ಬೊಜ್ಜು ಸಮಸ್ಯೆಯಿಂದ ಬೇಸತ್ತಿದ್ದರೆ ಚಿಂತೆ ಬಿಡಿ; ತೂಕ ಇಳಿಕೆಗೆ ಕಾಳುಮೆಣಸನ್ನು ಹೀಗೆ ಬಳಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೊಜ್ಜು ಸಮಸ್ಯೆಯಿಂದ ಬೇಸತ್ತಿದ್ದರೆ ಚಿಂತೆ ಬಿಡಿ; ತೂಕ ಇಳಿಕೆಗೆ ಕಾಳುಮೆಣಸನ್ನು ಹೀಗೆ ಬಳಸಿ ನೋಡಿ

ಬೊಜ್ಜು ಸಮಸ್ಯೆಯಿಂದ ಬೇಸತ್ತಿದ್ದರೆ ಚಿಂತೆ ಬಿಡಿ; ತೂಕ ಇಳಿಕೆಗೆ ಕಾಳುಮೆಣಸನ್ನು ಹೀಗೆ ಬಳಸಿ ನೋಡಿ

ತೂಕ ಇಳಿಕೆಗೆ ಕಾಳುಮೆಣಸು ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಈ ಮಸಾಲೆ, ಅದರ ವಿಶಿಷ್ಟ ಸುವಾಸನೆಯೊಂದಿಗೆ, ಪೈಪರಿನ್ ಎಂಬ ಪ್ರಬಲ ಅಂಶವನ್ನು ಒಳಗೊಂಡಿದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ. (ಬರಹ: ಪ್ರಜ್ವಲಾ)

ತೂಕ ಇಳಿಕೆಗೆ ಕಾಳುಮೆಣಸನ್ನು ಹೀಗೆ ಬಳಸಿ ನೋಡಿ
ತೂಕ ಇಳಿಕೆಗೆ ಕಾಳುಮೆಣಸನ್ನು ಹೀಗೆ ಬಳಸಿ ನೋಡಿ (PC: Canva)

ಇಂದಿನ ವೇಗದ ಜೀವನಶೈಲಿಯಲ್ಲಿ ತೂಕ ಇಳಿಕೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ತೂಕ ಇಳಿಕೆಗೆ ಸೂಕ್ತ ವ್ಯಾಯಾಮದ ಜೊತೆಗೆ ಪೌಷ್ಟಿಕಾಂಶಭರಿತ ಡಯೆಟ್ ಆಹಾರವನ್ನು ಸೇವಿಸುವುದು ಕೂಡ ಬಹಳ ಮುಖ್ಯ. ಆಹಾರಕ್ಕೆ ವಿವಿಧ ಮಸಾಲೆಗಳನ್ನು ಸೇರಿಸುವುದರಿಂದ ನಿಮ್ಮ ತೂಕ ಇಳಿಕೆಯನ್ನು ವೇಗಗೊಳಿಸಬಹುದು. ತೂಕ ಇಳಿಕೆಗೆ ಕಾಳುಮೆಣಸು ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಈ ಮಸಾಲೆ, ಅದರ ವಿಶಿಷ್ಟ ಸುವಾಸನೆಯೊಂದಿಗೆ, ಪೈಪರಿನ್ ಎಂಬ ಪ್ರಬಲ ಅಂಶವನ್ನು ಒಳಗೊಂಡಿದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಕಾಳುಮೆಣಸು ಎಂದರೇನು?

ಕಾಳುಮೆಣಸು ಎಂದರೆ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆ. ಇದನ್ನು ಮಸಾಲೆಗಳ ರಾಜ ಅಂತಲೂ ಕರೆಯುತ್ತಾರೆ. ಮೊದಲೇ ತಿಳಿಸಿದಂತೆ ಇದರಲ್ಲಿ ಪೈಪರಿನ್ ಎನ್ನುವ ಪ್ರಮುಖ ಸಕ್ರಿಯ ಸಂಯುಕ್ತವಿದೆ. ಪೈಪರಿನ್ ದೇಹದ ಜೀರ್ಣಕ್ರಿಯೆ ಹಾಗೂ ಮೆಟಾಬಾಲಿಸಂ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗದಂತೆ ತಡೆಯುವ ಶಕ್ತಿ ಹೊಂದಿದೆ.

ತೂಕ ಇಳಿಕೆಗೆ ಕಾಳುಮೆಣಸು ಉಪಯೋಗಿಸುವ 7 ವಿಧಾನಗಳು

ತೂಕ ಇಳಿಕೆಗೆ ಆಯಾಸಪಡುವ ಬದಲು, ದಿನನಿತ್ಯದ ಆಹಾರದಲ್ಲಿ ಚಿಕ್ಕ ಬದಲಾವಣೆಯಿಂದಲೇ ಸುಲಭವಾಗಿ ಫಲಿತಾಂಶ ಗಳಿಸಬಹುದು. ಕಾಳುಮೆಣಸಿನಲ್ಲಿರುವ ಪೈಪರಿನ್ ಎಂಬ ಕ್ರಿಯಾತ್ಮಕ ಘಟಕ ದೇಹದ ಮೆಟಾಬಾಲಿಸಂ ಹೆಚ್ಚಿಸಿ, ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದನ್ನು ಬಳಸುವ ವಿಧಾನ ಇಲ್ಲಿದೆ.

ಖಾಲಿಹೊಟ್ಟೆಗೆ ಕಾಳುಮೆಣಸು ನೀರು ಸೇವನೆ: ಬೆಳಗ್ಗೆ ಖಾಲಿಹೊಟ್ಟೆಗೆ ಒಂದು ಗ್ಲಾಸ್ ಬಿಸಿ ನೀರಲ್ಲಿ ಅರ್ಧ ಚಮಚ ಕಾಳುಮೆಣಸಿನ ಪುಡಿ ಹಾಗೂ ಒಂದು ಚಮಚ ನಿಂಬೆ ರಸ ಹಾಕಿ ಕುಡಿಯಿರಿ. ಇದು ದೇಹವನ್ನು ಡಿಟಾಕ್ಸ್ ಮಾಡಿ, ಮೆಟಾಬಾಲಿಸಂ ಚುರುಕುಗೊಳಿಸುತ್ತದೆ.

ಕಾಳುಮೆಣಸು-ಜೇನುತುಪ್ಪ ಹಾಕಿದ ಹಾಲು ಅಥವಾ ಮಜ್ಜಿಗೆ: ಮಜ್ಜಿಗೆ ಅಥವಾ ಹಾಲಿಗೆ ಸ್ವಲ್ಪ ಕಾಳುಮೆಣಸು ಪುಡಿ ಹಾಕಿ ಕುಡಿಯುವುದರಿಂದ ದೇಹವನ್ನು ತಂಪು ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.

ಕಾಳುಮೆಣಸಿನ ಚಹಾ: ನೀರನ್ನು ಕುದಿಸಿ, ಅದಕ್ಕೆ ಅರ್ಧ ಚಮಚ ಕಾಳುಮೆಣಸು ಪುಡಿ ಹಾಕಿ, ಬೇಕಿದ್ದರೆ ತುಳಸಿ, ಇಂಗು, ಅರಿಶಿಣ ಬೆರೆಸಿ. ಈ ಮನೆಮದ್ದು ಡಿಟಾಕ್ಸ್ ಟೀ ದೇಹದ ಉರಿಯೂತವನ್ನು ಕಡಿಮೆ ಮಾಡುವಲ್ಲೂ ಸಹಕಾರಿಯಾಗಿದೆ.

ಕಾಳುಮೆಣಸು–ಶುಂಠಿ ಕಷಾಯ: ಶುಂಠಿ-ತುಳಸಿ ಕಷಾಯಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸಿ ಕುಡಿಯಿರಿ. ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ ಹಾಗೂ ಕೊಬ್ಬನ್ನು ಕರಗಿಸುವಲ್ಲೂ ಸಹಕಾರಿ.

ಕಾಳುಮೆಣಸು-ಮೆಂತ್ಯ ನೀರು: ರಾತ್ರಿ ಮೆಂತ್ಯ ಕಾಳು ನೆನೆಸಿ, ಬೆಳಗ್ಗೆ ಆ ನೀರನ್ನು ಕಾಳುಮೆಣಸಿನ ಪುಡಿಯೊಂದಿಗೆ ಕುಡಿಯಿರಿ. ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಲಾಡ್ ಮೇಲೆ ಕಾಳುಮೆಣಸು ಪುಡಿ ಸಿಂಪಡಿಸಿ ತಿನ್ನುವುದು: ಹಣ್ಣು, ತರಕಾರಿ ಅಥವಾ ಮೊಸರು ಸಲಾಡ್‌ಗಳಿಗೆ ಸ್ವಲ್ಪ ಕಾಳುಮೆಣಸು ಪುಡಿ ಹಾಕಿ ಸೇವಿಸಿ. ಇದರಿಂದ ರುಚಿ ಹೆಚ್ಚಾಗಿ, ಕೊಬ್ಬು ಕರಗಿಸುವ ಕ್ರಿಯೆಗೂ ಒಳ್ಳೆಯದು.

ದಿನನಿತ್ಯದ ಆಹಾರದಲ್ಲಿ ಬಳಸುವುದು: ಅನ್ನ ತಿನ್ನುವ ಮುನ್ನ ಅಥವಾ ಚಪಾತಿ ಜೊತೆ ತಿನ್ನುವ ಆಹಾರಗಳ ಮೇಲೆ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿಕೊಳ್ಳಿ. ಹೀಗೆ ನಿರಂತರವಾಗಿ ಬಳಸಿದರೆ ದೇಹದಲ್ಲಿ ಕೊಬ್ಬು ಸಂಗ್ರಹವಾಗದಂತೆ ತಡೆಯುತ್ತದೆ.

ಕಾಳುಮೆಣಸಿನ ಅಡ್ಡಪರಿಣಾಗಳು

ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಕಾಳುಮೆಣಸು ನೋಡಲು ಚಿಕ್ಕದಾದರೂ, ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಅದು ಹೊಟ್ಟೆಯಲ್ಲಿ ಉರಿಯೂತ, ಅಜೀರ್ಣ, ಮೈಚಳಿ, ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ದಿನಕ್ಕೆ 1 ಚಮಚಕ್ಕಿಂತ ಹೆಚ್ಚು ಸೇವಿಸಬೇಡಿ. ವಿಶೇಷವಾಗಿ ಖಾಲಿಹೊಟ್ಟೆಗೆ ಸೇವಿಸುವಾಗ ಶರೀರದ ಪ್ರತಿಕ್ರಿಯೆಯನ್ನು ಗಮನಿಸಿ.

ತೂಕ ಇಳಿಕೆಗೆ ಕಾಳುಮೆಣಸು ಒಂದು ನೈಸರ್ಗಿಕ ಮತ್ತು ಸುಲಭವಾದ ಪರಿಹಾರವಾಗಿದೆ. ಇದರೊಂದಿಗೆ ಸಮತೋಲನದ ಆಹಾರ, ವ್ಯಾಯಾಮ ಹಾಗೂ ಜೀವನಶೈಲಿ ಪಾಲಿಸಿದರೆ ಉತ್ತಮ ಫಲಿತಾಂಶಗಳು ಖಚಿತ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).

Priyanka Gowda

eMail
Whats_app_banner