ಕನ್ನಡ ಸುದ್ದಿ  /  ಜೀವನಶೈಲಿ  /  Yugadi Recipe: ಯುಗಾದಿ ಹಬ್ಬಕ್ಕೆ ಹಣ್ಣುಗಳ ಪಾಯಸ ಮಾಡಿ ಸಂಭ್ರಮ ಹೆಚ್ಚಿಸಿ; ಇಲ್ಲಿದೆ ಅನಾನಸ್‌, ಹಲಸಿನ ಹಣ್ಣಿನ ಪಾಯಸದ ರೆಸಿಪಿ

Yugadi Recipe: ಯುಗಾದಿ ಹಬ್ಬಕ್ಕೆ ಹಣ್ಣುಗಳ ಪಾಯಸ ಮಾಡಿ ಸಂಭ್ರಮ ಹೆಚ್ಚಿಸಿ; ಇಲ್ಲಿದೆ ಅನಾನಸ್‌, ಹಲಸಿನ ಹಣ್ಣಿನ ಪಾಯಸದ ರೆಸಿಪಿ

ಯುಗಾದಿ ಹಬ್ಬಕ್ಕೆ ವಿಶೇಷವಾದ ತಿನಿಸುಗಳನ್ನು ತಯಾರಿಸಿ ಮನೆಮಂದಿಯನ್ನು ಖುಷಿ ಪಡಿಸಬೇಕು ಎಂದು ಹೆಣ್ಣುಮಕ್ಕಳು ಬಯಸುವುದು ಸಹಜ. ಆದರೆ ಏನು ಮಾಡಬಹುದು ಎಂದು ಅವರಿಗೂ ಗೊಂದಲವಾಗುತ್ತದೆ. ಆದ್ರೆ ಖಂಡಿತ ಚಿಂತೆ ಮಾಡ್ಬೇಡಿ, ಈ ವರ್ಷ ಯುಗಾದಿ ಹಣ್ಣುಗಳ ಪಾಯಸ ಮಾಡಿ, ಇದನ್ನು ಮಕ್ಕಳು ಕೂಡ ಇಷ್ಟಪಟ್ಟು ಕೇಳಿ ಹಾಕಿಸಿಕೊಂಡು ತಿಂತಾರೆ. ರೆಸಿಪಿ ಇಲ್ಲಿದೆ.

ಅನಾನಸ್‌ ಪಾಯಸ, ಹಲಸಿನ ಹಣ್ಣಿನ ಪಾಯಸ
ಅನಾನಸ್‌ ಪಾಯಸ, ಹಲಸಿನ ಹಣ್ಣಿನ ಪಾಯಸ (HT/ Kerala Cooking Recipe )

ಯುಗಾದ ಹಬ್ಬ ಎಂದಾಕ್ಷಣ ಸಂಭ್ರಮದ ಜೊತೆಗೆ ಬಾಯಲ್ಲಿ ನೀರೂರುತ್ತದೆ. ಅದಕ್ಕೆ ಕಾರಣ ಈ ಹಬ್ಬದಂದು ತಯಾರಿಸುವ ಬಗೆ ಬಗೆ ತಿನಿಸುಗಳು. ಚಿತ್ರಾನ್ನದಿಂದ ಹಿಡಿದು ಪರಮಾನ್ನದವರೆಗೆ ಯುಗಾದಿ ಹಬ್ಬದಂದು ನಮ್ಮ ಜಿಹ್ವಾ ಚಾಪಲ್ಯ ತಣಿಸಿ, ಹೊಟ್ಟೆಯನ್ನು ತುಂಬಿಸುತ್ತದೆ. ಆದರೆ ಹಬ್ಬಗಳ ದಿನಗಳಲ್ಲಿ ಜನ ವಿಶೇಷವಾದ ಖಾದ್ಯಗಳನ್ನು ತಿನ್ನಲು ಬಯಸುವುದು ಸಹಜ. ಈ ಯುಗಾದಿಗೆ ನೀವು ವಿಶೇಷವಾದ ಪಾಯಸ ಮಾಡಬೇಕು ಅಂತಿದ್ರೆ ಅನಾನಸ್‌ ಹಾಗೂ ಹಲಸಿನ ಹಣ್ಣಿನ ಪಾಯಸವನ್ನು ಟ್ರೈ ಮಾಡಬಹುದು. ಇದನ್ನು ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವಂತಿರುವುದು ಸುಳ್ಳಲ್ಲ.

ಟ್ರೆಂಡಿಂಗ್​ ಸುದ್ದಿ

ಅನಾನಸ್ ಪಾಯಸ

ಬೇಕಾಗುವ ಸಾಮಗ್ರಿಗಳು: ಅನಾನಸ್ ಹೋಳು - 2 ಕಪ್, ಬೆಲ್ಲ - ಅರ್ಧ ಕಪ್, ಅಕ್ಕಿಹಿಟ್ಟು - 2 ಚಮಚ, ಹಸಿ ತೆಂಗಿನಕಾಯಿ ತುರಿ - 1 ಕಪ್,

ತಯಾರಿಸುವ ವಿಧಾನ: 2 ಕಪ್ ಅನಾನಸ್ ಹೋಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. 1 ಕಪ್ ಹಸಿ ತೆಂಗಿನತುರಿಯನ್ನ ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಒಂದು ಜರಡಿ ಸಹಾಯದಿಂದ ಸೋಸಿ ಕಾಯಿಹಾಲು ತೆಗೆದಿಟ್ಟುಕೊಳ್ಳಿ. ಮತ್ತೊಮ್ಮೆ ಹಿಂಡಿದ ಕಾಯಿಗೆ ನೀರು ಹಾಕಿ ರುಬ್ಬಿ ಕಾಯಿಹಾಲು ಸಿದ್ಧಮಾಡಿಟ್ಟುಕೊಳ್ಳಿ.

ಈಗ ಒಂದು ಪಾತ್ರೆಗೆ ಎರಡನೇ ಬಾರಿ ತೆಗೆದಿಟ್ಟ ಕಾಯಿ ಹಾಲು ಹಾಕಿ, ಒಂದು ಬೌಲ್‌ನಲ್ಲಿ ಎರಡು ಚಮಚ ಅಕ್ಕಿಹಿಟ್ಟು ಹಾಕಿ, ಅದಕ್ಕೆ ನೀರು ಸೇರಿಸಿ ಗಂಟಿಲ್ಲದಂತೆ ಕಲೆಸಿಕೊಳ್ಳಿ. ಅದನ್ನು ಕಾಯಿಹಾಲಿಗೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕುದಿ ಬರುವ ತನಕ ಬೇಯಿಸಿ. ನಂತರ ಅರ್ಧ ಕಪ್ ಬೆಲ್ಲ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗಿದ ಮೇಲೆ ರುಬ್ಬಿಟ್ಟುಕೊಂಡ ಅನಾನಸ್ ಸೇರಿಸಿ ಚೆನ್ನಾಗಿ ಕಲಸಿ. ಕುದಿಯಲು ಶುರು ಆದ ಮೇಲೆ ಮೊದಲು ತೆಗೆದಿಟ್ಟ ಕಾಯಿ ಹಾಲು ಹಾಕಿ ಕುದಿಸಿ ಒಂದು ಚಮಚ ಏಲಕ್ಕಿ ಪುಡಿ ಹಾಕಿ ಕಲಸಿ, ಕೊನೆಯಲ್ಲಿ ಒಂದು ಒಗ್ಗರಣೆ ಪಾತ್ರೆಗೆ 5 ರಿಂದ 6 ಗೋಡಂಬಿಯನ್ನು ಹಾಕಿ ಡ್ರೈ ರೋಸ್ಟ್ ಮಾಡಿ ಪಾಯಸಕ್ಕೆ ಹಾಕಿದರೆ ರುಚಿಯಾದ ಘಮ ಘಮಿಸುವ ಅನಾನಸ್ ಪಾಯಸ ಸವಿಯಲು ಸಿದ್ಧ.

ಹಲಸಿನ ಹಣ್ಣಿನ ಪಾಯಸ

ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ಹಲಸಿನ ಹಣ್ಣು - 1 ಕಪ್, ಬೆಲ್ಲ - ಒಂದೂ ಕಾಲು ಕಪ್‌, 4 ಚಮಚ ತುಪ್ಪ, 20 ಗೋಡಂಬಿ, 1 ಕಪ್ ಹೆಸರುಬೇಳೆ, 1.5 ಕಪ್ ಹಸಿ ತೆಂಗಿನಕಾಯಿ ತುರಿ.

ತಯಾರಿಸುವ ವಿಧಾನ: ಒಂದು ಬಾಣಲೆಗೆ 1 ಕಪ್ ಹೆಸರುಬೇಳೆಯನ್ನ ಹಾಕಿ ಮಧ್ಯಮ ಉರಿಯಲ್ಲಿ ಪರಿಮಳ ಬರುವ ತನಕ ಕೈ ಬಿಡದೆ ಹುರಿದುಕೊಂಡು ತಣ್ಣಗಾಗಲು ಬಿಡಬೇಕು. ತಣ್ಣಗಾದ ಮೇಲೆ ಚೆನ್ನಾಗಿ ತೊಳೆದು ಒಂದು ಕುಕ್ಕರ್‌ಗೆ ಹಾಕಿ ಬೇಳೆ ಮುಳುಗುವಷ್ಟು ನೀರು ಹಾಕಿ 1 ವಿಶಲ್ ಬರುವ ತನಕ ಬೇಯಿಸಿ. ಬೇಳೆ ಚೆನ್ನಾಗಿ ಬೆಂದಿರಬೇಕು. ಮಿಕ್ಸಿ ಜಾರಿಗೆ 1.5 ಕಪ್ ಹಸಿ ತೆಂಗಿನಕಾಯಿತುರಿ ಹಾಕಿ 1/4 ಕಪ್ ನೀರು ಹಾಕಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ. ಈಗ ಒಂದು ಬಾಣಲೆಗೆ 4 ಚಮಚ ತುಪ್ಪ ಹಾಕಿ ಬಿಸಿ ಆದ ಮೇಲೆ 15 ರಿಂದ 20 ಗೋಡಂಬಿ ಹಾಕಿ ಫ್ರೈ ಮಾಡಿಟ್ಟುಕೊಳ್ಳಿ. ಇನ್ನೊಂದು ಪಾತ್ರಗೆ 1 ಕಪ್ ಹೆಚ್ಚಿದ ಹಲಸಿನ ಹಣ್ಣು ಹಾಕಿ ಹಣ್ಣು ಮುಳುಗುವಷ್ಟು ನೀರು ಹಾಕಿ 4 ರಿಂದ 5 ನಿಮಿಷ ಬೇಯಿಸಿಕೊಳ್ಳಿ. ಒಂದು ಪಾತ್ರೆಗೆ 1 ಕಪ್ ಪುಡಿ ಬೆಲ್ಲ ಹಾಕಿ ಬೆಲ್ಲ ಮುಳುಗುವಷ್ಟು ನೀರು ಹಾಕಿ ಕುದಿಸಿ ಸೋಸಿ ಇಟ್ಟುಕೊಳ್ಳಿ.

ಪಾಯಸ ಮಾಡುವ ಪಾತ್ರೆ ತೆಗೆದುಕೊಂಡು ಅದಕ್ಕೆ ಸೋಸಿದ ಬೆಲ್ಲ , ಬೇಯಿಸಿಟ್ಟುಕೊಂಡ ಹೆಸರು ಬೇಳೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಮೊದಲೆ ರುಬ್ಬಿ ಇಟ್ಟ ತೆಂಗಿನ ಕಾಯಿ ಹಾಕಿ ಸ್ವಲ್ಪ ನೀರು ಹಾಕಿ ಕಲಸಿ ಸ್ಟೌ ಆನ್ ಮಾಡಿ ಸೌಟಿ ನಲ್ಲಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಕುದಿಸಬೇಕು. 2 ಚಿಟಿಕೆ ಉಪ್ಪು ಹಾಕಿ( ಉಪ್ಪು ಹಾಕುವುದರಿಂದ ಸೌಳು ಅಂಶ ಹೋಗುತ್ತದೆ.) ಸ್ವಲ್ಪ ನೀರು ಹಾಕಿ ಪಾಯಸದ ಹದ ವನ್ನು ಅಡ್ಜೆಸ್ಟ್ ಮಾಡಿಕೊಳ್ಳಿ. ಚೆನ್ನಾಗಿ 8 ರಿಂದ 10 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ ಕೊನೆಗೆ ಬೇಯಿಸಿದ ಹಲಸಿನ ಹಣ್ಣನ್ನು ಹಾಕಿ 5 ನಿಮಿಷ ಕುದಿಸಿ ಹುರಿದಿಟ್ಟ ಗೋಡಂಬಿಯನ್ನು ಹಾಕಿ ಕಲಸಿ ಸ್ಟೌ ಆಫ್ ಮಾಡಿದರೆ ರುಚಿಯಾದ ಹಲಸಿನ ಹಣ್ಣಿನ ಪಾಯಸ ತಿನ್ನಲು ರೆಡಿ.

ಬರಹ: ವಿದ್ಯಾ ಗುಮ್ಮನಿ