Ugadi 2024: ಯುಗಾದಿ ಹಬ್ಬಕ್ಕೆ ಯಾವ ಪಾಯಸ ಮಾಡೋದು ಅನ್ನೋ ಚಿಂತೆನಾ; ಇಲ್ಲಿದೆ 8 ಬಗೆ ಬಗೆ ಪಾಯಸದ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  Ugadi 2024: ಯುಗಾದಿ ಹಬ್ಬಕ್ಕೆ ಯಾವ ಪಾಯಸ ಮಾಡೋದು ಅನ್ನೋ ಚಿಂತೆನಾ; ಇಲ್ಲಿದೆ 8 ಬಗೆ ಬಗೆ ಪಾಯಸದ ರೆಸಿಪಿ

Ugadi 2024: ಯುಗಾದಿ ಹಬ್ಬಕ್ಕೆ ಯಾವ ಪಾಯಸ ಮಾಡೋದು ಅನ್ನೋ ಚಿಂತೆನಾ; ಇಲ್ಲಿದೆ 8 ಬಗೆ ಬಗೆ ಪಾಯಸದ ರೆಸಿಪಿ

ಯುಗಾದಿ ಸಂಭ್ರಮ ಹೆಚ್ಚಲು ಹೊಸ ಬಟ್ಟೆ, ಪೂಜೆಯ ಜೊತೆಗೆ ಬಗೆ ಬಗೆ ತಿನಿಸುಗಳು ಕೂಡ ಜೊತೆಯಾಗಬೇಕು. ಈ ವರ್ಷ ಯುಗಾದಿಗೆ ಯಾವ ಪಾಯಸ ಮಾಡೋದಪ್ಪಾ ಅಂತ ಚಿಂತೆ ನಿಮ್ಮನ್ನು ಕಾಡ್ತಾ ಇದ್ಯಾ, ಹಾಗಿದ್ರೆ ಚಿಂತೆ ಬಿಡಿ. ಇಲ್ಲಿದೆ ನಿಮಗಾಗಿ 8 ವಿವಿಧ ಬಗೆಯ ಪಾಯಸಗಳ ರೆಸಿಪಿ. ಇದ್ರಲ್ಲಿ ನಿಮಗೆ ವಿಶೇಷ ಅನ್ನಿಸೋದನ್ನು ಆಯ್ಕೆ ಮಾಡ್ಕೊಳ್ಳಿ.

ಯುಗಾದಿ ಹಬ್ಬಕ್ಕೆ ಪಾಯಸ ರೆಸಿಪಿಗಳು
ಯುಗಾದಿ ಹಬ್ಬಕ್ಕೆ ಪಾಯಸ ರೆಸಿಪಿಗಳು

ಹಬ್ಬ ಎಂದರೆ ಎಲ್ಲರ ಮನೆಯಲ್ಲೂ ಸಂಭ್ರಮ ಸಡಗರ. ಅದರಲ್ಲೂ ಯುಗಾದಿ ಹಬ್ಬ ಎಂದರೆ ಹೊಸ ವರ್ಷದ ಆಚರಣೆ ಅಂತಲೂ ಹೇಳಬಹುದು. ಈ ಹಬ್ಬದಂದು ಹೋಳಿಗೆ, ಚಿತ್ರಾನ್ನ, ಪಚಡಿ, ಕೊಸಂಬರಿಯ ಜೊತೆಗೆ ಪಾಯಸ ಮಾಡುವುದು ಕೂಡ ಸಂಪ್ರದಾಯ. ಪ್ರತಿವರ್ಷ ಯುಗಾದಿ ಹಬ್ಬಕ್ಕೆ ಒಂದೇ ಥರ ಪಾಯಸ ಮಾಡಿದ್ರೆ ಏನು ಚೆಂದ ಹೇಳಿ. ಈ ವರ್ಷ ಯುಗಾದಿ ಹಬ್ಬಕ್ಕೆ ನೀವು ವಿಶೇಷವಾದ ಪಾಯಸ ಮಾಡ್ಬೇಕು ಅಂತಿದ್ರೆ ಇಲ್ಲಿವೆ ಬಗೆ ಬಗೆ ಪಾಯಸದ ರೆಸಿಪಿ.

ಹೆಸರುಬೇಳೆ ಪಾಯಸ

ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ - 1 ಕಪ್, ಸಕ್ಕರೆ - 1 ಕಪ್, ತುಪ್ಪ - 4 ಚಮಚ, ಒಣದ್ರಾಕ್ಷಿ - 8 ರಿಂದ 10, ಗೋಡಂಬಿ - 8, ಚಿಟಿಕೆ - ಉಪ್ಪು, ಹಸಿ ತೆಂಗಿನಕಾಯಿ ತುರಿ - 3 ಕಪ್, ಏಲಕ್ಕಿ ಪುಡಿ - 1 ಚಮಚ

ತಯಾರಿಸುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ 1 ಕಪ್ ಹೆಸರುಬೇಳೆ ಹಾಕಿ ಚೆನ್ನಾಗಿ ಘಮ ಬರುವ ತನಕ ಹುರಿದು ತಣ್ಣಗಾದ ಮೇಲೆ ಮೂರು ಸಲ ತೊಳೆದು ಕುಕ್ಕರ್‌ನಲ್ಲಿ ಹಾಕಿ 3 ಕಪ್ ನೀರು ಸೇರಿಸಿ, 3 ವಿಶಲ್‌ ಕೂಗಿಸಿ. ಈಗ ಮಿಕ್ಸಿ ಜಾರಿಗೆ 3 ಕಪ್ ಹಸಿತೆಂಗಿನಕಾಯಿ ತುರಿ, 1 ಕಪ್ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡು ಮಿಶ್ರಣವನ್ನು ತೆಳುವಾದ ಬಟ್ಟೆ ಅಥವಾ ಜರಡಿ ಸಹಾಯದಿಂದ ಸೋಸಿ ಕಾಯಿಹಾಲು ತೆಗೆದಿಟ್ಟು ಕೊಳ್ಳಿ. ಪಾಯಸ ಮಾಡುವ ಪಾತ್ರೆಗೆ ಬೇಯಿಸಿಟ್ಟುಕೊಂಡ ಹೆಸರುಬೇಳೆ, ಒಂದು ಚಿಟಿಕೆ ಉಪ್ಪು, 1 ಕಪ್ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ. ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಹೀಗೆ 3 ನಿಮಿಷ ಆದ ಮೇಲೆ ತೆಗೆದಿಟ್ಟುಕೊಂಡ ಕಾಯಿಹಾಲು ಹಾಕಿ ಒಂದು ಕುದಿ ಬರುವ ತನಕ ಕುದಿಸಿ, ಒಂದು ಚಮಚ ಏಲಕ್ಕಿ ಪುಡಿ ಹಾಕಿ ಸ್ಟೌ ಆಫ್ ಮಾಡಿ. ಒಂದು ಒಗ್ಗರಣೆ ಪಾತ್ರೆಗೆ 4 ಚಮಚ ತುಪ್ಪ ಹಾಕಿ 8 ಗೋಡಂಬಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬರುವ ತನಕ ಹುರಿದ ಮೇಲೆ 10 ಒಣದ್ರಾಕ್ಷಿಯನ್ನು ಹಾಕಿ ಹುರಿದು ಪಾಯಸಕ್ಕೆ ಹಾಕಿದರೆ ರುಚಿಯಾದ ಹೆಸರುಬೇಳೆ ಪಾಯಸ ಸವಿಯಲು ಸಿದ್ದ.

