ISRO Career: ಇಸ್ರೋದಲ್ಲಿ ವಿಜ್ಞಾನಿಯಾಗುವುದು ಹೇಗೆ, ಚಂದ್ರಯಾನ ಆದಿತ್ಯದಂತಹ ಯೋಜನೆಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಮಾರ್ಗದರ್ಶಿ
How To Become A Scientist In ISRO: ಚಂದ್ರಯಾನ ಯಶಸ್ಸಾಗಿದೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಇಸ್ರೋದಲ್ಲಿ ಸೈಂಟಿಸ್ಟ್ ಆಗಬೇಕೆಂಬ ಕನಸು ಮೂಡಿರಬಹುದು. ಇಸ್ರೋದಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.
ಇಸ್ರೋದಲ್ಲಿ ಉದ್ಯೋಗ ಪಡೆಯುವ ಕನಸು ಸಾಕಷ್ಟು ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಇರುತ್ತದೆ. ಚಂದ್ರಯಾನದಂತಹ ಯೋಜನೆಯಲ್ಲಿ ಇಸ್ರೋ ಯಶಸ್ಸು ಪಡೆದಾಗ, ಇಂತಹ ಯೋಜನೆಗಳಲ್ಲಿ ಭಾಗಿಯಾಗುವ ವಿಜ್ಞಾನಿಗಳನ್ನು ನೋಡಿದಾಗ ಸಾಕಷ್ಟು ಜನರಿಗೆ ತಾವು ಕೂಡ ಇಸ್ರೋದಲ್ಲಿ ಉದ್ಯೋಗ ಪಡೆಯಬೇಕೆಂಬ ಅಭಿಲಾಸೆ ಮೂಡುತ್ತದೆ. ಭಾರತವು ಚಂದ್ರಯಾನ 3 ಯೋಜನೆಯಲ್ಲಿ ಯಶಸ್ವಿಯಾದ ಸಂದರ್ಭದಲ್ಲಿ ಇಸ್ರೋದಲ್ಲಿ ಉದ್ಯೋಗ ಪಡೆಯುವ ಕನಸಿನಲ್ಲಿರುವವರಿಗೆ ಕರಿಯರ್ ಮಾರ್ಗದರ್ಶನ ಇಲ್ಲಿ ನೀಡಲಾಗಿದೆ.
ಇಸ್ರೋ ಪರಿಚಯ
ಇದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ. ಬಾಹ್ಯಾಕಾಶ ಸಚಿವಾಲಯದಡಿ ಬರುವ ಇಸ್ರೋಗೆ ಚೇರ್ಮನ್ ಇರುತ್ತಾರೆ. ಇವರು ಡಿಪಾರ್ಟ್‌ಮೆಂಟ್ ಸ್ಪೇಸ್‌ನ ಎಕ್ಸಿಕ್ಯುಟಿವ್ ಆಗಿಯೂ ಕಾರ್ಯನಿರ್ವಹಿಸುತ್ತಾರೆ. ಇಸ್ರೋ 1969ರಲ್ಲಿ ಸ್ಥಾಪನೆಯಾಯಿತು. ಭಾರತವು 1962ರಲ್ಲಿ ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ ಸ್ಥಾಪಿಸಿತ್ತು.
ಸ್ಪೇಸ್ ಸೈಂಟಿಸ್ಟ್ ಎಂದರೇ ಯಾರು?
