Exam Preparation: ಐಐಟಿ - ಜೆಇಇ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಲು ಇಲ್ಲಿದೆ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  Exam Preparation: ಐಐಟಿ - ಜೆಇಇ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಲು ಇಲ್ಲಿದೆ ಸಲಹೆ

Exam Preparation: ಐಐಟಿ - ಜೆಇಇ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಲು ಇಲ್ಲಿದೆ ಸಲಹೆ

ಐಐಟಿ–ಜೆಇಇಗೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ, ಕೆಲವೇ ಮಂದಿ ಅತಿ ಹೆಚ್ಚು ರ‍್ಯಾಂಕ್‌ ಗಳಿಸಿ, ತಮ್ಮ ಕನಸಿನ ಐಐಟಿ ಅಥವಾ ಎನ್‌ಐಟಿಗೆ ಪ್ರವೇಶ ಪಡೆಯುತ್ತಾರೆ. (ಬರಹ: ಪ್ರಜ್ವಲಾ)

ಐಐಟಿ - ಜೆಇಇ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಲು ಇಲ್ಲಿದೆ ಸಲಹೆ
ಐಐಟಿ - ಜೆಇಇ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಲು ಇಲ್ಲಿದೆ ಸಲಹೆ (PC: Canva)

ಐಐಟಿ - ಜೆಇಇ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ - ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್) ಅನ್ನು ಭಾರತೀಯ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರಗಳ ಪ್ರತಿಷ್ಠಿತ ಕಾಲೇಜುಗಳಾದ ಐಐಟಿ ಹಾಗು ಎನ್‌ಐಟಿ ಗಳಲ್ಲಿ ಪ್ರವೇಶಿಸಲು ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಕೆಲವೇ ಮಂದಿ ಅತಿ ಹೆಚ್ಚು ರ‍್ಯಾಂಕ್‌ ಗಳಿಸಿ, ತಮ್ಮ ಕನಸಿನ ಐಐಟಿ ಅಥವಾ ಎನ್‌ಐಟಿಗೆ ಪ್ರವೇಶ ಪಡೆಯುತ್ತಾರೆ.

ಈ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲೇ ಯಶಸ್ಸು ಸಾಧಿಸುವುದು ಕಷ್ಟದ ಕೆಲಸ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದು ಸಾಧ್ಯವಿಲ್ಲದ ಕೆಲಸವಲ್ಲ. ಸರಿಯಾದ ಯೋಜನೆ, ಸಮಯ ನಿರ್ವಹಣೆ, ನಿರಂತರ ಅಭ್ಯಾಸ ಹಾಗೂ ದೃಢ ಸಂಕಲ್ಪವಿದ್ದರೆ, ನೀವು ನಿಮ್ಮ ಮೊದಲ ಪ್ರಯತ್ನದಲ್ಲೇ ಈ ಗುರಿ ತಲುಪಬಹುದು.

ಐಐಟಿ-ಜೆಇಇ ಪರೀಕ್ಷೆಗೆ ತಯಾರಿಗೆ ಮಾರ್ಗದರ್ಶನ

ಅರ್ಥ ಮಾಡಿಕೊಂಡು ಓದುವುದು: ಪ್ರತಿ ಅಧ್ಯಾಯದ ಮೂಲಭೂತ ಸಿದ್ಧಾಂತಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡು ಓದುವುದು ಉತ್ತಮ. ಪ್ರಶ್ನೆಗಳು ಕೇವಲ ಸಾಮಾನ್ಯ ವಿಷಯಗಳ ಆಧಾರಿತವಾಗಿರುವುದಿಲ್ಲ. ಅಧ್ಯಾಯವನ್ನು ಆಳವಾಗಿ ಅರಿವು ಮಾಡಿಕೊಂಡಿರದೇ ಇದ್ದರೆ, ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳು ನಿಮಗೆ ಗೊಂದಲವನ್ನುಂಟು ಮಾಡಬಹುದು.

ಎನ್‌ಸಿಆರ್‌ಟಿ ಪುಸ್ತಕಗಳನ್ನು ನಿಗದಿತವಾಗಿ ಓದಿ: ಎನ್‌ಸಿಆರ್‌ಟಿ ಪುಸ್ತಕಗಳು ಅತ್ಯಂತ ಮಹತ್ವಪೂರ್ಣವಾಗಿವೆ. ವಿಶೇಷವಾಗಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತದ 11ನೇ ಹಾಗೂ 12ನೇ ತರಗತಿಯ ಪುಸ್ತಕಗಳು ಬಹಳ ಪ್ರಯೋಜನಕಾರಿಯಾಗಿವೆ.