ದಿಢೀರ್ ಪಾಯಸ

ಬೇಕಾಗುವ ಸಾಮಗ್ರಿಗಳು: ಅವಲಕ್ಕಿ - 1ಕಪ್, ಹಾಲು - 3ಕಪ್, ಏಲಕ್ಕಿ - 2, ತುಪ್ಪ - 4ಚಮಚ, ಒಣದ್ರಾಕ್ಷಿ - 10, ಗೋಡಂಬಿ - 8, ಸಕ್ಕರೆ - ಮುಕ್ಕಾಲು ಕಪ್‌

ತಯಾರಿಸುವ ವಿಧಾನ: ಮೊದಲಿಗೆ ಒಂದು ಬಾಣಲಿಯಲ್ಲಿ 2 ರಿಂದ 3 ಚಮಚ ತುಪ್ಪ ಹಾಕಿ. ಬಿಸಿಯಾದ ಮೇಲೆ 8 ಗೋಡಂಬಿ ಹಾಕಿ ಹೊಂಬಣ್ಣ ಬರುವ ತನಕ ಹುರಿದು ತೆಗೆದಿರಿಸಿ, ನಂತರ ಒಣದ್ರಾಕ್ಷಿಯನ್ನು ಕೂಡ ಹುರಿದು ತೆಗೆದಿರಿಸಿಕೊಳ್ಳಿ. ಒಂದು ಕಪ್ ಮೀಡಿಯಂ ಅವಲಕ್ಕಿಯನ್ನ ಅದೇ ಬಾಣಲೆಗೆ ಹಾಕಿ ತುಪ್ಪದಲ್ಲಿ 2 ರಿಂದ 3 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಂಡು 3 ಕಪ್ ಆಗೂ ಅಷ್ಟು ಬಿಸಿ ಹಾಲನ್ನ ಹಾಕಿ ಬೇಯಿಸಿ, ಮುಕ್ಕಾಲು ಕಪ್ ಅಷ್ಟು ಸಕ್ಕರೆಯನ್ನು ಸೇರಿಸಿ ಕಲೆಸಿ. 3 ನಿಮಿಷ ಕುದಿಯಲು ಬಿಡಿ. ಕೊನೆಯಲ್ಲಿ 2 ಇಡೀ ಏಲಕ್ಕಿ ಹಾಕಿ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಹಾಕಿ ಕಲಸಿದರೆ ರುಚಿಕದವಾದ ಅವಲಕ್ಕಿ ದಿಢೀರ್ ಪಾಯಸ ರೆಡಿ. ಬಿಸಿ ಇದ್ದಾಗ ತೆಳ್ಳಗೆ ಅನ್ನಿಸಿದ್ರೂ ತಣ್ಣಗಾದ ಮೇಲೆ ಈ ಪಾಯಸ ಗಟ್ಟಿ ಆಗುತ್ತದೆ. ಆಗ ಇನ್ನೂ ರುಚಿಯಾಗಿರುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.

ಅಕ್ಕಿ ಕಡ್ಲೆಬೇಳೆ ಪಾಯಸ

ಬೇಕಾಗುವ ಸಾಮಗ್ರಿಗಳು: ಕಡ್ಲೆಬೇಳೆ - 1/4ಕಪ್, ಅಕ್ಕಿ - 2 ಚಮಚ, ಬೆಲ್ಲ - 1/2 ಕಪ್, ತೆಂಗಿನಕಾಯಿ ತುರಿ - 1 ಕಪ್, ಏಲಕ್ಕಿ - 4, ತುಪ್ಪ - 2 ಚಮಚ, ಒಣದ್ರಾಕ್ಷಿ - 2 ಚಮಚ, ಗೋಡಂಬಿ - 6

