ಬಿಗ್‌ಬಾಸ್ ಸುಂದರಿ ಪಾಯಲ್ ಮಲಿಕ್ ತೂಕ ಇಳಿಸಿಕೊಂಡ ಕಥೆ ಇದು; ನಿಮಗೂ ಸ್ಫೂರ್ತಿ ಆಗಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಗ್‌ಬಾಸ್ ಸುಂದರಿ ಪಾಯಲ್ ಮಲಿಕ್ ತೂಕ ಇಳಿಸಿಕೊಂಡ ಕಥೆ ಇದು; ನಿಮಗೂ ಸ್ಫೂರ್ತಿ ಆಗಬಹುದು

ಬಿಗ್‌ಬಾಸ್ ಸುಂದರಿ ಪಾಯಲ್ ಮಲಿಕ್ ತೂಕ ಇಳಿಸಿಕೊಂಡ ಕಥೆ ಇದು; ನಿಮಗೂ ಸ್ಫೂರ್ತಿ ಆಗಬಹುದು

ಮಹಿಳೆಯರು ಗರ್ಭ ಧರಿಸಿದ ಬಳಿಕ ಸಹಜವಾಗಿ ತೂಕದಲ್ಲಿ ಹೆಚ್ಚಳವಾಗುತ್ತದೆ. ಆದರೆ, ಮಗುವಿಗೆ ಜನ್ಮ ನೀಡಿದ ಬಳಿಕವೂ ಹಲವರು ತೂಕ ಇಳಿಕೆಯಾಗದೆ, ಮತ್ತಷ್ಟು ದಪ್ಪಗಾಗುತ್ತಾರೆ. ಇದರಿಂದ ಕೆಲವರು ಖಿನ್ನತೆಗೂ ಒಳಗಾದವರಿದ್ದಾರೆ. ಆದರೆ, ನಟಿ ಪಾಯಲ್ ಮಲಿಕ್ ಮಗುವಿಗೆ ಜನ್ಮ ನೀಡಿದ ಕೇವಲ 8 ತಿಂಗಳಲ್ಲಿ ತಮ್ಮ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಇಲ್ಲಿದೆ ಅವರ ಸ್ಪೂರ್ತಿದಾಯಕ ಕಥೆ.

ಬಿಗ್‌ಬಾಸ್ ಸುಂದರಿ ಪಾಯಲ್ ಮಲಿಕ್ ತೂಕ ಇಳಿಸಿಕೊಂಡ ಕಥೆ ಇದು
ಬಿಗ್‌ಬಾಸ್ ಸುಂದರಿ ಪಾಯಲ್ ಮಲಿಕ್ ತೂಕ ಇಳಿಸಿಕೊಂಡ ಕಥೆ ಇದು (instagram)

ಇಂದು ಬಹುತೇಕರಿಗೆ ತಮ್ಮ ತೂಕ ಕಳೆದುಕೊಳ್ಳುವುದು ಹೇಗೆ ಎಂಬುವುದೇ ಒಂದು ದೊಡ್ಡ ಚಿಂತೆ. ಅದರಲ್ಲೂ ಮಹಿಳೆಯರು ಗರ್ಭ ಧರಿಸಿದ ಬಳಿಕ ಸಹಜವಾಗಿ ದಪ್ಪಗಾಗುತ್ತಾರೆ. ಮಗು ಜನಿಸಿದ ಬಳಿಕವೂ ಹಲವರು ಮತ್ತೆ ಹಿಂದಿನ ತೂಕವನ್ನು ಹೊಂದುವುದು ತುಸು ಕಷ್ಟವೇ ಹೌದು. ಹೀಗಾಗಿ ತೂಕ ಇಳಿಸಿಕೊಳ್ಳಲು ಪರದಾಡುತ್ತಾರೆ. ಆದರೆ, ಮೂರು ಮಕ್ಕಳಿಗೆ ಜನ್ಮ ನೀಡಿದ್ರೂ ಸುಮಾರು 10 ಕೆಜಿಯಷ್ಟು ತೂಕ ಕಡಿಮೆ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಪಾಯಲ್ ಮಲಿಕ್ ಅವರ ಕಥೆ ಇಲ್ಲಿದೆ.

