Fathers Day 2024: ಅಪ್ಪಂದಿರ ದಿನಾಚರಣೆಯ ಇತಿಹಾಸ, ಮಹತ್ವದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಯಿದು
ಕನ್ನಡ ಸುದ್ದಿ  /  ಜೀವನಶೈಲಿ  /  Fathers Day 2024: ಅಪ್ಪಂದಿರ ದಿನಾಚರಣೆಯ ಇತಿಹಾಸ, ಮಹತ್ವದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಯಿದು

Fathers Day 2024: ಅಪ್ಪಂದಿರ ದಿನಾಚರಣೆಯ ಇತಿಹಾಸ, ಮಹತ್ವದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಯಿದು

ನಮ್ಮೆಲ್ಲರ ಬದುಕಿನ ಸೂಪರ್‌ ಹೀರೋ ಎಂದರೆ ಅಪ್ಪ. ಅವರು ನಮ್ಮ ಬದುಕಿನ ಆಲದ ಮರ. ನಮ್ಮ ಏಳ್ಗೆಗಾಗಿ ಅಪ್ಪ ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂತಹ ಅದ್ಭುತ ವ್ಯಕ್ತಿತ್ವದ ಅಪ್ಪನನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಅಪ್ಪಂದಿರ ದಿನ ಯಾವಾಗ? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ.

ಅಪ್ಪಂದಿರ ದಿನದ  ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಯಿದು
ಅಪ್ಪಂದಿರ ದಿನದ ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಯಿದು

ಅಪ್ಪ... ಜಗತ್ತಿನಲ್ಲಿ ತ್ಯಾಗಕ್ಕೆ ಇನ್ನೊಂದು ಹೆಸರು ಅಪ್ಪ. ತನ್ನ ಬದುಕಿನ ಪ್ರತಿ ಗಳಿಗೆಯನ್ನೂ ಮಕ್ಕಳ ನಲಿವಿಗಾಗಿ ಮೀಸಲಿಡುವ ಜೀವವದು. ಅಪ್ಪನ ಗಂಭೀರ ಮುಖಭಾವದ ಹಿಂದೆ ಹೇಳಲಾರದ ನೋವು, ಸಂಕಟ ಇರುತ್ತದೆ. ತನ್ನ ಮಕ್ಕಳು, ಮಡದಿ, ಮನೆಗಾಗಿ ಹಗಲಿರುಳು ಎನ್ನದೇ ಕಷ್ಟಪಟ್ಟು ದುಡಿಯುತ್ತಾ ಮಕ್ಕಳ ಖುಷಿಯಲ್ಲೇ ತನ್ನ ಖುಷಿಯನ್ನು ಕಾಣುತ್ತಾ ಬದುಕು ಸವೆಸುವ ಸೂಪರ್‌ ಹೀರೋ ಅಪ್ಪ. ಎಂದಿಗೂ ಪ್ರತ್ಯುಪಕಾರ ಕೇಳದೇ ತನ್ನ ಜೀವನವೆಲ್ಲಾ ಮಕ್ಕಳಿಗೆ ಉಪಕಾರ ಮಾಡುತ್ತಾ, ಅವರನ್ನ ರಕ್ಷಿಸುತ್ತಾ ಬದುಕುವುದು ಅಪ್ಪನ ಗುಣ. ಅಪ್ಪನೆಂದರೆ ನಿಜಕ್ಕೂ ಆಲದ ಮರವೇ ಸರಿ. ಇಂತಹ ಅದ್ಭುತ ವ್ಯಕ್ತಿತ್ವದ ಬಗ್ಗೆ ಹೇಳುತ್ತಾ ಹೊರಟರೆ ಪದಗಳೇ ಸಾಲದು. ಜಗತ್ತಿನ ನಂಬರ್‌ ಒನ್‌ ತ್ಯಾಗಮಯಿ ಜೀವಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಅಪ್ಪಂದಿರ ದಿನ ಯಾವಾಗ, ಈ ಆಚರಣೆಯ ಇತಿಹಾಸ, ಈ ದಿನದ ಮಹತ್ವ ಇತ್ಯಾದಿ ವಿವರ ಇಲ್ಲಿದೆ.

ಅಪ್ಪಂದಿರ ದಿನ ಯಾವಾಗ?

ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ ಎನ್ನಲಾಗುತ್ತದೆ. ಭಾರತದಲ್ಲಿ ಈ ವರ್ಷ ಜೂನ್‌ 16 ರಂದು ಅಪ್ಪಂದಿರ ದಿನಾಚರಣೆ ಇದೆ. ಆದರೆ ಈ ದಿನವನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿ ಆಚರಿಸಲಾಗುತ್ತದೆ. ಕ್ರೊಯೇಷಿಯಾ, ಇಟಲಿ, ಪೋರ್ಚುಗಲ್ ಮತ್ತು ಸ್ಪೇನ್‌ನಂತಹ ದೇಶಗಳಲ್ಲಿ ಮಾರ್ಚ್ 19 ರಂದು ಫಾದರ್ಸ್‌ ಡೇ ಆಚರಿಸಲಾಗುತ್ತದೆ. ಥಾಯ್ಲೆಂಡ್‌ನಲ್ಲಿ ಡಿಸೆಂಬರ್‌ 5 ರಂದು ಮಾಜಿ ರಾಜ ಭೂಮಿಬೋಲ್ ಅದುಲ್ಯದೇಜ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಹಾಗೆಯೇ ತೈವಾನ್‌ನಲ್ಲಿ ಆಗಸ್ಟ್‌ 8 ರಂದು ಅಪ್ಪಂದಿರ ದಿನ ಆಚರಿಸಲಾಗುತ್ತದೆ.

ಅಪ್ಪಂದಿರ ದಿನದ ಇತಿಹಾಸ

1907ರಲ್ಲಿ ಪಶ್ಚಿಮ ವರ್ಜೀನಿಯಾದ ಮೊನೊಂಗಾಹ್‌ನಲ್ಲಿ ಗಣಿಗಾರಿಕೆ ದುರಂತವೊಂದು ನಡೆಯುತ್ತದೆ. ಈ ಸಂದರ್ಭ ಅಲ್ಲಿ ಕೆಲಸ ಮಾಡುತ್ತಿದ್ದ 361 ಜನ ಗಂಡಸರು ಸಾವನ್ನಪ್ಪುತ್ತಾರೆ. ಅವರಲ್ಲಿ 250 ಅಪ್ಪಂದರಿದ್ದರು. ಅವರ ಸಾವು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಅನಾಥರನ್ನಾಗಿ ಮಾಡಿತು. ಈ ಘೋರ ದುರಂತದ ನೆನಪಿಗಾಗಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದುರಂತದಲ್ಲಿ ಗ್ರೇಸ್‌ ಗೋಲ್ಡನ್‌ ಕ್ಲೇಟನ್‌ ಎನ್ನುವವರು ತಂದೆ ಕೂಡ ಸಾವನ್ನಪ್ಪಿರುತ್ತಾರೆ. ಅವರು ಈ ದಿನಾಚರಣೆಯನ್ನು ಜಾರಿಗೆ ತರುತ್ತಾರೆ ಎಂದು ಒಂದು ದಂತಕಥೆ.

ಇನ್ನೊಂದು ಕಥೆಯ ಪ್ರಕಾರ ಅಪ್ಪ ಸತ್ತ ನಂತರ 6 ಮಕ್ಕಳನ್ನು ವಿಧವೆ ತಾಯಿಯೊಬ್ಬರು ಒಬ್ಬಂಟಿಯಾಗಿ ಸಾಕಿ ಸಲಹುತ್ತಾರೆ. ಆ 6 ಮಕ್ಕಳಲ್ಲಿ ಸೊನೊರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆ ಕೂಡ ಒಬ್ಬರು. ಇವರು 1909ರಲ್ಲಿ ತಾಯಂದಿರ ದಿನದಂತೆ ತಂದೆ ದಿನವನ್ನೂ ಆಚರಿಸಬೇಕೆಂದು ಕರೆ ನೀಡುತ್ತಾರೆ. ಆಕೆಯ ಆಲೋಚನೆಗೆ ಸ್ಥಳೀಯ ಚರ್ಚ್‌, ಅಂಗಡಿಯವರು, ಸರ್ಕಾರಿ ಅಧಿಕಾರಿಗಳು ಒಪ್ಪಿಗೆ ಸೂಚಿಸುತ್ತಾರೆ. ಹಾಗಾಗಿ ಆಕೆಯ ಆಲೋಚನೆಗೆ ಯಶಸ್ಸು ಕಾಣುತ್ತದೆ. ಇದರೊಂದಿಗೆ 1910, ಜೂನ್‌ 19 ರಂದು ಮೊದಲ ಬಾರಿ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ನಂತರ ಜಾಗತಿಕ ಮಟ್ಟದಲ್ಲಿ ಜೂನ್‌ ಮೂರನೇ ಭಾನುವಾರ ಅಪ್ಪಂದಿರ ದಿನ ಆಚರಿಸಬೇಕು ಎಂದು ನಿರ್ಧರಿಸಲಾಯಿತು.

ಅಪ್ಪಂದಿರ ದಿನದ ಮಹತ್ವ

ಅಪ್ಪಂದಿರ ದಿನವನ್ನು ಅವರ ಪ್ರೀತಿ, ಬೆಂಬಲ, ಮಾರ್ಗದರ್ಶನವನ್ನು ಪಡೆದ ನಾವು ವಿಶೇಷ ದಿನವನ್ನಾಗಿ ಆಚರಿಸಬೇಕು. ಅಪ್ಪನಿಗೆ ಗೌರವ ನೀಡುವ ಉದ್ದೇಶದಿಂದ ಈ ದಿನವನ್ನು ಆಚರಿಸುವುದು ವಿಶೇಷ. ನಮ್ಮ ಜೀವನದಲ್ಲಿ ತಂದೆಯ ಪಾತ್ರವನ್ನು ಗೌರವಿಸುವುದು ಬಹಳ ಮುಖ್ಯ. ತಂದೆಯ ಪ್ರೀತಿ, ಬೆಂಬಲ ಮತ್ತು ಮಾರ್ಗದರ್ಶನದಿಂದ ನಾವೆಲ್ಲ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಒಟ್ಟಾರೆ ನಮ್ಮ ಬದುಕಿನ ಅಡಿಪಾಯವೇ ಆದ ತಂದೆಯನ್ನು ಗೌರವಿಸಿ, ಆಧರಿಸುವುದು ಈ ದಿನದ ಮಹತ್ವವಾಗಿದೆ.

Whats_app_banner