Explainer: ಹಿಂದಿನ ಕಾಲದ ಫೋಟೋಗಳಲ್ಲಿ ಜನರು ಏಕೆ ಗಂಭೀರವಾಗಿ ಪೋಸ್ ನೀಡುತ್ತಿದ್ದರು ?ಎಂದಾದರೂ ಯೋಚಿಸಿದ್ದೀರಾ?
Old Photography: ನಮ್ಮ ತಾತ ಮುತ್ತಾತನ ಕಾಲದ ಫೋಟೋಗಳನ್ನು ನೋಡಿದರೆ ಅಲ್ಲಿ ಯಾರ ಮುಖದಲ್ಲೂ ಕಿರುನಗೆ ಕೂಡ ಕಾಣುವುದಿಲ್ಲ. ಯಾಕೆ ಹೀಗೆ..? ಆಗಿನ ಕಾಲದವರು ಫೋಟೋ ಎಂದರೆ ಅಷ್ಟು ಗಂಭೀರವಾಗುತ್ತಿದ್ದುದು ಏಕೆ..? ಎಂದಾದರೂ ಯೋಚಿಸಿದ್ದೀರೇ..?
Old Photography: ತಮ್ಮ ತಂದೆ - ತಾತನ ಕಾಲದಲ್ಲಿದ್ದ ಫೊಟೋಗ್ರಫಿಗೂ ಈಗೀನ ಫೊಟೋಗ್ರಫಿಗೂ ತುಂಬಾನೇ ವ್ಯತ್ಯಾಸವಿದೆ. ಮೊದಲೆಲ್ಲ ಒಂದು ಫೋಟೋ ಕ್ಲಿಕ್ಕಿಸಿ ಅದು ನಮ್ಮ ಕೈಗೆ ಸಿಗಬೇಕು ಎಂದರೆ ತಿಂಗಳಾನುಟ್ಟಲೇ ಕಾಯಬೇಕಿತ್ತು. ಆದರೆ ಈಗ ಹಾಗಲ್ಲ. ಫೋಟೋ ತೆಗೆದ ಕೆಲವೇ ನಿಮಿಷಗಳಲ್ಲಿ ನಿಮ್ಮ ಮೊಬೈಲ್ ಫೋಟೋ ಕಳಿಸಬಹುದು. ಅಥವಾ ಹಾರ್ಡ್ ಕಾಪಿಗಳನ್ನು ಪಡೆಯುವುದು ಕೂಡ ಕೆಲವೇ ನಿಮಿಷಗಳ ಕೆಲಸ.
ಇನ್ನು ಹಳೆಯ ಕಾಲದ ಫೊಟೋಗಳು ಹಾಗೂ ಈಗಿನ ಫೊಟೋಗಳಲ್ಲಿ ನೀವು ಒಂದು ವ್ಯತ್ಯಾಸವನ್ನು ಗಮನಿಸಿದ್ದಿರಬಹುದು. ಹಿಂದೆಲ್ಲ ಫೋಟೋ ಎಂದಾಕ್ಷಣ ಜನರು ಬಹಳ ಗಂಭೀರವಾಗಿ ಫೋಟೋಗೆ ಪೋಸ್ ನೀಡುತ್ತಿದ್ದರು. ಈಗಿನಂತೆ ಹಲ್ಲು ಕಿಸಿದು ನಗಾಡುವ ಫೋಟೋಗಳು ನಿಮಗೆ ಹಳೆಯ ಕಾಲದ ಫೋಟೋಗ್ರಫಿಯಲ್ಲಿ ಕಾಣ ಸಿಗಲು ಸಾಧ್ಯವೇ ಇಲ್ಲ. ಯಾಕೆ ಹೀಗೆ..? ಆಗೆಲ್ಲ ಫೋಟೋ ತೆಗೆಸಿಕೊಳ್ಳುವಾಗ ಅವರೆಲ್ಲ ಏಕೆ ನಗುತ್ತಿರಲಿಲ್ಲ..? ಎಂದಾದರೂ ಯೋಚಿಸಿದ್ದೀರೇ..? ಆಗೆಲ್ಲಾ ಫೋಟೋ ಎಂದರೆ ಅದು ಗಂಭೀರತೆಯ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸುವುದು ಎಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಬಹುತೇಕರು ಆಗ ಫೋಟೋಗೆ ಗಂಭೀರವಾಗಿ ಪೋಸ್ ನೀಡುತ್ತಿದ್ದರು.
ವರ್ಣಚಿತ್ರಗಳಿಂದ ಕ್ಯಾಮರಾದವರೆಗೆ
ಆರಂಭಿಕ ಹಂತಗಳಲ್ಲಿ ಪೋಟ್ರೇಟ್ ಪೇಂಟಿಂಗ್‌ಗಳು ಇದ್ದವು. ಅಂದರೆ ಒಬ್ಬ ವ್ಯಕ್ತಿಯನ್ನು ಚಿತ್ರ ಬಿಡಿಸುವ ಮೂಲಕ ತೋರಿಸಲಾಗುತ್ತಿತ್ತು. ಕ್ರಮೇಣ ಇದೇ ಮುಂದುವರಿದು ಫೊಟೋಗ್ರಫಿಯಾಗಿ ಬದಲಾಯಿತು. ಆದರೆ ಫೋಟೋಗ್ರಫಿ ಬಂದಾಗಲೂ ಸಹ ಜನರು ವರ್ಣಚಿತ್ರಗಳಲ್ಲಿ ಗಂಭೀರವಾಗಿ ತಮ್ಮನ್ನು ತಾವು ಚಿತ್ರಿಸಿಕೊಳ್ಳುತ್ತಿದ್ದಂತೆಯೇ ಇದರಲ್ಲಿಯೂ ಕೂಡ ಗಂಭೀರವಾಗಿಯೇ ಪೋಸ್ ನೀಡುವ ಸಂಸ್ಕೃತಿ ಮುಂದುವರಿಯುತ್ತಾ ಹೋಯ್ತು. ವರ್ಣಚಿತ್ರಗಳಲ್ಲಿ ಹೇಗೆ ಒಬ್ಬ ವ್ಯಕ್ತಿಯನ್ನು ಗೌರವಾನ್ವಿತವಾಗಿ ಚಿತ್ರಿಸಲಾಗುತ್ತಿತ್ತೋ ಅದೇ ರೀತಿ ಕ್ಯಾಮರಾಗಳ ಆವಿಷ್ಕಾರವಾದ ಮೇಲೂ ಸಹ ಜನರು ಗಂಭೀರವಾಗಿಯೇ ತಮ್ಮ ಫೋಟೋವನ್ನು ತೆಗೆಸಿಕೊಳ್ಳಲು ಇಚ್ಛಿಸುತ್ತದ್ದರು.
ತಾಂತ್ರಿಕ ನಿರ್ಬಂಧಗಳು
ಇನ್ನು ಆಗಿನ ಕಾಲದಲ್ಲಿ ಈ ರೀತಿ ಗಂಭೀರವಾಗಿ ಪೋಸ್ ನೀಡಲು ಇನ್ನೊಂದು ಕಾರಣವೆಂದರೆ ತಾಂತ್ರಿಕ ನಿರ್ಬಂಧಗಳು. ಆಗಿನ ಕ್ಯಾಮರಾಗಳು ಈಗಿನಂತೆ ಕೆಲವೇ ಸೆಕೆಂಡುಗಳಲ್ಲಿ ಫೋಟೋ ಕ್ಲಿಕ್ಕಿಸಿ ಕೊಡುತ್ತಿರಲಿಲ್ಲ. ಕೆಲವು ನಿಮಿಷಗಳ ಕಾಲ ನೀವು ಕ್ಯಾಮರಾವನ್ನು ನೋಡುತ್ತಾ ಪೋಸ್ ಕೊಟ್ಟುಕೊಂಡೇ ಇರಬೇಕಾಗಿತ್ತು. ಹೀಗಾಗಿ ಹಲವು ನಿಮಿಷಗಳ ಕಾಲ ನೈಸರ್ಗಿಕವಾಗಿ ಬಂದ ನಗುವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕೃತಕವಾಗಿ ನಕ್ಕ ನಗು ಅಷ್ಟೊಂದು ಚಂದವೂ ಎನಿಸುತ್ತಿರಲಿಲ್ಲ. ಹೀಗಾಗಿ ಸುಮ್ಮನೇ ಕುಳಿತುಬಿಡುವುದು ಸುಲಭ ಎಂಬುದು ಆಗಿನವರ ಮನಸ್ಥಿತಿಗೆ ಬಂದಿತ್ತು. ಅಲ್ಲದೇ ನಾವು ನಗಾಡುವ ಭರದಲ್ಲಿ ಯಾವುದೇ ಚಲನವಲನವಾದರೂ ಸಹ ಫೋಟೋ ಮಬ್ಬಾಗಿ ಬರುತ್ತಿತ್ತು. ಹೀಗಾಗಿ ನಗುಮುಖಗಳ ಬದಲಾಗಿ ಫೋಟೋದಲ್ಲಿ ಗಂಭೀರ ಮುಖಗಳೇ ಕಾಣಿಸುತ್ತಿದ್ದವು.
ನಗುಮುಖದ ಫೋಟೋಗಳ ಬಗ್ಗೆ ಇದ್ದ ಅಭಿಪ್ರಾಯ
ಆಗೆಲ್ಲಾ ಫೋಟೋಗಳು ಎಂದರೆ ಅದೊಂದು ಗಂಭೀರ ಹಾಗೂ ವಿಶೇಷ ವಿಷಯವಾಗಿತ್ತು. ಹೀಗಾಗಿ ಫೋಟೋಗಳಿಗೆಂದೇ ಸುಮ್ಮ ಸುಮ್ಮನೇ ನಗುವುದನ್ನು ಅಸಭ್ಯ ಎಂದು ಪರಿಗಣಿಸಲಾಗುತ್ತಿತ್ತು. ಸಮಾಜದಲ್ಲಿ ಇದನ್ನು ಘನತೆ ರಹಿತ ಎಂದು ಬಿಂಬಿಸಲಾಗುತ್ತಿತ್ತು. ಹೀಗಾಗಿ ಆಗಿನ ಜನರೆಲ್ಲ ಗಂಭೀರ ಮುಖದಲ್ಲಿಯೇ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಫೋಟೋಗ್ರಫಿಯೆಂದರೆ ಅಪರೂಪ
19ನೇ ಶತಮಾನದಲ್ಲಿ ಛಾಯಾಗ್ರಹಣದ ಆರಂಭವು ಒಂದು ರೀತಿಯಲ್ಲಿ ಸಾಂಸ್ಕೃತಿಕ ಹಾಗೂ ತಾಂತ್ರಿಕವಾಗಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದಂತಿತ್ತು. ಈಗಿನ ಕಾಲದಲ್ಲಿ ವಿಶೇಷ ಕ್ಷಣಗಳನ್ನೆಲ್ಲಾ ಫೋಟೋದಲ್ಲಿ ಸೆರೆ ಹಿಡಿಯುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಛಾಯಾಗ್ರಹಣದ ಆರಂಭಿಕ ದಿನಗಳಲ್ಲಿ ಕುಟುಂಬದ ವಂಶಾವಳಿಯನ್ನು ಸೆರೆ ಹಿಡಿಯಲು ಮಾತ್ರ ಈ ಫೋಟೋಗ್ರಫಿಗಳು ಬಳಕೆಯಾಗುತ್ತಿದ್ದವು. ಕುಟುಂಬದ ಸದಸ್ಯರೆಲ್ಲ ತಮ್ಮಿಷ್ಟದ ಉಡುಪುಗಳನ್ನು ಧರಿಸಿ ಸ್ಟುಡಿಯೋಗೆ ತೆರಳಿ ಗಂಭೀರತೆಯಿಂದ ಪೋಸ್ಟ್ ನೀಡುತ್ತಿದ್ದರು. ಆಗೆಲ್ಲ ಫೋಟೋಗ್ರಫಿ ಎಂಬುದು ಬಹಳ ವಿರಳವಾಗಿದ್ದ ಕಾರಣ ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿತ್ತು.