ಪಾಯಲ್ ಮಲಿಕ್ ಅವರು ಮೂರು ಮಕ್ಕಳಿಗೆ ಜನ್ಮ ನೀಡಿದ್ರೂ ಸುಮಾರು 10 ಕೆ.ಜಿಯಷ್ಟು ತೂಕ ಇಳಿಸಿದ್ದಾರಂತೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಕೆಲವರು ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಟೀಕಿಸಿದ್ದಾರೆ. ಫಿಟ್‍ನೆಸ್‌ಗಾಗಿ ಆಕೆಯ ಸಮರ್ಪಣೆಯ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನೂ ಕೆಲವರು ತೂಕ ಇಳಿಸಿಕೊಂಡಿರುವ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ತೂಕ ಇಳಿಸಿಕೊಂಡಿದ್ದಾರೆ ಎಂದು ಕೆಲವೊಬ್ಬರು ಅಣಕಿಸಿದ್ದಾರೆ.

ಪಾಯಲ್ ಮಲಿಕ್ ಅವರ ತೂಕ ಇಳಿಕೆಯ ಪ್ರಯಾಣ ಹೇಗಿತ್ತು?

ಪಾಯಲ್ ಮಲಿಕ್ ಹೆಸರಾಂತ ಗಾಯಕ ಅರ್ಮಾನ್ ಮಲಿಕ್ ಅವರ ಜನಪ್ರಿಯ ವ್ಲಾಗ್‍ಗಳಲ್ಲಿ ಪಾಲ್ಗೊಂಡಿದ್ದರಿಂದ ಹೆಸರುವಾಸಿಯಾದರು. ಅಲ್ಲದೆ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಪಾಯಲ್ 2023ರ ಏಪ್ರಿಲ್ 26ರಂದು ಸಿಸೇರಿಯನ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಗರ್ಭಿಣಿಯಾದಾಗ ಗಣನೀಯವಾಗಿ ತೂಕದಲ್ಲಿ ಹೆಚ್ಚಳವಾಗಿತ್ತು. ಮಕ್ಕಳಿಗೆ ಜನ್ಮ ನೀಡಿದ ಕೇವಲ ಎಂಟು ತಿಂಗಳಲ್ಲಿ ಸಾಕಷ್ಟು ತೂಕ ಇಳಿಸಿಕೊಂಡರು. ತಮ್ಮ ಫಿಟ್ನೆಸ್‍ನ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು.

ತನ್ನ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಪಾಯಲ್, ಫಿಟ್ ಆಗಿರುವ ತನ್ನ ದೇಹದ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಟ್ಟುನಿಟ್ಟಾದ ಆಹಾರ ಕ್ರಮ ಹಾಗೂ ನಿಯಮಿತವಾಗಿ ಜಿಮ್‍ನಲ್ಲಿ ವರ್ಕೌಟ್ ಮಾಡಿದ್ದರಿಂದ ತೂಕ ನಷ್ಚಕ್ಕೆ ಸಹಕಾರಿಯಾಯಿತು ಎಂದು ಅವರು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಪಾಯಲ್ ಹಂಚಿಕೊಂಡಿರುವ ವಿಡಿಯೋ, ಆಕೆಯ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಗರ್ಭಧಾರಣೆಯ ನಂತರ ಹಾಗೂ ಪ್ರಸ್ತುತ ದೇಹ ಫಿಟ್ ಆಗಿರಲು ತಾನು ಕೈಗೊಂಡ ಪ್ರಯಾಣದ ಬಗ್ಗೆ ವಿಡಿಯೋದಲ್ಲಿ ಹೈಲೈಟ್ ಮಾಡಲಾಗಿದೆ. ಈ ವಿಡಿಯೋ ಕೂಡಲೇ ವೈರಲ್ ಆಗಿದ್ದು, ಬಳಕೆದಾರರನ್ನು ಆಕರ್ಷಿಸಿದೆ. ಕೆಲವರು ಋಣಾತ್ಮಕ ಕಾಮೆಂಟ್ ಗಳನ್ನು ಮಾಡಿದ್ದು, ಶಸ್ತ್ರಚಿಕಿತ್ಸೆ ಮೊರೆ ಹೋಗಿರುವ ಸಾಧ್ಯತೆ ಬಗ್ಗೆ ಊಹಿಸಿದ್ದಾರೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಪಾಯಲ್ ವಿಡಿಯೋ ಹಂಚಿಕೊಂಡ ಬಳಿಕ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದಾರೆ. ಆಹಾರಕ್ರಮ, ವ್ಯಾಯಾಮದ ದಿನಚರಿ ಮತ್ತು ಅವರ ತೂಕ ಇಳಿಸುವ ಪ್ರಯಾಣದ ಒಟ್ಟಾರೆ ಅವಧಿಯ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರಂತೂ ಇದೊಂದು ನಾಟಕ, ಶಸ್ತ್ರಚಿಕಿತ್ಸೆ ಮಾಡಿಕೊಂಡು ತಾನು ವರ್ಕೌಟ್ ಮಾಡಿ ತೂಕ ನಷ್ಟ ಮಾಡಿಕೊಂಡಿದ್ದಾಗಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಟೀಕೆಗೆ ಪಾಯಲ್ ಪ್ರತಿಕ್ರಿಯೆ

