ರಾಖಿ ಕಟ್ಟಲು ಒಡಹುಟ್ಟಿದ ಸಹೋದರರಿಲ್ಲ ಎಂದು ಬೇಸರಿಸುವವರಿಗೆ ಇಲ್ಲಿದೆ ಬೆಸ್ಟ್‌ ಐಡಿಯಾ; ಈ ಬಾರಿ ರಕ್ಷಾಬಂಧನವನ್ನು ಹೀಗೆ ಆಚರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ರಾಖಿ ಕಟ್ಟಲು ಒಡಹುಟ್ಟಿದ ಸಹೋದರರಿಲ್ಲ ಎಂದು ಬೇಸರಿಸುವವರಿಗೆ ಇಲ್ಲಿದೆ ಬೆಸ್ಟ್‌ ಐಡಿಯಾ; ಈ ಬಾರಿ ರಕ್ಷಾಬಂಧನವನ್ನು ಹೀಗೆ ಆಚರಿಸಿ

ರಾಖಿ ಕಟ್ಟಲು ಒಡಹುಟ್ಟಿದ ಸಹೋದರರಿಲ್ಲ ಎಂದು ಬೇಸರಿಸುವವರಿಗೆ ಇಲ್ಲಿದೆ ಬೆಸ್ಟ್‌ ಐಡಿಯಾ; ಈ ಬಾರಿ ರಕ್ಷಾಬಂಧನವನ್ನು ಹೀಗೆ ಆಚರಿಸಿ

ʼನನಗೆ ರಾಖಿ ಕಟ್ಟುವ ಆಸೆ, ಆದರೆ ಒಡ ಹುಟ್ಟಿದ ಅಣ್ಣ, ತಮ್ಮ ಯಾರೂ ಇಲ್ಲʼ ಎಂದು ಬೇಸರ ಮಾಡುವ ಸಹೋದರಿಯರಿಗೆ ಇಲ್ಲಿದೆ ಬೆಸ್ಟ್‌ ಐಡಿಯಾ. ರಕ್ಷಾಬಂಧನವನ್ನು ನೀವು ಈ ರೀತಿಯೂ ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಬಹುದು. ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.

ರಕ್ಷಾಬಂಧನ (ಸಾಂಕೇತಿಕ ಚಿತ್ರ)
ರಕ್ಷಾಬಂಧನ (ಸಾಂಕೇತಿಕ ಚಿತ್ರ) (Freepik)

ರಕ್ಷಾಬಂಧನ ಅಥವಾ ರಾಖಿ ಹಬ್ಬ ಸಹೋದರ, ಸಹೋದರಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ. ಈ ಹಬ್ಬದಂದು ಅಣ್ಣ ಅಥವಾ ತಮ್ಮನಿಗೆ ರಾಖಿ ಕಟ್ಟುವ ಮೂಲಕ ಸಹೋದರಿಯಾದವಳು ಅವರ ಶ್ರೇಯಸ್ಸಿಗಾಗಿ ದೇವರನ್ನು ಬೇಡಿಕೊಳ್ಳುವ ಜೊತೆಗೆ, ತನ್ನ ರಕ್ಷೆಗಾಗಿ ಪ್ರಾರ್ಥಿಸುತ್ತಾಳೆ. ರಾಖಿ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ಪೌರಾಣಿಕ ಹಿನ್ನೆಲೆ ಕೂಡ ಇದೆ.

ಈ ದಿನದಂದು ಸಹೋದರರಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆಯುವ ಜೊತೆಗೆ ಅವರಿಂದ ಉಡುಗೊರೆ ಪಡೆಯುವ ಖುಷಿಯೂ ಸಹೋದರಿಯರಲ್ಲಿ ಕಾಣಬಹುದು. ನಾಡಿನಾದ್ಯಂತ ರಕ್ಷಾಬಂಧನ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಅಂಗಡಿಗಳ ಮುಂದೆ ಬಣ್ಣ ಬಣ್ಣದ ರಾಖಿಗಳು ರಾರಾಜಿಸುತ್ತಿವೆ.

