ನನಗೊಬ್ಬ ಗೆಳತಿ ಇದ್ದರೆ, ಇಂಥದ್ದೊಂದು ಸ್ನೇಹ ಎಲ್ಲರಿಗೂ ಬೇಕು: ವೀರಣ್ಣ ಮಡಿವಾಳರ ಬರಹ
ಯಾವ ನಿರೀಕ್ಷೆಗಳೂ ಇಲ್ಲದ ಈ ಕ್ಷಣದ ಬದುಕು ಸಹ್ಯ ಮಾಡಬಲ್ಲ ಇಂಥದೊಂದು ಸ್ನೇಹ ಎಲ್ಲರಿಗೂ ಸಿಕ್ಕರೆ ಎಲ್ಲರ ಬದುಕು ತಕ್ಕಮಟ್ಟಿಗೆ ಸಹನೀಯವಾಗಿರುತ್ತದೆ.
ಅವರ ಜೊತೆ ಮಾತಾಡುವುದೆಂದರೆ ನನಗೆ ನನ್ನನ್ನೇ ನಾನು ಉತ್ತೇಜಿಸಿಕೊಂಡಂತೆ ಅನ್ನಿಸುತ್ತಿರುತ್ತದೆ. ಅವರಿಗೆ ತುಂಬಾ ತೊಂದರೆಗಳಿವೆ. ಅವರ ತೊಂದರೆಗಳೇ ಅವರನ್ನು ತಿಂದು ಹಾಕಿವೆ. ಎಲ್ಲಿಯವರೆಗೆ ಎಂದರೆ ಒಂದು ಕಿಡ್ನಿ ನಿಷ್ಕ್ರಿಯ ಆಗುವಷ್ಟು. ಅವರು ಆಗಾಗ ನನಗೆ ಕಾಲ್ ಮಾಡುತ್ತಾರೆ. ಅವರ ಕಾಲ್ ಗೆ ನಾನು ತಯಾರಾಗಿರುತ್ತೇನೆ. ಕೇವಲ ಬಾಯಿಮಾತಿಗಲ್ಲ, ನಾನು ಓದಿದ ಪುಸ್ತಕ, ಕೇಳಿದ ಭಾಷಣ, ನೋಡಿದ ಸನ್ನಿವೇಶ, ನನ್ನ ಒಡನಾಟಗಳಿಂದ ಪಡೆದ ಪ್ರಾಮಾಣಿಕ ಅನುಭವ ಎಲ್ಲ ಒಟ್ಟುಗೂಡಿಸಿಕೊಂಡು ಅವರ ಜೊತೆ ಮಾತಿಗೆ ಸಿದ್ಧನಾಗಿರುತ್ತೇನೆ.
ಅವರ ದನಿ ಕೇಳಿದ ತಕ್ಷಣ ನನಗೆ ಒಂದು ಅಂದಾಜು ಸಿಗುತ್ತೆ ಅವರ ದುಃಖದ ಆಳ ಅವರ ಸಂಭ್ರಮದ ಪ್ರಮಾಣ ಎಲ್ಲ. ಅವರಿಗೆ ನನ್ನ ಎಲ್ಲ ಅನುಭವ ತಿಳುವಳಿಕೆಗಳ ಮೂಲಕ ಸಾಧ್ಯವಾದಷ್ಟು ಸಮಾಧಾನ ನೀಡಲು ಪ್ರಯತ್ನಿಸುತ್ತೇನೆ. ಅಪಾರ ಜೀವನೋತ್ಸಾಹದ ಆ ಹೆಣ್ಣುಮಗಳು ಪರಿಸ್ಥಿತಿ ಮತ್ತು ಮುಗ್ದ ಮತ್ತು ಬಲವಾದ ನಂಬಿಕೆಯ ಕಾರಣಕ್ಕೆ ತುಂಬಾ ದೊಡ್ಡ ದೊಡ್ಡ ನೋವು ಅನುಭವಿಸಿದ್ದಾರೆ ಮತ್ತು ಗಾಯಗಳನ್ನ ಮಾಡಿಕೊಂಡಿದ್ದಾರೆ.
ಆಗಾಗ ನಮ್ಮ ಮಾತು ಜಾರಿಯಿರುತ್ತದೆ. ಅವರು ಆ ಕಡೆಯಿಂದ ನಕ್ಕಾಗ ನನಗಿಲ್ಲಿ ಏನೋ ಗೆದ್ದ ನೆಮ್ಮದಿ. ನನಗೂ ಕೂಡ ನೋವುಗಳಿವೆ, ಸಂಕಟಗಳಿವೆ, ಸಮಸ್ಯೆಗಳಿವೆ ಎಲ್ಲಕ್ಕಿಂತ ಹೆಚ್ಚಾಗಿ ಸಾಲಗಳಿವೆ... ಆದರೆ ಅವರ ಜೊತೆ ಮಾತಾಡತಾ ಮಾತಾಡತಾ ನಾನೇ ನನ್ನೊಡನೆ ಮಾತಾಡಿದಂತೆ ನನಗೆ ನಾನು ಸಮಾಧಾನ ಹೇಳಿಕೊಂಡಂತೆ ನನಗೆ ನಾನು ಸ್ಫೂರ್ತಿ ತುಂಬಿಕೊಂಡಂತೆ ಅನ್ನಿಸುತ್ತಿರುತ್ತದೆ.
ಯಾವ ನಿರೀಕ್ಷೆಗಳೂ ಇಲ್ಲದ ಈ ಕ್ಷಣದ ಬದುಕು ಸಹ್ಯ ಮಾಡಬಲ್ಲ ಇಂಥದೊಂದು ಸ್ನೇಹ ಎಲ್ಲರಿಗೂ ಸಿಕ್ಕರೆ ಎಲ್ಲರ ಬದುಕು ತಕ್ಕಮಟ್ಟಿಗೆ ಸಹನೀಯವಾಗಿರುತ್ತದೆ.
(ನಮ್ಮೂರಿನ ಹರೆಯದ ಹುಡುಗನೊಬ್ಬ ಜಿಗುಪ್ಸೆಯಿಂದ ಸ್ವಹತ್ಯೆ ಮಾಡಿಕೊಂಡ. ಬಹುಶಃ ಆತನಿಗೊಬ್ಬ ಸಮಾಧಾನಿಸುವ, ಸಂತೈಸುವ ಗೆಳತಿ ಇದ್ದಿದ್ದರೆ ಆತ ಬದುಕುತ್ತಿದ್ದನೇನೋ.... )
ಬರಹ: ವೀರಣ್ಣ ಮಡಿವಾಳರ
(ಲೇಖಕರು ಸರ್ಕಾರಿ ಶಾಲೆಯ ಶಿಕ್ಷಕರು, ಕವಿ ಮತ್ತು ಸಾಹಿತಿ)