ಕೆಲಸ ಹುಡುಕ್ತಿದ್ದೀರಾ; ಈ ಕೌಶಲ್ಯಗಳು ನಿಮ್ಮಲ್ಲಿದ್ದರೆ ಫ್ರೆಶರ್ ಆದ್ರೂ ಜಾಬ್ ಸಿಗೋದು ಪಕ್ಕಾ
ಶಿಕ್ಷಣ ಪಡೆದ ನಂತರ ಸೂಕ್ತ ಉದ್ಯೋಗದ ಆಫರ್ ಲೆಟರ್ ಕೈಗೆ ಸಿಗುವವರೆಗೆ ಫ್ರೆಶರ್‌ಗಳಿಗೆ ನಿದ್ದೆ ಬರುವುದಿಲ್ಲ. ಇಂಟರ್ವ್ಯೂಗಾಗಿ ಎಷ್ಟೇ ಸಿದ್ಧತೆಗಳು ನಡೆಸಿದರೂ ಹೆಚ್ಚಿನ ಸಂದರ್ಭಗಳಲ್ಲಿ ವಿಫಲರಾಗುವುದೇ ಹೆಚ್ಚು. ಆದರೆ, ನಿಮ್ಮಲ್ಲಿ ಈ ಕೌಶಲ್ಯಗಳಿದ್ದರೆ, ವೃತ್ತಿರಂಗದಲ್ಲಿ ಮೇಲೆ ಬರುವುದು ಕಷ್ಟವೇನಲ್ಲ.
ಇದು ಸ್ಪರ್ಧಾತ್ಮಕ ಯುಗ. ತಂತ್ರಜ್ಞಾನಗಳೇ ಮೆರೆಯುತ್ತಿರುವ ಕಾಲದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸವಾಲಿನ ಸಂಗತಿ. ಅನುಭವ ಇದ್ದರೆ ಕೆಲಸ ಹುಡುಕುವುದು ಹೆಚ್ಚು ಕಷ್ಟವೇನಲ್ಲ. ಆದರೆ, ಶಿಕ್ಷಣ ಮುಗಿಸಿ ಹೊಸದಾಗಿ ವೃತ್ತಿ ಜೀವನ ಆರಂಭಿಸಲು ಸಜ್ಜಾಗಿರುವ ಫ್ರೆಶರ್‌ಗಳು, ಆರಂಭದಲ್ಲಿ ಕೆಲಸ ಪಡೆಯಲು ಶ್ರಮಿಸಬೇಕಾಗುತ್ತದೆ. ಈಗ ಮನುಷ್ಯ ಮನುಷ್ಯನ ನಡುವೆ ಸ್ಪರ್ಧೆ ಒಂದೆಡೆಯಾದರೆ, ಮನುಷ್ಯ ಮತ್ತು ತಂತ್ರಜ್ಞಾನದ ನಡುವಿನ ಸ್ಪರ್ಧೆ ಕೂಡಾ ಇದೆ. ತಂತ್ರಜ್ಞಾನದ ಏರುಗತಿಯ ಬೆಳವಣಿಗೆ ನಡುವೆ, ತಮ್ಮ ಸೃಜನಶೀಲ ಕೌಶಲವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದೇ ಸದ್ಯದ ಸವಾಲು. ಹೀಗಾಗಿ ಉದ್ಯೋಗ ಬಯಸುವ ಫ್ರೆಶರ್‌ಗಳು ತಂತ್ರಜ್ಞಾನದ ವಿಷಯವಾಗಿ ನಿರಂತರವಾಗಿ ಅಪ್ಡೇಟ್ ಆಗಿರಬೇಕು.