ತಯಾರಿಸುವ ವಿಧಾನ: ಮೊದಲಿಗೆ ಕಾಲು ಕಪ್ ಕಡ್ಲೆಬೇಳೆ ಜೊತೆ 2 ಚಮಚ ಅಕ್ಕಿ ಸೇರಿಸಿ ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ಇದನ್ನು ಕುಕ್ಕರ್‌ಗೆ ಹಾಕಿ ಒಂದು ಕಪ್‌ ನೀರು ಸೇರಿಸಿ, ಮೀಡಿಯಂ ಉರಿಯಲ್ಲಿ 4 ವಿಶಲ್ ಬರುವ ತನಕ ಬೇಯಿಸಿಕೊಳ್ಳಿ. ಅಕ್ಕಿ ಮತ್ತು ಕಡ್ಲೆಬೇಳೆ ಚೆನ್ನಾಗಿ ಬೆಂದಿರಬೇಕು. ಬೆಂದಿರುವ ಅಕ್ಕಿ ಮತ್ತು ಕಡ್ಲೆಬೇಳೆಯನ್ನ ಒಂದು ಪಾತ್ರೆಗೆ ಹಾಕಿ ಮೀಡಿಯಂ ಉರಿಯಲ್ಲಿ ಬಿಸಿ ಮಾಡಲು ಇಟ್ಟು, ಮಿಕ್ಸಿ ಜಾರಿಗೆ 1 ಕಪ್ ತೆಂಗಿನಕಾಯಿ ತುರಿ, 4 ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಒಂದು ಪಾತ್ರೆಗೆ ಬೆಲ್ಲ 1/2 ಕಪ್, 3 ಚಮಚ ನೀರು ಹಾಕಿ ಬೆಲ್ಲವನ್ನು ಕರಗಿಸಿ ಪಾಯಸಕ್ಕೆ ಶೋಧಿಸಿ ಹಾಕಿ. ಬೆಲ್ಲ ಹಾಕಿದ ಮೇಲೆ 5 ರಿಂದ 6 ನಿಮಿಷ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಒಂದು ಒಗ್ಗರಣೆ ಪಾತ್ರೆಗೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಗೋಡಂಬಿ, ಒಣದ್ರಾಕ್ಷಿಯನ್ನು ಹಾಕಿ ಹುರಿದು ಪಾಯಸಕ್ಕೆ ಹಾಕಿದರೆ ರುಚಿಯಾದ ಕಡ್ಲೆಬೇಳೆ ಪಾಯಸ ರೆಡಿ.

ಗಸಗಸೆ ಪಾಯಸ

ಬೇಕಾಗುವ ಸಾಮಗ್ರಿಗಳು: ಗಸೆಗಸೆ - 1/4 ಕಪ್‌, ಬೆಲ್ಲ - 1.5 ಕಪ್, ತೆಂಗಿನತುರಿ - 1/2 ಕಪ್, ಏಲಕ್ಕಿ - 4, ಅಕ್ಕಿ - 1 ಚಮಚ, ಬಾದಾಮಿ - 1 ಚಮಚ, ಗೋಡಂಬಿ - 1 ಚಮಚ, ಪಿಸ್ತಾ - 1 ಚಮಚ, ಒಣದ್ರಾಕ್ಷಿ - 1 ಚಮಚ, ತುರಿದ ಒಣ ಕೊಬ್ಬರಿ - 1/4 ಕಪ್, ತುಪ್ಪ - 2 ಚಮಚ

ತಯಾರಿಸುವ ವಿಧಾನ: ಮೊದಲಿಗೆ ಒಂದು ಚಮಚ ಅಕ್ಕಿ, 1/4 ಕಪ್ ಗಸಗಸೆಯನ್ನ ಒಂದು ಪಾತ್ರೆಗೆ ಹಾಕಿ ಘಮ ಬರುವವರೆಗೂ ಹುರಿದುಕೊಳ್ಳಿ. ಇದನ್ನು ಮಿಕ್ಸಿ ಜಾರಿಗೆ ಹಾಕಿ, ಇದರ ಜೊತೆಗೆ 1 ಚಮಚ ಬಾದಾಮಿ, ಪಿಸ್ತಾ, ಗೋಡಂಬಿ, 1/4 ಕಪ್ ತುರಿದ ಒಣಕೊಬ್ಬರಿ, 4 ಏಲಕ್ಕಿ, 1/2 ಕಪ್‌ ಹಸಿ ತೆಂಗಿನತುರಿ ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಅದೇ ಮಿಶ್ರಣಕ್ಕೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ಬೆಲ್ಲ ಸೇರಿಸಿ ಸ್ಟೌ ಮೇಲಿಟ್ಟು ಕರಗಲು ಬಿಡಿ. ಇನ್ನೊಂದ ಮಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಗೊಡಂಬಿ, ದ್ರಾಕ್ಷಿ ಹುರಿದಿಟ್ಟುಕೊಳ್ಳಿ. ಅದೇ ಪಾತ್ರೆಯಲ್ಲಿ ರುಬ್ಬಿಕೊಂಡ ಮಿಶ್ರಣ ಹಾಕಿ ಕುದಿಯಲು ಬಿಡಿ. ಹೀಗೆ 5 ನಿಮಿಷ ಕುದಿಸಿದ ನಂತರ 2 ಕಪ್ ನೀರು ಸೇರಿಸಿ, ಪುನಃ 5 ರಿಂದ 10 ನಿಮಿಷ ಕುದಿಸಿ. ನಂತರ ಬೆಲ್ಲವನ್ನು ಶೋಧಿಸಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಒಂದು ಕುದಿ ಬರುವ ತನಕ ಕುದಿಸಿದರೆ ಗಸೆಗಸೆ ಪಾಯಸ ಸವಿಯಲು ಸಿದ್ದ. ಪಾಯಸವು ತಣ್ಣಗಾದ ಮೇಲೆ ಸರ್ವಿಂಗ್ ಬೌಲ್ ಗೆ ಹಾಕಿ ಕುಡಿದರೆ ಅದರಂಥಾ ರುಚಿ ಬೇರೊಂದಿಲ್ಲ.

