Bakrid Recipe: ಚಿಕನ್ ಕಲ್ಮಿ, ಹರ್ಯಾಲಿ ಕಬಾಬ್ ಸವಿಯೋ ಆಸೆ ಆಗಿದ್ಯಾ; ಬಕ್ರೀದ್‌ಗೆ ಮನೆಯಲ್ಲೇ ಬಿಸಿ ಬಿಸಿ ಕಬಾಬ್ ತಯಾರಿಸಿ ಸವಿಯಿರಿ
ಮಳೆಗಾಲದಲ್ಲಿ ಬಿಸಿ ಬಿಸಿ ಕಬಾಬ್ ಸಿಕ್ಕರೆ ಆಹಾ, ಸ್ವರ್ಗ ಇಲ್ಲೇ ಇದೆ ಅನ್ನಿಸದೇ ಇರದು. ಅದರಲ್ಲೂ ಇದು ಬಕ್ರೀದ್ ಸಮಯ. ಈ ಬಕ್ರೀದ್‌ಗೆ ಕಲ್ಮಿ ಕಬಾಬ್, ಹರ್ಯಾಲಿ ಕಬಾಬ್ ತಯಾರಿಸಿ ಸವಿಯಬಹುದು. ಕಡಿಮೆ ಸಾಮಗ್ರಿ ಬಳಸಿ, ಮನೆಯಲ್ಲಿ ಸುಲಭವಾಗಿ ತಯಾರಿಸುವ ಕಬಾಬ್ ರೆಸಿಪಿ ಇಲ್ಲಿದೆ.

ಕಲ್ಮಿ ಕಬಾಬ್, ಹರಿಯಾಲಿ ಕಬಾಬ್... ಈ ಹೆಸರುಗಳನ್ನು ಕೇಳ್ತಾ ಇದ್ರೆ, ಬಾಯಲ್ಲಿ ನೀರೂರದೇ ಇರೋಕೆ ಸಾಧ್ಯನಾ, ಖಂಡಿತಾ ಇಲ್ಲ. ಚಿಕನ್ ಪ್ರಿಯರಿಗೆ ಈ ಕಬಾಬ್‌ಗಳು ಫೇವರಿಟ್ ಅಂತಾನೇ ಹೇಳಬಹುದು. ಅದರಲ್ಲೂ ಮಳೆಗಾಲದಲ್ಲಿ ಬಿಸಿಬಿಸಿ ಕಬಾಬ್ ತಿಂತಾ ಇದ್ರೆ ನಿಜಕ್ಕೂ ಸ್ವರ್ಗಕ್ಕೆ ಮೂರೇ ಗೇಣು ಅಂತಾರಲ್ಲ ಹಾಗೆ, ಅನ್ನಿಸೋದು ಸಹಜ.
ಮುಸ್ಲಿಂರ ಪವಿತ್ರ ಹಬ್ಬ ಬಕ್ರೀದ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ಬಾರಿ ಬಕ್ರೀದ್‌ಗೆ ಏನು ಮಾಡಬಹುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ ಖಂಡಿತ ತಲೆ ಕಡೆಸಿಕೊಳ್ಳಬೇಡಿ, ಇಲ್ಲಿದೆ ಬೆಸ್ಟ್ ಆಯ್ಕೆ. ಕಲ್ಮಿ ಕಬಾಬ್, ಹರ್ಯಾಲಿ ಕಬಾಬ್ ರೆಸಿಪಿ ಬಗ್ಗೆ ನಾವಿಲ್ಲಿ ಹೇಳಿದ್ದೇವೆ. ಸುಲಭವಾಗಿ, ಸರಳವಾಗಿ ತಯಾರಿಸಬಹುದಾದ ಈ ರೆಸಿಪಿಯನ್ನು ನೀವೂ ಮನೆಯಲ್ಲಿ ತಯಾರಿಸಿ ಸವಿಯಬಹುದು ನೋಡಿ.
