ನಂಗೂ ಬಂತು ಫೆಡ್‌ಎಕ್ಸ್‌ ಕರೆ; ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು - ತಪ್ಪಿಸಿಕೊಂಡು ಬಿಟ್ಟೆ, ಹೇಗಂತೀರಾ?
ಕನ್ನಡ ಸುದ್ದಿ  /  ಜೀವನಶೈಲಿ  /  ನಂಗೂ ಬಂತು ಫೆಡ್‌ಎಕ್ಸ್‌ ಕರೆ; ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು - ತಪ್ಪಿಸಿಕೊಂಡು ಬಿಟ್ಟೆ, ಹೇಗಂತೀರಾ?

ನಂಗೂ ಬಂತು ಫೆಡ್‌ಎಕ್ಸ್‌ ಕರೆ; ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು - ತಪ್ಪಿಸಿಕೊಂಡು ಬಿಟ್ಟೆ, ಹೇಗಂತೀರಾ?

FedEx courier scam: ಫೆಡ್‌ಎಕ್ಸ್ ಕೊರಿಯರ್ ವಾಪಸ್ ಬಂದಿದೆ ಅಂತ ನಂಗೂ ಬಂತು ಫೆಡ್‌ಎಕ್ಸ್‌ ಕರೆ. ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು. ಮೊದಲೇ ಈ ವಿಚಾರ ಗೊತ್ತಿದ್ದ ಕಾರಣ ತಪ್ಪಿಸಿಕೊಂಡು ಬಿಟ್ಟೆ. ಹೇಗಂತೀರಾ, ಈ ವಿವರ ತಿಳ್ಕೊಂಡರೆ ನೀವೂ ಜಾಗೃತರಾಗಬಹುದು ನೋಡಿ.

ನಂಗೂ ಬಂತು ಫೆಡ್‌ಎಕ್ಸ್‌ ಕರೆ, ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು, ತಪ್ಪಿಸಿಕೊಂಡು ಬಿಟ್ಟೆ, ಫೆಡ್‌ಎಕ್ಸ್‌ ಹೆಸರಲ್ಲಿ ಬಂದ ಕರೆಯ ಫೋನ್‌ ನಂಬರ್ ಇರುವ ಚಿತ್ರ (ಎಡ ಚಿತ್ರ) ಮತ್ತು ಡಿಜಿಟಲ್ ಅರೆಸ್ಟ್‌ಗೆ ಸಾಂಕೇತಿಕವಾಗಿ ಮೆಟಾ ಎಐ ರಚಿತ ಚಿತ್ರವನ್ನು (ಬಲ ಚಿತ್ರ) ಬಳಸಲಾಗಿದೆ.
ನಂಗೂ ಬಂತು ಫೆಡ್‌ಎಕ್ಸ್‌ ಕರೆ, ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು, ತಪ್ಪಿಸಿಕೊಂಡು ಬಿಟ್ಟೆ, ಫೆಡ್‌ಎಕ್ಸ್‌ ಹೆಸರಲ್ಲಿ ಬಂದ ಕರೆಯ ಫೋನ್‌ ನಂಬರ್ ಇರುವ ಚಿತ್ರ (ಎಡ ಚಿತ್ರ) ಮತ್ತು ಡಿಜಿಟಲ್ ಅರೆಸ್ಟ್‌ಗೆ ಸಾಂಕೇತಿಕವಾಗಿ ಮೆಟಾ ಎಐ ರಚಿತ ಚಿತ್ರವನ್ನು (ಬಲ ಚಿತ್ರ) ಬಳಸಲಾಗಿದೆ.

FedEx courier scam: ಡಿಜಿಟಲ್‌ ಅರೆಸ್ಟ್ ಮಾಡುವ ಸೈಬರ್ ವಂಚನೆ, ಸೈಬರ್ ವಂಚಕರ ಸುದ್ದಿ ಓದಿ, ಕೇಳಿ ಗೊತ್ತಿತ್ತೇ ಹೊರತು ಅನುಭವಕ್ಕೆ ಬಂದಿರಲಿಲ್ಲ. ಅಂತಹ ಅನುಭವ ಬೇಕೂ ಇಲ್ಲ ಬಿಡಿ. ಆದರೆ, ಎರಡು ದಿನಗಳ ಹಿಂದೆ ಅಚಾನಕ್ ಆಗಿ ಸ್ಮಾರ್ಟ್‌ಫೋನ್‌ಗೆ ಒಂದು ಕರೆ ಬಂತು. ಯಾವುದೋ ಮಾರ್ಕೆಟಿಂಗ್ ಕರೆ ಇರಬಹುದು ಎನ್ನುತ್ತ ಕರೆ ಸ್ವೀಕರಿಸಿದೆ. ಅದು ಫೆಡ್ಎಕ್ಸ್‌ ಕರೆ. ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು, ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ಬಿಟ್ಟೆ, ಹೇಗಂತೀರಾ, ಇಲ್ಲಿದೆ ನೋಡಿ ವಿವರ.

ನಂಗೂ ಬಂತು ಫೆಡ್‌ಎಕ್ಸ್‌ ಕರೆ, ಮುಂದೇನಾಯಿತು

ಎರಡು ದಿನಗಳ ಹಿಂದೆ +97158181209 ಎಂಬ ಸಂಖ್ಯೆಯಿಂದ ಕರೆ ಬಂತು. ಆ ಕರೆಯನ್ನು ಸ್ವೀಕರಿಸಿದೆ. ಅದು ಐವಿಆರ್ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್‌) ಕರೆಯಾಗಿತ್ತು. ಅಂದರೆ ಮೊದಲೇ ಧ್ವನಿ ಮುದ್ರಿತ ಸಂದೇಶ ಹೊಂದಿದ ಕರೆ, ಕಸ್ಟಮರ್ ಕೇರ್‌ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಂದೇಶ ಕೇಳಿಸುತ್ತಲ್ಲ, ಒಂದನ್ನು ಒತ್ತಿ, ಎರಡನ್ನು ಒತ್ತಿ ಅಂತ ಹಾಗೆ ಇತ್ತು.

ಇಂಗ್ಲಿಷ್ ಭಾಷೆಯ ಸಂದೇಶ ಕೇಳಿಬಂತು. “ನೀವು ಕಳುಹಿಸಿದ ಒಂದು ಫೆಡ್‌ಎಕ್ಸ್ ಪಾರ್ಸೆಲ್‌ ವಾಪಸಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಾದರೆ 0 ಯನ್ನು ಒತ್ತಿ. ಗ್ರಾಹಕ ಪ್ರತಿನಿಧಿ ಜತೆಗೆ ಮಾತನಾಡಬೇಕಾದರೆ 1 ಒತ್ತಿ” (A FedEx parcel you sent was undelivered. Press 0 to know more about this or Press 1 to speak to a customer representative) ಎಂದು ಹೇಳಿತು.

ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು, ಹೀಗೆ ತಪ್ಪಿಸಿಕೊಂಡು ಬಿಟ್ಟೆ

ಕರೆ ಸ್ವೀಕರಿಸಿ ಸಂದೇಶ ಕೇಳಿದ ಕೂಡಲೇ ನನ್ನ ಮನಸ್ಸಿನಲ್ಲಿ ಮೂಡಿದ ಆಲೋಚನೆಗಳಿವು

1) ನಾನು ಯಾವುದೇ ಪಾರ್ಸೆಲನ್ನು ಫೆಡ್‌ಎಕ್ಸ್ ಕೊರಿಯರ್ ಮೂಲಕ ಕಳುಹಿಸಿಲ್ಲ. ಹಾಗಿರುವಾಗ ನಾನು ಕಳುಹಿಸಿದ ಕೊರಿಯರ್ ವಾಪಸ್ ಬರಲ್ಲ ಎಂಬುದು ನನಗೆ ಖಾತ್ರಿ.

2) ಕೊರಿಯರ್ ಕಳುಹಿಸಿಲ್ಲದ ಮೇಲೆ ಆ ಕೊರಿಯರ್ ಕುರಿತು ಹೆಚ್ಚಿನ ಮಾಹಿತಿ ಪಡೆಯುವ ಅಗತ್ಯ ಇದೆಯಾ, ಅದಕ್ಕೆ 0 ಒತ್ತಬೇಕಾ, ಒತ್ತಿದರೆ ಏನಾಗಬಹುದು

3) 1 ಒತ್ತಿದರೆ ಫೆಡ್‌ಎಕ್ಸ್‌ ಪ್ರತಿನಿಧಿಯೊಂದಿಗೆ ನೇರವಾಗಿ ಮಾತನಾಡಬಹುದು ಎಂದು ಸಂದೇಶ ಹೇಳಿದೆ. ಕೊರಿಯರ್‌ ಕಳುಹಿಸಿಯೇ ಇಲ್ಲದ ಮೇಲೆ ಫೆಡ್‌ಎಕ್ಸ್ ಪ್ರತಿನಿಧಿ ಜತೆಗೆ ಮಾತನಾಡಬೇಕಾ? ಅಗತ್ಯ ಇದೆಯಾ?

ಇಲ್ಲ ಎಂದು ಮನಸ್ಸು ಹೇಳಿತು. ಆ ಕರೆಯನ್ನು ಹಾಗೆಯೇ ಬಿಟ್ಟೆ. ಎರಡು ಸಲ ಆ ಐವಿಆರ್ ಸಂದೇಶ ಕೇಳಿತು. ಬಳಿಕ ಆ ಕರೆ ಕಡಿತಗೊಂಡಿತು.

ಕರೆ ಸ್ವೀಕರಿಸಿ 0 ಅಥವಾ 1 ಒತ್ತಬೇಕಿತ್ತು ಅಂತೀರಾ

ಮನುಷ್ಯನಿಗೆ ಕುತೂಹಲ ಹೆಚ್ಚು. ಕರೆ ಸ್ವೀಕರಿಸಿ 0 ಅಥವಾ 1 ಒತ್ತಬೇಕಿತ್ತು ಎಂದು ಹೇಳುತ್ತೀರಾ? ಈ ರೀತಿ ಮಾಡಿ ಅನುಭವ ಪಡೆದ ಬೆಂಗಳೂರಿನ ನವೋದ್ಯಮಿ ಸಿದ್ದಾರ್ಥ್ ಸುರಾನಾ ಕೂಡ ತಮ್ಮ ವೈಯಕ್ತಿಕ ಅನುಭವವನ್ನು 9 ತಿಂಗಳು ಹಿಂದೆ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಅದು ಹೀಗಿದೆ.

"ನನಗೊಂದು ಐವಿಆರ್ ಕರೆ ಬಂತು. ಫೆಡ್‌ಎಕ್ಸ್ ಪಾರ್ಸೆಲ್‌ ಡೆಲಿವರಿ ಆಗಿಲ್ಲ, ವಾಪಸ್‌ ಬಂದಿದೆ. ಹೆಚ್ಚಿನ ಮಾಹಿತಿ ತಿಳಿಯಲು 0 ಒತ್ತಿ ಎಂದು ಹೇಳಿತು. ಹಾಗೆ 0 ಒತ್ತಿದೆ. ವ್ಯಕ್ತಿಯೊಬ್ಬ ಬುಕ್ಕಿಂಗ್ ನಂಬರ್ ಕೊಡಿ ಎಂದ. ಎಸ್‌ಎಂಎಸ್‌, ಇಮೇಲ್ ಎಲ್ಲ ಚೆಕ್‌ ಮಾಡಿದೆ. ಫೆಡ್‌ಎಕ್ಸ್‌ನಿಂದ ಅಂಥದ್ದೇನೂ ಬಂದಿಲ್ಲ ಎಂದು ಉತ್ತರಿಸಿದೆ. ನನ್ನ ಫೋನ್‌ ನಂಬರ್ ಬಳಸಿ ಹುಡುಕಿ ಕೊಡುವಂತೆ ಆತನಿಗೆ ಹೇಳಿದೆ. ಆತ ನನ್ನ ಹೆಸರು ಕೇಳಿದ. ಒಂದೆರಡು ನಿಮಿಷದ ಬಳಿಕ, ನೀವು ಪಾರ್ಸೆಲ್ ಸ್ವೀಕರಿಸುವ ವ್ಯಕ್ತಿಯಲ್ಲ. ನೀವು ಪಾರ್ಸೆಲ್ ಕಳುಹಿಸಿದವರು ಎಂದು ಗಡಸು ಧ್ವನಿಯಲ್ಲಿ ಹೇಳಿದ. ಮುಂಬಯಿಯಿಂದ ತೈವಾನ್‌ಗೆ ನೀವು 2024ರ ಮಾರ್ಚ್ 15 ರಂದು ಪಾರ್ಸೆಲ್ ಕಳುಹಿಸುವುದಕ್ಕೆ ಬುಕ್‌ ಮಾಡಿದ್ರಿ. ಅದನ್ನು ಅಕ್ರಮ ವಸ್ತು ಇದೆ ಎಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದಾರೆ.

ಶಾಕ್ ಆದೆ. ನಾನು ಯಾರಿಗೂ ಏನೂ ಕಳುಹಿಸಿಲ್ಲ ಎಂದು ಆತನಿಗೆ ವಿವರಿಸಿದೆ. ಆದರೆ ಆತ, ಆ ಪಾರ್ಸೆಲ್‌ ಬುಕ್ ಮಾಡಿರುವುದು ನನ್ನ ಹೆಸರು ಮತ್ತು ಫೋನ್‌ ನಂಬರ್ ಬಳಸಿ, ಐಡಿ ಪ್ರೂಫ್ ಕೂಡ ಕೊಟ್ಟಿದ್ದೀರಿ ಎಂದು ಹೇಳಿದ. ಆಧಾರ್ ಕಾರ್ಡ್‌ ಎಲ್ಲಾದರೂ ಕೊಟ್ಟಿದ್ದೀರಾ ಎಂದು ಕೇಳಿದ ಹೋಟೆಲ್‌ ರೂಮ್ ಬುಕ್ ಮಾಡೋದಕ್ಕೆ, ಬ್ಯಾಂಕ್ ಅಕೌಂಟ್ ಓಪನ್ ಮಾಡೋದಕ್ಕೆ ಎಂದೆಲ್ಲ ಕೇಳಿದ. ಇದು ನಿಮ್ಮ ಹೆಸರಿನಲ್ಲಿ ನಡೆದ ವಂಚನೆ ಆಗಿರಬಹುದು. ಕೂಡಲೇ ಆತ, ಕಸ್ಟಮ್ಸ್ ಅಧಿಕಾರಿಗಳು ನಿಮ್ಮನ್ನು ಬಂಧಿಸುವ ಮೊದಲೇ ಸೈಬರ್ ಕ್ರೈಮ್‌ ಡಿಪಾರ್ಟ್‌ಮೆಂಟ್‌ಗೆ ದೂರು ಕೊಡಿ ಎಂದ. ಅಷ್ಟೇ ಅಲ್ಲ, ಮುಂಬಯಿಯಲ್ಲಿರುವ ಅಂಧೇರಿ ಪೊಲೀಸ್ ಠಾಣೆಯ ಸೈಬರ್ ಸೆಲ್‌ಗೆ ಹೋಗಿ ದೂರು ಕೊಡಬಹುದು ಎಂದೂ ಹೇಳಿದ. ಫೆಡ್‌ಎಕ್ಸ್‌ ಗ್ರಾಹಕ ಸೇವಾಕೇಂದ್ರದಿಂದ ನೇರವಾಗಿ ಪೊಲೀಸ್ ಇಲಾಖೆಗೆ ಸಂಪರ್ಕ ನೋಡಿ ಅಚ್ಚರಿಯಾಯಿತು.

ಪಾರ್ಸೆಲ್‌ನಲ್ಲಿ ಅಕ್ರಮ ವಸ್ತು ಏನಿದೆ ಎಂದು ಕೇಳಿದೆ. ಅದರಲ್ಲಿ ಮಾದಕ ವಸ್ತು, ಡ್ರಗ್ಸ್‌, ಹಲವು ಪಾಸ್‌ಪೋರ್ಟ್‌ಗಳು ವೀಸಾಗಳು, ಮೂರು ಲ್ಯಾಪ್‌ಟಾಪ್‌, ಕ್ರೆಡಿಟ್ ಕಾರ್ಡ್‌ಗಳಿವೆ ಎಂದು ಹೇಳಿದ. ಕೂಡಲೇ, ನೀನು ಫೆಡ್‌ ಎಕ್ಸ್ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ ಎಂಬುದಕ್ಕೆ ಗುರುತಿನ ಚೀಟಿ ಇದ್ದರೆ ಕಳುಹಿಸು ನೋಡೋಣ, ಪೊಲೀಸರಿಗೆ ತಿಳಿಸುತ್ತೇನೆ ಎಂದೆ. ಕೂಡಲೆ ಆತ, ನಿಮ್ಮ ಧ್ವನಿ ನನಗೆ ಕೇಳಿಸುತ್ತಿಲ್ಲ ಎಂದು ಕರೆ ಕಟ್ ಮಾಡಿದ.

ಈ ಕರೆಯನ್ನು ನಾನು ಸ್ವೀಕರಿಸಬಾರದಿತ್ತೋ ಏನೋ, ಆದರೂ ಕುತೂಹಲದಿಂದ ಕರೆಸ್ವೀಕರಿಸಿದೆ ಎಂದು ಸಿದ್ದಾರ್ಥ್ ಸುರಾನಾ ಬರೆದುಕೊಂಡಿದ್ದಾರೆ.

ಗಮನಿಸಬೇಕಾದ ಅಂಶ: ಈ ರೀತಿ ಕರೆಗಳು ಬೇರೆ ಬೇರೆ ನಂಬರ್‌ನಿಂದ ಬರಬಹುದು. ಕರೆ ಬಂದಾಗ ನಿರ್ಲಕ್ಷಿಸಿ. ಅಕಸ್ಮಾತ್ ಕರೆ ಸ್ವೀಕರಿಸಿದರೂ ಅವರ ಬೆದರಿಕೆಗೆ ಹೆದರಿ ಹಣ ಕಳುಹಿಸಬೇಡಿ. ಕೂಡಲೇ ಮತ್ತೊಂದು ಫೋನ್‌ನಿಂದ 112ಕ್ಕೆ ಕರೆಮಾಡಿ ಅಥವಾ ಸೈಬರ್ ಕ್ರೈಮ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿ.

Whats_app_banner