅದರ ರಿಪೇರಿ, ಸೆಟ್ಟಿಂಗ್ ಹಾಗೂ ಸಾಫ್ಟ್ವೇರ್ ಬಗ್ಗೆಯೂ ಆಸಕ್ತಿ ಇರುತ್ತದೆ. ಇಂಥವರು 10ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ, ತಮ್ಮ ಭವಿಷ್ಯವನ್ನು ಹಸನಾಗಿಸಬಹುದು.
ಈಗೀಗ ಮೊಬೈಲ್ ಟೆಕ್ನೀಷಿಯನ್ಗಳಿಗೆ ಉತ್ತಮ ಬೇಡಿಕೆ ಇದೆ. ಈ ಕೋರ್ಸ್ಗಳಿಗೂ ಬೇಡಿಕೆಯಿದ್ದು, ಹೆಚ್ಚಿನ ಯುವಕರು ಆಸಕ್ತಿಯಿಂದ ಕಲಿತು ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ಇದಕ್ಕಾಗಿ ನೀವು 6 ತಿಂಗಳ ಮೊಬೈಲ್ ಟೆಕ್ನಿಷಿಯನ್ ಕೋರ್ಸ್ ಪೂರ್ಣಗೊಳಿಸಬೇಕು. ಇದನ್ನು ಮೊಬೈಲ್ ರಿಪೈರ್ ಟ್ರೈನಿಂಗ್ ಎಂದೂ ಹೇಳಲಾಗುತ್ತದೆ.
ಸಾಮಾನ್ಯವಾಗಿ ಬೆಂಗಳೂರು, ಮಂಗಳೂರಿನಂತಹ ಪ್ರಮುಖ ನಗರಗಳು ಮಾತ್ರವಲ್ಲದೆ ಕೆಲವು ಸಣ್ಣ ನಗರಗಳಲ್ಲಿಯೂ ಮೊಬೈಲ್ ಟೆಕ್ನಿಷಿಯನ್ ಕೋರ್ಸ್ಗಳನ್ನು ಮಾಡಬಹುದು. ಹೆಚ್ಚಾಗಿ ಗರಿಷ್ಠವೆಂದರೆ 6 ತಿಂಗಳ ಒಳಗಾಗಿ ಈ ಕೋರ್ಸ್ ಮುಗಿಸಬಹುದು. ನಿತ್ಯ ಹೆಚ್ಚಿನ ಅವಧಿಯ ತರಗತಿಗಳಿಗೆ ಹಾಜರಾದರೆ, 1ರಿಂದ 3 ತಿಂಗಳಿಗೂ ಮುಂಚಿತವಾಗಿ ಬೇಗನೆ ಪೂರ್ಣಗೊಳಿಸಬಹುದು. ವಿಶೇಷವೆಂದರೆ ಹೆಚ್ಚಿನ ಕಡೆ ಈ ಕೋರ್ಸ್ಗಳನ್ನು ಎಸ್ಎಸ್ಎಲ್ಸಿ ಫೇಲ್ ಆದ ವಿದ್ಯಾರ್ಥಿಗಳು ಕೂಡಾ ಮಾಡಬಹುದಾಗಿದೆ.
ಏನೆಲ್ಲಾ ಕಲಿಯಬಹುದು?
