Fake vs Pure Silk: ನೀವು ದುಬಾರಿ ಹಣ ಕೊಟ್ಟು ಖರೀದಿಸಿದ ರೇಷ್ಮೆ ಸೀರೆ ಅಸಲಿನಾ, ನಕಲಿನಾ? ಕಂಡು ಹಿಡಿಯೋಕೆ ಇಲ್ಲಿದೆ ಸಿಂಪಲ್ ಟ್ರಿಕ್ಸ್
ರೇಷ್ಮೆ ಸೀರೆ ಹೆಣ್ಣುಮಕ್ಕಳ ಕನಸು. ಪ್ರತಿ ಹೆಣ್ಣುಮಗಳು ಜೀವನದಲ್ಲಿ ಒಮ್ಮೆಯಾದ್ರೂ ರೇಷ್ಮೆ ಸೀರೆ ಉಡಬೇಕು ಎಂದು ಕನಸು ಕಾಣುತ್ತಾಳೆ. ಶುದ್ಧ ರೇಷ್ಮೆ ಸೀರೆ ಖರೀದಿಸಲು ನಾವು ಸಾಕಷ್ಟು ಹಣ ಖರ್ಚು ಮಾಡುತ್ತೇವೆ. ಆದರೆ ದುಬಾರಿ ದುಡ್ಡು ಕೊಟ್ಟು ಖರೀದಿಸಿ ಸೀರೆ ಅಸಲಿಯೋ, ಅಲ್ಲವೋ ಎಂಬುದನ್ನು ತಿಳಿದುಕೊಳ್ಳೋದು ಹೇಗೆ? ಅದಕ್ಕೆ ಇಲ್ಲಿದೆ ಒಂದಿಷ್ಟು ಸುಲಭ ಮಾರ್ಗ.
ಭಾರತದಲ್ಲಿ ಸೀರೆಗೆ ವಿಶೇಷ ಮಹತ್ವವಿದೆ. ಭಾರತೀಯ ನಾರಿಯರಿಗೂ ಸೀರೆಗೂ ಅವಿನಾಭಾವ ಸಂಬಂಧ. ಮದುವೆ, ಪೂಜೆಯಂತಹ ಯಾವುದೇ ಸಾಂಪ್ರದಾಯಿಕ ಆಚರಣೆಗಳು ಸೀರೆಯಿಲ್ಲದೆ ಪೂರ್ಣವಾಗುವುದಿಲ್ಲ. ಆದರೆ ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ರೇಷ್ಮೆ ಸೀರೆ ಖರೀದಿಸುವುದು ವಾಡಿಕೆ. ರೇಷ್ಮೆ ಸೀರೆಗೆ ತನ್ನದೇ ಆಗ ಗತ್ತು-ಘಮ್ಮತ್ತು ಇರುವುದು ಸುಳ್ಳಲ್ಲ. ರೇಷ್ಮೆ ಸೀರೆಗಳ ಬೆಲೆ ಏನು ಕಡಿಮೆ ಇರುವುದಿಲ್ಲ. ಸಾವಿರಾರು ರೂಪಾಯಿ ಕೊಟ್ಟು ಬೆಲೆಬಾಳುವ ರೇಷ್ಮೆ ಸೀರೆ ಖರೀದಿಸಿ ಇರುತ್ತೇವೆ.
ಸದ್ಯ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳಂತೆ ರೇಷ್ಮೆ ಸೀರೆಯಲ್ಲೂ ಡ್ಯೂಪ್ಲಿಕೇಟ್ ಇರಬಹುದು. ಅಂಗಡಿಯಲ್ಲಿ ಅಪ್ಪಟ ರೇಷ್ಮೆ ಸೀರೆ ಎಂದು ಹೇಳಿದ್ದರೂ ಅದನ್ನು ನಂಬುವುದು ಕಷ್ಟವಾಗುತ್ತದೆ. ಹಾಗಾದರೆ ನೀವು ಖರೀದಿಸಿದ ಸೀರೆ ಅಪ್ಪಟ ರೇಷ್ಮೆ ಸೀರೆನಾ ಎಂದು ಕಂಡುಹಿಡಿಯುವುದು ಹೇಗೆ? ಅದಕ್ಕಾಗಿ ಕೆಲವು ತಂತ್ರಗಳಿವೆ. ಈ ತಂತ್ರಗಳನ್ನು ನೀವು ಅಂಗಡಿಯಲ್ಲಿ ಖರೀದಿಸುವಾಗ ಅಥವಾ ಖರೀದಿಸಿ ಮನೆಗೆ ತಂದ ಮೇಲೆ ಪರೀಕ್ಷೆ ಮಾಡಬಹುದು. ಅಪ್ಪಟ ರೇಷ್ಮೆ ಸೀರೆಯನ್ನು ಗುರುತಿಸಲು ಈ ಸಲಹೆಗಳು ನಿಮಗೆ ಸಹಾಯವಾಗಬಹುದು.
