ಮದುವೆಗೆ ಉಟ್ಟ ಬನಾರಸಿ ಸೀರೆ ಮಸುಕಾಗದೆ, ಸದಾ ಹೊಸತರಂತೆ ಕಾಣುವ ಹಾಗೆ ಜೋಪಾನ ಮಾಡುವುದು ಹೇಗೆ, ಇಲ್ಲಿದೆ ಟಿಪ್ಸ್
ಭಾರತದಲ್ಲಿ ಹಲವು ಬಗೆಯ ಸೀರೆಗಳು ಲಭ್ಯವಿವೆ. ಅವುಗಳಲ್ಲಿ ಅಗ್ರಸ್ಥಾನ ಪಡೆದಿರುವುದು ಬನಾರಸಿ ಸೀರೆ. ಈ ರೇಷ್ಮೆ ಸೀರೆಯು ಸಂಕೀರ್ಣ ವಿನ್ಯಾಸ ಹಾಗೂ ಶ್ರೀಮಂತ ವಿನ್ಯಾಸಗಳಿಂದ ಹೆಸರುವಾಸಿಯಾಗಿದೆ. ಇದೀಗ ಮದುವೆ ಸೀಸನ್ ಆಗಿದ್ದು ಮದುವೆಗೆ ಇಟ್ಟ ರೇಷ್ಮೆ ಸೀರೆಯು ಮಸುಕಾದಂತೆ ಬಹಳ ದಿನಗಳವರೆಗೆ ಹೊಸರಂತೆ ಕಾಣಬೇಕು ಎಂದರೆ ಹೀಗೆ ಜೋಪಾನ ಮಾಡಿ.
ಭಾರತದಲ್ಲಿ ಸಿಗುವ ಪ್ರಸಿದ್ಧ ರೇಷ್ಮೆ ಸೀರೆಗಳಲ್ಲಿ ಬನಾರಸಿ ಕೂಡ ಒಂದು. ಇದರ ನೇಯ್ಗೆ, ವಿನ್ಯಾಸ, ಬಣ್ಣದ ಆಕರ್ಷಣೆಯು ಮಹಿಳೆಯರಿಗೆ ಇದು ಅಚ್ಚುಮೆಚ್ಚು ಎನ್ನಿಸಿದೆ. ಸಾಮಾನ್ಯವಾಗಿ ಮದುವೆಯಂತಹ ಕಾರ್ಯಕ್ರಮಗಳಲ್ಲಿ ಬನಾರಸಿ ರೇಷ್ಮೆ ಸೀರೆಯನ್ನೇ ಉಡಲಾಗುತ್ತದೆ. ಇದು ರಿಚ್ ಲುಕ್ ನೀಡುವುದು ಸುಳ್ಳಲ್ಲ.
ಭಾರತದ ಪ್ರಸಿದ್ಧ ನಗರ ವಾರಾಣಸಿ ಮೂಲದ ಸೀರೆ ಇದಾಗಿದೆ. ಇದನ್ನು ಸಂಕೀರ್ಣವಾದ ವಿನ್ಯಾಸಗಳು ಮತ್ತು ಸೊಗಸಾದ ಝರಿ ಕೆಲಸದಿಂದ ಅಲಂಕರಿಸಲಾಗುತ್ತದೆ. ಈ ಸೀರೆಯನ್ನು ಉಟ್ಟ ಮೇಲೆ ಸರಿಯಾಗಿ ಜೋಪಾನ ಮಾಡಿಲ್ಲ ಎಂದರೆ ಅದು ಬೇಗನೆ ಹಾಳಾಗುತ್ತದೆ. ಸೀರೆ ಹಳೆಯದರಂತೆ ಮಸುಕಾಗಿ ಕಾಣಿಸುತ್ತದೆ. ಇದೀಗ ಮದುವೆ ಸೀಸನ್ ಆಗಿದ್ದು, ಮದುವೆಗೆ ಉಟ್ಟ ಸೀರೆಯು ಮಸುಕಾಗದಂತೆ ಜೋಪಾನ ಮಾಡುವುದು ಹೇಗೆ ನೋಡಿ.
ಸರಿಯಾಗಿ ಜೋಡಿಸಿ ಇಡುವುದು
ಬನಾರಸಿ ಸೀರೆಯನ್ನು ಉಟ್ಟ ಮೇಲೆ ಸರಿಯಾಗಿ ಜೋಡಿಸಿ ಇಡುವುದು ಬಹಳ ಮುಖ್ಯವಾಗುತ್ತದೆ. ಇದನ್ನು ಜೋಡಿಸಿ ಇಡುವ ಮೊದಲೇ ಕೊಳಕು ಅಥವಾ ಕಲೆಗಳು ಇವೆಯೇ ಎಂಬುದನ್ನು ಪರಿಶೀಲಿಸಿ. ಯಾಕೆಂದರೆ ನೀವು ಅದನ್ನು ಗಮನಿಸದೇ ಇಟ್ಟರೆ ಅದರಲ್ಲಿರುವ ಕಲೆಗಳು ಶಾಶ್ವತವಾಗಿ ಉಳಿದು ಹೋಗಿ, ನೀವು ಆ ಸೀರೆಯನ್ನು ಮತ್ತೆ ಉಡದಂತಾಗಬಹುದು.
ಉಟ್ಟ ಸೀರೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿದ ನಂತರ ಇದನ್ನು ನೀಟಾಗಿ ಮಡಿಸಿ ಇಡಿ. ನೆರಿಗೆಯನ್ನು ಸೇರಿಸಿ ಮಡಿಸಿ ಇಡುವುದು ಉತ್ತಮ. ಇದರಿಂದ ಮೂಲ ಸ್ಥಿತಿಯಲ್ಲಿ ಇರಿಸಲು ಸಹಾಯ ಮಾಡುತ್ತದೆ. ಸೀರೆಯನ್ನು ತಂಪಾದ, ಶುಷ್ಕ, ಚೆನ್ನಾಗಿ ಗಾಳಿ ಇರುವ ಜಾಗದಲ್ಲಿ ಶೇಖರಣೆ ಮಾಡುವುದು ಬಹಳ ಮುಖ್ಯ. ಶೇಖರಣೆಗಾಗಿ ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದನ್ನು ತಪ್ಪಿಸಿ, ಏಕೆಂದರೆ ಅವು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತವೆ ಮತ್ತು ಶಿಲೀಂಧ್ರವನ್ನು ಉಂಟುಮಾಡಬಹುದು. ಬದಲಾಗಿ, ಸೀರೆಯನ್ನು ರಕ್ಷಿಸಲು ಗಾಳಿಯಾಡಬಲ್ಲ ಹತ್ತಿ ಅಥವಾ ಮಸ್ಲಿನ್ ಬ್ಯಾಗ್‌ಗಳನ್ನು ಆರಿಸಿ. ಇದು ಬಟ್ಟೆಯು ಗಾಳಿಯಾಡುವಂತೆ ಮಾಡುತ್ತದೆ.
ನೇರ ಸೂರ್ಯನ ಬೆಳಕು ಬಣ್ಣಗಳನ್ನು ಮಸುಕಾಗಿಸುತ್ತದೆ. ಇದಲ್ಲದೆ, ಅತಿಯಾದ ಆರ್ದ್ರತೆಯು ರೇಷ್ಮೆಗೆ ಹಾನಿ ಮಾಡುತ್ತದೆ. ಹಾಗಾಗಿ ಈ ಎರಡರಿಂದಲೂ ರಕ್ಷಿಸಬೇಕು. ರೇಷ್ಮೆ ಸೀರೆಯಿಂದ ವಾಸನೆ ಬರದಂತೆ ತಡೆಯಲು ಆಗಾಗ ಗಾಳಿಗೆ ಹರಡಲು ಮರೆಯದಿರಿ.
ಬನಾರಸಿ ಸೀರೆಯನ್ನು ಸ್ವಚ್ಛ ಮಾಡುವುದು
ಬನಾರಸಿ ಸೀರೆಯನ್ನು ಸ್ವಚ್ಛ ಮಾಡುವ ಪ್ರಕ್ರಿಯೆಯನ್ನು ಎಚ್ಚರದಿಂದ ಮಾಡಬೇಕು. ವೃತ್ತಿಪರ ಡ್ರೈ ಕ್ಲೀನಿಂಗ್ ಉತ್ತಮವಾಗಿದ್ದರೂ, ಕೆಲವೊಮ್ಮೆ ಇದರಿಂದಲೂ ಹಾನಿಯಾಗುವ ಸಾಧ್ಯತೆ ಇದೆ. ಹಾನಿಯನ್ನು ತಪ್ಪಿಸಲು ಕಲೆ ಅಥವಾ ಕೊಳಕಾಗಿರುವ ಜಾಗದಲ್ಲಿ ಮಾತ್ರ ಸ್ವಚ್ಛವಾದ ಬಟ್ಟೆ ಅಥವಾ ಕಾಟನ್‌ನಿಂದ ಒರೆಸಿ. ಕಲೆಯಾಗಿರುವ ಭಾಗವನ್ನು ಅತಿಯಾಗಿ ಉಜ್ಜುವುದನ್ನು ತಪ್ಪಿಸಿ. ಆಗ ಕಲೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹರಡಬಹುದು. ಇದರಿಂದ ಬಟ್ಟೆಗೆ ಹಾನಿಯಾಗಬಹುದು.
ಬನಾರಸಿ ಸೀರೆಯನ್ನು ಜಾಗೃತೆ ಮಾಡುವುದು
ಬನಾರಸಿ ಸೀರೆ ಧರಿಸುವಾಗ ಬಟ್ಟೆಯನ್ನು ಹಿಡಿಯುವ ಅಥವಾ ಎಳೆಯುವ ಆಭರಣಗಳನ್ನು ತಪ್ಪಿಸಿ. ಚೂಪಾದ ಅಥವಾ ಭಾರವಾದ ಆಭರಣಗಳು ಸೂಕ್ಷ್ಮ ಎಳೆಗಳನ್ನು ಸುಲಭವಾಗಿ ಹಾನಿಗೊಳಿಸುತ್ತವೆ. ಹಾನಿಯ ಅಪಾಯವನ್ನು ಕಡಿಮೆ ಮಾಡಲು ಸೀರೆಯನ್ನು ಉಡುವ ಮೊದಲು ನಿಮ್ಮ ಆಭರಣಗಳನ್ನು ಹಾಕಲು ಶಿಫಾರಸು ಮಾಡಲಾಗಿದೆ. ಇದಲ್ಲದೆ, ಸೀರೆಯನ್ನು ಧರಿಸುವ ಮೊದಲೇ ಸುಗಂಧ ದ್ರವ್ಯಗಳು ಅಥವಾ ಡಿಯೋಡರೆಂಟ್‌ಗಳನ್ನು ಹಾಕಿ. ರಾಸಾಯನಿಕಗಳು ಬಟ್ಟೆಯ ಮೇಲೆ ಕಲೆಯಾಗದಂತೆ ಅಥವಾ ಬಣ್ಣ ಕಳೆದುಕೊಳ್ಳದಂತೆ ತಡೆಯಿರಿ.