ಫೋಟೋಗ್ರಫಿಯಲ್ಲಿ ಅಭಿವೃದ್ಧಿ
ವರ್ಷಗಳು ಉರುಳಿದಂತೆ ಛಾಯಾಗ್ರಹಣ ತಂತ್ರಜ್ಞಾನ ಕೂಡ ಬೆಳವಣಿಗೆ ಕಾಣುತ್ತಾ ಹೋಯಿತು. 20ನೇ ಶತಮಾನದ ಆರಂಭದಲ್ಲಿ ಕೊಡಾಕ್ ಬ್ರೌನಿ ಕ್ಯಾಮರಾಗಳು ಮಾರುಕಟ್ಟೆಗೆ ಬಂದವು. ಇದು ಛಾಯಾಗ್ರಹಣ ಕೈಗೆಟುಕುವ ದರಕ್ಕೆ ಸಿಗುವಂತೆ ಮಾಡಿತು. ಅಲ್ಲಿಂದ ಫೋಟೋಗ್ರಫಿ ಎನ್ನುವುದು ಬಳಕೆದಾರ ಸ್ನೇಹಿ ಎಂಬಂತೆ ಆಯ್ತು. ಹಿಂದಿನ ಕ್ಯಾಮರಾಗಳಿಗೆ ಹೋಲಿಸಿದರೆ ಬ್ರೌನಿಯಲ್ಲಿದ್ದ ವೇಗವು ಜನರು ತಮ್ಮ ಸಾಮಾನ್ಯ ಜೀವನದ ಘಟನೆಗಳನ್ನು ಫೋಟೋದಲ್ಲಿ ಸೆರೆ ಹಿಡಿಯವುದಕ್ಕೆ ಸುಲಭ ದಾರಿಯಂತಾಗಿತ್ತು. ಇಲ್ಲಿಂದ ಛಾಯಾಗ್ರಹಣದ ಮೇಲೆ ಜನರಿಗಿದ್ದ ಭಾವನೆಯೇ ಬದಲಾಗುತ್ತಾ ಹೋಯ್ತು. ಆಗೆಲ್ಲ ತಾಂತ್ರಿಕ ನಿರ್ಬಂಧದಿಂದಾಗಿ ಗಂಭೀರವಾಗಿ ಪೋಸ್ ನೀಡುತ್ತಿದ್ದ ಜನರು ಬ್ರೌನಿ ಕ್ಯಾಮರಾದ ಆವಿಷ್ಕಾರದ ಬಳಿಕ ನಗುಮೊಗದಲ್ಲಿ ಪೋಸ್ ನೀಡಲು ಆರಂಭಿಸಿದ್ದರು. ಸಂತೋಷದ ಕ್ಷಣಗಳನ್ನು ಫೋಟೋದಲ್ಲಿ ಸೆರೆ ಹಿಡಿಯುವ ಸಂಪ್ರದಾಯ ಶುರುವಾಗಿತ್ತು. ಇದಾದ ಬಳಿಕ ಹೊಸ ಡಿಜಿಟಲ್ ಯುಗ ತೆರೆದುಕೊಳ್ಳುತ್ತಲೇ ಹೋಯ್ತು.
ಜನರ ದೃಷ್ಟಿಕೋನದಲ್ಲಿ ಬದಲಾವಣೆ
ಹಳೆಯ ಕಾಲದ ಫೋಟೋಗಳಲ್ಲಿ ಕಿರುನಗೆ ಕೂಡ ಕಾಣಿಸುತ್ತಿರಲಿಲ್ಲ. ಆಗ ಸಂಸ್ಕೃತಿ ಹಾಗೂ ತಾಂತ್ರಿಕತೆ ಎರಡೂ ಇದಕ್ಕೆ ಕಾರಣವಾಗಿತ್ತು. ಆದರೆ ಫೋಟೋಗ್ರಫಿಯ ಬಗ್ಗೆ ಜನರಿಗೆ ಅಭಿಪ್ರಾಯಗಳು ಕಾಲ ಕಳೆದಂತೆ ಬದಲಾಗುತ್ತಾ ಹೋಯ್ತು . ಜನರ ಮನಸ್ಥಿತಿ ಕೂಡ ಮಾರ್ಪಾಡಾಯ್ತು. ಖುಷಿಯ ಕ್ಷಣಗಳು ಹೆಚ್ಚೆಚ್ಚು ಫೋಟೋದಲ್ಲಿ ಸೆರೆಯಾಗುತ್ತಾ ಹೋದವು . ಈಗ ಫೊಟೋ ಎನ್ನುವುದು ತೀರಾ ಸಾಮಾನ್ಯ ಎಂಬಷ್ಟರ ಮಟ್ಟಿಗೆ ಫೋಟೋಗ್ರಫಿ ಬೆಳವಣಿಗೆ ಕಂಡಿದೆ ಅಲ್ವೇ..?