Flight Travel Tips: ಮಗುವಿನ ಜೊತೆ ವಿಮಾನ ಪ್ರಯಾಣ ಮಾಡ್ತಾ ಇದ್ದೀರಾ, ಈ ಸಲಹೆಗಳನ್ನು ತಪ್ಪದೇ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Flight Travel Tips: ಮಗುವಿನ ಜೊತೆ ವಿಮಾನ ಪ್ರಯಾಣ ಮಾಡ್ತಾ ಇದ್ದೀರಾ, ಈ ಸಲಹೆಗಳನ್ನು ತಪ್ಪದೇ ಪಾಲಿಸಿ

Flight Travel Tips: ಮಗುವಿನ ಜೊತೆ ವಿಮಾನ ಪ್ರಯಾಣ ಮಾಡ್ತಾ ಇದ್ದೀರಾ, ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ವಿಮಾನ ಮಾರ್ಗವನ್ನೇ ಅವಲಂಬಿಸಬೇಕಾಗುತ್ತದೆ. ಅಲ್ಲದೆ ಬೇಗ ತಲುಪುವ ಉದ್ದೇಶದಿಂದಲೂ ಕೆಲವರು ವಿಮಾನ ಪ್ರಯಾಣವನ್ನು ಕೈಗೊಳ್ಳುತ್ತಾರೆ. ಆದರೆ. ಸಣ್ಣ ಮಗು ಇರುವ ಪೋಷಕರು ವಿಮಾನದಲ್ಲಿ ಹೋಗುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾದುದು ಅವಶ್ಯಕ. ಮಗುವಿನೊಂದಿಗೆ ಈ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ.

Flight Travel Tips: ಮಗುವಿನ ಜೊತೆ ವಿಮಾನ ಪ್ರಯಾಣಕ್ಕೆ ಮುಂದಾಗಿದ್ದರೆ ಈ ಅಗತ್ಯ ಸಲಹೆಗಳನ್ನು ಅನುಸರಿಸಿ
Flight Travel Tips: ಮಗುವಿನ ಜೊತೆ ವಿಮಾನ ಪ್ರಯಾಣಕ್ಕೆ ಮುಂದಾಗಿದ್ದರೆ ಈ ಅಗತ್ಯ ಸಲಹೆಗಳನ್ನು ಅನುಸರಿಸಿ (Canva)

ದೂರದ ಪ್ರದೇಶಕ್ಕೆ ನೀವು ಹೋಗುತ್ತಿದ್ದರೆ ವಿಮಾನ ಪ್ರಯಾಣ ಉತ್ತಮ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ವಿಮಾನ ಮಾರ್ಗವನ್ನೇ ಅವಲಂಬಿಸಬೇಕಾಗುತ್ತದೆ. ಅಲ್ಲದೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬೇಗ ತಲುಪಬೇಕು ಅಂತಾ ಇದ್ದಲ್ಲಿ ಬಹುತೇಕರು ವಿಮಾನ ಪ್ರಯಾಣವನ್ನೇ ಅವಲಂಬಿಸುತ್ತಾರೆ. ಆದರೆ. ಸಣ್ಣ ಮಗು ಇರುವ ಪೋಷಕರು ವಿಮಾನದಲ್ಲಿ ಹೋಗುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾದುದು ಅವಶ್ಯಕ. ಯಾಕೆಂದರೆ ಇತ್ತೀಚೆಗೆ ವಿದೇಶದಿಂದ ಕೇರಳದ ಕೊಚ್ಚಿಗೆ ಬಂದಿಳಿದ ಮಗುವೊಂದು ಮೃತಪಟ್ಟ ಘಟನೆ ನಡೆದಿದೆ.

ತಾಯಿಯೊಬ್ಬರು ತನ್ನ 11 ತಿಂಗಳ ಮಗುವಿನೊಂದಿಗೆ ಬಹ್ರೇನ್‌ನಿಂದ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಮಗುವಿಗೆ ವಿಮಾನದಲ್ಲೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಕೊಚ್ಚಿಯಲ್ಲಿ ವಿಮಾನದಿಂದ ಇಳಿದ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಅಷ್ಟಾರಲ್ಲಾಗಲೇ ಮಗು ಮೃತಪಟ್ಟಿದೆ. ಇಂತಹ ದುರ್ಘಟನೆ ಸಂಭವಿಸದಂತೆ ಆದಷ್ಟು ಮುಂಜಾಗ್ರತಾ ಕ್ರಮ ವಹಿಸಿಕೊಳ್ಳುವುದು ಅಗತ್ಯ. ಮಗುವಿನೊಂದಿಗೆ ವಿಮಾನ ಪ್ರಯಾಣ ಕೈಗೊಳ್ಳುವಾಗ ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು, ಇಲ್ಲಿದೆ ಸಲಹೆ.

