ನವರಾತ್ರಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರ ತಿನ್ನಬಾರದೆಂದು ಯಾಕೆ ಹೇಳ್ತಾರೆ?
ನವರಾತ್ರಿಯಲ್ಲಿ ಅನೇಕ ಮಂದಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ. ಈ ರೀತಿ ತಿನ್ನದಿರುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆದರೆ ಉಪವಾಸದ ಸಮಯದಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಏಕೆ ತಿನ್ನುವುದಿಲ್ಲ ಎಂಬುದನ್ನು ತಿಳಿಯಿರಿ.
ನವರಾತ್ರಿಯ ಆಹಾರ: ಹಬ್ಬಗಳ ಸಮಯದಲ್ಲಿ ಮನೆಯಲ್ಲಿ ಬಗೆ ಬಗೆಯ ಅಡುಗೆಯನ್ನು ಮಾಡಲಾಗುತ್ತದೆ. ಮಾಂಸಾಹಾರಕ್ಕಿಂತ ಸಸ್ಯಾಹಾರವೇ ಹೆಚ್ಚು ತಯಾರಿಸಲಾಗುತ್ತದೆ. ಆದರೆ ಒಂದು ಅಚ್ಚರಿಯ ಸಂಗತಿಯೆಂದರೆ ಹಬ್ಬಗಳಲ್ಲಿ ಅದರಲ್ಲೂ ಈಗಾಗಲೇ ಆರಂಭವಾಗಿರುವ ನವರಾತ್ರಿಯ ಆಹಾರದಲ್ಲಿ ಕೆಲವರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಇದು ಅಚ್ಚರಿ ಏನಿಸಿದರೂ ನಿಜ. ನವರಾತ್ರಿ ಆಹಾರದಲ್ಲಿ ಯಾಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದಿಲ್ಲ ಎಂಬುದನ್ನು ತಿಳಿಯೋಣ. ಪವಿತ್ರ ಪೂಜೆ ಮತ್ತು ಉಪವಾಸದ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನಬಾರದು. ಇದನ್ನು ಆಯುರ್ವೇದದಲ್ಲೂ ಉಲ್ಲೇಖಿಸಲಾಗಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ತಾಮಸಿಕ ಸ್ವಭಾವದವು. ಹಾಗಾಗಿ ಪುಣ್ಯಕಾಲದಲ್ಲಿ ಇವುಗಳನ್ನು ತಿನ್ನದಿರುವುದು ಉತ್ತಮ ಎಂದು ಆಯುರ್ವೇದ ಹೇಳುತ್ತದೆ.
ಆಯುರ್ವೇದದ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ಪಿತ್ತ ದೋಷವನ್ನು ಹೆಚ್ಚಿಸುವ ಬಿಸಿ ಆಹಾರಗಳಾಗಿವೆ. ನವರಾತ್ರಿಯಲ್ಲಿ ಉಪವಾಸ ಮಾಡುವಾಗ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ತಂಪಾಗಿರುವ ಲಘು ಆಹಾರವನ್ನು ಸೇವಿಸುವುದರಿಂದ ದೇಹವು ತನ್ನ ಆಂತರಿಕ ಶಾಖವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುವುದು ಉರಿಯೂತದ ಕಾಯಿಲೆಗಳಿಗೆ ಕಾರಣವಾಗಬಹುದು. ಅಂದರೆ ಉಷ್ಣ ಸಂಬಂಧಿ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಪೂಜೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ.
ಮಾನಸಿಕ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ?
ಆಯುರ್ವೇದದ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ಮನಸ್ಥಿತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವ್ಯಾಕುಲತೆಯನ್ನು ಉಂಟುಮಾಡುತ್ತೆ. ನವರಾತ್ರಿಯ ಸಮಯದಲ್ಲಿ ಅಧ್ಯಾತ್ಮಿಕವಾಗಿ ಬಹಳ ಜಾಗರೂಕರಾಗಿರಬೇಕು. ಪೂಜೆಗೆ ಏಕಾಗ್ರತೆ ಮತ್ತು ಸ್ಪಷ್ಟತೆ ಅತ್ಯಗತ್ಯ. ಆದ್ದರಿಂದ, ನೀವು ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನುವುದನ್ನು ನಿಲ್ಲಿಸಿದರೆ, ಹೆಚ್ಚು ಏಕಾಗ್ರತೆಯನ್ನು ಹೊಂದಲು ಮತ್ತು ಹೆಚ್ಚು ಪವಿತ್ರವಾದ ರೀತಿಯಲ್ಲಿ ಉಪವಾಸವನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
ಹಿಂದೂ ಸಂಪ್ರದಾಯಗಳಲ್ಲಿ ಹಬ್ಬ-ಹರಿದಿನಗಳಲ್ಲಿ ಶುದ್ಧತೆ ಬಹಳ ಮುಖ್ಯ. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಅನೇಕ ಜನರು ಅಶುದ್ಧವೆಂದು ಪರಿಗಣಿಸುತ್ತಾರೆ. ಅನೇಕ ಜನರು ತಮ್ಮಿಂದ ಬರುವ ವಾಸನೆಯನ್ನು ಇಷ್ಟಪಡುವುದಿಲ್ಲ. ಇವೆರಡನ್ನೂ ಹೆಚ್ಚಾಗಿ ಮಾಂಸಾಹಾರದಲ್ಲಿ ಬಳಸುತ್ತಾರೆ ಎಂಬ ಅಭಿಪ್ರಾಯವೂ ಇದೆ. ಈ ಕಾರಣದಿಂದಾಗಿ, ಅಧ್ಯಾತ್ಮಿಕತೆ ಮತ್ತು ಶುದ್ಧತೆಗಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ದೂರವಿಡುವುದು ಪ್ರಾಚೀನ ಕಾಲದಿಂದಲೂ ರೂಢಿಯಾಗಿದೆ.
ನವರಾತ್ರಿಯಲ್ಲಿ ಲಘು ಆಹಾರವನ್ನು ಸೇವಿಸಲಾಗುತ್ತದೆ. ಹಾಗೆಯೇ ಉಪವಾಸವೂ ಹೆಚ್ಚು. ಈರುಳ್ಳಿ ಮತ್ತು ಬೆಳ್ಳುಳ್ಳಿ ಪೌಷ್ಟಿಕಾಂಶದ ಪದಾರ್ಥಗಳಾಗಿದ್ದರೂ, ಅವು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಕೆಲವು ಭಕ್ತರಿಗೆ ಅನಾನುಕೂಲ ಮತ್ತು ಉಬ್ಬುವಿಕೆಯನ್ನು ಉಂಟುಮಾಡಬಹುದು. ಆದುದರಿಂದಲೇ ನವರಾತ್ರಿಯಲ್ಲಿ ಇಂತಹ ಆಹಾರಗಳಿಂದ ದೂರವಿರುವುದು ವಾಡಿಕೆಯಾಗಿದೆ ಎನ್ನುತ್ತಾರೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
ವಿಭಾಗ