Exam Tips: ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಾ? ಹೆಚ್ಚು ಅಂಕ ಪಡೆಯಲು ಈ ಸರಳ ಟಿಪ್ಸ್ ಅನುಸರಿಸಿ
ಪರೀಕ್ಷೆ ಎಂದೊಡನೆ ಯಾರಿಗೇ ಆದರೂ ಒಂದು ಕ್ಷಣ ಆತಂಕ ಸಹಜ. ಪರೀಕ್ಷೆ ಬರೆಯುವವರಿಗೆ ಹೇಗೆ ಗೊಂದಲ, ಆತಂಕ ಇರುತ್ತದೆಯೋ, ಅದೇ ರೀತಿ ಅವರ ಮನೆಯವರಿಗೂ ಮನಸ್ಸಿನಲ್ಲಿ ಒಂದಿಷ್ಟು ಕಸಿವಿಸಿ ಇರುತ್ತದೆ. ಪರೀಕ್ಷೆಯನ್ನು ಹೇಗೆ ಸಮಾಧಾನದಿಂದ ಎದುರಿಸಬಹುದು? ಹೆಚ್ಚಿನ ಅಂಕ ಗಳಿಸಲು ಹೇಗೆ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು? ಈ ಟಿಪ್ಸ್ ನಿಮಗಾಗಿ.

ಜನವರಿ ತಿಂಗಳು ಇನ್ನೇನು ಮುಗಿಯುತ್ತಾ ಬಂತು. ಫೆಬ್ರವರಿ, ಮಾರ್ಚ್ ತಿಂಗಳು ಎಂದರೆ ಮಕ್ಕಳಿಗೆ ಪರೀಕ್ಷೆಗಳ ಸಮಯ. ಅದರಲ್ಲೂ ಈಗ ಸ್ಟೇಟ್, ಸೆಂಟ್ರಲ್ ಎಂಬ ವಿವಿಧ ಸಿಲೇಬಸ್ ಇರುವುದರಿಂದ ಹತ್ತು ಹಲವು ಪರೀಕ್ಷೆಗಳು ನಡೆಯುತ್ತಿರುತ್ತವೆ. ಪರೀಕ್ಷೆ ಎಂದರೆ ಮಕ್ಕಳಿಗೆ ಮಾತ್ರವಲ್ಲ, ಅವರ ಪಾಲಕರಿಗೂ ಅದು ಪರೀಕ್ಷೆಯ ಸಮಯವೇ. ವರ್ಷದ ಬೇರೆಲ್ಲಾ ಸಮಯ ಒಂದೇ ರೀತಿಯಾದರೆ, ಪರೀಕ್ಷೆಯ ಸಮಯ ಎಂದರೆ ಒಂದಷ್ಟು ಸಹಜ ಆತಂಕವಿರುತ್ತದೆ. ಅದಕ್ಕಾಗಿ ಮಕ್ಕಳನ್ನು ತಯಾರು ಮಾಡುವುದು ಹೇಗೆ ಮತ್ತು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹೇಗೆ ಎಂಬುದರ ಬಗ್ಗೆ ಇಲ್ಲಿ ನೀಡಲಾಗಿರುವ ಟಿಪ್ಸ್ ಸಹಕಾರಿಯಾಗಬಹುದು?
ಹಳೆಯ ಪ್ರಶ್ನೆ ಪತ್ರಿಕೆ ಗಮನಿಸಿ
ಈ ಹಿಂದಿನ ಪ್ರಶ್ನೆ ಪತ್ರಿಕೆ ಇದ್ದರೆ, ಅದನ್ನು ಸರಿಯಾಗಿ ಗಮನಿಸಿ, ಅದಕ್ಕೆ ಉತ್ತರ ಬರೆದು, ನೀವೇ ಮೌಲ್ಯಮಾಪನ ಮಾಡಿಕೊಳ್ಳಿ. ಹೀಗೆ ಮಾಡಿದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಜತೆಗೆ, ಪರೀಕ್ಷೆ ಹೇಗಿರಬಹುದು ಎಂಬ ಅರಿವಾಗುತ್ತದೆ.