ಆದರೆ ಕೆಲವರಿಗೆ ಒಡ ಹುಟ್ಟಿದ ಅಣ್ಣ, ತಮ್ಮಂದಿರು ಇರುವುದಿಲ್ಲ. ಸ್ನೇಹಿತರು, ಸಹೋದ್ಯೋಗಿಗಳು, ಸಹಪಾಠಿಗಳ ರಾಖಿ ಹಬ್ಬದ ಸಂಭ್ರಮ ನೋಡಿದಾಗ ಮನಸ್ಸಿಗೆ ಬೇಸರವಾಗುವುದು ಸಹಜ. ಅಲ್ಲದೇ ಎಲ್ಲರೂ ರಾಖಿ ಕಟ್ಟಿ, ಸಹೋದರರಿಂದ ಪ್ರೀತಿ, ಆಶೀರ್ವಾದ ಪಡೆಯುವಾಗ ತಾನೂ ಕಟ್ಟಬೇಕು ಎನ್ನಿಸುತ್ತದೆ. ಹಾಗಂತ ನೀವು ಬೇಸರಿಸುವುದು ಬೇಡ, ನೀವೂ ರಾಖಿ ಹಬ್ಬವನ್ನು ಆಚರಿಸಬಹುದು, ರಕ್ಷಾಬಂಧನದ ಸಂಭ್ರಮವನ್ನು ಸವಿಯಬಹುದು, ಸಹೋದರರ ಪ್ರೀತಿ, ಆಶೀರ್ವಾದವನ್ನೂ ಪಡೆಯಬಹುದು. ಹೇಗೆ ಅಂತಿರಾ, ಮುಂದೆ ಓದಿ.

ಈ ವರ್ಷ ಅಧಿಕ ಮಾಸವಾಗಿರುವ ಕಾರಣ ಎರಡು ದಿನಗಳ ಕಾಲ ರಾಖಿ ಹಬ್ಬದ ಆಚರಣೆ ಇದೆ. ಆಗಸ್ಟ್‌ 30 ಹಾಗೂ ಆಗಸ್ಟ್‌ 31 ಎರಡು ದಿನ ರಕ್ಷಾಬಂಧನದ ಆಚರಣೆ ಇದೆ. ಆದರೆ ರಕ್ಷಾಬಂಧನದ ಶುಭ ಮುಹೂರ್ತವನ್ನು ಪರಿಗಣಿಸಿ 31 ರಂದು ರಕ್ಷಾಬಂಧನ ಆಚರಿಸಬೇಕು ಎನ್ನುತ್ತಾರೆ.

ಹಾಗಾದರೆ ಒಡ ಹುಟ್ಟಿದ ಸಹೋದರರು ಇಲ್ಲದಿದ್ದವರು ಹೇಗೆ ರಕ್ಷಾಬಂಧನ ಆಚರಿಸಬಹುದು ನೋಡಿ.

ಸ್ನೇಹಿತರು, ಕಸಿನ್‌ಗಳ ಜೊತೆ ಆಚರಿಸಿ

ಸ್ವಂತ ಅಣ್ಣ, ತಮ್ಮ ಇಲ್ಲದಿದ್ದರೆ ಏನಂತೆ, ಕಸಿನ್‌ ಇದ್ದಾರಲ್ಲ. ಯಾರೂ ನಿನ್ನನ್ನು ಬಿಟ್ಟು ಹೋದರೂ ನಾನು ನಿನ್ನೊಂದಿಗೆ ಇರುತ್ತೇನೆ ಎಂದು ಹೆಗಲಿಗೆ ಹೆಗಲು ಕೊಡುವ ಸ್ನೇಹಿತರು ಇದ್ದೇ ಇರುತ್ತಾರಲ್ಲ. ಅವರನ್ನೇ ಸ್ವಂತ ಅಣ್ಣ ತಮ್ಮಂದಿರು ಅಂದುಕೊಂಡು ಅವರಿಗೆ ರಾಖಿ ಕಟ್ಟುವ ಮೂಲಕ ಹಬ್ಬವನ್ನು ಸಂಭ್ರಮಿಸಬಹುದು. ನಿಮ್ಮ ಮನೆಯ ಅಕ್ಕಪಕ್ಕದ ಸಹೋದರರೊಂದಿಗೂ ರಾಖಿ ಹಬ್ಬವನ್ನು ಆಚರಿಸಬಹುದು.