ಹೊಳಪು
ನಿಜವಾದ ರೇಷ್ಮೆ ಸೀರೆಯು ಬೆಳಕಿನ ಅಡಿಯಲ್ಲಿ ಹಿಡಿದಾಗ ಚಿನ್ನದ ಬಣ್ಣದಂತೆ ಮಿನುಗುತ್ತದೆ. ರೇಷ್ಮೆ ಸೀರೆಗಳು ವಿವಿಧ ಬಣ್ಣಗಳನ್ನು ಬಿಂಬಿಸುತ್ತಿರುವುದೇ ಇದಕ್ಕೆ ಕಾರಣ. ಅದೇ ಸಿಂಥೆಟಿಕ್ ಸೀರೆ ಆದರೆ ಅದೇ ಬಣ್ಣವು ಬಿಳಿ ಹೊಳಪನ್ನು ಹೊಂದಿರುತ್ತದೆ. ಇದು ನಿಜವಾದ ರೇಷ್ಮೆ ಸೀರೆಯಂತೆ ಹೊಳೆಯುವುದಿಲ್ಲ.
ನೀರಿನ ಪರೀಕ್ಷೆ
ಸೀರೆಯ ಮೇಲೆ ಒಂದು ಸಣ್ಣ ಹನಿ ನೀರು ಹಾಕಿ ನೋಡಿ. ಶುದ್ಧ ರೇಷ್ಮೆ ನೀರನ್ನು ನಿಧಾನವಾಗಿ ಹೀರಿಕೊಳ್ಳುತ್ತದೆ. ಆದರೆ ಸಿಂಥೆಟಿಕ್ ಸೀರೆಯಿಂದ ನೀರು ಜಾರುತ್ತದೆ. ಅಂಗಡಿಯಲ್ಲಿ ಸೀರೆಗೆ ನೀರು ಸುರಿದರೆ ಸುಮ್ಮನಿರುತ್ತಾರಾ? ಯೋಚಿಸಬೇಡಿ. ನಿಮ್ಮ ಹತ್ತಿರವಿರುವ ಹಳೆಯ ಸೀರೆಗಳ ಗುಣಮಟ್ಟವನ್ನು ತಿಳಿಯಲು ಇದು ಒಂದು ಸಲಹೆಯನ್ನು ಪರಿಗಣಿಸಿ. ಮನೆಗೆ ಬಂದ ಮೇಲೂ ನೀವು ನಿಮ್ಮ ಸೀರೆಗೆ ನೀರು ಹಾಕಿ ಒರಿಜಿನಲ್ ಅಥವಾ ಡೂಪ್ಲಿಕೇಟಾ ಎಂದು ಪರೀಕ್ಷೆ ಮಾಡಬಹುದು.
ಸುಡುವುದು
ಸೀರೆಯನ್ನು ಸುಡುವುದಾ ಎಂದು ಹುಬ್ಬೇರಿಸಬೇಡಿ. ಈ ಪರೀಕ್ಷೆ ಮಾಡಲು ಸೀರೆಗಳ ಎಳೆಯನ್ನು ತೆಗೆದು ಲೈಟರ್‌ನಿಂದ ಬೆಂಕಿ ಹೆಚ್ಚಿ. ಆಗ ಕೂದಲು ಸುಟ್ಟು ಹೋದಾಗ ಬರುವ ವಾಸನೆ ಬರುತ್ತದೆ. ರೇಷ್ಮೆ ಸೀರೆ ಬೇಗನೆ ಮಸುಕಾಗುತ್ತದೆ. ಕಪ್ಪು ಬೂದಿಯಾಗುತ್ತದೆ. ಅದೇ ಸಿಂಥೆಟಿಕ್ ಸೀರೆ ಬೆಂಕಿಗೆ ಒಡ್ಡಿಕೊಂಡಾಗ ಬೂದಿ ರೂಪವಾಗುವುದಿಲ್ಲ.