ನಿರಂತರ ಓದು ಬೇಡ
ಪರೀಕ್ಷೆ ಎಂದು ಹಗಲು ರಾತ್ರಿ ನಿರಂತರ ಓದುವುದು ಸರಿಯಲ್ಲ, ಸತತವಾಗಿ ಓದುವುದರಿಂದ ಕಣ್ಣಿಗೆ ಆಯಾಸವಾಗಬಹುದು ಮತ್ತು ಓದಿದ್ದು ಸರಿಯಾಗಿ ಮನಸ್ಸಿಗೆ ನಾಟದೇ ಇರಬಹುದು. ಅದಕ್ಕಾಗಿ ಓದಿನ ಮಧ್ಯೆ ಅಗತ್ಯ ವಿಶ್ರಾಂತಿ ಪಡೆಯಿರಿ, ಸಣ್ಣಪುಟ್ಟ ವ್ಯಾಯಾಮ ಮಾಡಿ, ಮನಸ್ಸು ಉಲ್ಲಾಸವಾಗುತ್ತದೆ.
ಗಮನವಿಟ್ಟು ಓದಿ, ಅರ್ಥೈಸಿಕೊಳ್ಳಿ
ಕೆಲವರಿಗೆ ಒಮ್ಮೆ ಓದಿದರೆ ಸಾಕಾಗುತ್ತದೆ, ಅದೇ ಮನಸ್ಸಿನಲ್ಲಿ ಉಳಿಯುತ್ತದೆ. ಇನ್ನು ಕೆಲವರಿಗೆ ಎಷ್ಟೇ ಓದಿದರು ಬೇಗ ತಲೆಗೆ ಹೋಗುವುದಿಲ್ಲ. ಹಾಗಾಗಿ ಗಮನವಿಟ್ಟು ಓದಿ, ಸರಳ ತಂತ್ರಗಳ ಮೂಲಕ, ವಾಕ್ಯ ರಚನೆ, ಪದಗಳ ಮೂಲಕ ಉತ್ತರವನ್ನು ನೆನಪಿಟ್ಟುಕೊಳ್ಳಿ. ಹಾಗೆ ಮಾಡಿದರೆ, ಮನನ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ಸೂಕ್ತ ಉತ್ತರವಷ್ಟೇ ಬರೆಯಿರಿ
ಬಹು ಆಯ್ಕೆಯ ಪ್ರಶ್ನೆಗಳನ್ನು ಹೊರತುಪಡಿಸಿದರೆ, ವಾಕ್ಯ ರಚಿಸಿ, ವಿವರಣಾತ್ಮಕವಾಗಿ ಬರೆಯುವ ಪ್ರಶ‌್ನೆಗಳಿಗೆ, ಅಲ್ಲಿ ಕೇಳಿರುವಷ್ಟೇ ಉತ್ತರ ನೀಡಿ. ಅನಗತ್ಯ ಉತ್ತರ ಬರೆದರೆ, ಮಾಲ್ಯಮಾಪಕರಿಗೆ ಕಿರಿಕಿರಿಯಾಗಬಹುದು. ಅದರಿಂದ ನಿಮ್ಮ ಅಂಕಗಳ ಮೇಲೆ ಪರಿಣಾಮವಾಗಬಹುದು.
ಗುಂಪಾಗಿ ಚರ್ಚೆ ಮಾಡಿ
ಪರೀಕ್ಷೆಗೂ ಮೊದಲು ಓದುವ ಸಂದರ್ಭದಲ್ಲಿ ನಿಮಗೆ ಸೂಕ್ತ ಮತ್ತು ಆಪ್ತ ಗೆಳೆಯರ ಜತೆ ಒಟ್ಟಾಗಿ ಓದಿಕೊಳ್ಳಿ. ಅದರಲ್ಲಿ ನಿಮಗೆ ಗೊತ್ತಿರುವುದನ್ನು ಅವರಿಗೆ ಹೇಳಿಕೊಡಿ, ಗೊತ್ತಿಲ್ಲದಿರುವುದನ್ನು ಅವರಲ್ಲಿ ಕೇಳಿ ತಿಳಿದುಕೊಳ್ಳಿ. ಆದರೆ ಅನಗತ್ಯ ಹರಟೆ ಬೇಡ.
ಓದು, ವಿಶ್ರಾಂತಿಯನ್ನು ಸಮತೋಲನ ಮಾಡಿಕೊಳ್ಳಿ
ಪರೀಕ್ಷೆ ಸಮಯದಲ್ಲಿ ಸಾಕಷ್ಟು ಓದಬೇಕು ನಿಜ, ಅದರ ಜತೆಗೆ, ನಿದ್ರೆ ಮತ್ತು ನಿತ್ಯದ ಕೆಲಸಗಳಿಗೆ ಅಗತ್ಯವಿರುವಷ್ಟು ಸಮಯ ಕೊಡಿ. ಆರೋಗ್ಯ ಚೆನ್ನಾಗಿರಲು, ಅಗತ್ಯ ಸಮಯ ನಿದ್ರೆ ಮಾಡಿ. ಅದಕ್ಕಾಗಿ ನೀವೇ ಒಂದು ಟೈಂ ಟೇಬಲ್ ಮಾಡಿಕೊಂಡು ಪಾಲಿಸಿ, ಓದು-ನಿದ್ರೆಗೆ ತೊಂದರೆಯಾಗದಂತೆ ನಿರ್ವಹಿಸಿ.
ದಿನಚರಿ ರೂಢಿಸಿಕೊಳ್ಳಿ
ಪರೀಕ್ಷೆ ದಿನಾಂಕಗಳು ಸಾಕಷ್ಟು ಮುಂಚಿತವಾಗಿಯೇ ಘೋಷಣೆಯಾಗಿರುತ್ತವೆ. ಹಾಗಿರುವಾಗ, ಅದಕ್ಕೆ ಪೂರಕವಾಗಿ ನಿಮ್ಮ ದಿನಚರಿಯಲ್ಲಿ ಕೆಲವೊಂದು ಹೊಂದಾಣಿಕೆ ಮಾಡಿಕೊಳ್ಳಿ. ಹೊರಗಡೆ ಸುತ್ತಾಟ, ಟಿವಿ, ಮೊಬೈಲ್ ಅನ್ನು ಸೀಮಿತಗೊಳಿಸಿ, ಹೆಚ್ಚಿನ ಸಮಯ ಅಧ್ಯಯನಕ್ಕೆ ವಿನಿಯೋಗಿಸಿ, ದಿನವೂ ತಪ್ಪದೇ ಅದನ್ನು ಪಾಲಿಸಿದರೆ, ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.
ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ
ಪರೀಕ್ಷೆಗೆ ಓದಲು ಸದಾ ಒಂದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ದಿನಕ್ಕೊಂದು ಕಡೆ ಓದಲು ಕುಳಿತರೆ ಏಕಾಗ್ರತೆಗೆ ತೊಂದರೆಯಾಗಬಹುದು. ನಿಮಗೆ ಸೂಕ್ತವೆನಿಸುವ, ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಓದಿದರೆ, ಬೇಗನೇ ಅರ್ಥವಾಗಬಹುದು.
ಓದುವ ಸ್ಥಳದಲ್ಲಿ ಅನಗತ್ಯ ವಸ್ತು ಬೇಡ
ನೀವು ಓದಲು ಆಯ್ಕೆ ಮಾಡಿಕೊಂಡಿರುವ ಸ್ಥಳದಲ್ಲಿ ಅನಗತ್ಯ ವಸ್ತುಗಳನ್ನು ಇರಿಸಬೇಡಿ. ಓದು, ಸಿಲೆಬಸ್‌ಗೆ ಸಂಬಂಧಿಸಿದ ವಸ್ತುಗಳಷ್ಟೇ ಇರಲಿ. ಇಲ್ಲದಿದ್ದರೆ ನಿಮ್ಮ ಗಮನ ಬೇರೆಡೆ ಸಾಗಿ ಓದಿಗೆ ತೊಂದರೆಯಾಗಬಹುದು.
ಅನುಕೂಲಕರ ವಿಧಾನ ಅನುಸರಿಸಿ
ಇಲ್ಲಿ ಹೇಳಿರುವ ಟಿಪ್ಸ್ ಎಲ್ಲವೂ ನಿಮಗೆ ಈಗಾಗಲೇ ತಿಳಿದಿರಲೂಬಹುದು. ಹಾಗಾಗಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ನಿಮಗೆ ಅನುಕೂಲವಾದ ವಿಧಾನ ಬಳಸಿ, ಗೊಂದಲ ನಿವಾರಿಸಿ, ಆತಂಕ ಕಳೆದು ಆರಾಮವಾಗಿ ಪರೀಕ್ಷೆ ಬರೆಯಿರಿ. ಹಾಗೆ ಮಾಡಿದರೆ ಉತ್ತಮ ಅಂಕ, ಫಲಿತಾಂಶ ನಿಮ್ಮದಾಗುತ್ತದೆ. ಆಲ್ ದಿ ಬೆಸ್ಟ್.
