ಪರೀಕ್ಷೆ ಬರೆಯುವ ಪೆನ್ ಹೇಗಿರಬೇಕು? ಮಕ್ಕಳೇ, ಇವು ಸಣ್ಣ ವಿಷಯವಲ್ಲ; ಕೈಬರಹ ಸುಧಾರಣೆಗೆ ಈ ಟಿಪ್ಸ್‌ ಅನುಸರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪರೀಕ್ಷೆ ಬರೆಯುವ ಪೆನ್ ಹೇಗಿರಬೇಕು? ಮಕ್ಕಳೇ, ಇವು ಸಣ್ಣ ವಿಷಯವಲ್ಲ; ಕೈಬರಹ ಸುಧಾರಣೆಗೆ ಈ ಟಿಪ್ಸ್‌ ಅನುಸರಿಸಿ

ಪರೀಕ್ಷೆ ಬರೆಯುವ ಪೆನ್ ಹೇಗಿರಬೇಕು? ಮಕ್ಕಳೇ, ಇವು ಸಣ್ಣ ವಿಷಯವಲ್ಲ; ಕೈಬರಹ ಸುಧಾರಣೆಗೆ ಈ ಟಿಪ್ಸ್‌ ಅನುಸರಿಸಿ

ಪರೀಕ್ಷೆ ಬರೆಯಲು ನೀವು ಆಯ್ಕೆ ಮಾಡುವ ಪೆನ್‌ ತುಂಬಾ ಮುಖ್ಯ. ಇದು ಸಾಮಾನ್ಯವಾಗಿ ಯಾರೂ ಗಮನ ಹರಿಸದ ವಿಷಯ. ಆದರೆ ತುಂಬಾ ಮುಖ್ಯ ಹಾಗೂ ಸೂಕ್ಷ್ಮ ಅಂಶಗಳಿವು. ಪರೀಕ್ಷೆ ಚೆನ್ನಾಗಿ ಆಗಬೇಕೆಂದರೆ ನಿಮ್ಮ ಬರವಣಿಗೆ ಚೆನ್ನಾಗಿರಬೇಕು. ಅದು ಸುಧಾರಿಸಲು ನೀವು ಆಯ್ಕೆ ಮಾಡಿರುವ ಪೆನ್‌ ಉತ್ತಮವಾಗಿರಬೇಕು.

ಪರೀಕ್ಷೆ ಬರೆಯುವ ಪೆನ್ ಹೇಗಿರಬೇಕು? ಕೈಬರಹ ಸುಧಾರಣೆಗೆ ಈ ಟಿಪ್ಸ್‌ ಅನುಸರಿಸಿ
ಪರೀಕ್ಷೆ ಬರೆಯುವ ಪೆನ್ ಹೇಗಿರಬೇಕು? ಕೈಬರಹ ಸುಧಾರಣೆಗೆ ಈ ಟಿಪ್ಸ್‌ ಅನುಸರಿಸಿ (Pexel)

ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳು ಓದಿನಲ್ಲಿ ನಿರತರಾಗುತ್ತಾರೆ. ಪೂರ್ವ ಸಿದ್ಧತೆ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ಮಾಡುವ ತಪ್ಪೆಂದರೆ, ಬರವಣಿಗೆ ಕಡಿಮೆ ಮಾಡುವುದು. ಕೆಲವು ಮಕ್ಕಳಂತೂ ಓದುವ ಜೋಶ್‌ನಲ್ಲಿ ಬರೆಯುವದನ್ನೇ ನಿಲ್ಲಿಸಿರುತ್ತಾರೆ. ಈ ಅಭ್ಯಾಸವು ಪರೀಕ್ಷೆ ಬರೆಯುವಾಗ ಭಾರಿ ದೊಡ್ಡ ಹಿನ್ನಡೆಗೆ ಕಾರಣವಾಗಬಹುದು. ನಿರಂತರ ಬರೆಯುತ್ತಿದ್ದರೆ ಪೆನ್ನು ಹಿಡಿದ ಕೈ ಚೆನ್ನಾಗಿ ಓಡುತ್ತದೆ. ಹೀಗಾಗಿ ಪರೀಕ್ಷೆಗೂ ಮುನ್ನ ಬರವಣಿಗೆ ಸುಧಾರಿಸಲು, ವೇಗವಾಗಿ ಬರೆಯಲು ಅಭ್ಯಾಸ ಮಾಡಬೇಕು. ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯುವುದು, ಬರೆದು ಕಲಿಯುವುದು ಹೀಗೆ ಕೆಲವು ಅಭ್ಯಾಸಗಳನ್ನು ಅಳವಡಿಸುವ ಮೂಲಕ ನಿಮ್ಮ ಬರವಣಿಗೆ ಸುಧಾರಿಸಬಹುದು.

