Rama Navami 2024: ಶ್ರೀರಾಮನವಮಿಗೆ ತಯಾರಿಸುವ ವಿಶೇಷ ಪಾನಕದ ರೆಸಿಪಿ ಇಲ್ಲಿದೆ, ಇದು ನೈವೇದ್ಯಕ್ಕೂ ಬರುತ್ತೆ, ಆರೋಗ್ಯಕ್ಕೂ ಉತ್ತಮ
ಶ್ರೀರಾಮ ನವಮಿ ಬಂತೆಂದರೆ ಎಲ್ಲರಿಗೂ ನೆನಪಾಗುವುದು ಪಾನಕ. ಬೇರೆ ದಿನಗಳಲ್ಲಿ ಪಾನಕ ಕುಡಿಯುವುದಕ್ಕೂ ರಾಮ ನವಮಿಯಂದು ಪಾನಕ ಕುಡಿಯುವುದಕ್ಕೂ ಖಂಡಿತ ವ್ಯತ್ಯಾಸ ಅನ್ನಿಸುತ್ತೆ. ರಾಮ ನವಮಿ ಪಾನಕಕ್ಕೆ ಅಂತಹ ವೈಶಿಷ್ಟ್ಯವಿದೆ. ರಾಮ ನವಮಿ ಪಾನಕ ತಯಾರಿಸುವ ವಿಧಾನ ಇಲ್ಲಿದೆ.
ಶ್ರೀರಾಮ ನವಮಿ ಆಚರಣೆಗೆ ಭಾರತದಾದ್ಯಂತ ಸಿದ್ಧತೆ ನಡೆದಿದೆ. ರಾಮ ನವಮಿಯಲ್ಲಿ ಪಾನಕ, ಕೋಸಂಬರಿ ಬಹಳ ವಿಶೇಷ. ಪಾನಕವು ರಾಮನಿಗೆ ಅಚ್ಚುಮೆಚ್ಚು ಎಂದು ಕೂಡ ಹೇಳಲಾಗುತ್ತದೆ. ಬೆಲ್ಲದಿಂದ ತಯಾರಿಸುವ ಪಾನಕವು ನೈವೇದ್ಯಕಷ್ಟೇ ಅಲ್ಲ, ಆರೋಗ್ಯಕ್ಕೂ ಉತ್ತಮ. ರಾಮ ನವಮಿಯಂದು ರಾಮ ಭಕ್ತರು ತಪ್ಪದೇ ಪಾನಕವನ್ನು ಸವಿಯುತ್ತಾರೆ. ಈ ದಿನ ದೇವಸ್ಥಾನಗಳಲ್ಲಿ, ಸಂಘ ಸಂಸ್ಥೆಯವರು ಪಾನಕ ತಯಾರಿಸುವುದು ಹಂಚುವ ಮೂಲಕ ರಾಮನ ಕೃಪೆಗೆ ಪಾತ್ರರಾಗುತ್ತಾರೆ. ಪಾನಕವಿಲ್ಲದೆ ಶ್ರೀರಾಮನವಮಿ ಆಚರಣೆಯೇ ಇಲ್ಲ ಎಂದು ಹೇಳಬಹುದು.
ಬೇಸಿಗೆಯಲ್ಲಿ ಶ್ರೀರಾಮನವಮಿ ಹಬ್ಬ ಬರುವ ಕಾರಣ, ಈ ಪಾನೀಯವು ಆರೋಗ್ಯಕ್ಕೂ ಉತ್ತಮ ಎನ್ನಿಸುತ್ತದೆ. ಇದು ಹಲವು ರೋಗಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ದೇಹಕ್ಕೆ ಒದಗಿಸುತ್ತದೆ. ಇಂತಹ ಅದ್ಭುತ ಗುಣಗಳ, ದೇಹ ತಂಪು ಮಾಡುವ ರಾಮ ನವಮಿ ಪಾನಕವನ್ನ ತಯಾರಿಸುವ ವಿಧಾನ ಇಲ್ಲಿದೆ.
ರಾಮ ನವಮಿ ಬೆಲ್ಲದ ಪಾನಕ
ಬೇಕಾಗುವ ಸಾಮಗ್ರಿಗಳು: ನೀರು - ಒಂದು ಲೀಟರ್, ತುರಿದ ಬೆಲ್ಲ - 150 ಗ್ರಾಂ, ಕಾಳುಮೆಣಸಿನ ಪುಡಿ - ಒಂದು ಚಮಚ, ಶುಂಠಿ ಪುಡಿ - ಅರ್ಧ ಚಮಚ, ನಿಂಬೆ - ಒಂದು, ಐಸ್ ತುಂಡುಗಳು - ಮೂರು, ಏಲಕ್ಕಿ ಪುಡಿ - ಒಂದು ಚಮಚ
ತಯಾರಿಸುವ ವಿಧಾನ: ಶ್ರೀರಾಮನವಮಿಗೆ ಬೆಲ್ಲದ ಪಾನೀಯವನ್ನು ತಯಾರಿಸಲು ದೊಡ್ಡ ಬಟ್ಟಲನ್ನು ತೆಗೆದುಕೊಳ್ಳಿ. ಅದಕ್ಕೆ ನೀರು ಸೇರಿಸಿ. ತುರಿದ ಬೆಲ್ಲವನ್ನು ನೀರಿಗೆ ಹಾಕಿ. ಒಂದು ಚಮಚ ಅಥವಾ ಸೌಟು ತೆಗೆದುಕೊಂಡು ಬೆಲ್ಲ ಕರಗುವ ತನಕ ಬೆರೆಸುತ್ತಿರಿ. ನಂತರ ಏಲಕ್ಕಿ ಪುಡಿ, ಕಾಳುಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಂಬೆರಸವನ್ನು ಹಿಂಡಿ. ತಣ್ಣಗೆ ಕುಡಿಯಬೇಕೆಂದರೆ ಐಸ್ ಕ್ಯೂಬ್‌ಗಳನ್ನು ಹಾಕಿ ತಕ್ಷಣ ಕುಡಿಯಬಹುದು ಅಥವಾ ಫ್ರಿಜ್‌ನಲ್ಲಿ ಸ್ವಲ್ಪ ಹೊತ್ತು ಇಟ್ಟು ಕುಡಿದರೆ ತುಂಬಾ ರುಚಿಯಾಗಿರುತ್ತದೆ.
ಈ ಬೆಲ್ಲದ ಪಾನೀಯ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಬೆಲ್ಲದ ನೀರು, ಮೆಣಸು ಮತ್ತು ಏಲಕ್ಕಿಯನ್ನು ಹೆಚ್ಚು ಬಳಸುತ್ತೇವೆ. ಆದ್ದರಿಂದ ಈ ಪಾನೀಯವನ್ನು ಕುಡಿಯುವುದರಿಂದ ನಿಮ್ಮ ದೇಹದ ಚೈತನ್ಯ ಹೆಚ್ಚುವುದು ಮಾತ್ರವಲ್ಲ, ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಲ್ಲದೆ ಮೆಣಸು ಮತ್ತು ಏಲಕ್ಕಿ ಯಾವುದೇ ಸೋಂಕುಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಈ ಪಾನೀಯವು ವಿಶೇಷವಾಗಿ ಹೊಟ್ಟೆ ಮತ್ತು ಗಂಟಲಿನ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಹಾಗಾಗಿ ರಕ್ತಹೀನತೆ ಸಮಸ್ಯೆ ಇರುವವರು ಪೇಯವನ್ನು ಕುಡಿಯುವುದು ತುಂಬಾ ಒಳ್ಳೆಯದು. ಈ ಪಾನೀಯವನ್ನು ಫ್ರಿಜ್‌ನಲ್ಲಿ ಸ್ವಲ್ಪ ಹೊತ್ತು ಇಟ್ಟು ಬೇಸಿಗೆಯಲ್ಲಿ ಕುಡಿದರೆ ತಕ್ಷಣ ಆಹ್ಲಾದ ಭಾವ ಮೂಡುತ್ತದೆ. ಜೀವ ಮರಳಿ ಬಂದಂತೆ ಭಾಸವಾಗುತ್ತಿದೆ. ಬಿಸಿಲಿನಿಂದ ಬಂದವರಿಗೆ ಈ ತಂಪಾದ ಪಾನೀಯವನ್ನು ನೀಡಿ.