ಯಂತ್ರಗಳು ಮಾಡುವ ಕೆಲಸಗಳನ್ನು ಯಂತ್ರ ಮಾಡುತ್ತದೆ. ಅದರ ನಡುವೆ ಯಂತ್ರಗಳಿಂದ ಸಾಧ್ಯವಾಗದ ಸೃಜನಶೀಲ ಯೋಚನೆ ನಿಮ್ಮಲ್ಲಿರಬೇಕು. ಹೀಗಾಗಿ ಕ್ರಿಯೇಟಿವ್ ಯೋಚನೆ ಇರುವ ಅಭ್ಯರ್ಥಿಗಳಿಗೆ ಬೇಡಿಕೆ ಜಾಸ್ತಿ. ಹೀಗಾಗಿ ಉದ್ಯೋಗ ಬಯಸುವ ವಿದ್ಯಾರ್ಥಿಗಳು ಯಂತ್ರಗಳಂತೆ ದುಡಿಯುವ ಗುರಿ ಇಟ್ಟುಕೊಳ್ಳುವುದಲ್ಲ. ಬದಲಿಗೆ ತಮ್ಮಲ್ಲಿರುವ ಸೃಜನಶೀಲ ಕೌಶಲ ಅಥವಾ ಪ್ರತಿಭೆಯನ್ನು ಕೆಲಸದಲ್ಲಿ ತೋರಿಸಬೇಕು.
ಉದ್ಯೋಗ ನೀಡುವ ಎಲ್ಲಾ ಕಂಪನಿಗಳು, ನೇಮಕ ಮಾಡಿಕೊಳ್ಳುವ ಅಭ್ಯರ್ಥಿಗಳಲ್ಲಿ ವಿಶೇಷ ಕೌಶಲ್ಯಗಳನ್ನು ನಿರೀಕ್ಷಿಸುತ್ತದೆ. ಹಾಗಿದ್ದರೆ ಉದ್ಯೋಗ ಕ್ಷೇತ್ರಕ್ಕೆ ಹೊಸಬರಾಗಿರುವವರಲ್ಲಿ ಇರಬೇಕಾದ ಕೌಶಲ್ಯಗಳು ಯಾವುದು ಎಂಬುದನ್ನು ನೋಡೋಣ.
ಮೂಲಭೂತ ಅಗತ್ಯಗಳು
ವಿದ್ಯಾರ್ಥಿ ಬದುಕಿನಲ್ಲೇ, ಭವಿಷ್ಯದ ದೃಷ್ಟಿಯಿಂದ ವಿಮರ್ಶಾತ್ಮಕ ಚಿಂತನೆ, ಸಮಸ್ಯೆಗಳನ್ನು ಪರಿಹರಿಸುವ ಗುಣ, ಸಮಯ ನಿರ್ವಹಣೆ, ಉತ್ತಮ ಸಂವಹನ ಕಲೆಗಳನ್ನು ಬೆಳೆಸಿಕೊಳ್ಳಿ. ನಗುಮುಖದ ಜೊತೆಗೆ ಸಕಾರಾತ್ಮಕ ಮನೋಭಾವ ತುಂಬಾ ಮುಖ್ಯ. ಧೈರ್ಯದಿಂದ ಮಾತನಾಡುವ ಕಲೆ, ತಾಳ್ಮೆಯಿಂದ ಕೇಳುವ ಗುಣ ಮೂಲಭೂತ ಅಗತ್ಯವಾಗಿದೆ.
ತಾಂತ್ರಿಕ ಜ್ಞಾನ
ಈಗಿನ ಕಾಲಕ್ಕೆ ತಕ್ಕಂತೆ ಡಿಜಿಟಲ್ ಸಾಕ್ಷರತೆ ಅಗತ್ಯ. ಕೆಲವೊಂದು ಮೂಲ ಡಿಜಿಟಲ್ ಉಪಕರಣಗಳು, ಸಾಫ್ಟ್‌ವೇರ್‌ಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ನಿಮ್ಮ ಫೀಲ್ಡ್‌ಗೆ ಅನುಸಾರವಾಗಿ ಅದಕ್ಕೆ ನೆರವಾಗುವ ಪ್ರೋಗ್ರಾಮಿಂಗ್ ಮತ್ತು ಕೋಡಿಂಗ್ ಕೌಶಲ್ಯಗಳು ಇರಬೇಕು. ಗೂಗಲ್ ವರ್ಕ್‌ಸ್ಪೇಸ್, ಡೇಟಾ ವಿಶ್ಲೇಷಣಾ ಪರಿಕರಗಳ ಕುರಿತ ತಿಳುವಳಿಕೆ ಇದ್ದರೆ ಒಳ್ಳೆಯದು.
