Eye Health: ಔಷಧಿಗಳು ಕಣ್ಣಿನ ಆರೋಗ್ಯದ ಮೇಲೆ ಹೇಗೆ ಅಡ್ಡ ಪರಿಣಾಮ ಬೀರುತ್ತಿದೆ ಎಂದು ತಿಳಿಯಿರಿ
ಕಣ್ಣು ನಮ್ಮ ದೇಹದ ಪ್ರಮುಖ ಅಂಗ. ಕಣ್ಣಿನಿಂದಲೇ ನಾವು ಎಲ್ಲವನ್ನೂ ನೋಡುವುದು ಮತ್ತು ತಿಳಿಯಲು ಸಾಧ್ಯವಾಗುವುದು. ಕಣ್ಣಿಗೆ ಹಾನಿಯಾದರೆ, ಅದರಿಂದ ಹಲವು ರೀತಿಯ ಪರಿಣಾಮಗಳು ಉಂಟಾಗುತ್ತವೆ. ಕೆಲವೊಂದು ಔಷಧಿಗಳು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ, ಹೆಚ್ಚಿನ ವಿವರ ಇಲ್ಲಿದೆ.

ನಮ್ಮ ಕಣ್ಣುಗಳು ನಮ್ಮ ದೈನಂದಿನ ಜೀವನದಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಡೆಗಟ್ಟಲು ಅವುಗಳ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಅತ್ಯಗತ್ಯ. ಕಣ್ಣಿನ ಬಗ್ಗೆ ನೀವು ಎಷ್ಟೇ ಕಾಳಜಿವಹಿಸಿದರೂ ನಮ್ಮ ಬೇರೆ ಆರೋಗ್ಯ ಸಮಸ್ಯೆಗಳಿಗಾಗಿ ನಾವು ತೆಗೆದುಕೊಳ್ಳುವ ಔಷಧಿಗಳು ನಮ್ಮ ಕಣ್ಣಿನ ದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ? ಅದರಲ್ಲೂ ಮಧುಮೇಹ, ತೂಕ ನಷ್ಟ, ರಕ್ತದೊತ್ತಡ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗೆ ಸೇರಿದಂತೆ ಇತರ ಸಮಸ್ಯೆಗಳಿಗೆ ತೆಗೆದುಕೊಳ್ಳುವ ಅನೇಕ ಔಷಧಿಗಳು ಕಣ್ಣಿನ ಆರೋಗ್ಯದ ಮೇಲೆ ಋಣಾತ್ಮಕ ರೀತಿಯಲ್ಲಿ ಪರಿಣಾಮ ಬೀರುತ್ತವೆ.
ತೂಕ ನಷ್ಟ ಅಥವಾ ಮಧುಮೇಹ ನಿಯಂತ್ರಣಕ್ಕಾಗಿ ನೀವು ಸೆಮಾಗ್ಲುಟೈಡ್ ಅಥವಾ ಟಿರ್ಜೆಪಾಟೈಡ್ ಔಷಧವನ್ನು ತೆಗೆದುಕೊಳ್ಳುತ್ತಿದ್ದರೆ, ಇದು ನಿಮ್ಮ ದೃಷ್ಟಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ. ಹೊಸ ಅಧ್ಯಯನವೊಂದರ ಪ್ರಕಾರ ಓಜೆಂಪಿಕ್, ವೆಗೊವಿ, ಮೌಂಜಾರೊ ಮತ್ತು ಜೆಪ್ಬೌಂಡ್ ಸೇರಿದಂತೆ ವ್ಯಾಪಕವಾಗಿ ಬಳಸಲಾಗುವ ಈ ಔಷಧಿಗಳಿಗೆ ಸಂಬಂಧಿಸಿದ ಸಂಭಾವ್ಯ ಕಣ್ಣಿನ ಸಮಸ್ಯೆಗಳ ಬಗ್ಗೆ ನೇತ್ರ ತಜ್ಞರ ತಂಡ ಕಳವಳ ವ್ಯಕ್ತಪಡಿಸಿದೆ.
ಈ ಔಷಧಿಗಳನ್ನು ಪ್ರಾರಂಭಿಸಿದ ನಂತರ ರೋಗಿಗಳಲ್ಲಿ ಗಂಭೀರ ದೃಷ್ಟಿ ಸಮಸ್ಯೆಗಳನ್ನು ಅನುಭವಿಸಿದ ಒಂಬತ್ತು ಪ್ರಕರಣಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಅವರಲ್ಲಿ ಏಳು ಮಂದಿ ನಾನ್ ಆರ್ಟೆರಿಟಿಕ್ ಆಂಟೀರಿಯರ್ ಇಸ್ಕೆಮಿಕ್ ಆಪ್ಟಿಕ್ ನ್ಯೂರೋಪತಿ ಎಂಬ ಸ್ಥಿತಿಯಿಂದ ಬಳಲುತ್ತಿದ್ದು, ಇದು ಆಪ್ಟಿಕ್ ನರಕ್ಕೆ ರಕ್ತದ ಹರಿವು ಕಡಿಮೆಯಾಗುವುದರಿಂದ ಉಂಟಾಗುತ್ತದೆ ಮತ್ತು ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಸಂಭವನೀಯ ಋಣಾತ್ಮಕ ಪರಿಣಾಮಗಳು
ದೃಷ್ಟಿ ಸಮಸ್ಯೆ (ಮಸುಕಾದ ದೃಷ್ಟಿ) - ತ್ವರಿತ ತೂಕ ನಷ್ಟ ಅಥವಾ ರಕ್ತದಲ್ಲಿನ ಸಕ್ಕರೆ ಏರಿಳಿತಗಳಿಗೆ ಕಾರಣವಾಗುವ ಔಷಧಿಗಳು ಕಣ್ಣಿನ ಮಸೂರದಲ್ಲಿನ ಬದಲಾವಣೆಗಳಿಂದಾಗಿ ತಾತ್ಕಾಲಿಕವಾಗಿ ದೃಷ್ಟಿ ಮಸುಕಾಗಲು ಕಾರಣವಾಗಬಹುದು.