ಈ ಕೋರ್ಸ್ನಲ್ಲಿ ಆಂಡ್ರಾಯ್ಡ್ ಮತ್ತು ಐಫೋನ್ ರಿಪೇರಿ ತರಬೇತಿ ನೀಡಲಾಗುತ್ತದೆ. ಮೊಬೈಲ್ನ ಭಾಗಗಳನ್ನು ಬಿಡಿಸುವುದು ಮತ್ತು ಸರಿಪಡಿಸುವುದನ್ನು ಕಲಿಸಲಾಗುತ್ತದೆ. ಮೊಬೈಲ್ ಫೋನ್ ಜೋಡಣೆ ಮಾಡುವುದು, ಬ್ಯಾಟರಿ ದುರಸ್ತಿ ಮಾಡುವುದು ಮತ್ತು ಪರಿಶೀಲಿಸುವುದು, ಒಸಿಎ ಮಷಿನ್ ತರಬೇತಿ, ಮೊಬೈಲ್ ಡಿಸ್ಪ್ಲೇ ಬದಲಾಯಿಸುವುದು, ಕ್ರಮಬದ್ಧವಾಗಿ ಸ್ಕ್ರೀನ್ ಕಾರ್ಡ್ ಹಾಕುವುದು, ಎಲ್ಲಾ ರೀತಿಯ ಮೊಬೈಲ್ ಸ್ಕ್ರೀನ್ ದುರಸ್ತಿ, ಮೊಬೈಲ್ ಹಾರ್ಡ್ವೇರ್ ಮೂಲಗಳು ಮತ್ತು ಎಲೆಕ್ಟ್ರಾನಿಕ್ಸ್ ಕುರಿತ ಕಲಿಕೆ, ಮೊಬೈಲ್ ಕ್ಯಾಮೆರಾ ಮತ್ತು ಸರ್ಕ್ಯೂಟ್ ಟ್ರೇಸಿಂಗ್, ಫೋನ್ ಅನ್ಲಾಕ್ ಮಾಡುವುದು, ಸಾಫ್ಟ್ವೇರ್ ಅಪ್ಡೇಟ್, ಅನ್ಲಾಕ್ ಟೂಲ್ ಬಳಸುವುದು ಹೀಗೆ ಮೊಬೈಲ್ಗೆ ಸಂಬಂಧಿಸಿದ ಬಹುತೇಕ ಎಲ್ಲಾ ಅಂಶಗಳನ್ನು ಕಲಿಯಬಹುದು.
ಉತ್ತಮ ಸಂಪಾದನೆ
ಸಂಪೂರ್ಣ ತರಬೇತಿ ಪಡೆದ ಒಂದಷ್ಟು ಅನುಭವಕ್ಕಾಗಿ ಮೊಬೈಲ್ ಸರ್ವಿಸ್ ಸೆಂಟರ್ಗಳಲ್ಲಿ ಕೆಲಸ ಮಾಡಬಹುದು. ಈ ಕೆಲಸಕ್ಕೆ ಬೇಡಿಕೆ ಇರುವುದರಿಂದ ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಕಡೆ ಆರಂಭದಲ್ಲೇ ತಿಂಗಳಿಗೆ 20 ರಿಂದ 25 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಕೆಲಸಲದಲ್ಲಿ ಅನುಭವವಾದಂತೆಲ್ಲಾ ಸಂಪಾದನೆಯನ್ನೂ ಹೆಚ್ಚಿಸಬಹುದು. ವಿದೇಶಗಳಲ್ಲಿ ಮೊಬೈಲ್ ಟೆಕ್ನೀಷಿಯನ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದಲ್ಲದೆ ಸ್ವಂತ ಮೊಬೈಲ್ ರಿಪೇರಿ ಮತ್ತು ಸೇವಾ ಕೇಂದ್ರವನ್ನು ಆರಂಭಿಸುವ ಮೂಲಕ ತಮ್ಮದೇ ಸಣ್ಣ ಉದ್ಯಮ ಆರಂಭ ಮಾಡುವ ಮೂಲಕ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಮಂಗಳೂರಿನ ಐಪ್ರಾಕ್ಸ್ (Iprox mangalore)ನಲ್ಲಿ ಮೊಬೈಲ್ ಟೆಕ್ನೀಷಿಯನ್ ಕೋರ್ಸ್ ಕಲಿತು ಬೆಂಗಳೂರಿನಲ್ಲಿ ಒಂದು ವರ್ಷದಿಂದ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿರುವ ತೆಕ್ಕಾರು ಮೂಲದ ಮೊಹಮ್ಮದ್ ತಸ್ಮೀರ್ ಹೇಳುತ್ತಾರೆ.