ವಿಜ್ಞಾನದ ಬ್ರಹ್ಮಾಂಡ ಬಾಹ್ಯಾಕಾಶ ವಿಜ್ಞಾನ ಎನ್ನಾಲಗುತ್ತದೆ. ನೀವು ಇಸ್ರೋದಲ್ಲಿ ವಿಜ್ಞಾನಿಯಾಗಬೇಕಾದರೆ ಎಂಜಿನಿಯರಿಂಗ್ ಅಥವಾ ಸೈನ್ಸ್ ವಿಷಯ ಓದಿರಬೇಕು. ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಕಂಪ್ಯೂಟರ್ ಎಂಜಿನಿಯರಿಂಗ್ ಓದಿರುವವರನ್ನು, ಆಸ್ಟ್ರೋನಮಿ, ಫಿಸಿಕ್ಸ್, ಮ್ಯಾಥಮೆಟಿಕ್ಸ್‌ನಲ್ಲಿ ಪಿಎಚ್‌ಡಿ ಓದಿರುವವರನ್ನೂ ಇಸ್ರೋ ನೇಮಿಸಿಕೊಳ್ಳುತ್ತದೆ. ವಿಜ್ಞಾನಿಯಾಗುವುದೆಂದರೆ ಲ್ಯಾಬ್ ಜತೆಗೆ ಥಿಯರಿ ಜ್ಞಾನ ಸಾಕಷ್ಟು ಇರಬೇಕಾಗುತ್ತದೆ. ಚಂದ್ರಯಾನದಲ್ಲಿ ಲ್ಯಾಂಡರ್ ಇಳಿಸುವ ಪ್ರಕ್ರಿಯೆಯಲ್ಲಿ ಖಗೋಳ ವಿಜ್ಞಾನದ ಜತೆಗೆ ಗಣಿತದ ಪಾತ್ರವೂ ಮಹತ್ವದ್ದು. ನಕ್ಷತ್ರಗಳು, ಗ್ರಹಗಳು ಮತ್ತು ಇತರೆ ಕಾಯಗಳ ಕುರಿತು ಅಧ್ಯಯನ ಮಾಡುವ ಕೆಲಸವನ್ನು ಖಗೋಳ ವಿಜ್ಞಾನಿಗಳು ಮಾಡುತ್ತಾರೆ.
ಇಸ್ರೋದಲ್ಲಿ ಉದ್ಯೋಗ ಪಡೆಯುವುದು ಹೇಗೆ?
- ಖಗೋಳ, ಭೌತಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ ಜ್ಞಾನ ಇರುವವರು ಇಸ್ರೋದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು.
- ಮೊದಲನೆಯದಾಗಿ ವಿದ್ಯಾರ್ಥಿಗಳು 10+2 ಶಿಕ್ಷಣದಲ್ಲಿ ಗಣಿತ, ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಓದಿರಬೇಕು. ಈ ವಿಷಯಗಳಲ್ಲಿ ಅತ್ಯುತ್ತಮ ಜ್ಞಾನ ಹೊಂದಿರಬೇಕು.
- ಜೆಇಇ ಅಡ್ವಾನ್ಸಡ್, ಜೆಇಇ ಮೇನ್ಸ್ ಮೂಲಕ ವಿವಿಧ ಎಂಜಿನಿಯರಿಂಗ್ ಪದವಿ ಪಡೆಯಿರಿ. ಮೆಕ್ಯಾನಿಕಲ್ ಎಂಜಿನಿಯರಿಂಗ್, ಏರೋಸ್ಪೇಸ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್ ಫಿಸಿಕ್ಸ್, ರೇಡಿಯೋ ಎಂಜಿನಿಯರಿಂಗ್ ಇತ್ಯಾದಿ ವಿಷಯಗಲಲ್ಲಿ ಬಿಇ ಅಥವಾ ಬಿಟೆಕ್ ಪದವಿ ಪಡೆದಿರಬೇಕು.
- ಇದಾದ ಬಳಿಕ ಇಸ್ರೋದ ಸೆಂಟ್ರಲೈಸ್ಡ್ ರಿಕ್ರೂಟ್‌ಮೆಂಟ್ ಬೋರ್ಡ್ (ಐಸಿಆರ್‌ಬಿ) ಪರೀಕ್ಷೆ ಉತ್ತೀರ್ಣರಾಗಿ ಸೈಂಟಿಸ್ಟ್ ಹುದ್ದೆ ಪಡೆಯಬಹುದು. ಈ ಪರೀಕ್ಷೆ ಬರೆಯಲು ಸಂಬಂಧಪಟ್ಟ ವಿಷಯಗಳಲ್ಲಿ ಬಿಇ ಅಥವಾ ಬಿಟೆಕ್ ಪದವಿ ಪಡೆದಿರಬೇಕು.