ಉಂಗುರದೊಂದಿಗೆ ಪರೀಕ್ಷಿಸಿ
ಒರಿಜಿನಲ್ ರೇಷ್ಮೆ ಸೀರೆಯ ಅಂಚನ್ನು ಹಿಡಿದು ಉಂಗುರಕ್ಕೆ ಸುತ್ತಿ ಎಳೆದರೆ ಹಿಡಿಸಿಕೊಂಡು ಬರುತ್ತದೆ. ಅದೇ ಸಿಂಥೆಟಿಕ್ ಸೀರೆ ಎಷ್ಟೇ ಎಳೆದ್ರೂ ಒಂದು ಅಡಿ ಉದ್ದವೂ ಹೊರಬರದೆ ನಿಲ್ಲುತ್ತದೆ.
ಬೆಲೆ
ಒರಿಜಿನಲ್ ರೇಷ್ಮೆ ಸೀರೆಗಳನ್ನು ತಯಾರಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಸಮಯ ಬೇಕಾಗುತ್ತದೆ. ಅದಕ್ಕಾಗಿಯೇ ಅವು ತುಂಬಾ ದುಬಾರಿಯಾಗಿದೆ. ಯಾರಾದರೂ ಕಡಿಮೆ ಬೆಲೆಗೆ ಅಸಲಿ ರೇಷ್ಮೆ ಸೀರೆ ಮಾರಾಟ ಮಾಡುತ್ತಿದ್ದರೆ ಮೋಸ ಹೋಗಬೇಡಿ. ಅದು ಅಸಾಧ್ಯ. ರೇಷ್ಮೆ ಸೀರೆಗಳನ್ನು ಖರೀದಿಸುವಾಗ ಸರಿಯಾದ ಅಂಗಡಿಯಿಂದ ಖರೀದಿಸುವುದು ಹೆಚ್ಚು ಮುಖ್ಯ.
ಸ್ಪರ್ಶಿಸಿ
ರೇಷ್ಮೆ ಎಂದರೆ ಮೃದುತ್ವ. ಸೀರೆಯ ಮೇಲೆ ಕೈ ಇಟ್ಟು ಮುಟ್ಟಿದಾಗ ಅದು ಮೆತ್ತಗಾಗಬೇಕು. ಆ ಮೃದುತ್ವದ ಸ್ಪರ್ಶವು ನಿಮಗೆ ಸ್ಪಷ್ಟವಾಗಿದೆ. ಸಿಂಥೆಟಿಕ್ ಸೀರೆಗಳು ಸ್ಪರ್ಶಕ್ಕೆ ಸ್ವಲ್ಪ ಒರಟಾಗಿರುತ್ತದೆ.
ಪಾರದರ್ಶಕತೆ
ಸೀರೆಯನ್ನು ಬೆಳಕಿಗೆ ಹಿಡಿದಾಗ ಮುಂದಿರುವ ಚಿತ್ರಗಳು ಸ್ವಷ್ಪವಾಗಿ ಕಾಣಬಾರದು. ಸೀರೆ ದಪ್ಪ ಅನಿಸಬೇಕು. ನಿಜವಾದ ರೇಷ್ಮೆ ಸೀರೆಯು ತುಂಬಾ ದಪ್ಪವಾಗಿದ್ದು, ಇನ್ನೊಂದು ಬದಿಯಲ್ಲಿರುವ ವಸ್ತು ಗೋಚರಿಸುವುದಿಲ್ಲ.
ಝರಿ ವರ್ಕ್
ಸೀರೆಯ ಮೇಲಿನ ಝರಿ ವರ್ಕ್ ಅನ್ನು ಎಚ್ಚರಿಕೆಯಿಂದ ಗಮನಿಸಿ. ಮೂಲ ರೇಷ್ಮೆ ಸೀರೆಗಳಿಗೆ ಬಳಸುವ ಜರಿಯು ಚಿನ್ನದ ಬಣ್ಣದ ಗುಣಮಟ್ಟದ್ದಾಗಿದೆ. ಸೀರೆಯನ್ನು ತುಂಬಾ ಬಿಗಿಯಾಗಿ ನೇಯ್ಗೆ ಮಾಡಿರುತ್ತಾರೆ. ಶುದ್ಧವಲ್ಲದ ಸೀರೆ ಜರಿ ಅಷ್ಟೊಂದು ಹೊಳಪು ಹೊಂದಿರುವುದಿಲ್ಲ. ಸ್ವಲ್ಪ ಸಡಿಲ, ರಾಶಿಗಳು ತೇಲುತ್ತಿರುವಂತೆ ಕಾಣಿಸಬಹುದು.
ಈ ಎಲ್ಲಾ ಟ್ರಿಕ್ಸ್‌ಗಳನ್ನು ಬಳಸಿ ನೀವು ಖರೀದಿಸಿದ ರೇಷ್ಮೆ ಸೀರೆ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಕಂಡುಹಿಡಿಯಬಹುದು.