ಕಲ್ಮಿ ಕಬಾಬ್
ಬೇಕಾಗುವ ಸಾಮಗ್ರಿಗಳು: ಚಿಕನ್ ಲೆಗ್‌ಪೀಸ್ - ಅರ್ಧ ಕೆಜಿ, ಗಟ್ಟಿ ಮೊಸರು - ಕಾಲು ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ನಿಂಬೆರಸ - 2 ಚಮಚ, ಅರಿಸಿನ - ಚಿಟಿಕೆ, ಏಲಕ್ಕಿ ಪುಡಿ - ಚಿಟಿಕೆ, ಗೋಡಂಬಿ ಪುಡಿ - 3 ಚಮಚ, ಕಾಳುಮೆಣಸಿನ ಪುಡಿ- ಚಿಟಿಕೆ, ಫ್ರೆಶ್ ಕ್ರೀಮ್ - ಕಾಲು ಚಮಚ, ಎಣ್ಣೆ- ಕರಿಯಲು, ಕೊತ್ತಂಬರಿ ಸೊಪ್ಪು - ಅಲಂಕರಿಸಲು
ತಯಾರಿಸುವ ವಿಧಾನ: ಚಿಕನ್ ಲೆಗ್‌ಪೀಸ್‌ಗಳನ್ನು ಚೆನ್ನಾಗಿ ತೊಳೆದು ನೀರು ಆರಿಸಿ, ಅದರ ಮೇಲೆ ನಾಲ್ಕು ಭಾಗಗಳಲ್ಲಿ ಉದ್ದಕ್ಕೆ ಚಾಕುವಿನಿಂದ ಗೀರಿಕೊಳ್ಳಿ.
ಒಂದು ಬೌಲ್‌ನಲ್ಲಿ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆರಸ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಅದಕ್ಕೆ ಅರಿಸಿನ ಪುಡಿ, ಗೋಡಂಬಿ ಪುಡಿ ಸೇರಿಸಿ ಮಿಶ್ರಣ ಮಾಡಿ. ನಂತರ ಸೋಂಪು, ಏಲಕ್ಕಿ ಪುಡಿ, ಕಾಳುಮೆಣಸಿನ ಪುಡಿ ಹಾಗೂ ಕ್ರೀಮ್ ಸೇರಿಸಿ ಚೆನ್ನಾಗಿ ಎಲ್ಲವೂ ಸೇರುವಂತೆ ಮಿಶ್ರಣ ಮಾಡಿ, ಇದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ ಕಲೆಸಿ, ಈ ಮಿಶ್ರಣವನ್ನು ಕನಿಷ್ಠ 8 ಗಂಟೆಗಳ ಕಾಲ ನೆನೆಸಿಡಿ. ಪ್ಯಾನ್‌ವೊಂದರಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ನೆನೆಸಿಟ್ಟುಕೊಂಡಿದ್ದ ಚಿಕನ್ ತುಂಡುಗಳನ್ನು ಹಾಕಿ, ಮೊದಲು ದೊಡ್ಡ ಉರಿಯಲ್ಲಿ ಬಣ್ಣ ಬದಲಾಗುವವರೆಗೂ ಕರಿಯಿರಿ, ನಂತರ ಸಣ್ಣ ಉರಿಯಲ್ಲಿ 15 ನಿಮಿಷಗಳ ಕಾಲ ಕರಿದರೆ ನಿಮ್ಮ ಮುಂದೆ ಚಿಕನ್ ಕಲ್ಮಿ ಕಬಾಬ್ ತಿನ್ನಲು ಸಿದ್ಧ. ಇದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ, ಸವಿಯಲು ಕೊಡಬಹುದು.
ಚಿಕನ್ ಹರ್ಯಾಲಿ ಕಬಾಬ್
ಬೇಕಾಗುವ ಸಾಮಗ್ರಿಗಳು: ಮೂಳೆರಹಿತ ಚಿಕನ್ ಎದೆಭಾಗದ ತುಂಡುಗಳು - ಅರ್ಧ ಕೆಜಿ, ಗಟ್ಟಿ ಮೊಸರು - 3 ಟೇಬಲ್ ಚಮಚ, ನಿಂಬೆರಸ - 2 ಚಮಚ, ಕೊತ್ತಂಬರಿ ಸೊಪ್ಪು - 1ಕಪ್, ಪುದಿನಾ ಸೊಪ್ಪು - 1 ಕಪ್, ಮೆಂತ್ಯೆ ಸೊಪ್ಪು - ಅರ್ಧ ಕಪ್, ಪಾಲಕ್ ಸೊಪ್ಪು - ಅರ್ಧ ಕಪ್, ಶುಂಠಿ - 1 ಇಂಚು, ಬೆಳ್ಳುಳ್ಳಿ 5 ರಿಂದ 6 ಎಸಳು, ಹಸಿಮೆಣಸು - 4 ರಿಂದ 5, ಖಾರದಪುಡಿ - ಅರ್ಧ ಚಮಚ, ಕೊತ್ತಂಬರಿ ಪುಡಿ - 2 ಚಮಚ, ಗರಂಮಸಾಲೆ- ಒಂದೂವರೆ ಚಮಚ, ಬೆಣ್ಣೆ - 1 ಚಮಚ, ಎಣ್ಣೆ - 2 ಚಮಚ, ಉಪ್ಪು - ರುಚಿಗೆ, ಚಿಕ್ಕ ಚಿಕ್ಕ ಮರದ ಕಡ್ಡಿಗಳು
ತಯಾರಿಸುವ ವಿಧಾನ: ಚಿಕನ್ ಅನ್ನು ಚೆನ್ನಾಗಿ ತೊಳೆದು ಮಧ್ಯಮ ಗಾತ್ರ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಬೌಲ್‌ವೊಂದರಲ್ಲಿ ಉಪ್ಪು, ಬೆಣ್ಣೆ, ನಿಂಬೆರಸ, ಖಾರದಪುಡಿ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ, ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಕಲೆಸಿ 10 ರಿಂದ 15 ನಿಮಿಷ ಇಡಿ.
ಮೆಂತೆ ಸೊಪ್ಪುಗಳನ್ನು ಕತ್ತರಿಸಿ, ಸ್ವಲ್ಪ ನೀರು ಸೇರಿಸಿ ಕುದಿಸಿ, ಸೊಪ್ಪುಗಳನ್ನು ಸೋಸಿ ಇಡಿ. ಈಗ ಮೆಂತ್ಯೆ ಸೊಪ್ಪು, ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಮೊಸರು ಹಾಗೂ ಉಳಿದ ಸಾಮಗ್ರಿಗಳನ್ನು ಸೇರಿಸಿ ಮಿಶ್ರಣ ಮಾಡಿ ಚಿಕನ್ ತುಂಡುಗಳನ್ನು ಅದಕ್ಕೆ ಹಾಕಿ ಎಲ್ಲವನ್ನೂ ಚೆನ್ನಾಗಿ ಕಲೆಸಿ. ಈ ಮಸಾಲೆಯು ಚಿಕನ್ ತುಂಡುಗಳಿಗೆ ಚೆನ್ನಾಗಿ ಹಿಡಿದಿರಬೇಕು. ಇದನ್ನು 20 ನಿಮಿಷಗಳ ಕಾಲ ನೆನೆಸಿಡಿ.
ಮರದ ಕಡ್ಡಿಗಳನ್ನು 4 ರಿಂದ 5 ನಿಮಿಷಗಳ ಕಾಲ ನೆನೆಸಿ. ನಂತರ ಆ ಕಡ್ಡಿಗಳನ್ನು ಚೆನ್ನಾಗಿ ಒರೆಸಿ, ಅದಕ್ಕೆ ಎಣ್ಣೆ ಸವರಿ. ಈಗ ಚಿಕನ್ ತುಂಡುಗಳಿಗೆ ಕಡ್ಡಿಗಳನ್ನು ಚುಚ್ಚಿ. ಚಿಕನ್ ತುಂಡುಗಳ ಮೇಲೆ ಸ್ವಲ್ಪ ಎಣ್ಣೆ ಸವರಿ. 350ಡಿಗ್ರಿ ಫ್ಯಾರನ್ ಹೀಟ್‌ನಲ್ಲಿ ಓವೆನ್ ಅನ್ನು 5 ನಿಮಿಷ ಬಿಸಿ ಮಾಡಿಕೊಳ್ಳಿ. ಈ ಕಡ್ಡಿಗಳನ್ನು ಚುಚ್ಚಿ ಸಿದ್ಧ ಮಾಡಿಕೊಂಡಿರುವ ಚಿಕನ್ ತುಂಡುಗಳನ್ನು ಒವೆನಲ್ಲಿಡಿ. ಇದನ್ನು 15 ರಿಂದ 20 ನಿಮಿಷ ಬೇಯಲು ಬಿಡಿ. ಮಧ್ಯೆ ಮಧ್ಯೆ ಪರಿಶೀಲಿಸುತ್ತಿರಿ ಮತ್ತು ಚಿಕನ್ ತುಂಡುಗಳನ್ನು ಮಗುಚಿ ಹಾಕಿ. ಬೆಂದ ಬಳಿಕ ಪ್ಲೇಟ್‌ನಲ್ಲಿ ಜೋಡಿಸಿ ಕತ್ತರಿಸಿದ ನಿಂಬೆರಸ ಹಣ್ಣು, ಕ್ಯಾಬೇಜ್, ಸೌತೆಕಾಯಿಯೊಂದಿಗೆ ಅಲಂಕರಿಸಿ, ಹಸಿರು ಚಟ್ನಿಯೊಂದಿಗೆ ತಿನ್ನಲು ಕೊಡಿ. ಆಹಾ ಈ ಮಳೆಗಾಲದಲ್ಲಿ ಇದನ್ನು ತಿನ್ನೋದೇ ಸುಖ.