ಭಕ್ತರ ಆರಾಧ್ಯ ದೈವ ನಾಗಲಮಡಿಕೆ ಸುಬ್ರಮಣ್ಯ ಸ್ವಾಮಿ; ತೀಟೆ ನಾಗಪ್ಪ ಎಂದರೆ ಸಾಮಾನ್ಯ ಅಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಭಕ್ತರ ಆರಾಧ್ಯ ದೈವ ನಾಗಲಮಡಿಕೆ ಸುಬ್ರಮಣ್ಯ ಸ್ವಾಮಿ; ತೀಟೆ ನಾಗಪ್ಪ ಎಂದರೆ ಸಾಮಾನ್ಯ ಅಲ್ಲ

ಭಕ್ತರ ಆರಾಧ್ಯ ದೈವ ನಾಗಲಮಡಿಕೆ ಸುಬ್ರಮಣ್ಯ ಸ್ವಾಮಿ; ತೀಟೆ ನಾಗಪ್ಪ ಎಂದರೆ ಸಾಮಾನ್ಯ ಅಲ್ಲ

ಚರ್ಮ ರೋಗಿಗಳು ಪೂಜೆ ಸಲ್ಲಿಸಿದರೆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿಗೆ ಕಿವಿ ಸೋರುತ್ತಿದ್ದರೆ, ಮೈಮೇಲೆ ಗಂದೆ, ಬೊಕ್ಕೆಗಳಾದರೆ ಇಲ್ಲಿ ಎಂಜಲು ಎಲೆ ತೆಗೆಯುವ ಹರಕೆ ಹೊರುತ್ತಾರೆ. (ಬರಹ: ಈಶ್ವರ್ ಎಂ)

ತುಮಕೂರು ಜಿಲ್ಲೆ ನಾಗಲಮಡಿಕೆಯ ನಾಗಪ್ಪ ದೇವರು
ತುಮಕೂರು ಜಿಲ್ಲೆ ನಾಗಲಮಡಿಕೆಯ ನಾಗಪ್ಪ ದೇವರು

ತುಮಕೂರು: ದೇವಾಲಯಗಳು ಅಂದ್ರೆ ಭಕ್ತಿ, ನೆಮ್ಮದಿ ನೀಡುವ ಧಾರ್ಮಿಕ ಕೇಂದ್ರಗಳು. ಭಕ್ತರು ತಮ್ಮ ನೆಚ್ಚಿನ ದೇವರು, ದೇವಾಲಯಗಳಿಗೆ ಹೋಗಿ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಿ ಭಕ್ತಿ ಸರ್ಮಿಸುವುದು ಅನಾದಿ ಕಾಲದಿಂದಲೂ ನಡೆದು ಬಂದಿದೆ, ಈ ಗಲು ಸಹ ನೆಚ್ಚಿನ ದೇಗುಲಗಳಿಗೆ ಹೋಗಿ ಪೂಜೆ ಸಲ್ಲಿಸುವುದು ವಾಡಿಕೆ. ಭಕ್ತರ ನೆಚ್ಚಿನ ದೇಗುಲಗಳಲ್ಲಿ ಪಾವಗಡ ತಾಲ್ಲೂಕು ನಾಗಲಮಡಿಕೆಯ ಸುಬ್ರಮಣ್ಯ ಸ್ವಾಮಿ ದೇಗುಲವೂ ಒಂದು. ನಾಗಲಮಡಿಕೆಯಲ್ಲಿರುವ ಸುಬ್ರಮಣ್ಯ ಸ್ವಾಮಿ ದೇವಾಲಯ ಹಲವು ವೈಶಿಷ್ಟ್ಯ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ, ಉತ್ತರ ಪಿನಾಕಿನಿ ನದಿಯ ದಂಡೆಯಲ್ಲಿರುವ ಸುಬ್ರಹ್ಮಣ್ಯ ದೇವಾಲಯಕ್ಕೆ ಅಪಾರ ಸಂಖ್ಯೆ ಭಕ್ತರಿದ್ದಾರೆ.

ಈ ದೇವಾಲಯ ನಿರ್ಮಾಣದ ಹಿಂದೆ ಒಂದು ರೋಚಕ ಕಥೆ ಇದೆ. ಹಿಂದೆ ಅಗ್ರಹಾರವಾಗಿದ್ದ ನಾಗಲಮಡಿಕೆಯಲ್ಲಿ ಅನ್ನಂಭಟ್ಟರೆಂಬ ಋತ್ವಿಕರು ವಾಸಿಸುತ್ತಿದ್ದರು. ಅವರ ಮನೆದೇವರು ಕುಕ್ಕೆ ಸುಬ್ರಹ್ಮಣ್ಯ. ಪ್ರತಿವರ್ಷ ಅವರು ಕುಕ್ಕೆ ರಥೋತ್ಸವಕ್ಕೆ ಹೋಗುತ್ತಿದ್ದರು. ಹಲವು ವರ್ಷಗಳ ಬಳಿಕ ವಯೋವೃದ್ಧರಾದ ಅನ್ನಂಭಟ್ಟರು ಕುಕ್ಕೆಗೆ ಹೊರಟರಾದರೂ ರಥ ಎಳೆಯುವ ವೇಳೆಗೆ ಕುಕ್ಕೆ ತಲುಪಲು ಸಾಧ್ಯವಾಗದೆ ನೊಂದರು. ಸುಬ್ರಹ್ಮಣ್ಯನಿಗೆ ನನ್ನ ಸೇವೆ ಬೇಡವಾಯ್ತೇ ಎಂದು ಮರುಗಿದರು. ಭಕ್ತನ ಮೊರೆ ಕೇಳಿದ ಸುಬ್ರಹ್ಮಣ್ಯ ಇತ್ತ ಕುಕ್ಕೆಯಲ್ಲಿ ಎಷ್ಟೇ ರಥ ಎಳೆದರು ರಥ ಚಲಿಸದಂತೆ ಮಾಡಿದ. ವಟು ರೂಪದಲ್ಲಿ ಬಂದು, ಭಕ್ತ ಶ್ರೇಷ್ಠರೊಬ್ಬರು ಬರುತ್ತಿದ್ದಾರೆ. ಅವರು ಬಂದು ಹಗ್ಗ ಹಿಡಿಯುವ ತನಕ ರಥ ಚಲಿಸದು ಎಂದನಂತೆ. ಅನ್ನಂಭಟ್ಟರು ಬಂದು ಹಗ್ಗ ಹಿಡಿಯುತ್ತಿದ್ದಂತೆ ರಥ ಚಲಿಸಿತು.

ಆಗ ಅದೇ ವಟುರೂಪಿ ಸುಬ್ರಹ್ಮಣ್ಯ ನಿಮಗೆ ವಯಸ್ಸಾಗಿದೆ ಇನ್ನು ಮುಂದೆ ನೀವು ಇಲ್ಲಿಗೆ ಬರುವುದು ಬೇಡ, ನೀವಿರುವಲ್ಲಿಗೆ ನಾನು ಬರುತ್ತೇನೆ ಅಲ್ಲಿಯೇ ರಥೋತ್ಸವ ಮಾಡಿ ಎಂದು ಅಪ್ಪಣೆ ಕೊಡಿಸಿದನಂತೆ. ಜೊತೆಗೆ ಕುಕ್ಕೆ ದೇವಾಲಯದಲ್ಲಿದ್ದ ನಾಗಾಭರಣವನ್ನು ಸಹ ಕೊಡಿಸಿದನಂತೆ, ಊರಿಗೆ ಬಂದ ಅನ್ನಂಭಟ್ಟರು ಉತ್ತರ ಪಿನಾಕಿನಿ ತೀರದಲ್ಲಿ ಉಳುಮೆ ಮಾಡಿಸುತ್ತಿದ್ದಾಗ ನೇಗಿಲು ಅಲುಗಾಡದೆ ನಿಂತುಬಿಟ್ಟಿತು. ಅಲ್ಲಿ ಅಗೆದು ನೋಡಿದಾಗ ನಾಗರಕಲ್ಲು ಸಿಕ್ಕಿತು. ಅನ್ನಂಭಟ್ಟರು ಆ ಕಲ್ಲನ್ನೇ ಸುಬ್ರಹ್ಮಣ್ಯ ಎಂದು ಪ್ರತಿಷ್ಠಾಪಿಸಿದರು. ನೇಗಿಲಿಗೆ ನಾಗರ ಕಲ್ಲು ಸಿಕ್ಕ ಕಾರಣ ಈ ಊರಿಗೆ ನಾಗಲಮಡಿಕೆ ಎಂಬ ಹೆಸರು ಬಂದಿದೆ ಎಂದು ಹೇಳುತ್ತೆ ದಂತಕಥೆ.