ಸಬ್ಬಕ್ಕಿ ಪಾಯಸ

ಬೇಕಾಗುವ ಸಾಮಗ್ರಿಗಳು: ಸಬ್ಬಕ್ಕಿ - 1/2 ಕಪ್, ಸಕ್ಕರೆ - 1/2 ಕಪ್ ಅಥವಾ ಕಂಡೆನ್ಸ್‌ಡ್ ಮಿಲ್ಕ್ - 200 ಗ್ರಾಂ, ಏಲಕ್ಕಿ ಪುಡಿ - 1/4 ಚಮಚ, ಒಣದ್ರಾಕ್ಷಿ - 2 ಚಮಚ, ಗೋಡಂಬಿ - 2 ಚಮಚ, ಪಿಸ್ತಾ - 2 ಚಮಚ, ಬಾದಾಮಿ - 2 ಚಮಚ

ತಯಾರಿಸುವ ವಿಧಾನ: ಒಂದು ಪಾತ್ರೆಗೆ 4 ಚಮಚ ತುಪ್ಪ ಹಾಕಿ ಬಿಸಿ ಮಾಡಿ 2 ಚಮಚ  ಗೋಡಂಬಿ ತುಂಡು, ಪಿಸ್ತಾ, ಬಾದಾಮಿ ಸ್ವಲ್ಪ ಹುರಿದ ಮೇಲೆ ಒಣದ್ರಾಕ್ಷಿ 2 ಚಮಚ ಹಾಕಿ ಈ ಎಲ್ಲವನ್ನೂ ಹುರಿದು ಒಂದು ಪ್ಲೇಟಿನಲ್ಲಿ ತೆಗೆದು ಇಟ್ಟುಕೊಳ್ಳಿ.

ಈಗ 1/2 ಕಪ್ ಚಿಕ್ಕ ಸಬ್ಬಕ್ಕಿಯನ್ನು ಒಂದು ಪಾತ್ರೆಗೆ ತೆಗೆದುಕೊಂಡು ಚೆನ್ನಾಗಿ ತೊಳೆದು ಡ್ರೈ ಫ್ರೂಟ್ ಹುರಿದ ಪಾತ್ರೆಯಲ್ಲಿ ಉಳಿದ ತುಪ್ಪಕ್ಕೆ ಸಬ್ಬಕ್ಕಿಯನ್ನು ಹಾಕಿ 1 ನಿಮಿಷ ಸಣ್ಣ ಉರಿಯಲ್ಲಿ ಹುರಿದು 1.5 ಕಪ್ ನೀರು ಹಾಕಿ ತಳ ಹಿಡಿಯದಂತೆ ತಿರುವುತ್ತಾ ಚೆನ್ನಾಗಿ ಬೇಯಿಸಿ.