ಹಲವು ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದರೂ ಯಾವುದಕ್ಕೂ ಕ್ಯಾರೇ ಎನ್ನದ ಪಾಯಲ್, ತನ್ನ ತೂಕ ನಷ್ಟದ ಪಯಣ ಹಾಗೂ ಫಿಟ್ನೆಸ್ ಸಲಹೆಗಳನ್ನು ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದಾರೆ. ತನ್ನ ರೂಪಾಂತರವು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಕೂಡಿದೆ ಎಂದು ತಿಳಿಸಿದ್ದಾರೆ.

ಪಾಯಲ್ ಅವರ ಪ್ರಯಾಣವು ಹೆರಿಗೆಯ ನಂತರ ಬಹುತೇಕ ಎಲ್ಲಾ ಮಹಿಳೆಯರು ಎದುರಿಸುವ ಸವಾಲುಗಳ ಬಗ್ಗೆ ಎತ್ತಿ ತೋರಿಸುತ್ತದೆ. ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳವಾಗುವುದು ನೈಸರ್ಗಿಕ ಕ್ರಿಯೆಯಾಗಿದೆ. ಆದರೆ, ಹೆರಿಗೆಯ ನಂತರ ತೂಕ ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ. ವಿಶೇಷವಾಗಿ ಅವಳಿ ಮಕ್ಕಳ ನಂತರ ತನ್ನ ದೇಹವನ್ನು ಫಿಟ್ ಆಗಿ ಕಾಯ್ದುಕೊಂಡ ಪಾಯಲ್ ಅವರ ಬದ್ಧತೆ ನಿಜಕ್ಕೂ ಶ್ಲಾಘನೀಯವಾದದ್ದು. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮನೋಭಾವನೆಯಿದ್ದರೆ, ಫಿಟ್ನೆಸ್ ಮರಳಿ ಪಡೆಯಲು ಸಾಧ್ಯ ಎಂದು ಪಾಯಲ್ ಸಾಧಿಸಿ ತೋರಿಸಿದ್ದಾರೆ.

ಒಟ್ಟಿನಲ್ಲಿ ಪಾಯಲ್ ಮಲಿಕ್ ಅವರ ತೂಕ ಇಳಿಕೆ ಪ್ರಯಾಣವು ಖಂಡಿತವಾಗಿಯೂ ಮೆಚ್ಚುವಂಥದ್ದು. ಆಕೆಯ ರೂಪಾಂತರವೂ (ತೂಕ ಕಡಿಮೆ ಮಾಡಿಕೊಂಡಿರುವುದು) ಅನೇಕರಿಗೆ ಸ್ಪೂರ್ತಿದಾಯಕವಾಗಿದೆ. ಆಕೆ ಶಸ್ತ್ರಚಿಕಿತ್ಸೆ ಮೂಲಕವಿರಲಿ, ಜಿಮ್‍ನಲ್ಲಿ ವರ್ಕೌಟ್ ಅಥವಾ ಆಹಾರ ಕ್ರಮ ಸೇರಿದಂತೆ ಯಾವ ರೀತಿಯಲ್ಲಿ ತೂಕ ನಷ್ಟ ಮಾಡಿಕೊಂಡರೋ, ಇದು ಪಾಯಲ್ ಅವರ ಫಿಟ್ನೆಸ್‍ಗೆ ಸಮರ್ಪಣೆ ಎಂಬುದಂತೂ ಸ್ಪಷ್ಟವಾಗಿದೆ.