ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯಗಳನ್ನು ಸೇವಿಸಿ; ತೂಕ ಇಳಿಕೆ ಜೊತೆಗೆ ಹೊಟ್ಟೆ ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯಗಳನ್ನು ಸೇವಿಸಿ; ತೂಕ ಇಳಿಕೆ ಜೊತೆಗೆ ಹೊಟ್ಟೆ ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯಗಳನ್ನು ಸೇವಿಸಿ; ತೂಕ ಇಳಿಕೆ ಜೊತೆಗೆ ಹೊಟ್ಟೆ ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿ

ಹೊಟ್ಟೆ ಬೊಜ್ಜು ಕರಗಿಸುವುದು ಸವಾಲಿನ ಕೆಲಸ. ಏನೂ ಮಾಡಿದರೂ ಅನೇಕರಿಗೆ ಹೊಟ್ಟೆ ಬೊಜ್ಜನ್ನು ಕರಗಿಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ದಿನನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಕೆಳಗಿನ ಐದು ಪಾನೀಯಗಳ ಪೈಕಿ ಯಾವುದಾದರೂ ಒಂದನ್ನು ಸೇವಿಸುವ ಮೂಲಕ ಖಂಡಿತವಾಗಿಯೂ ನಿಮ್ಮ ಹೊಟ್ಟೆಯ ಸುತ್ತ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಬಹುದು.

ತೂಕ ಇಳಿಕೆ ಜೊತೆಗೆ ಹೊಟ್ಟೆ ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿ ಈ ಪಾನೀಯಗಳು
ತೂಕ ಇಳಿಕೆ ಜೊತೆಗೆ ಹೊಟ್ಟೆ ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿ ಈ ಪಾನೀಯಗಳು (PC: Canva)

ಹೊಸ ವರ್ಷ ಬಂತು ಎಂದಾಕ್ಷಣ ಅನೇಕರು ತೂಕ ಇಳಿಕೆಯ ನಿರ್ಧಾರಕ್ಕೆ ಬಂದಿರುತ್ತಾರೆ. ಈ ವರ್ಷ ಏನಾದರೂ ಮಾಡಿ ಆರೋಗ್ಯವಂತ ಶರೀರವನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಆಸೆಯನ್ನೂ ಹೊಂದಿರುತ್ತಾರೆ. ತೂಕ ಇಳಿಕೆ ಅದರಲ್ಲೂ ಈ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಎಂದರೆ ಒಂದು ಸವಾಲಿನ ಕೆಲಸವೇ ಸರಿ. ಆದರೆ ನೀವು ಸೇವಿಸುವ ಆಹಾರ ಹಾಗೂ ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಆರೋಗ್ಯಕರ ಬದಲಾವಣೆಯು ಖಂಡಿತ ನಿಮ್ಮನ್ನು ನೀವಂದುಕೊಂಡ ಗುರಿ ತಲುಪಿಸುವಂತೆ ಮಾಡಬಹುದು. ತೂಕ ಇಳಿಕೆ ಎನ್ನುವುದೇ ಒಂದು ಕಷ್ಟದ ಪ್ರಕ್ರಿಯೆಯಾಗಿದ್ದರೆ ಅದರಲ್ಲೂ ಹೊಟ್ಟೆಯ ಬೊಜ್ಜು ಕರಗಿಸುವುದು ಇನ್ನೂ ಕಷ್ಟದ ಕೆಲಸ. ಆದರೆ ನೀವು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಕೆಲವು ಪಾನೀಯಗಳನ್ನು ಸೇವಿಸುವ ಮೂಲಕ ನಿಮ್ಮ ಹೊಟ್ಟೆಯ ಸುತ್ತ ಅಂಟಿಕೊಂಡಿರುವ ಕೊಬ್ಬನ್ನು ಕರಗಿಸಿಕೊಳ್ಳಬಹುದಾಗಿದೆ. ಮನೆಯಲ್ಲಿಯೇ ಇರುವ ನೈಸರ್ಗಿಕ ಪದಾರ್ಥಗಳನ್ನೇ ಬಳಸಿ ಈ ಪಾನೀಯಗಳನ್ನು ತಯಾರಿಸಬಹುದಾಗಿದ್ದರಿಂದ ಇವುಗಳಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮ ಕೂಡ ಬೀರುವುದಿಲ್ಲ. ಬದಲಾಗಿ ನಮ್ಮ ಒಟ್ಟಾರೆ ಆರೋಗ್ಯ ಉತ್ತೇಜಿಸುವ ಕಾರ್ಯವನ್ನೂ ಈ ಪಾನೀಯಗಳು ಮಾಡುತ್ತವೆ.

ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸುವ ಐದು ಪರಿಣಾಮಕಾರಿ ಪಾನೀಯಗಳು

ನಿಮ್ಮ ಬೆಳಗ್ಗಿನ ದಿನಚರಿಯಲ್ಲಿ ಈ ಪಾನೀಯಗಳನ್ನು ಸೇರಿಸಿಕೊಳ್ಳುವುದರಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಬಹುದಾಗಿದೆ. ಈ ಪಾನೀಯಗಳನ್ನು ತಯಾರಿಸಲು ಹೆಚ್ಚು ಹಣವೂ ಖರ್ಚಾಗುವುದಿಲ್ಲ, ಶ್ರಮವೂ ಪಡಬೇಕಾಗಿಲ್ಲ. ಆದರೆ ಇದು ಕೊಡುವ ಫಲಿತಾಂಶ ಮಾತ್ರ ಅತ್ಯಂತ ಪರಿಣಾಮಕಾರಿಯಾಗಿ ಇರುತ್ತದೆ. ಆರೋಗ್ಯಕರ ಜೀವನಶೈಲಿ, ಉತ್ತಮ ಆಹಾರ ಕ್ರಮ, ನಿಯತ ವ್ಯಾಯಾಮಗಳ ಜೊತೆ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಐದು ಪಾನೀಯಗಳ ಪೈಕಿ ಯಾವುದಾದರೂ ಒಂದನ್ನು ಸೇವಿಸುವ ಮೂಲಕ ಖಂಡಿತ ನೀವು ಹೊಟ್ಟೆಯ ಕೊಬ್ಬು ಕರಗಿಸಬಹುದಾಗಿದೆ. ಹಾಗಾದರೆ ಆ ಪಾನೀಯಗಳು ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿಂಬು ಪಾನೀಯ: ಬಹುತೇಕರಿಗೆ ಈ ಪಾನೀಯದ ಬಗ್ಗೆ ತಿಳಿದಿರುತ್ತದೆ. ಹೊಟ್ಟೆಯ ಬೊಜ್ಜು ಕರಗಿಸುವಲ್ಲಿ ಅತ್ಯಂತ ಪರಿಣಾಮಕಾರಿ ಪಾತ್ರ ವಹಿಸುವ ಕಾರ್ಯವನ್ನು ಈ ಪಾನೀಯ ಮಾಡುತ್ತದೆ. ವಿಟಮಿನ್​ ಸಿಯಿಂದ ಸಮೃದ್ಧವಾಗಿರುವ ಈ ಪಾನೀಯವು ಚಯಾಚಪಯ ಕ್ರಿಯೆಯ ವೇಗವನ್ನು ಹೆಚ್ಚಿಸುವುದರ ಜೊತೆಯಲ್ಲಿ ನಿಮ್ಮ ದೇಹವನ್ನು ನಿರ್ವಿಷಗೊಳಿಸುವ ಕಾರ್ಯವನ್ನು ಮಾಡುತ್ತದೆ. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ನಿಂಬೆಯ ರಸವನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ನಿಮಗೆ ರುಚಿ ಬೇಕೆಂದರೆ ಸ್ವಲ್ಪ ಉಪ್ಪನ್ನು ಸೇರಿಸಬಹುದು. ಕೆಲವರು ಜೇನುತುಪ್ಪವನ್ನು ಸೇರಿಸಿ ಕೂಡ ಸವಿಯುತ್ತಾರೆ. ಈ ಪಾನೀಯ ತಯಾರಿಸಲು ತೀರಾ ಬೆಚ್ಚಗಿನ ನೀರನ್ನು ಬಳಕೆ ಮಾಡಬೇಡಿ.

ಆ್ಯಪಲ್​ ಸೈಡರ್​ ವಿನೆಗರ್​: ಮಾರುಕಟ್ಟೆಯಲ್ಲಿ ಸಿಗುವ ಆ್ಯಪಲ್​ ಸೈಡರ್​ ವಿನೆಗರ್​ ಕೂಡ ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸುವ ಅತ್ಯಂತ ಪರಿಣಾಮಕಾರಿ ಕೆಲಸವನ್ನು ಮಾಡುತ್ತದೆ. ಈ ಪಾನೀಯದಲ್ಲಿಯೂ ಆಸಿಟಿಕ್​ ಆಮ್ಲ ಇರುತ್ತದೆ. ಇದು ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ನಿಮಗೆ ಬೇಗ ಹಸಿವಾಗಲು ಬಿಡುವುದಿಲ್ಲ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಆ್ಯಪಲ್​ ಸೈಡರ್​ ವಿನೆಗರ್ ಅ​ನ್ನು ಸೇರಿಸಿ ಕುಡಿಯಿರಿ. ಆ್ಯಪಲ್​ ಸೈಡರ್​ ವಿನೆಗರ್​ ಹಲ್ಲಿನ ಹೊಳಪನ್ನು ಕಡಿಮೆ ಮಾಡುವ ಸಾಧ್ಯತೆ ಇರುವುದರಿಂದ ಸ್ಟ್ರಾದಲ್ಲಿ ನೀವು ಈ ಪಾನೀಯ ಸೇವಿಸುವುದು ಉತ್ತಮ.

ಶುಂಠಿ ಚಹಾ: ಶುಂಠಿ ಉತ್ತಮ ನೈಸರ್ಗಿಕವಾಗಿ ನಮಗೆ ಉರಿಯೂತದ ಸಮಸ್ಯೆಯಿಂದ ಪರಿಹಾರ ನೀಡುವ ಕಾರ್ಯವನ್ನು ಮಾಡುವಂತಹ ಒಂದು ಮಸಾಲೆ ಪದಾರ್ಥವಾಗಿದೆ. ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾ ಸೇವನೆ ಮಾಡುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯ ವೇಗ ಹೆಚ್ಚುತ್ತದೆ. ಯಾರು ತಮ್ಮ ಹೊಟ್ಟೆಯನ್ನು ಕರಗಿಸಬೇಕು ಎಂದುಕೊಂಡಿದ್ದಾರೋ ಅಂಥವರು ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾ ಸೇವನೆ ಆರಂಭಿಸಬೇಕು. ಇದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಯಲ್ಲಿ ತೂಕ ಇಳಿಕೆ ಕೂಡ ಕಾಣುತ್ತದೆ.

ಶುಂಠಿ-ನಿಂಬೆ ಚಹಾ: ತೂಕ ಇಳಿಕೆ ಮಾಡಬೇಕು ಎಂದುಕೊಂಡವರಿಗೆ ಶುಂಠಿ ಸೇವನೆ ಒಂದು ವರದಾನ ಎಂದೇ ಹೇಳಬಹುದು. ಶುಂಠಿ ಚಹಾಕ್ಕೂ ಶುಂಠಿ-ನಿಂಬೆ ಚಹಾಕ್ಕೂ ದೊಡ್ಡ ಮಟ್ಟದ ವ್ಯತ್ಯಾಸವೇನಿಲ್ಲ. ನೀವು ತಯಾರಿಸಿದ ಶುಂಠಿ ಚಹಾಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿದಾಗ ನಿಂಬೆ-ಶುಂಠಿ ಚಹಾ ತಯಾರಾಗುತ್ತದೆ. ಹೊಟ್ಟೆಯ ಕೊಬ್ಬು ಕರಗಿಸುವ ವಿಚಾರದಲ್ಲಿ ಈ ಪಾನೀಯವು ಜಾದೂ ಮಾಡುವುದರಲ್ಲಿ ಸಂಶಯವೇ ಬೇಡ. ಶುಂಠಿಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿಂಬೆಯು ವಿಟಮಿನ್​ ಸಿ ಅಂಶದಿಂದ ಸಮೃದ್ಧವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸೌತೆಕಾಯಿ-ಪುದೀನಾ ಜ್ಯೂಸ್: ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಹೊಂದಿರುವ ಪದಾರ್ಥಗಳಲ್ಲಿ ಸೌತೆಕಾಯಿ ಅಗ್ರಗಣ್ಯ ಸ್ಥಾನದಲ್ಲಿ ಬರುತ್ತದೆ. ಅಲ್ಲದೆ ಸೌತೆಕಾಯಿಯಲ್ಲಿ ನೀರನ ಅಂಶ ಕೂಡ ಹೆಚ್ಚಿದೆ. ತೂಕ ಇಳಿಕೆ ಮಾಡಬೇಕು ಎಂದುಕೊಂಡವರು ಖಂಡಿತವಾಗಿ ಇದನ್ನು ತಮ್ಮ ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಲೇಬೇಕು. ನೀವು ಸೌತೆಕಾಯಿ ಹಾಗೂ ಪುದೀನಾ ಸೊಪ್ಪಿನಿಂದ​ ಜ್ಯೂಸ್​ ತಯಾರಿಸಿ ಬೆಳಗ್ಗೆ ಸೇವಿಸಬಹುದು. ಇದು ನಿಮ್ಮ ದೇಹವನ್ನು ಹೈಡ್ರೀಕರಿಸುವ ಜೊತೆಯಲ್ಲಿ ಕೊಬ್ಬನ್ನು ನಿಯಂತ್ರಿಸುವ ಕಾರ್ಯವನ್ನು ಮಾಡುತ್ತದೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಸೇವನೆ ಮಾಡುವುದರಿಂದ ಹಸಿವು ನಿಯಂತ್ರಣದಲ್ಲಿಡುತ್ತದೆ. ಇದರಿಂದ ನೀವು ಇಡೀ ದಿನ ಹೆಚ್ಚು ಕ್ಯಾಲೋರಿಯನ್ನು ಸೇವಿಸದೆ ಇರಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner