ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದವರು ಆದಿ ಸುಬ್ರಹ್ಮಣ್ಯನ ದರ್ಶನ ಪಡೆಯಲೇಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದವರು ಆದಿ ಸುಬ್ರಹ್ಮಣ್ಯನ ದರ್ಶನ ಪಡೆಯಲೇಬೇಕು

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದವರು ಆದಿ ಸುಬ್ರಹ್ಮಣ್ಯನ ದರ್ಶನ ಪಡೆಯಲೇಬೇಕು

ಸುಬ್ರಹ್ಮಣ್ಯ ದೇವರ ಸನ್ನಿಧಿಗೆ ಬಂದರೆ, ಆದಿಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ವಲ್ಮೀಕ ರೂಪದಲ್ಲಿರುವ (ಹುತ್ತ) ದೇವರ ದರ್ಶನ ಮಾಡಿ, ಮೃತ್ತಿಕಾ ಪ್ರಸಾದ ಸ್ವೀಕರಿಸಬೇಕು ಎಂಬ ನಂಬಿಕೆ ಇದೆ. (ಬರಹ: ಹರೀಶ್ ಮಾಂಬಾಡಿ)

ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪ ಇರುವ ಆದಿ ಸುಬ್ರಹ್ಮಣ್ಯ
ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪ ಇರುವ ಆದಿ ಸುಬ್ರಹ್ಮಣ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಸುಬ್ರಹ್ಮಣ್ಯ ನಾಗಾರಾಧನೆಯ ಶ್ರೇಷ್ಠವಾದ ಪ್ರದೇಶಗಳಲ್ಲೊಂದು. ಇಲ್ಲಿ ಸ್ವತಃ ಸುಬ್ರಹ್ಮಣ್ಯ ದೇವರು ಸರ್ಪಗಳ ರಾಜ ವಾಸುಕಿ ಮತ್ತು ಆದಿಶೇಷನ ಜೊತೆ ನೆಲೆ ನಿಂತಿದ್ದಾನೆ ಎಂಬ ಪ್ರತೀತಿ. ಹೀಗಾಗಿ ದೇಶದ ಹಲವು ಕಡೆಗಳಿಂದ ವಿಶೇಷವಾಗಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಹಲವು ಭಾಗಗಳು, ಮಹಾರಾಷ್ಟ್ರ ಸಹಿತ ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥವನ್ನು ದೇವರಲ್ಲಿ ಕೋರುತ್ತಾರೆ. ಇಷ್ಟಾರ್ಥ ಈಡೇರಿದ ತೃಪ್ತಿಗೆ ಕಾಣಿಕೆ ಸಲ್ಲಿಸುತ್ತಾರೆ. ಸುಬ್ರಹ್ಮಣ್ಯ ದೇವರ ಸನ್ನಿಧಿಗೆ ಬಂದರೆ, ಆದಿಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ವಲ್ಮೀಕ ರೂಪದಲ್ಲಿರುವ (ಹುತ್ತ) ದೇವರ ದರ್ಶನ ಮಾಡಿ, ಮೃತ್ತಿಕಾ ಪ್ರಸಾದ ಸ್ವೀಕರಿಸಬೇಕು ಎಂಬ ನಂಬಿಕೆ ಇದೆ.

ಸರ್ಪಗಳ ಸಂಕುಲದ ರಕ್ಷಣೆಗೆ ಸುಬ್ರಹ್ಮಣ್ಯ ಸ್ವಾಮಿ ನೆಲೆನಿಂತ ಎಂಬ ನಂಬಿಕೆ ಇಲ್ಲಿದೆ. ನಾಗರೂಪದಲ್ಲಿ ಸುಬ್ರಹ್ಮಣ್ಯನ ಆರಾಧನೆ ಇಲ್ಲಿ ನಡೆಯುತ್ತದೆ. ಸಕಲ ನಾಗಸಂಕುಲವೇ ಇಲ್ಲಿ ಹರಿದಾಡುತ್ತಿದೆ ಎಂಬ ನಂಬಿಕೆಯೂ ಇದೆ. ಚರ್ಮರೋಗ ನಿವಾರಣೆ, ಸಂತಾನಪ್ರಾಸ್ತಿಗಾಗಿ ಇಲ್ಲಿಗೆ ಬರುತ್ತಾರೆ. ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಉತ್ತರಕ್ಕೆ ಸುಮಾರು 500 ಮೀಟರ್ ದೂರದಲ್ಲಿ ಆದಿಸುಬ್ರಹ್ಮಣ್ಯ ದೇವಸ್ಥಾನವಿದೆ.