ಅದ್ದೂರಿ ರಥೋತ್ಸವ

ಪ್ರತಿವರ್ಷ ಪುಷ್ಯ ಶುದ್ಧ ಷಷ್ಠಿಯಂದು ಅಂದರೆ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ನಾಗಲಮಡಿಕೆಯ ಸುಬ್ರಮಣ್ಯ ಸ್ವಾಮಿ ರಥೋತ್ಸವ ಹಾಗೂ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಸಾವಿರಾರು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪೂಜೆ ಸಲ್ಲಿಸುತ್ತಾರೆ. ಈ ರಥೋತ್ಸವದಲ್ಲಿ ದೇವರಿಗೆ ಅನ್ನಂಭಟ್ಟರು ಕುಕ್ಕೆಯಿಂದ ತಂದ ನಾಗಾಭರಣ ಬಳಸಲಾಗುತ್ತದೆ.

ತೀಟೆ ನಾಗಪ್ಪ ದೇವಾಲಯ

ನಾಗಲಮಡಿಕೆಯಲ್ಲಿ ಎತ್ತರದ ಕಲ್ಲು ಬಂಡೆಯ ಮೇಲೆ ಏಳು ಹೆಡೆಯ ನಾಗರನಂತೆಯೇ ಇರುವ ಬಂಡೆಯೊಂದಿದೆ. ಇದನ್ನು ಉದ್ಭವ ನಾಗ ಅಥವಾ ತೀಟೆ ನಾಗಪ್ಪ ಎಂದೂ ಕರೆಯುತ್ತಾರೆ. ತೀಟೆ ಎಂದರೆ ಗಂದೆ, ಚರ್ಮವ್ಯಾಧಿ ಎಂದರ್ಥ. ಚರ್ಮ ರೋಗಿಗಳು ಪೂಜೆ ಸಲ್ಲಿಸಿದರೆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿಗೆ ಕಿವಿ ಸೋರುತ್ತಿದ್ದರೆ, ಮೈಮೇಲೆ ಗಂದೆ, ಬೊಕ್ಕೆಗಳಾದರೆ ಇಲ್ಲಿ ಎಂಜಲು ಎಲೆ ತೆಗೆಯುವ ಹರಕೆ ಹೊರುತ್ತಾರೆ. ಸುಬ್ರಹ್ಮಣ್ಯಪ್ರತಿ ನಿತ್ಯ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ, ಮಕ್ಕಳಾಗದವರು ಇಲ್ಲಿ ಬಂದು ಹರಕೆ ಹೊರುತ್ತಾರೆ, ದೋಷ ನಿವಾರಣೆಗಾಗಿ ನಾಗರಕಲ್ಲು ಪ್ರತಿಷ್ಠಾಪನೆ, ಸರ್ಪ ಸಂಸ್ಕಾರ ಇತ್ಯಾದಿ ದೋಷ ಪರಿಹಾರ ಪೂಜೆ ಮಾಡಿಸುತ್ತಾರೆ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ, ಇಲ್ಲಿ ವಿವಾಹ ಮಹೋತ್ಸವಗಳು ನಡೆಯುತ್ತವೆ.

ನಾಗರ ಪಂಚಮಿಯಂದು ವಿಶೇಷ ಪೂಜೆ

ಪ್ರತಿ ನಾಗರ ಪಂಚಮಿಯಂದು ನಾಗಲಮಡಿಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ವಿಶೇಷ ಪೂಜೆ, ಪುನಸ್ಕಾರ ನಡೆಯಲಿವೆ. ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಗುತ್ತದೆ, ಜೊತೆಗೆ ಇಲ್ಲಿ ಪ್ರತಿಷ್ಠಾಪಿಸಲಾಗಿರುವ ನಾಗರ ಕಲ್ಲುಗಳಿಗೆ ಭಕ್ತರು ಹಾಲೆರೆಯುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ. ನಾಗಲಮಡಿಕೆ ಸುಬ್ರಮಣ್ಯ ಸ್ವಾಮಿ ದೇವಾಲಯ ತುಮಕೂರಿನಿಂದ 115 ಕಿ.ಮೀ ದೂರದಲ್ಲಿದೆ, ಇಲ್ಲಿಗೆ ಬಸ್ ಸೌಲಭ್ಯ ಸಹ ಇದೆ.

ಬರಹ: ಈಶ್ವರ್ ಎಂ.

(ನಾಗರ ಪಂಚಮಿ ಕುರಿತ ಮತ್ತಷ್ಟು ಬರಹಗಳಿಗೆ kannada.hindustantimes.com/topic/culture ಲಿಂಕ್ ಕ್ಲಿಕ್ ಮಾಡಿ)