ಡಯಾಬಿಟಿಕ್ ರೆಟಿನೋಪತಿಯ ಹೆಚ್ಚಿನ ಅಪಾಯ - ರಕ್ತದಲ್ಲಿನ ಸಕ್ಕರೆಯ ತ್ವರಿತ ಸುಧಾರಣೆಯು ಕೆಲವೊಮ್ಮೆ ಅಸ್ತಿತ್ವದಲ್ಲಿರುವ ಡಯಾಬಿಟಿಕ್ ರೆಟಿನೋಪತಿಯನ್ನು ಸ್ಥಿರಗೊಳಿಸುವ ಬದಲು ಇನ್ನಷ್ಟು ಹದಗೆಡಿಸುತ್ತದೆ.
ಕಣ್ಣಿಗೆ ಅಡ್ಡಪರಿಣಾಮಗಳು: ಸೆಮಾಗ್ಲುಟೈಡ್ (ಓಜೆಂಪಿಕ್, ವೆಗೊವಿ) - ಕೆಲವು ಔಷಧಿಗಳ ಬಳಕೆದಾರರು ಮಸುಕಾದ ದೃಷ್ಟಿ, ಡಿಹೈಡ್ರೇಶನ್ ಅಥವಾ ಕಣ್ಣಿನ ಒತ್ತಡದಂತಹ ಬದಲಾವಣೆಗಳಾಗಿರುವ ಬಗ್ಗೆ ತಿಳಿಸಿದ್ದಾರೆ.
ಇನ್ಸುಲಿನ್ ಅಡ್ಜಸ್ಟ್ ಮೆಂಟ್ - ರಕ್ತದಲ್ಲಿನ ಸಕ್ಕರೆಯ ತ್ವರಿತ ಬದಲಾವಣೆಗಳು ಕಣ್ಣಿನ ಮಸೂರದಲ್ಲಿ ಊತವನ್ನು ಉಂಟುಮಾಡಬಹುದು, ಇದು ತಾತ್ಕಾಲಿಕ ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದಕ್ಕೆ ಕಾರಣವೇನು?
ಸೆಮಾಗ್ಲುಟೈಡ್ ಮತ್ತು ಟಿರ್ಜೆಪಾಟೈಡ್ ರಕ್ತದಲ್ಲಿನ ಸಕ್ಕರೆ ಮತ್ತು ಹಸಿವನ್ನು ನಿಯಂತ್ರಿಸಲು ಕರುಳಿನ ಹಾರ್ಮೋನುಗಳನ್ನು ಅನುಕರಿಸುವ ಮೂಲಕ ಕಾರ್ಯನಿರ್ವಹಿಸುವುದರಿಂದ ಅವು ವೇಗವಾಗಿ ರಕ್ತದಲ್ಲಿನ ಸಕ್ಕರೆ ಕುಸಿತಕ್ಕೆ ಕಾರಣವಾಗುತ್ತವೆ, ಇದು ದೃಷ್ಟಿ ನರಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಹೇಳುತ್ತಾರೆ.
ನೀವೇನು ಮಾಡಬೇಕು?
ನೀವು ಸೆಮಾಗ್ಲುಟೈಡ್ ಅಥವಾ ಟಿರ್ಜೆಪಾಟೈಡ್ ತೆಗೆದುಕೊಳ್ಳುತ್ತಿದ್ದರೆ ಮತ್ತು ದೃಷ್ಟಿ ಮಸುಕಾಗುವಿಕೆ ಅಥವಾ ದೃಷ್ಟಿ ನಷ್ಟದಂತಹ ಹಠಾತ್ ಬದಲಾವಣೆಗಳನ್ನು ಗಮನಿಸಿದರೆ ಕಾಯಬೇಡಿ. ಸಾಧ್ಯವಾದಷ್ಟು ಬೇಗ ಕಣ್ಣಿನ ತಜ್ಞರನ್ನು ಭೇಟಿ ಮಾಡಿ ಸೂಕ್ತ ಔಷಧಿಯನ್ನು ತೆಗೆದುಕೊಳ್ಳಿ.
ಸದ್ಯಕ್ಕೆ, ಈ ಅಧ್ಯಯನವು ಎಚ್ಚರಿಕೆಯ ಕರೆಘಂಟೆಯಾಗಿದೆ, ಆದರೆ ಈ ಔಷಧಿಗಳು ಗಂಭೀರ ಕಣ್ಣಿನ ಅಪಾಯವನ್ನು ಹೆಚ್ಚಿಸುತ್ತವೆಯೇ ಎಂದು ನಿರ್ಧರಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆದಾಗ್ಯೂ, ನೀವು ಈ ಔಷಧಿಗಳನ್ನು ಸೇವಿಸುತ್ತಿದ್ದರೆ, ವಾಡಿಕೆಯ ಕಣ್ಣಿನ ಪರೀಕ್ಷೆಗಳನ್ನು ಮುಂದುವರಿಸಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