ಪ್ಲಾನ್ ಮಾಡಿರುವ ಅಧ್ಯಾಯಗಳ ಮೇಲೆ ಒತ್ತಡ: ಎಲ್ಲ ಅಧ್ಯಾಯಗಳನ್ನು ಓದಬೇಕೆಂಬ ಒತ್ತಡವಿಲ್ಲ. ಮೊದಲಿಗೆ ಪುನರಾವರ್ತಿತ ಪ್ರಶ್ನೆಗಳನ್ನು ಅದರ ಪಾಠಗಳನ್ನು ಚೆನ್ನಾಗಿ ಓದಿಕೊಳ್ಳಿ. ಕೆಲವು ಅಧ್ಯಾಯಗಳಿಂದ ಪ್ರಶ್ನೆಗಳು ಬಂದೇ ಬರುತ್ತವೆ ಎಂದಿರುತ್ತದೆ. ಅಂಥದರ ಮೇಲೆ ಹೆಚ್ಚು ಗಮನಕೊಡಿ.

ಪ್ರತಿದಿನದ ಪಠ್ಯಕ್ರಮವನ್ನು ರೂಪಿಸಿಕೊಳ್ಳಿ: ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಓದುತ್ತೇನೆ ಎಂದು ಒಂದು ಪಠ್ಯಕ್ರಮವನ್ನು ರೂಪಿಸಿಕೊಳ್ಳಿ. ಈ ಸಮಯವನ್ನು ವಿಷಯ ಪ್ರಕಾರ ವಿಭಜಿಸಿ. ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರಕ್ಕೆ ಸಮಾನ ಮಹತ್ವ ನೀಡಿ ಅಭ್ಯಾಸ ಮಾಡಿ.

ಜೆಇಇ ಪರೀಕ್ಷೆಗೆ ಬೇಕಾದ ತಯಾರಿ ಸಲಹೆಗಳು

ಸಾಮಾನ್ಯ ತಪ್ಪುಗಳನ್ನು ಮಾಡಬೇಡಿ: ಹೊಸ ಅಧ್ಯಾಯಗಳನ್ನು ಪರೀಕ್ಷೆಗೆ ಒಂದು ವಾರ ಬಾಕಿ ಇರುವಾಗ ಓದಲು ಆರಂಭಿಸಬೇಡಿ. ಇದರಿಂದ ಹಿಂದಿನ ಅಭ್ಯಾಸ ಹಾಳಾಗಬಹುದು.

ಈಗಾಗಲೇ ಓದಿರುವ ವಿಷಯಗಳನ್ನು ಮನನ ಮಾಡುವುದು: ವಾರಕ್ಕೆ ಒಂದು ದಿನ, ಓದಿದ ವಿಷಯಗಳ ಪುನರಾವರ್ತನೆಗೆ ಮೀಸಲಿಡಿ. ಹೊಸದನ್ನು ಓದುವಷ್ಟೇ, ಹಳೆಯದನ್ನು ಮನನ ಮಾಡುತ್ತಿದ್ದಂತೆ, ನೆನಪಿನಲ್ಲಿ ಚೆನ್ನಾಗಿ ಉಳಿಯುತ್ತದೆ.

ಮಾಕ್ ಟೆಸ್ಟ್‌ಗಳನ್ನು ಬರೆಯುವುದು: ಜೆಇಇ ರೀತಿಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಿ ಅಭ್ಯಾಸ ಮಾಡಿ. ಪರೀಕ್ಷೆಯ ಸಮಯ ನಿರ್ವಹಣೆ ಮತ್ತು ಪ್ರಶ್ನೆಪತ್ರಿಕೆಯ ಪ್ಯಾಟರ್ನ್ ತಿಳಿಯಲು ಇದು ಅತ್ಯುತ್ತಮ ಮಾರ್ಗ.

ವಿಷಯಗಳ ಕುರಿತು ಸ್ಪಷ್ಟತೆ ಇರುವುದು ತುಂಬ ಮುಖ್ಯ: ಟಿಪ್ಪಣಿಗಳು, ಫಾರ್ಮುಲಾಗಳು, ಮೈಂಡ್ ಮ್ಯಾಪ್ಸ್‌ಗಳನ್ನು ಬಳಸಿ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

ಜೆಇಇ ಪರೀಕ್ಷೆಗೆ ಪರಿಗಣಿಸಬಹುದಾದ ಕೆಲವು ಪುಸ್ತಕಗಳು ಇಂತಿವೆ:

