ನವರಾತ್ರಿಗೆ ಶಾಪಿಂಗ್ ಶುರು ಮಾಡಿದ್ರಾ, ಹಬ್ಬಕ್ಕೆ ಸೀರೆ ಖರೀದಿಸುವ ಪ್ಲಾನ್ ಇದ್ರೆ ಅದಕ್ಕೂ ಮುನ್ನ ಈ ಅಂಶಗಳನ್ನ ಗಮನಿಸಿ
ಹಬ್ಬದ ದಿನಗಳು ಎಂದರೆ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿಗೆ ಸಂಭ್ರಮ ಜಾಸ್ತಿ. ಅದರಲ್ಲೂ ಅಲಂಕಾರ ಪ್ರಿಯರಾದ ಇವರು ಹಬ್ಬದ ದಿನಗಳಲ್ಲಿ ಸೀರೆ ಶಾಪಿಂಗ್ ಮಾಡುವುದು ಸಾಮಾನ್ಯ. ಈ ಬಾರಿ ನವರಾತ್ರಿಗೆ ನೀವು ಸೀರೆ ಖರೀದಿ ಮಾಡುತ್ತಿದ್ದರೆ ಈ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಿ . ಪ್ರತಿ ಬಾರಿ ಸೀರೆ ಖರೀದಿ ಮಾಡುವಾಗಲೂ ಈ ವಿಚಾರಗಳನ್ನ ತಪ್ಪದೇ ಗಮನಿಸಬೇಕು.
ನವರಾತ್ರಿ ಹಬ್ಬದ ಸಮೀಪದಲ್ಲಿದೆ. ದುರ್ಗಾಮಾತೆಯನ್ನು ಆರಾಧಿಸುವ ಈ ಹಬ್ಬಕ್ಕೆ ಹೊಸ ಬಟ್ಟೆ ಖರೀದಿ ಮಾಡಿ ಸಂಭ್ರಮಿಸುವುದು ಸಹಜ. ಅದರಲ್ಲೂ ಹೆಣ್ಣುಮಕ್ಕಳು ನವರಾತ್ರಿಗೆ ಒಂಬತ್ತು ಬಣ್ಣದ ಬಟ್ಟೆ ಧರಿಸುವ ಮೂಲಕ ನವರಾತ್ರಿ ಹಬ್ಬವನ್ನು ಭಕ್ತಿ ಭಾವದೊಂದಿಗೆ ಸಂಭ್ರಮದಿಂದ ಆಚರಿಸುತ್ತಾರೆ.
ಹಬ್ಬದ ದಿನಗಳಲ್ಲಿ ಹೆಣ್ಣುಮಕ್ಕಳು ಸೀರೆ ಉಡುವುದು ಸಹಜ. ಅದಕ್ಕಾಗಿ ತಿಂಗಳ ಮುಂಚೆ ತಯಾರಿ ಮಾಡಿಕೊಳ್ಳುತ್ತಾರೆ. ಸೀರೆ ಖರೀದಿಸಿದ ಮೇಲೆ ಬ್ಲೌಸ್ ಕೂಡ ಹೊಲಿಯಬೇಕು, ಜೊತೆಗೆ ಸೀರೆಗೆ ಮ್ಯಾಚಿಂಗ್ ಆಗುವ ಆಭರಣಗಳನ್ನೂ ಖರೀದಿಸಬೇಕು. ಇದೆಲ್ಲಾ ಸರಿ ಆದರೆ, ಸೀರೆ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸುವುದನ್ನು ಮರೆಯಬೇಡಿ. ಪ್ರತಿ ಬಾರಿ ಸೀರೆ ಖರೀದಿಸುವಾಗಲೂ ಈ ಅಂಶಗಳು ನಿಮ್ಮ ಮನದಲ್ಲಿ ಇರಬೇಕು.
