E-Reading: ನಿಧಾನ ಓದುಗರಾ ನೀವು?; ಓದಿನ ವೇಗ ಹೆಚ್ಚಿಸುತ್ತೆ ಈ ಟೆಕ್; ಏನಿದರ ವಿಶೇಷತೆ
Bionic Reading: ಓದುವಾಗ ನಮ್ಮ ಮಿದುಳು ಪದಗಳಲ್ಲಿರುವ ಎಲ್ಲ ಅಕ್ಷರಗಳನ್ನು ಓದುವುದಿಲ್ಲ. ಗ್ರಹಿಕೆಯ ಆಧಾರದ ಮೇಲೆ ಓದುವಿಕೆ ಸಾಗುತ್ತದೆ ಎಂದು ಹೇಳುವ ಬ್ರೌಸರ್ ಆಧಾರಿತ ತಂತ್ರಾಂಶ ಇದು. ಈ ತಂತ್ರಾಂಶ ಈಗಾಗಲೇ ಕೆಲವು ಪದಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದು, ಕೆಲವೇ ಕೆಲವು ಅಕ್ಷರಗಳ ನೆರವಿನೊಂದಿಗೆ ಪದವನ್ನು ಗುರುತಿಸಲು ಮತ್ತು ಗ್ರಹಿಸಲು ನೆರವಾಗುವುದು ವಿಶೇಷ.
ಕೈಯಲ್ಲಿ ಪುಸ್ತಕವೋ ಪೇಪರೋ ಹಿಡಿದು ಓದುವುದಕ್ಕೂ, ಡಿಜಿಟಲ್ ಸಾಧನ ಅಥವಾ ಉಪಕರಣಗಳಲ್ಲಿ ಓದುವುದಕ್ಕೂ ಬಹಳ ವ್ಯತ್ಯಾಸವಿದೆ. ಅನೇಕರಿಗೆ ಡಿಜಿಟಲ್ ಉಪಕರಣಗಳಲ್ಲಿನ ಓದು ಸಮಾಧಾನ, ಸಂತೃಪ್ತಿ ಎರಡನ್ನೂ ಕೊಡುವುದಿಲ್ಲ. ಆದರೂ, ಅನೇಕರು ಈಗ ಡಿಜಿಟಲ್ ಉಪಕರಣಗಳಲ್ಲಿ ಓದುವುದನ್ನು ರೂಢಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಡಿಜಿಟಲ್ ಸಾಧನಗಳಲ್ಲಿನ ಓದುವಿಕೆಯು ಸಂಕೀರ್ಣವೆನಿಸಿಬಿಡುತ್ತದೆ. ನಿಮಗೂ ಹಾಗನಿಸಿದರೆ, "ಬಯೋನಿಕ್ ರೀಡಿಂಗ್ʼ ಟೆಕ್ನಾಲಜಿ ಸೂಕ್ತ ಪರಿಹಾರವಾಗಿ ಗೋಚರಿಸಬಹುದು. ಟೈಪೋಗ್ರಾಫಿಕ್ ಡಿಸೈನರ್ ರೆನಾಟೊ ಕ್ಯಾಸುಟ್ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಉದಯೋನ್ಮುಖ ಟೆಕ್ನಾಲಜಿಯು ಓದುವಿಕೆಯನ್ನು 'ಫಾಸ್ಟರ್, ಬೆಟರ್ ಮತ್ತು ಮೋರ್ ಫೋಕಸ್ಡ್' ಆಗಿಸುತ್ತದೆ ಎಂಬುದು ರೆನಾಟೊ ಕ್ಯಾಸುಟ್ ವಾದ. ಇದು ಟೈಪೋಗ್ರಾಫಿಕ್ ಹೈಲೈಟ್ ಆಗಿರುವ ಪಠ್ಯದ ಮೂಲಕ ಕಣ್ಣಿಗೆ ಮಾರ್ಗದರ್ಶನ ನೀಡುವ ಮೂಲಕ ಓದುವ ವೇಗವನ್ನು ಹೆಚ್ಚಿಸುವ ರೀಡಿಂಗ್ ಸಾಫ್ಟ್‌ವೇರ್ ಎಂಬುದು ಗಮನಾರ್ಹ.
ಪ್ರಪಂಚದಲ್ಲಿ ಓದುವ ಅಭ್ಯಾಸ ಪೇಪರ್‌ನಿಂದ ಪರದೆಗೆ ಬದಲಾಗತೊಡಗಿ ವರ್ಷಗಳೇ ಉರುಳಿಹೋಗಿವೆ. ಕರೋನಾ ಸಂಕಷ್ಟ ಬಂದ ಬಳಿಕ ಇದರ ವೇಗ ಹೆಚ್ಚಾಗಿದ್ದು, ಬಹುತೇಕರು ಮೊಬೈಲ್, ಕಂಪ್ಯೂಟರ್ ಪರದೆ ಎದುರು ಕೂರುವ ಸಮಯ ಹೆಚ್ಚಾಗಿದೆ.
ಪ್ಯೂ ರೀಸರ್ಚ್ ಸೆಂಟರ್ ಮಾಹಿತಿ ಪ್ರಕಾರ, 10 ಅಮೆರಿಕನ್ನರ ಪೈಕಿ ಮೂವರು ಇ-ಪುಸ್ತಕ ಓದುತ್ತಾರೆ. ಇದಕ್ಕೆ ಹಲವು ಪುಸ್ತಕಗಳನ್ನು ಹೊತ್ತೊಯ್ಯುವ ಬದಲು ಒಂದೇ ಇಲೆಕ್ಟ್ರಾನಿಕ್ ಉಪಕರಣ ಕೈಯಲ್ಲಿದ್ದರೆ ಸಾಕು ಎಂಬುದು ಒಂದು ಕಾರಣ. ಕಡಿಮೆ ವೆಚ್ಚ ಎಂಬುದು ಮತ್ತೊಂದು ಕಾರಣ. ಆದರೆ, ಮುದ್ರಿತ ಪುಸ್ತಕಗಳನ್ನು ಓದುವಾಗ ಸಿಗುವ ಆನಂದ ಡಿಜಿಟಲ್ ಓದಿನಲ್ಲಿ ಸಿಗುವುದಿಲ್ಲ ಎಂಬ ಅಭಿಪ್ರಾಯ ಬಹುತೇಕರದ್ದು.
ಇನ್ನೊಂದು ಸಂಶೋಧನೆಯ ಪ್ರಕಾರ, ಆನ್‌ಲೈನ್‌ನಲ್ಲಿ ಓದುವಾಗ ಓದಿನ ವೇಗವು ಶೇಕಡ 10-30ರಷ್ಟು ಕಡಿಮೆಯಾಗಿ ಬಿಡುತ್ತದೆ. ಡಿಜಿಟಲ್ ಉಪಕರಣಗಳು ಹೊರಸೂಸುವ ಬೆಳಕು ಕಂಗಳಿಗೆ ಆಯಾಸವನ್ನು ಉಂಟುಮಾಡುವುದೇ ಇದಕ್ಕೆ ಕಾರಣ. ಇದು ಓದುಗನ ಗಮನವನ್ನು ಬೇರೆಡೆ ಹೋಗುವಂತೆ ಮಾಡುತ್ತದೆ ಎಂಬ ಆರೋಪ ವಿದೆ.
ಆನ್‌ಲೈನ್ ಓದುವಿಕೆಯ ವೇಗ ಕುಂಟಿತವಾಗದಂತೆ ತಡೆಯಲು ಟೈಪೋಗ್ರಾಫಿಕ್ ಡಿಸೈನರ್ ರೆನಾಟೊ ಕ್ಯಾಸುಟ್ ನಿರಂತರ ಸಂಶೋಧನೆ ನಡೆಸಿದ್ದರು. ಕೊನೆಗೆ ಓದಿನ ವೇಗ ವರ್ಧಿಸುವ ಪರಿಹಾರವಾಗಿ ಈಗ ಬಯೋನಿಕ್ ರೀಡಿಂಗ್ ಅನ್ನು ಓದುಗರ ಮುಂದೆ ಪ್ರಸ್ತುತ ಪಡಿಸಿದ್ದಾರೆ.
ಈ ಬ್ರೌಸರ್ ಆಧಾರಿತ ಸಾಫ್ಟ್‌ವೇರ್ ಮೆದುಳು ಯಾವುದೇ ಪದದ ಎಲ್ಲ ಅಕ್ಷರಗಳನ್ನು ಓದುವುದಿಲ್ಲ ಎಂಬ ತತ್ತ್ವದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಈಗಾಗಲೇ ಕೆಲವು ಪದಗಳನ್ನು ನೆನಪಿನಲ್ಲಿರಿಸಿಕೊಂಡಿದೆ. ಕೆಲವು ಅಕ್ಷರಗಳನ್ನು ಓದುವುದು ಅರ್ಥವನ್ನು ಗುರುತಿಸಲು ಮತ್ತು ಅರ್ಥೈಸಲು ಸಹಾಯ ಮಾಡುತ್ತದೆ. ಮೆದುಳು ಕಣ್ಣುಗಳಿಗಿಂತ ವೇಗವಾಗಿ ಓದುತ್ತದೆ. ಅದಕ್ಕೆ ತಕ್ಕಂತೆ ಈ ಸಾಫ್ಟ್‌ವೇರ್ ಅಭಿವೃದ್ಧಪಡಿಸಲಾಗಿದೆ ಎಂಬುದು ಈ ಸಾಫ್ಟ್‌ವೇರ್ ವೆಬ್‌ಸೈಟ್‌ನ ವಾದ.
ಬಯೋನಿಕ್ ರೀಡಿಂಗ್ ಪಠ್ಯಗಳನ್ನು ಪರಿಷ್ಕರಿಸುತ್ತದೆ ಇದರಿಂದ ಹೆಚ್ಚು ಸಂಕ್ಷಿಪ್ತ ಪದಗಳನ್ನು ಹೈಲೈಟ್ ಮಾಡಲಾಗುತ್ತದೆ. ಇದು ಪಠ್ಯದ ಮೇಲೆ ಕಣ್ಣಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಮಿದುಳು ಹಿಂದೆ ಕಲಿತ ಪದಗಳನ್ನು ಹೆಚ್ಚು ವೇಗವಾಗಿ ನೆನಪಿಸಿಕೊಳ್ಳುತ್ತದೆ ಎಂಬ ವಿವರಣೆಯನ್ನು ಬಯೋನಿಕ್ ವೆಬ್ ತಾಣ ನೀಡುತ್ತದೆ.
ಬಯೋನಿಕ್ ರೀಡಿಂಗ್ ಹೆಸರು ಹುಟ್ಟಿಕೊಂಡದ್ದು ಹೀಗೆ..
ʻಬಯೋನಿಕ್ʼ ಎಂಬ ಶಬ್ದವು ಬಯೋಸ್ (ಲೈಫ್) ಮತ್ತು ಟೆಕ್ನಾಲಜಿಯಿಂದ ಹುಟ್ಟಿಕೊಂಡಿತು. ಮನುಷ್ಯನ ಮಿದುಳು ಇದು ನೈಸರ್ಗಿಕ ಬುದ್ಧಿಮತ್ತೆ. ಇದನ್ನು ಮತ್ತು ನಮ್ಮ ಕೃತಕ ಬುದ್ಧಿಮತ್ತೆಯ ರೀಡಿಂಗ್ ಟೆಕ್ನಾಲಜಿಯನ್ನು ಒಟ್ಟು ಸೇರಿಸಿದ್ದೇವೆ. ಇದುವೇ ಬಯೋನಿಕ್ ರೀಡಿಂಗ್‌ನ ಹಿನ್ನೆಲೆ ಎನ್ನುತ್ತಾರೆ ರೆನಾಟೊ ಕ್ಯಾಸುಟ್.
ವೇಗವಾಗಿ ಓದುವುದು ಒಳ್ಳೆಯದಲ್ವಾ?
ಆದಾಗ್ಯೂ, ಇದಕ್ಕೆ ತದ್ವಿರುದ್ಧವಾಗಿ ಅನೇಕ ಸಂಶೋಧಕರು ವೇಗವಾಗಿ ಓದುವುದು ಯಾವಾಗಲೂ ಉತ್ತಮವಲ್ಲ ಎಂದು ಪ್ರತಿಪಾದಿಸುತ್ತಾರೆ. "ನೀವು ಕೆಲವು ಪದಗಳನ್ನು ಎಷ್ಟು ಬೇಗನೆ ಗುರುತಿಸಿದರೂ, ವಾಕ್ಯವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮೆದುಳು ಇನ್ನೂ ಕೆಲಸವನ್ನು ಮಾಡಬೇಕಾಗಿದೆ. ಬಯಾನಿಕ್ ರೀಡಿಂಗ್ ಓದುಗರ ಗ್ರಹಿಕೆಯ ಶಕ್ತಿಯನ್ನು ಕುಂಟಿತಗೊಳಿಸಬಹುದು ಎಂಬ ಕಳವಳವೂ ದಕಾನ್‌ವರ್ಸೇಶನ್‌ನಲ್ಲಿ ಪ್ರಕಟವಾಗಿರುವ ಈ ತಂತ್ರಾಂಶದ ವಿಮರ್ಶಾತ್ಮಕ ಲೇಖನದಲ್ಲಿದೆ.
ಬಯೋನಿಕ್ ರೀಡಿಂಗ್ ಟೆಕ್ಸ್ಟ್ ಹೀಗಿದೆ ಗಮನಿಸಿ…
ಮೇಲಿನ ಚಿತ್ರವು ಪ್ಯಾರಾಗ್ರಾಫ್ ಅನ್ನು ಬಯೋನಿಕ್ ಫಾಂಟ್‌ನಲ್ಲಿ ತೋರಿಸುತ್ತದೆ. ಈ ತಂತ್ರಜ್ಞಾನದ ಉತ್ಪಾದಕತೆಯನ್ನು ಬೆಂಬಲಿಸಲು ಯಾವುದೇ ಸ್ವತಂತ್ರ ಸಂಶೋಧನೆ ಆದಂತೆ ಇಲ್ಲ. ಆದಾಗ್ಯೂ, ಬಳಕೆದಾರರು ಓದುವಿಕೆಗೆ ಇದು ಒದಗಿಸುವ ವ್ಯತ್ಯಾಸವನ್ನು ಅನುಭವಿಸಬಹುದು. ನೆನಪಿರಲಿ, ಇದು ಕನ್ನಡದ ಅಕ್ಷರಗಳನ್ನು ಸ್ವೀಕರಿಸುತ್ತದೆ. ಕನ್ನಡ ಅಕ್ಷರಗಳನ್ನು ಬಯೋನಿಕ್ ಫಾಂಟ್‌ಗೆ ಪರಿವರ್ತಿಸುವ ಸಾಮರ್ಥ್ಯ ಇನ್ನೂ ಈ ತಂತ್ರಾಂಶಕ್ಕೆ ಇಲ್ಲ. ಇಂಗ್ಲಿಷ್ ಟೆಕ್ಸ್ಟ್‌ಗೆ ಮಾತ್ರ ಇದು ಪರಿಣಾಮಕಾರಿ.
ಬಯೋನಿಕ್ ರೀಡಿಂಗ್ ತಂತ್ರಜ್ಞಾನವನ್ನು ಹೇಗೆ ಬಳಸುವುದು?
ವೆಬ್ ಬ್ರೌಸರ್ ಆಧಾರಿತವಾಗಿದ್ದರೂ, ಇದು ಒಂದೆರಡು ಐಫೋನ್ ಅಪ್ಲಿಕೇಶನ್‌ಗಳು ಮತ್ತು ಮ್ಯಾಕ್ ಅಪ್ಲಿಕೇಶನ್‌ನಲ್ಲಿ (ರೀಡರ್ 5, ಲೈರ್, ಫಿಯರಿ ಫೀಡ್ಸ್) ಅಂತರ್ನಿರ್ಮಿತ ಇ-ರೀಡರ್‌ನಂತೆ ಲಭ್ಯವಿದೆ. ಇದು ಕ್ರೋಮ್ ಎಕ್ಸ್‌ಟೆನ್ಶನ್ ಆಗಿಯೂ ಲಭ್ಯವಿದೆ. ಮೈಕ್ರೋಸಾಫ್ಟ್ ಎಡ್ಜ್‌ನಲ್ಲೂ ಇದನ್ನು ಬಳಸಬಹುದಾಗಿದೆ. ಇದಲ್ಲದೆ, TXT, RTF, RTFD, EPUB ಮತ್ತು DOCX ಫೈಲ್‌ಗಳಿಗಾಗಿ ಉಚಿತ ಪರಿವರ್ತಕ ಉಪಕರಣದ ಮೂಲಕ ಬಯೋನಿಕ್ ಓದುವಿಕೆ ಸ್ವರೂಪದಲ್ಲಿ ತಮ್ಮ ಇ-ಪುಸ್ತಕವನ್ನು ಪರಿವರ್ತಿಸಬಹುದು. ನಂತರ ದಾಖಲೆಗಳನ್ನು ಮುದ್ರಿಸಬಹುದು ಮತ್ತು ಹಾರ್ಡ್ ಕಾಪಿ ಓದುವಿಕೆಯಲ್ಲಿ ಬಯೋನಿಕ್ ರೀಡಿಂಗ್ ಟೆಕ್ ಅನ್ನು ಬಳಸಬಹುದು ಎಂಬುದು ಗಮನಾರ್ಹ ವಿಚಾರ.