ತಂದೆ ಸಮಾನರಿಗೂ ರಾಖಿ ಕಟ್ಟಬಹುದು

ರಕ್ಷಾಬಂಧನ ಎಂದರೆ ಸಹೋದರರಿಗೆ ಸಹೋದರಿ ರಾಖಿ ಕಟ್ಟಬೇಕು ಎಂಬುದು ನಿಜ. ಆದರೆ ಸಹೋದರರು ಇಲ್ಲದವರು ತಂದೆ ಸಮಾನರಾದ ಚಿಕ್ಕಪ್ಪ, ಮಾವ, ಅಜ್ಜ ಹೀಗೆ ಇವರಿಗೂ ರಾಖಿ ಕಟ್ಟಬಹುದು. ಅವರು ನಿಮ್ಮನ್ನು ಸಹೋದರರಂತೆ ರಕ್ಷಿಸುತ್ತಾರೆ ಎಂಬುದು ಸುಳ್ಳಲ್ಲ. ಅವರು ಅಣ್ಣ, ತಮ್ಮಂದಿರಂತೆ ಪ್ರೀತಿ ತೋರಿಸುತ್ತಾರೆ. ಇದೆಲ್ಲವನ್ನೂ ಹೊರತು ಪಡಿಸಿ ಮನೆಯ ಹೊರಗಡೆ ನಿಮಗೆ ಮಾರ್ಗದರ್ಶಕರಾಗಿರುವ, ನಿಮ್ಮ ಮೇಲೆ ಅತಿಯಾದ ಪ್ರೀತಿ ಹೊಂದಿರುವ ವ್ಯಕ್ತಿಗಳಿಗೂ ರಾಖಿ ಕಟ್ಟಿ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳಬಹುದು.

ಸಹೋದರಿ ಹಾಗೂ ಸ್ನೇಹಿತೆಯರೊಂದಿಗೂ ಆಚರಿಸಬಹುದು

ರಾಖಿಯನ್ನು ಸಹೋದರರ ಕೈಗೆ ಕಟ್ಟಬೇಕು ಎಂಬುದು ನಿಜ. ಒಡ ಹುಟ್ಟಿದ ಅಣ್ಣ, ತಮ್ಮ ಇಲ್ಲ ಎನ್ನುವ ಕಾರಣಕ್ಕೆ ಬೇಸರ ಮಾಡಿಕೊಂಡು ಸುಮ್ಮನಿರುವ ಬದಲು ಸಹೋದರಿ ಅಥವಾ ಸ್ನೇಹಿತೆಯರೊಂದಿಗೂ ರಕ್ಷಾಬಂಧನವನ್ನು ಆಚರಿಸಬಹುದು. ಅವರಿಗೆ ರಾಖಿ ಕಟ್ಟುವ ಮೂಲಕ ನಿಮ್ಮ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಿ. ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಿ. ಸಿಹಿ ಹಂಚಿಕೊಂಡು ತಿಂದು ಸಂಭ್ರಮಿಸಿ.

ಹೀಗೂ ಆಚರಿಸಬಹುದು

ರಾಖಿ ಎನ್ನುವುದು ಸಹೋದರಿಕೆಯ ಬಾಂಧವ್ಯವನ್ನು ಸಾರುವ ಹಬ್ಬ. ರಾಖಿ ಎಂದರೆ ಸಹಾನೂಭೂತಿ, ಪ್ರೀತಿಯ ಸಂಕೇತವೂ ಹೌದು. ರಾಖಿಯನ್ನು ಬೆಂಬಲದ ಸೂಚಕವಾಗಿಯೂ ಕಟ್ಟಬಹುದು. ಇದನ್ನು ಆಸ್ಪತ್ರೆಯಲ್ಲಿರುವ ರೋಗಿಗಳು, ಅನಾಥಶ್ರಮದಲ್ಲಿ ಇರುವವರು, ವೃದ್ಧಾಶ್ರಮದಲ್ಲಿ ಇರುವವರು ಇವರೊಂದಿಗೂ ಆಚರಿಸಬಹುದು. ಒಡಹುಟ್ಟಿದವರನ್ನು ಹೊಂದಿರದವರಿಗೆ ಈ ಸದ್ಭಾವನೆಯ ಕಾರ್ಯ ಸದಾ ನೆನಪಿನಲ್ಲಿ ಉಳಿಯಬಹುದು, ಅಲ್ಲದೆ ಇದು ನಿಮ್ಮ ಮನಸ್ಸಿಗೂ ಖುಷಿ ನೀಡಬಹುದು. ಇದು ರಕ್ಷಾಬಂಧನದ ನಿಜವಾದ ಅರ್ಥವನ್ನು ಸಂಕೇತಿಸುತ್ತದೆ.

ಸಾಂಕೇತಿಕ ರಾಖಿಗಳು

ನಿಮಗೆ ಒಡ ಹುಟ್ಟಿದ ಸಹೋದರರು ಇಲ್ಲದಿದ್ದರೆ ಸಾಂಕೇತಿಕವಾಗಿ ಮರ ಅಥವಾ ಕಲಾಕೃತಿಗಳಿಗೆ ರಾಖಿ ಕಟ್ಟಬಹುದು. ಆ ಮೂಲಕವೂ ಅರ್ಥಪೂರ್ಣವಾಗಿ ರಾಖಿ ಕಟ್ಟಬಹುದು.

ವರ್ಚುವಲ್‌ ಆಚರಣೆ

ಇಂದಿನ ಡಿಜಿಟಲ್‌ ಯುಗದಲ್ಲಿ ದೂರ ದೂರ ಇದ್ದೇವೆ ಎಂದು ಚಿಂತಿಸುವ ಅಗತ್ಯವಿಲ್ಲ. ಸಾವಿರಾರು ಮೈಲಿಗಳಷ್ಟು ದೂರವಿದ್ದರೂ ವರ್ಚುವಲ್‌ ಮೂಲಕ ಸಂಧಿಸಿಬಹುದು. ವರ್ಚುವಲ್‌ ವಿಧಾನದ ಮೂಲಕ ರಕ್ಷಾಬಂಧನದ ಆಚರಣೆಯ ಖುಷಿಯನು ಸಂಭ್ರಮಿಸಬಹುದು. ವರ್ಚುವಲ್‌ ರಾಖಿಯನ್ನು ವಿನಿಮಯ ಮಾಡಿಕೊಳ್ಳಿ ಅಥವಾ ಅರ್ಥಪೂರ್ಣ ಸಂದೇಶಗಳನ್ನು ಕಳುಹಿಸಿ.

ಇದನ್ನು ಓದಿ

Raksha Bandhan 2023: ಆಗಸ್ಟ್‌ 30, 31 ಯಾವ ದಿನದಂದು ಆಚರಿಸಬೇಕು ರಕ್ಷಾಬಂಧನ; ರಾಖಿ ಹಬ್ಬದ ಇತಿಹಾಸ, ಮಹತ್ವ ತಿಳಿಯಿರಿ

ನಾಡಿನಾದ್ಯಂತ ಭ್ರಾತೃತ್ವದ ಮಹತ್ವ ಸಾರುವ ರಕ್ಷಾಬಂಧನ ಹಬ್ಬದ ತಯಾರಿ ಜೋರಾಗಿದೆ. ಈ ಬಾರಿ ರಕ್ಷಾಬಂಧನ ಆಚರಣೆಯ ದಿನಾಂಕದಲ್ಲಿ ಗೊಂದಲವಿದೆ. ಕೆಲವರು ಆಗಸ್ಟ್‌ 30 ರಾಖಿ ಹಬ್ಬದವೆಂದರೆ ಕೆಲವರು ಆಗಸ್ಟ್‌ 31 ಎನ್ನುತ್ತಿದ್ದಾರೆ. ಹಾಗಾದರೆ ರಕ್ಷಾಬಂಧನದ ಆಚರಣೆ ಯಾವಾಗ, ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

Whats_app_banner