ಹಬ್ಬಕ್ಕೆ ಸೀರೆ ಖರೀದಿ ಹೀಗಿರಲಿ
ನೀವು ಸೀರೆ ಖರೀದಿಸಲು ಹೋಗುವ ಸಂದರ್ಭ ಯಾವ ಕಾರಣಕ್ಕೆ ಸೀರೆ ಖರೀದಿ ಮಾಡುತ್ತಿದ್ದೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಹಬ್ಬಕ್ಕೆ ಸೀರೆ ಖರೀದಿಸುವಾಗ ಹೆವಿ ವರ್ಕ್ ಇರುವ, ಕಾಸ್ಟ್ಲಿ ಸೀರೆಗಿಂತ ಸರಳವಾದ, ಕಡಿಮೆ ವಿನ್ಯಾಸವಿರುವ ಸೀರೆ ಖರೀದಿಸುವುದು ಉತ್ತಮ. ನವರಾತ್ರಿ 9 ಒಂಬತ್ತು ಸೀರೆ ಉಡುವ ಪ್ಲಾನ್ ಇದ್ದರೆ ನೀವು ಬಂಡಲ್ ಆಗಿ ಸೀರೆ ಖರೀದಿಸುವುದು ಉತ್ತಮ. ಇದರಿಂದ ಹಣವು ಉಳಿತಾಯವಾಗುತ್ತದೆ. ಹಬ್ಬಕ್ಕೆ ಸೀರೆ ಖರೀದಿಸುವಾಗ ಬಣ್ಣವೂ ಮುಖ್ಯವಾಗುತ್ತದೆ, ದೇವಿಗೆ ಇಷ್ಟವಾಗುವ ಬಣ್ಣಗಳನ್ನು ಗುರುತಿಸಿ ಅದೇ ಬಣ್ಣದ ಸೀರೆ ಖರೀದಿಸಿ.
ಫ್ಯಾಬ್ರಿಕ್ ಗಮನಿಸುವುದು ಮುಖ್ಯ
ಸೀರೆ ಎಂದರೆ ಸೀರೆ ಅಷ್ಟೇ ಅಲ್ಲ, ಒಂದು ಸೀರೆಯನ್ನು ಹಲವು ಬಟ್ಟೆ ಅಥವಾ ಫ್ಯಾಬ್ರಿಕ್‌ನಿಂದ ತಯಾರಿಸುತ್ತಾರೆ. ಅಂದರೆ ಶಿಫಾನ್, ನೈಲಾನ್, ಕಾಟನ್, ರೇಷ್ಮೆ ಹೀಗೆ ಹಲವು ವಿವಿಧ ಸೀರೆಗಳಿವೆ ಎಂಬುದು ಹೆಣ್ಣುಮಕ್ಕಳಿಗೆ ತಿಳಿದಿರುವ ವಿಚಾರ. ಆದರೆ ಆಯಾ ಸಂದರ್ಭಕ್ಕೆ ಆಯಾ ಫ್ಯಾಬ್ರಿಕ್‌ನ ಸೀರೆ ಧರಿಸುವುದು ಮುಖ್ಯವಾಗುತ್ತದೆ. ದುಬಾರಿ ಬೆಲೆಯ ಜಾರ್ಜೆಟ್, ರೇಷ್ಮೆ ಸೀರೆಗಳು ಹಬ್ಬದ ದಿನಕ್ಕೆ ಅಷ್ಟೊಂದು ಹೊಂದುವುದಿಲ್ಲ. ನೀವು ಸಣ್ಣ ವಯಸ್ಸಿನವರಾದರೆ ಅರ್ಗಾಂಜಾ, ಸ್ಯಾಟಲಿನ್ ಸೀರೆಗಳು ಹಬ್ಬಕ್ಕೆ ಹೊಂದಬಹುದು. ಹಬ್ಬಕ್ಕೆಂದು ಸೀರೆ ಖರೀದಿಸಿದಾ ಬ್ಲೌಸ್ ಹೊಲಿಸುವ ಶೈಲಿ ಕೂಡ ಮುಖ್ಯವಾಗುತ್ತದೆ. ಅದು ಸ್ಟೈಲಿಶ್ ಆಗಿರುವುದಕ್ಕಿಂತ ನೀಟಾಗಿ ಇದ್ದರೆ ಚೆಂದ. ಇದರಿಂದ ನಿಮ್ಮ ಸಾಂಪ್ರದಾಯಿಕ ನೋಟಕ್ಕೆ ಅರ್ಥ ಸಿಗುವುದು ಖಂಡಿತ.
ದೇಹಾಕಾರಕ್ಕೆ ತಕ್ಕಂತೆ ಸೀರೆ
ಸೀರೆ ಧರಿಸಬೇಕು ಎಂಬ ಉದ್ದೇಶಕ್ಕೆ ಯಾವುದೋ ಒಂದು ಸೀರೆ ಖರೀದಿಸಿದರೆ ಆಗುವುದಿಲ್ಲ. ನಿಮ್ಮ ದೇಹದ ಪ್ರಕಾರವನ್ನು ಅರ್ಥ ಮಾಡಿಕೊಂಡು ಅದಕ್ಕೆ ಹೊಂದುವ ಸೀರೆ ಖರೀದಿಸಬೇಕು. ಹತ್ತಿ ಅಥವಾ ರೇಷ್ಮೆಗೆ ಹೋಲಿಸಿದರೆ, ಇಟಾಲಿಯನ್, ಕ್ರೆಪ್, ಜಾರ್ಜೆಟ್ ಅಥವಾ ಸಿಫಾನ್ ನಿಮ್ಮ ದೇಹಕ್ಕೆ ಅಂಟಿಕೊಳ್ಳುತ್ತವೆ, ಇದನ್ನು ಧರಿಸಿದರೆ ದಪ್ಪ ಇರುವವರು ಕೊಂಚ ತೆಳ್ಳಗಾಗಿ ಕಾಣಬಹುದು. ನೀವು ಸ್ಲಿಮ್ ಇದ್ದರೆ ಅರ್ಗಾಂಜಾ, ಬನಾರಸಿ ಸೀರೆಗಳನ್ನ ಆಯ್ಕೆ ಮಾಡಬಹುದು.
ಪ್ರಿಂಟ್ ಮತ್ತು ಬಣ್ಣ
ಮೊದಲೇ ಹೇಳಿದಂತೆ ಯಾವ ಸಂದರ್ಭಕ್ಕೆ ಸೀರೆ ಖರೀದಿ ಮಾಡುತ್ತಿದ್ದೀರಿ ಎಂಬುದರ ಮೇಲೆ ಪ್ರಿಂಟ್ ಹಾಗೂ ಬಣ್ಣ ಕೂಡ ಅವಲಂಬಿತವಾಗಿರುತ್ತದೆ. ಹೂವಿನ ಚಿತ್ತಾರವಿರುವ ಸೀರೆಗಳು ಹಬ್ಬದ ದಿನಕ್ಕೆ ಹೆಚ್ಚು ಹೊಂದುತ್ತವೆ. ಪ್ಲೇನ್ ಬನಾರಸಿ ಸೀರೆಗಳು ಕೂಡ ಹಬ್ಬದ ಸಂದರ್ಭಕ್ಕೆ ಹೇಳಿ ಮಾಡಿಸಿದ್ದು.
ದರ
ಹಬ್ಬದ ಸಮಯದಲ್ಲಿ ಸೀರೆ ಖರೀದಿಸುವಾಗ ದರವನ್ನ ಗಮನಿಸಿ. ಯಾಕೆಂದರೆ ಬಹುತೇಕ ಕಡೆ ಆಫರ್‌ಗಳಿರುತ್ತವೆ. ಹಾಗಾಗಿ ಯಾವೆಲ್ಲಾ ಕಡೆ ಆಫರ್ ಹೇಗಿದೆ, ದರ ಹೇಗಿದೆ ಎಂಬುದನ್ನು ವಿಚಾರಿಸಿ ಖರೀದಿ ಮಾಡಿ.
ಆನ್‌ಲೈನ್‌ನಲ್ಲೂ ಸೀರೆ ಖರೀದಿಸಬಹುದು
ಆನ್‌ಲೈನ್ ಪೋರ್ಟಲ್‌ಗಳಲ್ಲೂ ಈಗ ಸೀರೆ ಖರೀದಿಸಬಹುದು. ದರದಲ್ಲೂ ರಿಯಾಯಿತಿ ಸಿಗುತ್ತದೆ. ಆದರೆ ಬಣ್ಣ, ವಿನ್ಯಾಸಗಳು ನಮಗೆ ಸೂಕ್ತವಾಗಿರುವುದು ಸಿಗದೇ ಇರಬಹುದು. ಅಲ್ಲಿ ಇರುವಂತೆ ಮನೆಗೆ ಬಂದಾಗ ಇರದೇ ಇರಬಹುದು. ಆನ್‌ಲೈನ್ ಖರೀದಿ ಮಾಡುವಾಗ ಕ್ಯಾಷ್ ಆನ್ ಡೆಲಿವರಿ ಕೊಡಿ ಹಾಗೂ ರಿಟರ್ನ್ ಪಾಲಿಸಿಗಳನ್ನು ಮರೆಯದೇ ಗಮನಿಸಿ.
ಗುಣಮಟ್ಟ ಗಮನಿಸಿ
ಹಬ್ಬದ ಸಮಯದಲ್ಲಿ ಆಫರ್ ನೀಡುತ್ತಾರೆ ನಿಜ. ಹಾಗಂತ ಕಡಿಮೆ ಬೆಲೆಯಲ್ಲಿ ಸೀರೆ ಸಿಗುತ್ತೆ ಅಂತ ಗುಣಮಟ್ಟದಲ್ಲಿ ರಾಜಿ ಮಾಡ್ಕೋಬೇಡಿ. ಸೀರೆಯ ಗುಣಮಟ್ಟವು ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ಕಡಿಮೆ ದರದಲ್ಲಿ ಸಿಗುವ ಸೀರೆ ಕ್ವಾಲಿಟಿ ಚೆನ್ನಾಗಿರುವುದಿಲ್ಲ.