Bakrid Recipe: ಇಲ್ಲಿದೆ ಹೈದರಾಬಾದಿ ಮಟನ್ ಹಂಗಾಮ ರೆಸಿಪಿ; ಹೆಸರೂ ಡಿಫರೆಂಟ್, ರುಚಿಯೂ ಡಿಫರೆಂಟ್; ಒಮ್ಮೆ ಟ್ರೈ ಮಾಡಿ
Hyderabadi Mutton Hungama Recipe: ಕಡಿಮೆ ಸಾಮಗ್ರಿ ಬಳಸಿ, ಸರಳವಾಗಿ ತಯಾರಿಸಬಹುದಾದ ಹೈದರಾಬಾದ್ ಶೈಲಿಯ ಮಟನ್ ಹಂಗಾಮ ರೆಸಿಪಿ ಇಲ್ಲಿದೆ. ಈ ಬಕ್ರೀದ್‌ಗೆ ನೀವು ಮನೆಯಲ್ಲಿ ತಯಾರಿಸಿ ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಬಹುದು. ಇದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.
ಬಕ್ರೀದ್ ಆಚರಣೆಗೆ ಇನ್ನೆರಡು ದಿನಗಳು ಬಾಕಿ ಇದೆ. ಬಕ್ರೀದ್ ಹಬ್ಬದಂದು ಬಗೆ ಬಗೆ ಖಾದ್ಯಗಳನ್ನು ತಯಾರಿಸಿ ತಿನ್ನುವುದು ವಿಶೇಷ. ಮಟನ್, ಚಿಕನ್‌ನ ವೆರೈಟಿ ಖಾದ್ಯಗಳು ಬಾಯಲ್ಲಿ ನೀರೂರಿಸದೇ ಇರದು. ಈ ಬಕ್ರೀದ್‌ಗೆ ನೀವು ಮಟನ್ ಹಂಗಾಮ ತಯಾರಿಸಬಹುದು.
ಕಡಿಮೆ ಸಾಮಗ್ರಿಗಳು ಬಳಸಿ ಥಟ್ಟಂತ ತಯಾರಿಸಬಹುದಾದ ಹೈದರಾಬಾದ್ ಶೈಲಿ ಮಟನ್ ಹಂಗಾಮ ರೆಸಿಪಿ ಇಲ್ಲಿದೆ. ನೀವು ಮನೆಯಲ್ಲಿ ತಯಾರಿಸಿ ಹಬ್ಬದ ಸಂಭ್ರಮ ಹೆಚ್ಚಿಸಿ. ಇದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.
ಮಟನ್ ಹಂಗಾಮ
ಬೇಕಾಗುವ ಸಾಮಗ್ರಿಗಳು: ಎಣ್ಣೆ - 1 ಚಮಚ, ಉಪ್ಪು - ಚಿಟಿಕೆ, ಖಾರದ ಪುಡಿ - ಚಿಟಿಕೆ, ಅರಿಸಿನಪುಡಿ - ಚಿಟಿಕೆ, ಗಟ್ಟಿ ಮೊಸರು - 2 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಮಟನ್ ತುಂಡು - 400 ಗ್ರಾಂ, ಈರುಳ್ಳಿ - ಮಧ್ಯಮ ಗಾತ್ರದ್ದು 3, ಗೋಡಂಬಿ - 10, ಟೊಮೆಟೊ ಪ್ಯೂರಿ - 1 ಕಪ್, ಉಪ್ಪು - ಅರ್ಧ ಚಮಚ, ಖಾರದ ಪುಡಿ - ಅರ್ಧ ಚಮಚ, ಅರಿಸಿನ ಅರ್ಧ ಚಮಚ, ಗರಂ ಮಸಾಲೆ - ಸ್ವಲ್ಪ, ಮೆಂತ್ಯೆ ಸೊಪ್ಪು- ಸ್ವಲ್ಪ, ಕೊತ್ತಂಬರಿ ಸೊಪ್ಪು - ಸ್ವಲ್ಪ, ಕ್ರೀಮ್ - 2 ಚಮಚ
ತಯಾರಿಸುವ ವಿಧಾನ: ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಚಿಟಿಕೆ ಉಪ್ಪು, ಖಾರದಪುಡಿ ಹಾಗೂ ಅರಿಸಿನ ಪುಡಿ ಸೇರಿಸಿ. ಅದಕ್ಕೆ 2 ಚಮಚ ಗಟ್ಟಿ ಮೊಸರು ಹಾಕಿ. ಒಂದು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಅದಕ್ಕೆ ಸ್ವಚ್ಛವಾಗಿ ತೊಳೆದ ಮಟನ್ ತುಂಡುಗಳನ್ನು ಹಾಕಿ. ಈ ಎಲ್ಲಾವನ್ನೂ ಮಿಶ್ರಣ ಮಾಡಿ. ಕೆಲ ಹೊತ್ತು ಕೈಯಾಡಿಸಿ, ನಂತರ ಸ್ಟೌ ಆಫ್ ಮಾಡಿ ಈ ಮಿಶ್ರಣವನ್ನು ಅರ್ಧ ಗಂಟೆ ನೆನೆಸಿಡಿ. ನಂತರ ಅದಕ್ಕೆ ಒಂದು ಗ್ಲಾಸ್ ನೀರು ಸೇರಿಸಿ, ಕುಕ್ಕರ್‌ನಲ್ಲಿ ಮೂರು ವಿಶಲ್ ಕೂಗಿಸಿ.
ಈಗ ಈರುಳ್ಳಿ, ಗೋಡಂಬಿ, ಖಾರದಪುಡಿ, ಉಪ್ಪು, ಗರಂಮಸಾಲೆ, ಅರಿಸಿನ ಸೇರಿಸಿ ಎಲ್ಲಾ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಬೇಯಿಸಿಕೊಂಡ ಮಟನ್ ತುಂಡುಗಳನ್ನು ಪಾನ್‌ನಲ್ಲಿ ಕೆಲ ನೀರು ಆರುವವರೆಗೆ ಹುರಿದುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಬಿಸಿ ಮಾಡಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸಣ್ಣ ಉರಿಯಲ್ಲಿ ಮಿಶ್ರಣ ಮಾಡಿ, ಅದಕ್ಕೆ ಟೊಮೆಟೊ ಪ್ಯೂರಿ ಸೇರಿಸಿ. ನಂತರ ರುಬ್ಬಿಕೊಂಡ ಮಿಶ್ರಣ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕೈಯಾಡಿಸಿ. ಇದಕ್ಕೆ 1 ಚಮಚ ಹೆಚ್ಚಿಕೊಂಡ ಮೆಂತ್ಯೆ ಸೊಪ್ಪು ಹಾಗೂ 1 ಚಮಚ ಹೆಚ್ಚಿಕೊಂಡು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಹುರಿದುಕೊಂಡ ಮಟನ್ ತುಂಡುಗಳನ್ನು ಹಾಕಿ. ಅದಕ್ಕೆ ಕ್ರೀಮ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 5 ನಿಮಿಷ ಕುದಿಸಿ, ಈಗ ನಿಮ್ಮಮುಂದೆ ಮಟನ್ ಹಂಗಾಮ ತಿನ್ನಲು ರೆಡಿ.