ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ನಿಮಗಿದ್ರೆ ಗಮನಿಸಿ, ಈ ತಪ್ಪುಗಳನ್ನು ಮಾಡಿದ್ರೆ ಬೇಗ ವಯಸ್ಸಾದವರಂತೆ ಕಾಣ್ತೀರಿ ಎಚ್ಚರ
ಇತ್ತೀಚಿಗೆ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ಹಲವರು ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆದರೆ ವ್ಯಾಯಾಮ ಮಾಡುವಾಗ ಏನು ಮಾಡಬೇಕು, ಏನು ಮಾಡಬಾರದು ಎಂಬುದು ಕೂಡ ತಿಳಿದಿರಬೇಕು. ವ್ಯಾಯಾಮದ ದಿನಚರಿಯಲ್ಲಿ ಪದೇ ಪದೇ ಈ ತಪ್ಪುಗಳನ್ನು ಮಾಡುವುದರಿಂದ ಬೇಗ ವಯಸ್ಸಾದವರಂತೆ ಕಾಣುತ್ತೀರಿ.

ನಮ್ಮ ಜೀವನಶೈಲಿ ಚೆನ್ನಾಗಿರಬೇಕು ಅಂದ್ರೆ ನಾವು ದೈಹಿಕವಾಗಿ ಒಂದಿಷ್ಟು ಚಟುವಟಿಕೆಗಳನ್ನು ಮಾಡಬೇಕು. ಆರೋಗ್ಯಕರ ಆಹಾರ ಸೇವನೆಯ ಜೊತೆಗೆ ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನೂ ರೂಢಿಸಿಕೊಂಡಿರಬೇಕು. ಇತ್ತೀಚೆಗೆ ಹಲವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಆದರೆ ವ್ಯಾಯಾಮ ಮಾಡುವಾಗ ಏನು ಮಾಡಬೇಕು, ಏನು ಮಾಡಬಾರದು ಎಂಬುದು ನಮಗೆ ತಿಳಿದಿರಬೇಕು. ಇಲ್ಲದಿದ್ದರೆ ನಾವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಸ್ಯೆಗಳಲ್ಲಿ ಬೇಗ ವಯಸ್ಸಾದಂತೆ ಕಾಣುವುದು ಒಂದು. ವ್ಯಾಯಾಮದ ದಿನಚರಿಯಲ್ಲಿ ಪದೇ ಪದೇ ಈ ತಪ್ಪುಗಳನ್ನು ಮಾಡುವುದರಿಂದ ನಮಗೆ ಬೇಗ ವಯಸ್ಸಾದಂತೆ ಕಾಣುತ್ತದೆ. ಹಾಗಾದರೆ ಅಂತಹ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.
ವಿಶ್ರಾಂತಿ ಇಲ್ಲದೆ ನಿರಂತರ ವ್ಯಾಯಾಮ
ವ್ಯಾಯಾಮ ಮಾಡುವಾಗ ಹೆಚ್ಚಿನವರು ಏಕತಾನತೆಯನ್ನು ಹೊಂದಿರುತ್ತಾರೆ. ದೇಹಕ್ಕೆ ವಿಶ್ರಾಂತಿ ನೀಡದೆ ದೇಹ ದಂಡಿಸುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ನಿರಂತರ ವ್ಯಾಯಾಮವು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೇಹದಲ್ಲಿ ದೀರ್ಘಕಾಲದ ಉರಿಯೂತ, ಹೆಚ್ಚಿದ ಕಾರ್ಟಿಸೋಲ್ ಮಟ್ಟಗಳು ಮತ್ತು ಗಾಯದ ಅಪಾಯದಂತಹ ಸಮಸ್ಯೆಗಳು ಎದುರಾಗುತ್ತವೆ. ಇವು ದೇಹವನ್ನು ಹೆಚ್ಚು ಸುಸ್ತಾಗಿಸುತ್ತದೆ ಮತ್ತು ವಯಸ್ಸಾದ ಲಕ್ಷಣಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ.
ಶಕ್ತಿ ತರಬೇತಿಯನ್ನು ನಿರ್ಲಕ್ಷಿಸುವುದು
ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುವ ವ್ಯಾಯಾಮ (ಸ್ಟ್ರೆಂಥ್ ಟ್ರೈನಿಂಗ್) ಗಳು ಇಡಿ ದೇಹವನ್ನು ಆರೋಗ್ಯಕರವಾಗಿಡಲು ಒಳ್ಳೆಯದು. ಇದಕ್ಕಾಗಿ, ಮೂಳೆಗಳು ಮತ್ತು ಸ್ನಾಯುಗಳಿಗೆ ವಿಶೇಷ ವ್ಯಾಯಾಮಗಳನ್ನು ಮಾಡಬೇಕು. ಸ್ಕ್ವಾಟ್‌ಗಳು ಮತ್ತು ಪುಷ್-ಅಪ್‌ಗಳಂತಹ ವ್ಯಾಯಾಮಗಳನ್ನು ವಾರಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿ ಮಾಡಬೇಕು. ಈ ಅಭ್ಯಾಸಗಳು ದೇಹವನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಡುತ್ತವೆ.