ಪರೀಕ್ಷೆ ಬರೆಯಲು ನೀವು ಆಯ್ಕೆ ಮಾಡುವ ಪೆನ್‌ ತುಂಬಾ ಮುಖ್ಯ. ನಿಮಗೆ ಈ ಹಿಂದೆ ಯಾವ ಪೆನ್‌ನಲ್ಲಿ ಬರೆಯಲು ಸುಲಭವಾಯ್ತೋ, ಅದೇ ಪೆನ್‌ ಬಳಸಿ. ಪರೀಕ್ಷೆಗಾಗಿ ಹೊಸ ಕಂಪನಿಯ ಪೆನ್‌ ಹಿಡಿದರೆ, ನಿಮಗೆ ಆರಾಮದಾಯಕ ಅನಿಸದೇ ಇರಬಹುದು. ವೇಗವಾಗಿ ಬರೆಯಲು ಕಷ್ಟವಾಗಬಹುದು. ಹೀಗಾಗಿ ಬರವಣಿಗೆ ಸುಧಾರಿಸಲು ಈ ಸಲಹೆಗಳನ್ನು ಅನುಸರಿಸಿ.

ಪರೀಕ್ಷೆಗೂ ಮೊದಲೇ ಪೆನ್‌ನಲ್ಲಿ ಅಭ್ಯಾಸ ಮಾಡಿ

ಪರೀಕ್ಷೆಗೆಂದು ಹೊಸ ಪೆನ್‌ ತೆಗೆದುಕೊಂಡು, ಪರೀಕ್ಷೆ ದಿನವೇ ಅದರಲ್ಲಿ ಬರೆಯಲು ಕೂರಬೇಡಿ. ಅದಕ್ಕೂ ಮುನ್ನ ಮನೆಯಲ್ಲೇ ಆ ಪೆನ್‌ ಬಳಸಲು ಆರಂಭಿಸಿ ಪಳಗಿಸಿ. ಆಗ ನಿಮ್ಮ ಕೈ ವೇಗವಾಗಿ ಓಡುತ್ತದೆ. ಪರೀಕ್ಷೆಗಿಂತ ಮುನ್ನವೇ ಆ ಪೆನ್‌ ಖರೀದಿಸಿ, ಅದರಲ್ಲಿ ಉತ್ತರ ಬರೆದು ಅಭ್ಯಾಸ ಮಾಡಿ.

ಗ್ರಿಪರ್‌ ಇರುವ ಪೆನ್‌ ಉತ್ತಮ

ಗ್ರಿಪರ್‌ ಇರುವ ಪೆನ್‌ ಬಳಸಿ. ಅಂದರೆ ಪೆನ್‌ ಹಿಡಿಯುವ ಜಾಗದಲ್ಲಿ ರಬ್ಬರ್‌ನಿಂದ ಸುತ್ತುವರಿದಿರುವ ಬ್ಯಾಂಡ್‌ ಇದ್ದರೆ, ಪೆನ್‌ ಹಿಡಿಯುವಾಗ ಕೈಗೆ ಗ್ರಿಪ್‌ ಸಿಗುತ್ತದೆ. ಆ ಗ್ರಿಪರ್‌ ನಿಮ್ಮ ಕೈಯಿಂದ ಪೆನ್‌ ಜಾರದಂತೆ ಮಾಡುತ್ತದೆ. ಕೆಲವು ಪೆನ್‌ಗಳಲ್ಲಿ ಗ್ರಿಪರ್‌ ಇರುವುದಿಲ್ಲ. ಆಗ ನಿಮ್‌ ಕೈ ಸ್ವಲ್ಪ ತೇವವಾದರೂ ಪೆನ್‌ ಜಾರುತ್ತದೆ. ಹೀಗಾಗಿ ಬರವಣಿಗೆ ವೇಗವಾಗಿ ಸಾಗುವುದಿಲ್ಲ.

ಕಾರುವ ಅಥವಾ ಜೆಲ್‌ ಪೆನ್ ಬೇಡ

ಪರೀಕ್ಷೆ ಬರೆಯಲು ನೀಲಿ ಬಣ್ಣದ ಶಾಯಿ ಇರುವ ಪೆನ್‌ ಉತ್ತಮ. ಜೆಲ್‌ ಪೆನ್‌ಗಳನ್ನು ಬಳಸಲೇಬೇಡಿ. ಇವು ಬರಹದ ಅಂದಗೆಡಿಸುತ್ತದೆ. ನಿಮ್ಮ ಉತ್ತರ ಪತ್ರಿಕೆ ನೋಡಲು ಚೆನ್ನಾಗಿ ಕಾಣದೆ ಆಗಬಹುದು. ಅಲ್ಲದೆ, ಜೆಲ್‌ ಪೆನ್‌ನಲ್ಲಿ ಬರೆದ ಪೇಪರ್‌ ಮೇಲೆ ಸ್ವಲ್ಪ ನೀರು ಬಿದ್ದರೂ ಬರಹವೇ ಅಳಿಸುತ್ತದೆ. ಇದು ನಿಮ್ಮ ಅಂಕ ಗಳಿಕೆ ಮೇಲೆ ಪರಿಣಾಮ ಬೀರುತ್ತದೆ.