ಸಬ್ಬಕ್ಕಿ ಚೆನ್ನಾಗಿ ಬೆಂದ ಮೇಲೆ 1/2 ಲೀಟರ್ ಅಷ್ಟು ಬಿಸಿ ಹಾಲನ್ನ ಹಾಕಿ ತಿರುವಿಕೊಂಡು 1/2 ಕಪ್ ಸಕ್ಕರೆ ಅಥವಾ ಕಂಡೆನ್ಸ್ಡ್‌ ಮಿಲ್ಕ್ ಹಾಕಿ ಚೆನ್ನಾಗಿ ಒಂದು ಕುದಿ ಬರುವ ತನಕ ಕುದಿಸಿ 1/4 ಚಮಚ ಏಲಕ್ಕಿ ಪೌಡರ್, ಹುರಿದಿಟ್ಟ ಡ್ರೈ ಫ್ರೂಟ್ಸ್ ಹಾಕಿ ಕಲಸಿದರೆ ರುಚಿಯಾದ ಸಬ್ಬಕ್ಕಿ ಪಾಯಸ ಸವಿಯಲು ಸಿದ್ದ.

ರವೆ ಪಾಯಸ

ಬೇಕಾಗುವ ಸಾಮಗ್ರಿಗಳು: ರವೆ 1/2 ಕಪ್, 1 ಕಪ್ ಬೆಲ್ಲ, ಗೋಡಂಬಿ 6, ಕಟ್ ಮಾಡಿದ ಪಿಸ್ತಾ 8, ಕಟ್ ಮಾಡಿದ ಬಾದಾಮಿ 8, ಒಣದ್ರಾಕ್ಷಿ 10, 1 ಚಮಚ ಏಲಕ್ಕಿ ಪುಡಿ

ತಯಾರಿಸುವ ವಿಧಾನ: ಒಂದು ಪ್ಯಾನ್‌ಗೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ 5ರಿಂದ 6 ಗೋಡಂಬಿ , 7 ರಿಂದ 8 ಕಟ್ ಮಾಡಿದ ಪಿಸ್ತಾ, 8 ಕಟ್ ಮಾಡಿದ ಬಾದಾಮಿ ಹಾಕಿ ಸ್ವಲ್ಪ ಹುರಿದು 10 ಒಣದ್ರಾಕ್ಷಿ ಹಾಕಿ ಚೆನ್ನಾಗಿ ಹುರಿದು ತೆಗೆದಿಟ್ಟು ಕೊಳ್ಳಿ.

ಈಗ ಅದೇ ಪ್ಯಾನ್‌ಗೆ ಉಳಿದ ತುಪ್ಪದಲ್ಲಿ 1/2 ಕಪ್ ಚಿರೋಟಿ ರವೆ ಹಾಕಿ ಚೆನ್ನಾಗಿ ಪರಿಮಳ ಬರುವ ತನಕ ಮೀಡಿಯಂ ಉರಿಯಲ್ಲಿ ಹುರಿದು ಪ್ಲೇಟಿಗೆ ತೆಗೆದು ಇಟ್ಟುಕೊಳ್ಳಿ. ಅದೇ ಪ್ಯಾನ್‌ನಲ್ಲಿ 1 ಕಪ್ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕರಗಿಸಿಕೊಂಡು ಶೋಧಿಸಿ ಇಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಮುಕ್ಕಾಲು ಲೀಟರ್ ಹಾಲು ಹಾಕಿ ಕಾಯಿಸಿ 2 ಚಮಚ ಅರ್ಧ ಗಂಟೆ ನೆನೆಸಿದ ಕಡ್ಲೆ ಬೇಳೆಯನ್ನ ಹಾಕಿ ಬೇಯಿಸಿ ಶೋಧಿಸಿದ ಬೆಲ್ಲ ಹಾಕಿ ಚೆನ್ನಾಗಿ ಕಲಕಿ ಹುರಿದಿಟ್ಟ ರವೆ ಹಾಕಿ 2 ನಿಮಿಷ ಬೇಯಿಸಿ. ಹುರಿದಿಟ್ಟ ಡ್ರೈ ಫ್ರೂಟ್ಸ್, 1 ಚಮಚ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿದರೆ ರವೆ ಪಾಯಸ ಸವಿಯಲು ಸಿದ್ದ.

ಶ್ಯಾವಿಗೆ ಪಾಯಸ

ಬೇಕಾಗುವ ಸಾಮಗ್ರಿಗಳು: ಶ್ಯಾವಿಗೆ - 1 ಕಪ್, ಹಾಲು - 4 ಕಪ್, ಸಕ್ಕರೆ - 1 ಕಪ್, ಗೋಡಂಬಿ - 8, ಒಣದ್ರಾಕ್ಷಿ - 10, ತುಪ್ಪ - 4 ಚಮಚ, ಏಲಕ್ಕಿ ಪುಡಿ - 1 ಚಮಚ, ಕೇಸರಿ - 8 ಎಸಳು

ತಯಾರಿಸುವ ವಿಧಾನ: ಒಂದು ಪ್ಯಾನ್‌ಗೆ 2 ಚಮಚ ತುಪ್ಪ ಹಾಕಿ ಕಟ್ ಮಾಡಿದ 8 ಗೋಡಂಬಿ ಹಾಕಿ ಗೋಲ್ಡನ್ ಬ್ರೌನ್ ಬರುವ ತನಕ ಹುರಿದು 10 ಒಣದ್ರಾಕ್ಷಿ ಹಾಕಿ ಫ್ರೈ ಮಾಡಿ ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. ಅದೇ ಪ್ಯಾನ್‌ಗೆ ಇನ್ನೂ 2 ಚಮಚ ತುಪ್ಪ ಹಾಕಿ 1 ಕಪ್ ಶ್ಯಾವಿಗೆ ಹಾಕಿ ಗೋಲ್ಡನ್ ಬ್ರೌನ್ ಬರುವ ತನಕ ಹುರಿದು 1/2 ಲೀಟರ್ ಅಷ್ಟು ಬಿಸಿ ಹಾಲನ್ನ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಶ್ಯಾವಿಗೆ ಬೆಂದ ಮೇಲೆ 1 ಕಪ್ ಸಕ್ಕರೆ ಹಾಕಿ ಮಿಕ್ಸ್ ಮಾಡಿ ಒಂದು ಕುದಿ ಬರಲು ಬಿಡಿ. ಈಗ ಇನ್ನೊಂದು ಕಪ್ ಹಾಲು, ಅರ್ಧ ಗಂಟೆ ಹಾಲಲ್ಲಿ ನೆನೆಸಿ ಇಟ್ಟ 8 ಕೇಸರಿ ಎಸಳು ಹಾಕಿ ಕುದಿಸಿ ಹುರಿದಿಟ್ಟ ಒಣದ್ರಾಕ್ಷಿ, ಗೋಡಂಬಿ ಹಾಕಿ ಕಲಸಿ ಕೊನೆಯಲ್ಲಿ 1 ಚಮಚ ಏಲಕ್ಕಿ ಪುಡಿ ಹಾಕಿದರೆ ರುಚಿಯಾದ ಘಮ ಘಮಿಸುವ ಶ್ಯಾವಿಗೆ ಪಾಯಸ ರೆಡಿ.

ಗೋಧಿ ನುಚ್ಚಿನ ಪಾಯಸ ( ಗೋಧಿ ಹುಗ್ಗಿ)

ಬೇಕಾಗುವ ಸಾಮಗ್ರಿಗಳು: ಗೋಧಿನುಚ್ಚು - 1 ಕಪ್, ಬೆಲ್ಲ - ಒಂದೂಕಾಲು ಕಪ್, ಹಸಿ ತೆಂಗಿನಕಾಯಿ ತುರಿ - 2ಕಪ್, ಏಲಕ್ಕಿ ಪುಡಿ - 1 ಚಮಚ, ಉಪ್ಪು - 1/4 ಚಮಚ, ತುಪ್ಪ - 4 ಚಮಚ, ಗೋಡಂಬಿ - 20, 

ತಯಾರಿಸುವ ವಿಧಾನ: ಮೊದಲಿಗೆ ಒಂದು ಬೌಲ್‌ಗೆ 1 ಕಪ್ ಗೋಧಿ ನುಚ್ಚನ್ನು ಹಾಕಿ ಚೆನ್ನಾಗಿ ತೊಳೆದು, ಕುಕ್ಕರ್‌ನಲ್ಲಿ ಹಾಕಿ 4 ಕಪ್ ನೀರು ಹಾಕಿ ನಾಲ್ಕು ವಿಶಲ್ ಬರುವ ತನಕ ಬೇಯಿಸಿಕೊಳ್ಳಿ. ಗೋಧಿ ನುಚ್ಚು ಚೆನ್ನಾಗಿ ಬೆಂದಿರಬೇಕು.

ಒಂದು ಮಿಕ್ಸ್‌ ಜಾರ್‌ಗೆ 2 ಕಪ್ ಫ್ರೆಶ್ ತೆಂಗಿನತುರಿ ಹಾಕಿ ಸ್ವಲ್ಪ ಅಂದರೆ 1 ಕಪ್ ನೀರು ಹಾಕಿ ನುಣ್ಣಗೆ ರುಬ್ಬಿ . ಒಂದು ಜರಡಿ ಸಹಾಯದಿಂದ ಸೋಸಿ ತೆಂಗಿನ ಹಾಲು ತೆಗೆದಿಟ್ಟುಕೊಳ್ಳಿ. ಇದೇ ರುಬ್ಬಿದ ಕಾಯಿತುರಿಗೆ ಇನ್ನೊಮ್ಮೆ ಒಂದು ಕಪ್ ನೀರು ಹಾಕಿ ರುಬ್ಬಿ ಮತ್ತೆ ತೆಂಗಿನಕಾಯಿ ಹಾಲು ತೆಗೆದಿಟ್ಟುಕೊಳ್ಳಿ.

ಈಗ ಒಂದು ಪಾತ್ರೆಗೆ ಒಂದು ಕಾಲು ಕಪ್ ಪುಡಿ ಬೆಲ್ಲ ಹಾಕಿ 1 ಕಪ್ ನೀರು ಹಾಕಿ ಬೆಲ್ಲ ಕರಗುವ ತನಕ ಕುದಿಸಿ ಒಂದು ಬೌಲ್‌ಗೆ ಸೋಸಿ ಇಟ್ಟುಕೊಳ್ಳಿ. ಇದರಿಂದ ಬೆಲ್ಲದಲ್ಲಿ ಇರೋ ಕಸ ಮತ್ತು ಕಲ್ಲಿನ ಅಂಶವನ್ನು ತೆಗಿಬೋದು.

ಕರಗಿಸಿದ ಬೆಲ್ಲವನ್ನು ಪಾಯಸ ಮಾಡುವ ಪಾತ್ರೆಗೆ ಹಾಕಿ ಅದಕ್ಕೆ ಮೊದಲೇ ಬೇಯಿಸಿ ಇಟ್ಟುಕೊಂಡ ಗೋಧಿ ನುಚ್ಚನ್ನು ಹಾಕಿ ಚೆನ್ನಾಗಿ ಕಲಸಿ ಕಾಲು ಚಮಚ ಉಪ್ಪು ಹಾಕಿ ಕಲಸಿ ಒಂದು ಕುದಿ ಬಂದ ಮೇಲೆ ಕಾಯಿ ಹಾಲು, 1 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ ಸ್ಟೌ ಆಫ್ ಮಾಡಿ 1 ಚಮಚ ಏಲಕ್ಕಿ ಪುಡಿ ಹಾಕಿ ಕಲಸಿ.

ಕೊನೆಯಲ್ಲಿ ಒಂದು ಒಗ್ಗರಣೆ ಸೌಟಿನಲ್ಲಿ 4 ಚಮಚ ತುಪ್ಪ ಹಾಕಿ 20 ಕಟ್ ಮಾಡಿದ ಗೋಡಂಬಿ ಹಾಕಿ ಹುರಿದು ಪಾಯಸಕ್ಕೆ ಹಾಕಿದರೆ ರುಚಿಯಾದ ಗೋಧಿ ನುಚ್ಚಿನ ಪಾಯಸ ಸವಿಯಲು ಸಿದ್ದ.

 

 

Whats_app_banner