ನಿಯಮಿತವಾಗಿ ಹೆಚ್ಚಿನ ತೀವ್ರತೆಯ ವ್ಯಾಯಾಮಗಳನ್ನು ಮಾಡುವುದು
ನಿಯಮಿತವಾಗಿ ಕೆಲವು ಹೆಚ್ಚಿನ ತೀವ್ರತೆಯ ವ್ಯಾಯಾಮಗಳನ್ನು ಮಾಡುವುದು ಅಪಾಯಕಾರಿ. ಓಟ ಮತ್ತು ಜಿಗಿತದಂತಹ ಹೆಚ್ಚಿನ ತೀವ್ರತೆಯ ವ್ಯಾಯಾಮಗಳು ಕೀಲು ನೋವಿನ ಅಪಾಯವನ್ನು ಹೆಚ್ಚಿಸಬಹುದು. ಇದು ಸಂಧಿವಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆಯನ್ನು ತಪ್ಪಿಸಲು, ಮೂಳೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುವ ವ್ಯಾಯಾಮಗಳನ್ನು ನಿರಂತರವಾಗಿ ಮಾಡುವುದನ್ನು ತಪ್ಪಿಸಬೇಕು.
ವಾರ್ಮ್ಅಪ್ ಮಾಡದೇ ಇರುವುದು
ಯಾವುದೇ ರೀತಿ ವ್ಯಾಯಾಮವನ್ನು ಅಭ್ಯಾಸ ಮಾಡುವ ಮುನ್ನ ವಾರ್ಮ್‌ಅಪ್ ಮಾಡುವುದು ಬಹಳ ಅವಶ್ಯ. ವ್ಯಾಯಾಮ ಆರಂಭಿಸುವ ಮೊದಲು ಮತ್ತು ವ್ಯಾಯಾಮ ಮಾಡಿದ ನಂತರ ವಾರ್ಮ್ ಅಪ್ ಎಕ್ಸ್‌ಸೈಜ್‌ಗಳನ್ನು ಮಾಡಬೇಕು.
ವಿಶ್ರಾಂತಿ ತೆಗೆದುಕೊಳ್ಳುವುದು
ವ್ಯಾಯಾಮದಷ್ಟೇ ದೇಹಕ್ಕೆ ಸರಿಯಾಗಿ ವಿಶ್ರಾಂತಿ ನೀಡುವುದು ಬಹಳ ಮುಖ್ಯ. ವಿಶ್ರಾಂತಿಯ ಭಾಗವಾಗಿ ನಿದ್ದೆಗೆ ಹೆಚ್ಚಿನ ಗಮನ ಕೊಡಬೇಕು. ನಿದ್ದೆಯ ಕೊರತೆಯು ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಲು ಕಾರಣವಾಗುತ್ತದೆ. ಅಲ್ಲದೇ ಇದರಿಂದ ದೇಹ ಸ್ಥಿತಿಯು ಹತೋಟಿಯಲ್ಲಿ ಇರುವುದಿಲ್ಲ. ಇದರಿಂದ ಬೇಗನೆ ವಯಸ್ಸಾದಂತೆ ಕಾಣಿಸಬಹುದು.
ಆಹಾರ ಮತ್ತು ಪೋಷಣೆಯ ಬಗ್ಗೆ ನಿರ್ಲಕ್ಷ್ಯ
ವ್ಯಾಯಾಮದ ಸಮಯದಲ್ಲಿ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು , ಜೀವಸತ್ವಗಳು, ಖನಿಜಗಳು ಮತ್ತು ಪ್ರೊಟೀನ್‌ಗಳನ್ನು ಒದಗಿಸುವ ಆಹಾರವನ್ನು ಸೇವಿಸಬೇಕು. ಕ್ಯಾಲೋರಿಗಳ ಆಧಾರದ ಮೇಲೆ ವ್ಯಾಯಾಮ ಮಾಡಿ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗದಿದ್ದರೆ, ಕೀಲು ಗಾಯಗಳು ಮತ್ತು ಸ್ನಾಯುಗಳಿಗೆ ತ್ವರಿತವಾಗಿ ಹಾನಿಯಾಗುವ ಸಾಧ್ಯತೆಯಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ವಿಭಾಗ