Makara Sankranti 2024: ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗೋರು ಈಗಲೇ ಪ್ಲಾನ್ ಮಾಡಿ; ಇಲ್ಲಿದೆ ಸಂಕ್ರಾಂತಿಯ ದಿನಾಂಕ, ಮಹತ್ವ, ಆಚರಣೆಯ ವಿವರ
Makara Sankranti 2024 Date: ಈ ಬಾರಿ ಮಕರ ಸಂಕ್ರಾಂತಿ ಯಾವ ದಿನದಂದು ಬಂದಿದೆ, ಇದರ ಆಚರಣೆ ಹೇಗೆ ಎಂಬುದರ ವಿವರ ಇಲ್ಲಿದೆ. ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗೋರು ಈಗಲೇ ಪ್ಲಾನ್ ಮಾಡಿ.
ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ಕೂಡ ಒಂದು. ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರಿನಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿಹಬ್ಬ ಹಾಗೂ ಸಂಕ್ರಾಂತಿ ಹಬ್ಬ ಎಂದು ಆಚರಿಸುತ್ತಾರೆ. ಈ ಬಾರಿ ಮಕರ ಸಂಕ್ರಾಂತಿ ಯಾವ ದಿನದಂದು ಬಂದಿದೆ, ಇದರ ಆಚರಣೆ ಹೇಗೆ ಎಂಬುದರ ವಿವರ ಇಲ್ಲಿದೆ.
2024ರ ಸಂಕ್ರಾಂತಿ ಹಬ್ಬದ ದಿನಾಂಕ
ಹಿಂದೂ ಪಂಚಾಂಗದ ಪ್ರಕಾರ ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುತ್ತಾ ಬರಲಾಗಿದೆ. ಹೆಚ್ಚಿನದಾಗಿ ಪ್ರತಿವರ್ಷ ಜನವರಿ 14 ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಸಂಕ್ರಾಂತಿ ಹಬ್ಬ ಜನವರಿ 14 ರ ಬದಲು ಜನವರಿ 15 ರಂದು (ಸೋಮವಾರ) ಬಂದಿದೆ. ಏಕೆಂದರೆ ಜನವರಿ 14 ರಂದು ಮಧ್ಯಾಹ್ನ 2:44 ಕ್ಕೆ ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯನು ಪ್ರವೇಶಿಸುತ್ತಾನೆ. ಜನವರಿ 14 ರ ಮಧ್ಯಾಹ್ನ 2:44ರ ಮೇಲೆ ಹಬ್ಬ ಆಚರಿಸಲು ಆಗುವುದಿಲ್ಲ. ಹೀಗಾಗಿ ಜನವರಿ 15ರಂದು ಆಚರಿಸಬಹುದಾಗಿದೆ.
ಸಂಕ್ರಾಂತಿ ಹಬ್ಬದ ಮಹತ್ವ
ಸೂರ್ಯನು ಮಕರ ರಾಶಿಗೆ ಪ್ರವೇಶಸಿಸುವುದು ಒಂದು ಕಡೆಯಾದರೆ, ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನ ಇದಾಗಿದೆ. ಇದರ ಪ್ರಕಾರ ಮೊದಲ ಆರು ತಿಂಗಳ ಕಾಲ ಉತ್ತರಾಯಣವಾಗಿದ್ದು, ಈ 6 ತಿಂಗಳ ಕಾಲ ಹೆಚ್ಚು ಬೆಳಕು ಇರುತ್ತದೆ. ಹಾಗೂ ಉಳಿದ 6 ತಿಂಗಳು ಅಂದರೆ ಜೂನ್ 15 ರಿಂದ ದಕ್ಷಿಣಾಯಣ ಆರಂಭವಾಗಿ ಆಗ ಬೆಳಕು ಕಡಿಮೆ ಇರುತ್ತದೆ. ಪುರಾಣದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ.
ಇದಕ್ಕೆ ಸಂಬಂಧಿಸಿದಂತೆ ಮಹಾಭಾರತದ ಒಂದು ಕಥೆ ಪ್ರಚಲಿತದಲ್ಲಿದೆ. ಭೀಷ್ಮನು ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸಿದರೂ ದಕ್ಷಿಣಾಯನದಲ್ಲಿ ದೇಹತ್ಯಾಗ ಮಾಡದೆ, ಉತ್ತರಾಯಣದ ಅಷ್ಟಮಿ ದಿನಕ್ಕಾಗಿ ಕಾಯುತ್ತಾನೆ. ಹಾಗೆಯೇ ಬ್ರಹ್ಮನು ಜಗತ್ತನ್ನು ಸೃಷ್ಟಿಸಲು ಆರಂಭಿಸಿದ್ದು, ಶಿವ-ಪಾರ್ವತಿ ಮದುವೆಯಾಗಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಎಲ್ಲವೂ ಉತ್ತರಾಯಣದಲ್ಲಿ. ಈ ಸಮಯ ದೇವಾನುದೇವತೆಗಳಿಗೆ ಬಹಳ ಪ್ರಿಯವಾದುದು. ಆದ್ದರಿಂದ ಉತ್ತರಾಯಣವನ್ನು ಪುಣ್ಯಕಾಲ ಎಂದು ಪರಿಗಣಿಸಲಾಗಿದೆ.
ಸಂಕ್ರಾಂತಿ ಹಬ್ಬದ ಆಚರಣೆ
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು ಎಂಬ ಮಾತಿದೆ. ಮಕರ ಸಂಕ್ರಾಂತಿ ಹಬ್ಬದ ದಿನ ಎಳ್ಳು ಬೆಲ್ಲ ಹಾಗೂ ಸಂಕ್ರಾಂತಿ ಕಾಳನ್ನು ಆತ್ಮೀಯರಿಗೆ ಹಂಚಲಾಗುತ್ತದೆ. ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವುದು, ಗಾಳಿಪಟ ಹಾರಿಸುವುದು, ಹಸುಗಳಿಗೆ ಕಿಚ್ಚು ಹಾಯಿಸುವುದನ್ನು ಈ ದಿನ ಮಾಡಲಾಗುತ್ತದೆ. ಇದಲ್ಲದೇ ಗಂಗಾ ನದಿ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಹಿಂದೂ ನಂಬಿಕೆಗಳ ಪ್ರಕಾರ, ಗಂಗೆ ಈ ವಿಶೇಷ ದಿನದಂದು ಭೂಮಿಗೆ ಬಂದಳು. ಹೀಗಾಗಿ ಈ ದಿನ ಗಂಗಾ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಎಂದು ನಂಬಲಾಗಿದೆ. ಇದರ ಜೊತೆ ಈ ದಿನ ದಾನ ಮಾಡಿದರೆ ಒಳಿತು.
ಉತ್ತರ ಭಾರತದ ಕೆಲವೆಡೆ ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಹಳದಿ ವಸ್ತ್ರವನ್ನು ಧರಿಸಿ ಮತ್ತು ಸೂರ್ಯನಿಗೆ ನೀರನ್ನು ಅರ್ಪಿಸುತ್ತಾರೆ. ನೈವೇದ್ಯವಾಗಿ, ಹರಿಯುವ ಹೊಳೆಯಲ್ಲಿ ಎಳ್ಳನ್ನು ತೇಲಿಸಿ ಬಿಟ್ಟು ಸೂರ್ಯ ಚಾಲೀಸಾ ಪಠಿಸುತ್ತಾರೆ.