ಗಣಿತ

  • ಆರ್. ಡಿ. ಶರ್ಮ (ಬೇಸಿಕ್ಸ್)
  • ಆರಿಹಂತ್ ಸೀರೀಸ್
  • ಐಐಟಿ ಮ್ಯಾತಮ್ಯಾಟಿಕ್ಸ್ ಬೈ ಎಂ.ಎಲ್. ಖನ್ನಾ

ಭೌತಶಾಸ್ತ್ರ

  • ಕಾನ್ಸೆಪ್ಟ್ಸ್ ಆಫ್ ಫಿಸಿಕ್ಸ್ ಬೈ ಎಚ್.ಸಿ. ವರ್ಮಾ
  • ಡಿ.ಸಿ ಪಾಂಡೆ ಸೀರೀಸ್
  • ಎನ್.ಸಿ.ಆರ್.ಟಿ ಭೌತಶಾಸ್ತ್ರದ ಪುಸ್ತಕಗಳು

ರಸಾಯನ ಶಾಸ್ತ್ರ

  • ಎನ್.ಸಿ.ಆರ್.ಟಿ ೧೧ ಮಾತ್ತು ೧೨ ನೇ ತರಗತಿಯ ಪುಸ್ತಕಗಳು
  • ಒ.ಪಿ. ಟಂಡನ್ ಫಾರ್ ಫಿಸಿಕಲ್ & ಇನಾರ್ಗಾನಿಕ್ ಕೆಮಿಸ್ಟ್ರಿ
  • ಮಾರಿಸನ್ ಅಂಡ್ ಬಾಯ್ಡ ಫಾರ್ ಆರ್ಗಾನಿಕ್ ಕೆಮಿಸ್ಟ್ರಿ

ಐಐಟಿ, ಜೆಇಇ ಪರೀಕ್ಷೆಯ ಆಸಕ್ತರಿಗೆ ಕೆಲವು ತಿಳಿದುಕೊಳ್ಳಬೇಕಾದ ಸಲಹೆಗಳು ಮತ್ತು ಅಂಶಗಳು ಹೀಗಿವೆ:

  • ತೀವ್ರ ಓದುವ ಹಂಬಲವಿರುವವರು ಮಾತ್ರ ಈ ಪಥವನ್ನು ಆರಿಸುವುದು ಉತ್ತಮವೆನಿಸುತ್ತದೆ.
  • ಸಮಯ ನಿರ್ವಹಣೆ ಮತ್ತು ಶ್ರದ್ಧೆ ಎಲ್ಲಾ ವಿಷಯಗಳಿಗಿಂತ ಮುಖ್ಯ.
  • ಸಮಸ್ಯೆ ಎಂದೆನಿಸಿದಾಗ ಸಹಾಯ ಕೇಳಬಹುದು. ಸ್ನೇಹಿತರು, ಶಿಕ್ಷಕರು ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗನ್ನು ಉತ್ತಮವಾಗಿ ಬಳಸಿಕೊಳ್ಳಿ
  • ಆರೋಗ್ಯದ ಮೇಲೆ ಗಮನ ಕೊಡುವುದು ಕೂಡ ಬಹಳ ಮುಖ್ಯ. ಉತ್ತಮ ನಿದ್ರೆ, ಆಹಾರ ಮತ್ತು ವಿಶ್ರಾಂತಿ ಅಗತ್ಯ.

ಐಐಟಿ, ಜೆಇಇ ಪ್ರಯತ್ನದಲ್ಲೇ ಪಾಸ್ ಆಗುವುದು ಕೇವಲ ಬುದ್ಧಿವಂತಿಕೆಯಲ್ಲ. ಅದು ಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದ ಫಲ. ನೀವು ಒಂದೇ ಬಾರಿಗೆ ಸರಿಯಾದ ದಿಕ್ಕಿನಲ್ಲಿ ಛಲಬಿಡದೆ ಪ್ರಯತ್ನ ಮಾಡಿದರೆ, ಫಲಿತಾಂಶ ಖಂಡಿತವಾಗಿ ನಿಮ್ಮ ಪಾಲಾಗುತ್ತದೆ. ತಯಾರಿ ಪ್ರಕ್ರಿಯೆಯ ಪ್ರತಿಯೊಂದು ಹಂತಕ್ಕೂ ಗೌರವ ಕೊಡಿ, ಮನಃಸ್ಥಿತಿ ಶಾಂತವಾಗಿರಲಿ, ನಿಮ್ಮ ಕನಸು ನನಸಾಗಿಸುವುದರ ಕಡೆಗೆ ಒತ್ತು ನೀಡಿ.

Priyanka Gowda

eMail
Whats_app_banner