ನಿಬ್ ಹೇಗಿರಬೇಕು?

ನೀವು ಬಳಸುವ ಪೆನ್‌ ನಿಬ್‌ (ಪಾಯಿಂಟ್‌) ಕೂಡಾ ಮುಖ್ಯ ವಿಷಯ. ಹೆಚ್ಚು ದಪ್ಪ ಅಕ್ಷರಗಳಲ್ಲಿ ಬರೆಯುವ ಪೆನ್‌ ಬಳಸುವುದು ಅಷ್ಟು ಸೂಕ್ತವಲ್ಲ. ಅಕ್ಷರಗಳು ಅಚ್ಚುಕಟ್ಟಾಗಿ ಮುತ್ತು ಜೋಡಿಸಿದಂತೆ ಕಾಣಬೇಕಾದರೆ, ಸಣ್ಣ ಪಾಯಿಂಟ್‌ ಇರುವ ಪೆನ್‌ ಉತ್ತಮ. ಹೀಗಾಗಿ ಕನಿಷ್ಠ.5 ಇಂದ ಗರಿಷ್ಠ.75 ಎಂಎಂ ನಿಬ್ ಇರುವ ಪೆನ್‌ ಬರವಣಿಗೆಗೆ ಒಳ್ಳೆಯದು ಎನ್ನುವ ಅಭಿಪ್ರಾಯವಿದೆ. ಇಂಥಾ ಪೆನ್‌ ಆಯ್ಕೆ ಮಾಡುವುದು ಸೂಕ್ತ.

ನೀಲಿ ಶಾಯಿ, ಎರಡಕ್ಕಿಂತ ಹೆಚ್ಚು ಪೆನ್‌

ಪರೀಕ್ಷೆ ಸಮಯದಲ್ಲಿ ಕನಿಷ್ಠ 2 ಪೆನ್‌ಗಳಾದರೂ ಇರಬೇಕು. ಬರೆಯುವಾಗ ಪೆನ್‌ ಕೆಳಮುಖವಾಗಿ ಬಿದ್ದು ಪಾಯಿಂಟ್‌ ಹೋದರೆ, ಅದರಲ್ಲಿ ಮತ್ತೆ ಬರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಒಂದಾದರೂ ಹೆಚ್ಚುವರಿ ಪೆನ್‌ ಇರಲೇಬೇಕು. ಆ ಎರಡೂ ಪೆನ್‌ ಒಂದೇ ರೀತಿಯದ್ದಾಗಿರಲಿ. ನೀಲಿ ಇಂಕ್‌ ಇರುವ ಪೆನ್‌ ಆದ್ಯತೆಯಾರಲಿ. ಯಾವುದೇ ಕಾರಣಕ್ಕೂ ಒಂದೇ ಪತ್ರಿಕೆಯೊಳಗೆ ಎರಡು ಬಣ್ಣಗಳ ಪೆನ್‌ನಲ್ಲಿ ಉತ್ತರಿಸಬೇಡಿ.

ಬರವಣಿಗೆ ಸುಧಾರಿಸುವುದು ಹೇಗೆ?

ಸಾಮಾನ್ಯವಾಗಿ ಪರೀಕ್ಷೆಗೆ ಗೆರೆ ಇರುವ ಉತ್ತರ ಪತ್ರಿಕೆಯನ್ನೇ ನೀಡುತ್ತಾರೆ. ಹೀಗಾಗಿ ಅದಕ್ಕೆ ಸರಿಯಾಗಿ ಬರವಣಿಗೆ ಅಭ್ಯಾಸ ಮಾಡಬೇಕು. ಶಾಲೆಯಲ್ಲಿ ನಿತ್ಯ ಕಾಪಿ ಬರೆಸುವ ಉದ್ದೇಶವೇ ಇದು. ಅಕ್ಷರ ಸುಧಾರಿಸುತ್ತದೆ ಎಂಬುದು. ಒಂದೇ ಗಾತ್ರದ ಅಕ್ಷರಗಳು ಓದಲು ಖುಷಿಯಾಗುತ್ತದೆ. ಅಕ್ಷರಗಳು ತುಂಬಾ ಚಿಕ್ಕದಾಗಿ ಇರುವುದು ಬೇಡ, ಇದೇ ವೇಳೆ ಒಂದು ವಾಕ್ಯದಲ್ಲಿ ಕೇವಲ ಎರಡು ಮೂರು ಪದಗಳನ್ನು ಮಾತ್ರ ಬರೆದು ಪುಟ ಭರ್ತಿ ಮಾಡಲು ನೋಡುವುದು ಸರಿಯಾದ ಕ್ರಮವಲ್ಲ.

ಇನ್ನಿತರ ಸ್ಟಡಿ ಟಿಪ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner