NiMi Diet: ತೂಕ ಇಳಿಕೆ, ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಎನ್ಐಎಂಐ ಡಯೆಟ್; ಹೊಸ ಆಹಾರಕ್ರಮದ ಕುರಿತು ಇಲ್ಲಿದೆ ಮಾಹಿತಿ
ಇಂದಿನ ಬದಲಾದ ಜೀವನಶೈಲಿ ಹಾಗೂ ಆಹಾರಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ. ಹೀಗಾಗಿ ಬಹುತೇಕ ಮಂದಿಯನ್ನು ಸ್ಥೂಲಕಾಯ ಸಮಸ್ಯೆ ಕಾಡುತ್ತಿದೆ. ತೂಕ ಇಳಿಕೆ,ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ಡಯೆಟ್ ಅನ್ನು ತಪ್ಪದೇ ಪಾಲಿಸಿ.

ಆರೋಗ್ಯವೇ ಭಾಗ್ಯ ಎಂಬುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಿಲ್ಲಿ ಅಮೂಲ್ಯವಾದ ಮಹತ್ವವನ್ನು ಒತ್ತಿಹೇಳುವ ಒಂದು ಗಾದೆ. ಆದರೆ, ಇಂದಿನ ಬದಲಾದ ಜೀವನಶೈಲಿ ಹಾಗೂ ಆಹಾರಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ನಾವು ಮಾಡುವ ಪ್ರಯತ್ನಗಳೆಷ್ಟು? ಬದಲಾಗುತ್ತಿರುವ ಹವಾಮಾನದೊಂದಿಗೆ ನಾವು ಸೇವಿಸುವ ಆಹಾರದ ಪದ್ಧತಿಯು ಕೈಗಾರಿಕರಣಗೊಂಡಿವೆ. ಹೀಗಾಗಿ ಬಹುತೇಕ ಮಂದಿಯನ್ನು ಸ್ಥೂಲಕಾಯ ಸಮಸ್ಯೆ ಕಾಡುತ್ತಿದೆ. ತೂಕ ಇಳಿಕೆ, ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ಡಯಟ್ ಅನ್ನು ತಪ್ಪದೇ ಪಾಲಿಸಿ.
ದೈನಂದಿನ ಜೀವನದಲ್ಲಿ ವಾಕಿಂಗ್, ಜಾಗಿಂಗ್, ಸ್ವಿಮ್ಮಿಂಗ್ ಹೀಗೆ ಎಲ್ಲಾ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರೂ ಊಟದ ವಿಚಾರಕ್ಕೆ ಬಂದಾಗ ಬಹುತೇಕರು ಇದನ್ನು ಕಡೆಗಣಿಸುವುದೇ ಹೆಚ್ಚು. ದೈಹಿಕ ಶ್ರಮದೊಂದಿಗೆ ಆಹಾರ ಪದ್ಧತಿ ಸರಿಯಾಗಿದ್ದಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಬಹುದು. ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ, ತೂಕ ಇಳಿಕೆ ಸೇರಿದಂತೆ ಇದೀಗ ವಿಜ್ಞಾನಿಗಳು ಎನ್ಐಎಂಐ ಡಯೆಟ್ ಅನ್ನು ಪರಿಚಯಿಸಿದ್ದಾರೆ.
ಏನಿದು ಎನ್ಐಎಂಐ ಡಯೆಟ್?
ಎನ್ಐಎಂಐ ಡಯೆಟ್ ಎಂದು ಕರೆಯಲಾಗುವ ಈ ಆಹಾರ ಪದ್ಧತಿಯು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಮಧುಮೇಹ ಮತ್ತು ಹೃದಯ ಕಾಯಿಲೆಯಂತಹ ವಿವಿಧ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ತರಕಾರಿಗಳು, ದ್ವಿದಳ ಧಾನ್ಯಗಳು ಸೇರಿದಂತೆ ಇತರೆ ಸಸ್ಯ ಆಧಾರಿತ ಆಹಾರಗಳನ್ನು ಇದರಲ್ಲಿ ಸೇರಿಸಲಾಗಿದೆ.
ಯೂನಿವರ್ಸಿಟಿ ಕಾಲೇಜ್ ಕಾರ್ಕ್‌ನ ಪ್ರಮುಖ ವಿಜ್ಞಾನಿ ಹಾಗೂ ಸಂಶೋಧನಾ ಕೇಂದ್ರವಾದ ಎಪಿಸಿ ಮೈಕ್ರೋಬಯೋಮ್ ಐರ್ಲೆಂಡ್‌ನಲ್ಲಿ ಪ್ರಧಾನ ತನಿಖಾಧಿಕಾರಿಯೂ ಆಗಿರುವ ಪ್ರೊ. ಜೆನ್ಸ್ ವಾಲ್ಟರ್ ಅವರ ನೇತೃತ್ವದಲ್ಲಿ, ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಈ ಸಂಶೋಧನೆಯನ್ನು ನಡೆಸಿದೆ. ಕೆನಡಾದ ಆಲ್ಬರ್ಟಾ ವಿಶ್ವವಿದ್ಯಾಲಯದಲ್ಲಿ ಇದನ್ನು ಪ್ರಯೋಗ ಮಾಡುವ ಮೂಲಕ ಯಶಸ್ವಿಯಾಗಿದೆ.
ಅಧ್ಯಯನದ ಪ್ರಕಾರ, ಈ ಪ್ರಯೋಗದಲ್ಲಿ ಭಾಗವಹಿಸಿದವರ ಪೈಕಿ ಹೆಚ್ಚಿನ ಮಂದಿ ಮೂರು ವಾರಗಳ ನಂತರ ತಮ್ಮ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯಲ್ಲಿ ಸುಧಾರಣೆಯನ್ನು ಕಂಡುಕೊಂಡಿದ್ದಾರೆ. ಅಲ್ಲದೆ, ಶೇ.17 ರಷ್ಟು ಕೆಟ್ಟ ಕೊಲೆಸ್ಟ್ರಾಲ್, ಶೇ. 6ರಷ್ಟು ರಕ್ತದಲ್ಲಿನ ಸಕ್ಕರೆ ಮಟ್ಟವೂ ಇಳಿಕೆಯಾಗಿದೆ. ಉರಿಯೂತ ಮತ್ತು ಹೃದ್ರೋಗದ ಅಪಾಯವೂ ಶೇ.14 ರಷ್ಟು ಇಳಿಕೆಯಾಗಿರುವುದಾಗಿ ದಾಖಲಾಗಿದೆ. ಹಾಗೆಯೇ ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಇದು ಸಹಕರಿಯಾಗಿದೆ ಎಂದು ಕಂಡುಬಂದಿದೆ.
(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)