ಒತ್ತಡ ನಿರ್ವಹಣೆ ಕೌಶಲ್ಯ
ಪ್ರತಿ ಕೆಲಸದಲ್ಲೂ ಒತ್ತಡಗಳು, ಜವಾಬ್ದಾರಿಗಳು, ಒಂದಷ್ಟು ಹೊಣೆಗಾರಿಕೆ ಸಾಮಾನ್ಯ. ಅದರ ನಡುವೆ ಗಡುವಿನೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಎಲ್ಲೇ ಕೆಲಸ ಮಾಡುವುದಿದ್ದರೂ ಒತ್ತಡ ನಿಭಾಯಿಸುವ ಸಾಮರ್ಥ್ಯ ಅಗತ್ಯ. ಇದು ಕೆಲಸ ಮಾಡುವ ಸಾಮರ್ಥ್ಯವನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಹೊಂದಿಕೊಳ್ಳುವಿಕೆ
ಈ ಕೌಶಲ್ಯವಿದ್ದರೆ, ಕೆಲವೊಂದು ಅನಿರೀಕ್ಷಿತ ಸಂದರ್ಭಗಳಲ್ಲಿ ನೆರವಾಗುತ್ತದೆ. ಹೊಸ ತಂತ್ರಜ್ಞಾನಗಳು ಬಂದ ಹಾಗೆ ಅದನ್ನು ತ್ವರಿತವಾಗಿ ಕಲಿಯುವ ಮತ್ತು ಅದಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿದ್ದರೆ, ವೃತ್ತಿಜೀವನಕ್ಕೆ ನೆರವಾಗಲಿದೆ. ನಿರಂತರವಾಗಿ ಕಲಿಕೆಯ ಸ್ವಭಾವ ಇದ್ದರೆ ತುಂಬಾ ಉತ್ತಮ. ಅವಕಾಶಗಳನ್ನು ಹುಡುಕುವ ಒಲವಿದ್ದರೆ, ಕೆಲಸದಲ್ಲಿ ಹೊಂದಿಕೊಳ್ಳುವುದು ಸುಲಭವಾಗುತ್ತದೆ.
ಭಾವನಾತ್ಮಕ ಬುದ್ಧಿವಂತಿಕೆ
ಕೆಲಸದ ಸ್ಥಳದಲ್ಲಿ ಈ ಸ್ವಭಾವ ತುಂಬಾ ಮುಖ್ಯವಾಗುತ್ತದೆ. ಕಚೇರಿಯಲ್ಲಿ ಭಿನ್ನ ವಿಭಿನ್ನ ಸ್ಥಳದಿಂದ ಬಂದ ಹಾಗೂ ಭಿನ್ನ ಮನಸ್ಥಿತಿಯ ವ್ಯಕ್ತಿಗಳಿರುತ್ತಾರೆ. ಆ ಸಾಂಸ್ಕೃತಿಕ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಭಾವನಾತ್ಮಕ ಬುದ್ಧಿಮತ್ತೆ (EI) ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೊಸ ಆಲೋಚನೆಗಳತ್ತ ತೆರೆದುಕೊಳ್ಳುವುದು, ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು, ನಾವೀನ್ಯತೆಯನ್ನು ಅಳವಡಿಸಿಕೊಳ್ಳುವ ಮನಸ್ಥಿತಿಯನ್ನು ಹೊಂದಿರುವುದು ವೃತ್ತಿಬದುಕಿಗೆ ಅಗತ್ಯ.
ಇನ್ನಷ್ಟು ಕರಿಯರ್ ಗೈಡೆನ್ಸ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸಣ್ಣ ಉಳಿತಾಯ ಯೋಜನೆಗೆ ಅಂಚೆ ಕಚೇರಿಯ ಈ 10 ಯೋಜನೆಗಳು ಉತ್ತಮ; ಹೂಡಿಕೆದಾರರ ನೆಚ್ಚಿನ ಆಯ್ಕೆಗಳಿವು
ವಿಭಾಗ