ದೇವಾಲಯದ ಹೊರಪ್ರಾಕಾರದ ಬಡಗುಪಾರ್ಶ್ವದಲ್ಲಿ ಆದಿಸುಬ್ರಹ್ಮಣ್ಯಕ್ಕೆ ಒಂದು ರಸ್ತೆಯು ಹೋಗುತ್ತದೆ. ಈ ರಸ್ತೆಯಲ್ಲಿ ಸುಮಾರು ಒಂದು ಫರ್ಲಾಂಗ್ ದೂರ ಹೋಗುವಾಗ ದರ್ಪಣ ತೀರ್ಥದ ಎದುರು ಪಕ್ಕದಲ್ಲಿ ಆದಿಸುಬ್ರಹ್ಮಣ್ಯ ಗುಡಿ ಕಾಣಸಿಗುತ್ತದೆ. ಗರ್ಭಗೃಹದೊಳಗೆ ದೊಡ್ಡ ವಲ್ಮೀಕವು ನಮಗೆ ಗೋಚರವಿದ್ದು, ಇದಕ್ಕೆ ನಿತ್ಯಪೂಜೆ, ನಂದಾದೀಪ, ನೈವೇದ್ಯಾದಿಗಳು ನಡೆಯುತ್ತವೆ. ಕ್ಷೇತ್ರದರ್ಶನಕ್ಕೆ ಬಂದ ಭಕ್ತರು ಆದಿಸುಬ್ರಹ್ಮಣ್ಯನ ದರ್ಶನ ಮಾಡದೆ ಹೋಗುವುದಿಲ್ಲ. ಪ್ರತಿದಿನವೂ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆ ಆಗುವ ಮೊದಲೇ ಇಲ್ಲಿ ನೈವೇದ್ಯ ಪೂಜಾದಿಗಳು ನಡೆಯುತ್ತವೆ. ಕ್ಷೇತ್ರಕ್ಕೆ ಭೇಟಿಯ ಸಂಪೂರ್ಣ ಫಲ ಲಭಿಸಬೇಕಾದರೆ ಆದಿಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂಬ ನಂಬಿಕೆ ಇದೆ.

ಪಕ್ಕದಲ್ಲೇ ಇರುವ ದರ್ಪಣತೀರ್ಥದಲ್ಲಿ ಮಿಂದು, ಅಥವಾ ನೀರು ಪ್ರೋಕ್ಷಿಸಿ ದೇವಾಲಯಕ್ಕೆ ಭೇಟಿ ನೀಢುವ ಭಕ್ತರಿಗೆ ಇಲ್ಲಿ ಪ್ರಶಾಂತ, ಹಸಿರು ವಾತಾವರಣ ಗೋಚರಿಸುತ್ತದೆ. ಪವಿತ್ರ ಹುತ್ತದ ಮಣ್ಣು ಅಥವಾ ಮೂಲಮೃತ್ತಿಕಾ ಪ್ರಸಾದಕ್ಕೆ ವಿಶೇಷ ಮಹತ್ವವಿದೆ. ಇದನ್ನು ವರ್ಷಕ್ಕೊಮ್ಮೆ ಅಂದರೆ ಜಾತ್ರಾ ಸಂದರ್ಭ ತೆಗೆಯಲಾಗುತ್ತದೆ, ಬಳಿಕ ವರ್ಷವಿಡೀ ವಿತರಿಸಲಾಗುತ್ತದೆ. ಪವಿತ್ರವಾಗಿರುವ ಈ ಮೃತ್ತಿಕಾ ಪ್ರಸಾದದಲ್ಲಿ ಔಷಧೀಯ ಗುಣಗಳೂ ಇದೆ ಎಂಬ ನಂಬಿಕೆ ಇದೆ.

ಇದರ ಉಪಯೋಗಗಳ ಕುರಿತು ಹಲವು ನಂಬಿಕೆಗಳಿವೆ. ಚಿಟಿಕೆಯಷ್ಟು ಪ್ರಸಾದವನ್ನು ನೀರಿನೊಂದಿಗೆ ಸೇವಿಸಿದರೆ, ಚರ್ಮರೋಗ ಗುಣವಾಗುತ್ತದೆ. ಸರ್ಪಭಯ ಹೊಂದಿದವರು ಹಣೆಯಲ್ಲಿ ಧರಿಸುವುದರಿಂದ ಸರ್ಪಭೀತಿ ನಾಶವಾಗುತ್ತದೆ. ತೊದಲುವವರಿಗೆ ಚಿಟಿಕೆ ಮೃತ್ತಿಕಾಪ್ರಸಾದ ಹಾಕಿ ಹಾಲಿನಲ್ಲಿ ಕುಡಿದರೆ, ನಿವಾರಣೆಯಾಗುತ್ತದೆ. ಮಂಗಳವಾರ ಸುಬ್ರಹ್ಮಣ್ಯ ದೇವರ ಪೂಜೆ ಮಾಡಿ ಚಿಟಿಕೆ ಪ್ರಸಾದ ಹಾಕಿ ಕುಡಿದರೆ ಸಂತಾನಪ್ರಾಪ್ತಿ, ಅಲ್ಲದೆ, ಮೃತ್ತಿಕಾಪ್ರಸಾದದಿಂದಾಗಿ ವಿವಾಹಭಾಗ್ಯ, ನೆನಪಿನ ಶಕ್ತಿ ವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಭಕ್ತರು ಬಲವಾಗಿ ನಂಬುತ್ತಾರೆ.

ಬರಹ: ಹರೀಶ ಮಾಂಬಾಡಿ

(ನಾಗರ ಪಂಚಮಿ ಕುರಿತ ಮತ್ತಷ್ಟು ಬರಹಗಳಿಗೆ kannada.hindustantimes.com/topic/culture ಲಿಂಕ್ ಕ್ಲಿಕ್ ಮಾಡಿ)