- ಐಐಎಸ್ಸಿ, ಐಐಟಿ, ಎನ್‌ಐಟಿ, ಐಐಎಸ್‌ಟಿ ಇತ್ಯಾದಿ ಪ್ರಮುಖ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಇಸ್ರೋ ಆದ್ಯತೆ ನೀಡುತ್ತದೆ.
- ಎಂಎಸ್ಸಿ, ಎಂಇ ಅಥವಾ ಎಂಟೆಕ್ ಅಥವಾ ಪಿಎಚ್‌ಡಿಯನ್ನು ಸಂಬಂಧಪಟ್ಟ ವಿಷಯಗಳಲ್ಲಿ ಪಡೆದ ವಿದ್ಯಾರ್ಥಿಗಳು ಕೂಡ ಇಸ್ರೋದಲ್ಲಿ ಸೈಂಟಿಸ್ಟ್ ಆಗಬಹುದು. ಪದವಿ ಮುಗಿದ ಬಳಿಕ ಜಿಯೋ ಫಿಸಿಕ್ಸ್, ಜಿಯೋ ಇನ್‌ಫಾರ್ಮೆಟಿಕ್ಸ್, ಇನ್‌ಸ್ಟ್ರುಮೆಂಟೆಷನ್, ಅಪ್ಲೈಡ್ ಮ್ಯಾಥಮೆಟಿಕ್ಸ್ ಇತ್ಯಾದಿ ವಿಷಯಗಳಲ್ಲಿ ಎಂಟೆಕ್ ಪದವಿ ಪಡೆದಿರಬೇಕು. ಇಸ್ರೋದ ವೆಬ್‌ಸೈಟ್‌ನಲ್ಲಿ ಕರಿಯರ್ ಪುಟವನ್ನು ಆಗಾಗ ನೋಡುತ್ತ ಇರಿ. ಈ ವಿಷಯಗಳಿಗೆ ಸಂಬಂಧಪಟ್ಟ ಉದ್ಯೋಗ ಅಧಿಸೂಚನೆ ಬಂದಾಗ ಅರ್ಜಿ ಸಲ್ಲಿಸಿ. ಬಳಿಕ ಲಿಖಿತ ಪರೀಕ್ಷೆ, ಸಂದರ್ಶನ ಇತ್ಯಾದಿಗಳನ್ನು ಎದುರಿಸಿ ಯಶಸ್ಸು ಗಳಿಸಬಹುದು.
- ಇಸ್ರೋದಲ್ಲಿ ಜೂನಿಯರ್ ರಿಸರ್ಚ್ ಫೆಲೊ ಆಗಿಯೂ ಸೇರಬಹುದು.
ಹೀಗೆ ಇಸ್ರೋದಲ್ಲಿ ವಿಜ್ಞಾನಿಯಾಗಲು ಕೆಲವು ಹಾದಿಗಳು ಇವೆ. ವಿದ್ಯಾರ್ಥಿ ದೆಸೆಯಲ್ಲಿ ಈ ಕುರಿತು ಸ್ಪಷ್ಟ ಗುರಿ ಇಟ್ಟುಕೊಂಡು ಕಷ್ಟಪಟ್ಟು ಓದಿರಿ. ಜತೆಗೆ, ಇಸ್ರೋದ ವೆಬ್‌ಸೈಟ್‌ನಲ್ಲಿ ಉದ್ಯೋಗ ಮಾಹಿತಿ ನೋಡುತ್ತ ಇರಿ. ಇಸ್ರೋ ನಡೆಸುವ ವಿವಿಧ ನೇಮಕ ಪರೀಕ್ಷೆಯ ಕುರಿತು ಜ್ಞಾನ ಹೊಂದಿರಿ.
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಡಿಜಿಟಲ್ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in , ht.kannada@htdigital.in