Friday Fitness: ಏನಿದು ಫ್ರೈಡೇ ಫಿಟ್‌ನೆಸ್‌; ಯಾವ ಕಾರಣಕ್ಕೆ ಶುಕ್ರವಾರದಂದು ದೇಹದಂಡಿಸುವುದನ್ನು ತಪ್ಪಿಸಬಾರದು; ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  Friday Fitness: ಏನಿದು ಫ್ರೈಡೇ ಫಿಟ್‌ನೆಸ್‌; ಯಾವ ಕಾರಣಕ್ಕೆ ಶುಕ್ರವಾರದಂದು ದೇಹದಂಡಿಸುವುದನ್ನು ತಪ್ಪಿಸಬಾರದು; ಇಲ್ಲಿದೆ ವಿವರ

Friday Fitness: ಏನಿದು ಫ್ರೈಡೇ ಫಿಟ್‌ನೆಸ್‌; ಯಾವ ಕಾರಣಕ್ಕೆ ಶುಕ್ರವಾರದಂದು ದೇಹದಂಡಿಸುವುದನ್ನು ತಪ್ಪಿಸಬಾರದು; ಇಲ್ಲಿದೆ ವಿವರ

Friday Fitness: ಶುಕ್ರವಾರದಂದು ಹೆಚ್ಚು ಹೆಚ್ಚು ದೇಹದಂಡಿಸುವುದರಿಂದ ಹಲವು ಪ್ರಯೋಜನಗಳಿವೆ. ಕೆಲವು ಕಂಪನಿಗಳು ಕೂಡ ತಮ್ಮ ಉದ್ಯೋಗಿಗಳಿಗೆ ಶುಕ್ರವಾರದಂದು ಫಿಟ್‌ನೆಸ್‌ಗಾಗಿ ದೇಹದಂಡಿಸಲು ಸಮಯ ನೀಡುವ ಕ್ರಮ ಇದೆ. ಇದನ್ನು ಫ್ರೈಡೇ ಫಿಟ್‌ನೆಸ್‌ ಎಂದು ಕರೆಯುತ್ತಾರೆ. ಹಾಗಾದರೆ ಫ್ರೈಡೇ ಫಿಟ್‌ನೆಸ್‌ ಯಾಕೆ ಅವಶ್ಯ, ಇದರಿಂದ ಉಪಯೋಗ ಏನು ನೋಡಿ.

ಫ್ರೈಡೇ ಫಿಟ್‌ನೆಸ್‌ (ಸಾಂದರ್ಭಿಕ ಚಿತ್ರ)
ಫ್ರೈಡೇ ಫಿಟ್‌ನೆಸ್‌ (ಸಾಂದರ್ಭಿಕ ಚಿತ್ರ)

ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕು, ವರ್ಕೌಟ್‌ ಮಾಡಬೇಕು, ಡಯೆಟ್‌ ಮಾಡಬೇಕು, ತೂಕ ಇಳಿಸಬೇಕು ಇದು ಇತ್ತೀಚೆಗೆ ಎಲ್ಲರ ಬಾಯಲ್ಲೂ ಕೇಳುವ ಸಾಮಾನ್ಯ ಮಾತು. ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಎಂದರೆ ಒಂದು ದಿನದ ಕೆಲಸ ಅಥವಾ ಅನುಕರಣೆಯಲ್ಲ. ಫಿಟ್‌ನೆಸ್‌ಗಾಗಿ ಪ್ರತಿದಿನವೂ ಜಪ ಮಾಡಬೇಕು. ನಮ್ಮ ದೈನಂದಿನ ದಿನಚರಿಯಲ್ಲಿ ಫಿಟ್‌ನೆಸ್‌ ಒಂದು ಭಾಗವಾಗಬೇಕು. ಆದರೆ ಇತ್ತೀಚೆಗೆ ಫಿಟ್‌ ಫ್ರೈಡೇ ಎನ್ನುವುದು ಹೆಚ್ಚು ಪ್ರಚಲಿತದಲ್ಲಿದೆ.

ಫಿಟ್‌ನೆಸ್‌ ಫ್ರೈಡೇ ಅಥವಾ ಫ್ರೈಡೇ ಫಿಟ್‌ನೆಸ್‌ ಎಂದರೆ ಕಂಪನಿಗಳು ತಮ್ಮ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ಆಕ್ಟಿವ್‌ ವೇರ್‌ ಧರಿಸಿ ದೇಹ ದಂಡಿಸಲು ಅವಕಾಶ ಮಾಡಿಕೊಡುವುದು. ಆದರೆ ಈ ಫ್ರೈಡೇ ಫಿಟ್‌ನೆಸ್‌ ಕೇವಲ ಕಂಪನಿ ಉದ್ಯೋಗಿಗಳಿಗೆ ಮಾತ್ರವಲ್ಲ, ಇದು ಪ್ರತಿಯೊಬ್ಬರಿಗೂ ಅವಶ್ಯ. ಹಾಗಾದರೆ ಫಿಟ್‌ನೆಸ್‌ ಫ್ರೈಡೇಯಿಂದ ಏನು ಉಪಯೋಗ ನೋಡಿ.

ಹೆಚ್ಚು ಸ್ಥಳಾವಕಾಶ

ಶುಕ್ರವಾರದಂದು ಸಾಮಾನ್ಯವಾಗಿ ಹಲವರು ಫಿಟ್‌ನೆಸ್‌ ಅಥವಾ ಜಿಮ್‌ ಬಗ್ಗೆ ಚಿಂತಿಸುವುದಿಲ್ಲ. ವಾರಾಂತ್ಯವಾದ ಕಾರಣ ಜಿಮ್‌ ಕಡೆ ಮುಖ ಮಾಡದವರೇ ಹೆಚ್ಚು. ಇದು ನಿಮಗೆ ಅನುಕೂಲ ಇದರಿಂದ ಹೆಚ್ಚು ಹೆಚ್ಚು ಜಿಮ್‌ ಉಪಕರಣಗಳನ್ನು ಬಳಸಲು ಅವಕಾಶ ಸಿಗುತ್ತದೆ ಮತ್ತು ಸ್ಥಳಾವಕಾಶವು ಹೆಚ್ಚು ದೊರೆಯುತ್ತದೆ. ಯೋಗ ತರಬೇತುದಾರರು ನಿಮ್ಮ ಮೇಲೆ ಹೆಚ್ಚು ಗಮನ ಹರಿಸುತ್ತಾರೆ.

ಮುಖದ ಮೇಲೆ ಹೆಚ್ಚು ನಗು ಇರುತ್ತದೆ

ನೀವು ಶುಕ್ರವಾರದಂದು ಜಿಮ್‌ನಲ್ಲಿ ಹೆಚ್ಚು ಹೊತ್ತು ದೇಹ ದಂಡಿಸುವುದರಿಂದ ದೇಹದಲ್ಲಿ ಎಂಡಾರ್ಫಿನ್‌ ಹಾರ್ಮೋನ್‌ಗಳ ಪ್ರಮಾಣ ಹೆಚ್ಚುತ್ತದೆ ಮತ್ತು ಇದು ಸಂತೋಷ ಹಾರ್ಮೋನ್‌ ಆಗಿದ್ದು ನೀವು ದಿನವಿಡೀ ಖುಷಿಯಿಂದ ಇರುವಂತೆ ನೋಡಿಕೊಳ್ಳುತ್ತದೆ.

ಕೆಲಸದಲ್ಲಿ ಹೆಚ್ಚು ಉತ್ಪಾದಕರಾಗಿರುತ್ತೀರಿ

ಶುಕ್ರವಾರದಂದು ಜಿಮ್‌ ಹೆಚ್ಚು ಹೊತ್ತು ದೇಹದಂಡಿಸುವುದು ಅಥವಾ ರನ್ನಿಂಗ್‌, ಜಾಗಿಂಗ್‌ ಮಾಡುವುದು ನಿಮ್ಮ ದಿನವನ್ನು ಹೆಚ್ಚು ಕ್ರಿಯಾಶೀಲವಾಗಿ ಆರಂಭಿಸಲು ನೆರವಾಗುತ್ತದೆ. ರನ್ನಿಂಗ್‌ನಂತಹ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುವ ವ್ಯಾಯಾಮಗಳು ದೇಹದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಸ್ವಲ್ಪ ಹೆಚ್ಚಿಗೆ ಬೆವರುವುದು ಹಾಗೂ ಸಂತೋಷ ಸೇರಿ ನಿಮ್ಮ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಆತ್ಮವಿಶ್ವಾಸದ ಹೆಚ್ಚಳ

ಸಂತೋಷದ ಹಾರ್ಮೋನ್‌ಗಳು ಏರಿಕೆಯಾದರೆ ಆ ದಿನ ನಿಮ್ಮನ್ನು ಹಿಡಿಯುವವರೇ ಇರುವುದಿಲ್ಲ. ಆ ಕಾರಣಕ್ಕೆ ನಿಮ್ಮಲ್ಲಿ ಆತ್ಮವಿಶ್ವಾಸವೂ ಏರಿಕೆಯಾಗುತ್ತದೆ. ಶುಕ್ರವಾರದಂದು ಕ್ರಿಯಾಶೀಲರಾಗಿಲು ವಾಕಿಂಗ್‌, ರನ್ನಿಂಗ್‌, ಜಾಗಿಂಗ್‌ ಕೂಡ ಮಾಡಬಹುದು. ಇದರೊಂದಿಗೆ ಕಚೇರಿಯಲ್ಲಿ ಹೊರಗಡೆ ಐದು ನಿಮಿಷಗಳ ವಾಕ್‌ ಹೋಗುವುದು ಕೂಡ ನಿಮ್ಮ ಮನಸ್ಥಿತಿಯನ್ನು ಸುಧಾರಿಸಿ, ಆತ್ಮವಿಶ್ವಾಸ ಹೆಚ್ಚಲು ಸಹಾಯ ಮಾಡುತ್ತದೆ.

ಚೆನ್ನಾಗಿ ನಿದ್ರಿಸುತ್ತೀರಿ

ವಾರಾಂತ್ಯದಲ್ಲಿ ಬೇಡವೆಂದರೂ ಹೆಚ್ಚು ನಿದ್ದೆ ಬರುತ್ತದೆ, ಅಲ್ಲದೆ ವಾರವಿಡೀ ದುಡಿದು ಹೈರಾಣಾಗಿರುವ ದೇಹವು ನಿದ್ದೆಯನ್ನು ಬಯಸುತ್ತದೆ, ಈ ಫ್ರೈಡೇ ಫಿಟ್‌ನೆಸ್‌ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಶನಿವಾರ ಬೆಳಗಿನ ಹೊತ್ತು ಹೆಚ್ಚು ಹೊತ್ತು ಹಾಗೂ ಗುಣಮಟ್ಟದ ನಿದ್ದೆ ಮಾಡಲು ಇದು ಸಹಕರಿಸುತ್ತದೆ. ಶುಕ್ರವಾರದಂದು ಸಿರ್ಕಾಡಿಯನ್‌ ರಿದಮ್‌ ಅನ್ನು ರಿಬೂಟ್‌ ಮಾಡಲು ರಿಸಿಸ್ಟೆಂಟ್ಸ್‌ ವ್ಯಾಯಾಮಗಳು ಹೆಚ್ಚು ಸಹಾಯ ಮಾಡುತ್ತವೆ ಎಂಬುದನ್ನು ವರದಿಗಳು ಹಾಗೂ ಸಂಶೋಧಕರು ಕಂಡುಕೊಂಡಿದ್ದಾರೆ. ಈ ರೀತಿ ಶುಕ್ರವಾರ ಸ್ಥಿರವಾಗಿ ವ್ಯಾಯಾಮ ಮಾಡುವುದರಿಂದ ಅಂದು ರಾತ್ರಿ 45 ನಿಮಿಷಗಳ ಕಾಲ ಹೆಚ್ಚುವರಿ ನಿದ್ದೆ ಸಾಧ್ಯ ಎಂಬುದನ್ನು ಅಧ್ಯಯನಗಳು ತಿಳಿಸಿವೆ.

ವಾರಾಂತ್ಯದ ಕಡುಬಯಕೆಗಳ ನಿಯಂತ್ರಣ

ವಾರವಿಡೀ ಒಂದು ಕ್ರಮದಲ್ಲಿ ತಿನ್ನುವ ಹಲವರು ವಾರಾಂತ್ಯದಲ್ಲಿ ಮನಸ್ಸು, ನಾಲಿಗೆ ಬಯಸಿದ್ದನ್ನೆಲ್ಲಾ ತಿನ್ನುತ್ತಾರೆ. ಆದರೆ ಫ್ರೈಡೇ ಫಿಟ್ನೆಸ್‌ ಇದನ್ನು ತಡೆಯುತ್ತದೆ. ಹೆಚ್ಚಿದ ದೇಹದಂಡನೆಯು ಆಹಾರದ ಕಡುಬಯಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಅಲ್ಲದೆ ಉತ್ತಮ ಡಯೆಟ್‌ ಕ್ರಮ ಪಾಲಿಸಲು ಇದು ಸಹಾಯ ಮಾಡುತ್ತದೆ.

ವಿಶ್ರಾಂತಿ ಪಡೆಯಲು

ವಾರವಿಡೀ ಕೆಲಸ ಮಾಡಿ ದಣಿವ ಜೀವಕ್ಕೆ ವಾರಾಂತ್ಯದಲ್ಲಿ ರೆಸ್ಟ್‌ ಬೇಕು ಅನ್ನಿಸುವುದು ಸಹಜ. ಆ ಕಾರಣಕ್ಕೆ ವ್ಯಾಯಾಮಗಳು ಸ್ನಾಯುಗಳಿಗೆ ಹೆಚ್ಚು ಕೆಲಸ ನೀಡಿ, ಬೆವರು ಹರಿಯುವಂತೆ ಮಾಡಿ ವಿಶ್ರಾಂತಿ ತೆಗೆದುಕೊಳ್ಳಲು ಉತ್ತೇಜಿಸುತ್ತದೆ. ಶುಕ್ರವಾರದ ಹೆಚ್ಚು ಹೆಚ್ಚು ದೇಹ ದಂಡಿಸಿ, ಭಾನುವಾರ, ಶನಿವಾರ ವಿಶ್ರಾಂತಿ ತೆಗೆದುಕೊಳ್ಳಲು ಇದು ಸಹಾಯ ಮಾಡುತ್ತದೆ.

Whats_app_banner