Rama Navami 2024: ರಾಮ ನವಮಿಗೆ ತಯಾರಿಸಬಹುದಾದ ಬಗೆ ಬಗೆ ಕೋಸಂಬರಿಗಳಿವು, ಬಿರುಬೇಸಿಗೆಯಲ್ಲಿ ಇವು ದೇಹಕ್ಕೂ ತಂಪು
ರಾಮ ನವಮಿ ಆಚರಣೆಗೆ ಸಿದ್ಧತೆ ಜೋರಾಗಿ ನಡೆದಿದೆ. ದೇಶದ ಪ್ರಮುಖ ರಾಮ ದೇಗುಲಗಳಲ್ಲಿ ರಾಮನ ಜನ್ಮದಿನಾಚರಣೆಯನ್ನು ಭಕ್ತಿ, ಭಾವದ ಜೊತೆಗೆ ಸಂಭ್ರಮದಿಂದಲೂ ಆಚರಿಸಲು ಸಜ್ಜಾಗುತ್ತಿದ್ದಾರೆ. ರಾಮ ನವಮಿಯಂದು ಬಹಳ ವಿಶೇಷ ಎಂದರೆ ಪಾನಕ ಮತ್ತು ಕೋಸಂಬರಿ. ಈ ಬಾರಿ ರಾಮ ನವಮಿಗೆ ನೀವು ಬಗೆ ಬಗೆ ಕೋಸಂಬರಿ ತಯಾರಿಸಿ, ರೆಸಿಪಿ ಇಲ್ಲಿದೆ.

ಹಿಂದೂಗಳ ಹೊಸ ವರ್ಷವಾದ ಯುಗಾದಿಯ ನಂತರ ಬರುವ ಮೊದಲ ಹಬ್ಬ ರಾಮ ನವಮಿ. ರಾಜ ದಶರಥ ಮತ್ತು ಕೌಸಲ್ಯೆಯ ಮಗನಾಗಿ ಶ್ರೀ ರಾಮನು ಅಂದು ಜನಿಸಿದನು ಎಂದು ನಮ್ಮ ಪುರಾಣಗಳು ಹೇಳುತ್ತವೆ. ವಸಂತ ಮಾಸದಲ್ಲಿ ಬರುವ ರಾಮ ನವಮಿಯನ್ನು ಹಿಂದೂಗಳು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ರಾಮ ನವಮಿಯಲ್ಲಿ ಉಪವಾಸ ವ್ರತಾಚರಣೆ ಪ್ರಮುಖವಾದದ್ದು. ಆ ದಿನ ಪಾನಕ, ಕೋಸಂಬರಿಗಳನ್ನು ರಾಮನ ನೈವೇದ್ಯಕ್ಕೆ ಇಡಲಾಗುತ್ತದೆ. ಕೋಸಂಬರಿಯನ್ನು ಬಗೆ ಬಗೆಯ ರೀತಿಯಲ್ಲಿ ತಯಾರಿಸಲಾಗುತ್ತದೆ. ಹೆಸರು ಬೇಳೆ ಕೋಸಂಬರಿ, ಕಡ್ಲೆ ಬೇಳೆ-ಸೌತೆಕಾಯಿ ಕೋಸಂಬರಿ, ಹೆಸರು ಕಾಳು ಕೋಸಂಬರಿ, ತರಕಾರಿಗಳ ಕೋಸಂಬರಿ ಮುಂತಾದವುಗಳು. ರಾಮನವಮಿಗೆ ನೀವು ತಯಾರಿಸಬಹುದಾದ ಕೋಸಂಬರಿಗಳು ಇಲ್ಲಿವೆ.
ರಾಮ ನವಮಿಗೆ ತಯಾರಿಸುವ ಕೋಸಂಬರಿಗಳು ನೈವೇದ್ಯದ ಜೊತೆಗೆ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ಇವು ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವುದು ಸುಳ್ಳಲ್ಲ. ವಿವಿಧ ಬಗೆಯ ಕೋಸಂಬರಿ ಮಾಡುವ ವಿಧಾನವನ್ನು ಇಲ್ಲಿ ನೋಡೋಣ.
ಹೆಸರುಬೇಳೆ ಕೋಸಂಬರಿ
ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ - 1 ಕಪ್, ಕಾಯಿತುರಿ - ½ ಕಪ್, ತುರಿದ ಶುಂಠಿ - ¼ ಚಮಚ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ - ¼ ಚಮಚ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಚಮಚ, ಕಲ್ಲುಪ್ಪು
ತಯಾರಿಸುವ ವಿಧಾನ: ಹೆಸರು ಬೇಳೆಯನ್ನು ಒಂದು ಗಂಟೆಯ ಕಾಲ ನೆನೆಸಿಕೊಳ್ಳಿ. ನಂತರ ನೀರು ಸೋಸಿ. ಅದಕ್ಕೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ. ರುಚಿಗೆ ತಕ್ಕಷ್ಟು ಕಲ್ಲುಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮೇಲಿನಿಂದ ಸ್ವಲ್ಪ ನಿಂಬೆರಸ ಹಿಂಡಿ. ಈಗ ನಿಮ್ಮ ಮುಂದೆ ಹೆಸರುಬೇಳೆ ಕೋಸಂಬರಿ ಸವಿಯಲು ಸಿದ್ಧ.
ಕಡ್ಲೆಬೇಳೆ-ಸೌತೆಕಾಯಿ ಕೋಸಂಬರಿ
ಬೇಕಾಗುವ ಸಾಮಗ್ರಿಗಳು: ನೆನೆಸಿದ ಕಡ್ಲೆಬೇಳೆ - 1 ಕಪ್, ಸಣ್ಣಗೆ ಹೆಚ್ಚಿದ ಸೌತೆಕಾಯಿ, ಶುಂಠಿ, ಹಸಿ ಮೆಣಸಿನಕಾಯಿ - ¼ ಚಮಚ, ತೆಂಗಿನತುರಿ - ½ ಕಪ್, ರುಚಿಗೆ ತಕ್ಕಷ್ಟು ಕಲ್ಲುಪ್ಪು
ತಯಾರಿಸುವ ವಿಧಾನ: ಒಂದು ಪಾತ್ರೆಗೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ. ಮೇಲಿನಿಂದ ಸ್ವಲ್ಪ ಲಿಂಬು ರಸ ಸೇರಿಸಿ.
ಹೆಸರು ಕಾಳು ಕೋಸಂಬರಿ
ಹೆಸರು ಬೇಳೆ ಕೋಸಂಬರಿಯಂತೆ ಹೆಸರು ಕಾಳು ಕೋಸಂಬರಿಯನ್ನು ತಯಾರಿಸಲಾಗುತ್ತದೆ. ಆದರೆ ಇದಕ್ಕೆ ಮೊಳಕೆಯೊಡದ ಹೆಸರು ಕಾಳನ್ನು ಬಳಸಲಾಗುತ್ತದೆ. ಮೊಳಕೆಯೊಡೆದ ಹೆಸರು ಕಾಳು ಕೋಸಂಬರಿ ತಯಾರಿಸಿದ ನಂತರ ಅದಕ್ಕೆ ಬೇಕಿದ್ದರೆ ಕ್ಯಾರೆಟ್ ತುರಿಯನ್ನು ಮೇಲಿನಿಂದ ಸೇರಿಸಿ. ವ್ರತಾಚರಣೆಯ ಜೊತೆಗೆ ಆರೋಗ್ಯದ ಕಾಳಜಿಗೂ ಉತ್ತಮ.
ತರಕಾರಿ–ಹಣ್ಣುಗಳ ಕೋಸಂಬರಿ
ಸಣ್ಣಗೆ ಹೆಚ್ಚಿದ ಸೌತೆಕಾಯಿ, ಕ್ಯಾರೆಟ್, ಜೋಳ ಮತ್ತು ದಾಳಿಂಬೆ ಹಣ್ಣು ತೆಗೆದುಕೊಂಡು, ಅದಕ್ಕೆ ಶುಂಠಿ, ಹಸಿ ಮೆಣಸಿನ ಕಾಯಿ, ತೆಂಗಿನ ತುರಿ ಸೇರಿಸಿ. ರುಚಿಗೆ ತಕ್ಕಷ್ಟು ಕಲ್ಲುಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ರಾಮ ನವಮಿಯಂದು ತಯಾರಿಸುವ ಈ ಕೋಸಂಬರಿಗಳು ದೇಹಕ್ಕೆ ತಂಪು ಜೊತೆಗೆ ಇವು ಅಗತ್ಯ ಪೋಷಕಾಂಶಗಳನ್ನೂ ನೀಡುತ್ತವೆ. ಹಾಗಾಗಿ ಈ ಕೋಸಂಬರಿಗಳನ್ನು ರಾಮ ನವಮಿ ಮಾತ್ರವಲ್ಲ ಬೇಸಿಗೆಯ ಇತರ ದಿನಗಳಲ್ಲೂ ತಯಾರಿಸಿ ತಿನ್ನುವ ಮೂಲಕ ಉಷ್ಣದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