ಮಗುವಿನೊಂದಿಗೆ ವಿಮಾನ ಪ್ರಯಾಣ ಮಾಡುವಾಗ ಈ ಮುನ್ನೆಚ್ಚರಿಕೆಯಿರಲಿ

ಮೂರು ತಿಂಗಳವರೆಗೆ ಪ್ರಯಾಣಿಸುವುದನ್ನು ತಪ್ಪಿಸಿ: ವಿಮಾನಗಳು ಸೂಕ್ಷ್ಮಾಣುಗಳ ಸಂತಾನೋತ್ಪತ್ತಿಯ ಸ್ಥಳವಾಗಿದೆ. ನವಜಾತ ಶಿಶುಗಳು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಹೀಗಾಗಿ ಮೂರು ತಿಂಗಳವರೆಗೆ ಮಗುವನ್ನು ವಿಮಾನದಲ್ಲಿ ಕರೆದೊಯ್ಯದಿರುವುದು ಉತ್ತಮ. ಅಮೆರಿಕನ್ ಏರ್ಲೈನ್ಸ್ 2 ದಿನಗಳ ವಯಸ್ಸಿನ ಶಿಶುಗಳಿಗೆ ಪ್ರಯಾಣಿಸಲು ಅನುಮತಿ ನೀಡುತ್ತದೆ. ಸೌತ್‌ವೆಸ್ಟ್ ಏರ್‌ಲೈನ್ಸ್ 14 ದಿನಗಳ ವಯಸ್ಸಿನ ಶಿಶುಗಳಿಗೆ ಪ್ರಯಾಣಿಸಲು ಅವಕಾಶ ನೀಡುತ್ತದೆ. ಹೀಗಾಗಿ ಮುಂಜಾಗ್ರತೆ ವಹಿಸುವುದು ಅತಿ ಮುಖ್ಯ. ಪ್ರಯಾಣಿಸುವ ಅನಿವಾರ್ಯತೆ ತುಂಬಾ ಇದ್ದರೆ ಮಾತ್ರ ಮಗುವನ್ನು ಕರೆದೊಯ್ಯಿರಿ. ನಿಮ್ಮ ಕೈಗಳನ್ನು ಆಗಾಗ ತೊಳೆಯುವುದು, ಸೂಕ್ಷ್ಮ ಜೀವಿಗಳಿಂದ ರಕ್ಷಿಸಲು ಹ್ಯಾಂಡ್ ಸ್ಯಾನಿಟೈಜರ್ ಬಳಸಿ. ಹಾಗೆಯೇ ಇತರೆ ಪ್ರಯಾಣಿಕರ ನಡುವೆ ಸುರಕ್ಷಿತ ಅಂತರವನ್ನು ಇರಿಸಿ.

ನೇರ ವಿಮಾನ ಟಿಕೆಟ್ ಕಾಯ್ದಿರಿಸಿ: ಸಾಧ್ಯವಾದರೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ಅಡೆತಡೆಗಳ ಸಾಧ್ಯತೆಗಳನ್ನು ಕಡಿಮೆ ಮಾಡಲು ತಡೆರಹಿತ ವಿಮಾನವನ್ನು ಆರಿಸಿ. ಇದರಿಂದ ನೀವು ನಿಮ್ಮ ಗಮ್ಯ ಸ್ಥಳಕ್ಕೆ ಬೇಗ ತಲುಪಬಹುದು.

ಆದಷ್ಟು ಬೇಗ ವಿಮಾನ ನಿಲ್ದಾಣಕ್ಕೆ ಆಗಮಿಸಿ: ಸಮಯಕ್ಕೆ ಮುಂಚಿತವಾಗಿ ಆದಷ್ಟು ಬೇಗ ವಿಮಾನ ನಿಲ್ದಾಣಕ್ಕೆ ಆಗಮಿಸಿ. ಚೆಕ್ ಇನ್ ಮಾಡಲು, ಭದ್ರತೆಯನ್ನು ಪರಿಶೀಲಿಸಲು ಮತ್ತು ಯಾವುದೇ ಅನಿರೀಕ್ಷಿತ ಸಮಸ್ಯೆಗಳನ್ನು ನಿಭಾಯಿಸಲು ನಿಮಗೆ ಸಾಕಷ್ಟು ಸಮಯವನ್ನು ನೀಡುವುದು ಬಹಳ ಮುಖ್ಯ.

ಅಗತ್ಯ ವಸ್ತುಗಳನ್ನು ಸಂಗ್ರಹಿಸಿ: ಹಾರಾಟದ ಸಮಯದಲ್ಲಿ ಮಗುವು ಹೆದರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.ಇದಕ್ಕಾಗಿ ಮಗುವಿಗೆ ಅಗತ್ಯವಿರುವ ಆಹಾರ, ನೀರು, ಆಟಿಕೆ, ಬೆಚ್ಚಗಿನ ಉಡುಪು ಇತ್ಯಾದಿಗಳನ್ನು ಪ್ಯಾಕ್ ಮಾಡುವುದನ್ನು ಮರೆಯಬೇಡಿ. ವಿಮಾನದಲ್ಲಿ ಎಸಿ ಇರುವುದರಿಂದ ಮಗುವಿಗೆ ಚಳಿಯಾಗಬಹುದು. ಹೀಗಾಗಿ ದಪ್ಪನೆಯ ಉಡುಪು ತೊಡಿಸುವುದು ಬಹಳ ಮುಖ್ಯ. ವಿಮಾನ ಪ್ರಯಾಣದುದ್ದಕ್ಕೂ ಮಗು ಆರಾಮದಾಯಕವಾಗಿರಲು ಸಹಾಯ ಮಾಡುತ್ತದೆ.

ಒತ್ತಡಕ್ಕೆ ಸಿದ್ಧರಾಗಿ: ಮಗುವಿನೊಂದಿಗೆ ವಿಮಾನದಲ್ಲಿ ಪ್ರಯಾಣಿಸುವಾಗ, ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಎತ್ತರದಲ್ಲಿನ ಬದಲಾವಣೆಗಳಿಂದಾಗಿ ಕಿವಿಯ ಮೇಲೆ ಒತ್ತಡ ಉಂಟಾಗುವುದು ಅವರು ಎದುರಿಸಬಹುದಾದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಚಿಕ್ಕ ಮಕ್ಕಳಿಗೆ ಅಸ್ವಸ್ಥತೆ ಅಥವಾ ನೋವನ್ನು ಉಂಟುಮಾಡಬಹುದು. ಹೀಗಾಗಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಬಾಟಲಿ ಹಾಲು ಅಥವಾ ಪಾನೀಯವನ್ನು ನೀಡಿ. ದೊಡ್ಡ ಮಕ್ಕಳಿಗಾದರೆ ಚೂಂಯಿಗಮ್ ಅಥವಾ ತಿಂಡಿಗಳನ್ನು ತಿನ್ನಲು ಕೊಡಿ. ಮಗುವಿಗೆ ಮೊದಲೇ ಕಿವಿ ಸಮಸ್ಯೆ ಇದ್ದರೆ ಪ್ರಯಾಣಕ್ಕೆ ಮುಂಚಿತವಾಗಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಬೆಚ್ಚಗಿನ ಬಟ್ಟೆ ಬಳಸಿ: ವಿಮಾನ ಪ್ರಯಾಣದ ಸಮಯದಲ್ಲಿ ನಿಮ್ಮ ಮಗುವಿನ ಕಿವಿಯ ಒತ್ತಡ ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಬೆಚ್ಚಗಿನ ಟವಲ್ ಅಥವಾ ಬಟ್ಟೆಯನ್ನು ಬಳಸಿ. ಸಣ್ಣ ಟವಲ್ ಅಥವಾ ಬಟ್ಟೆಯನ್ನು ಬೆಚ್ಚಗಿನ ನೀರಿನಿಂದ ತೇವಗೊಳಿಸಿ ನೀರನ್ನು ಹಿಸುಕಿ. ನಂತರ ನಿಮ್ಮ ಮಗುವಿನ ಕಿವಿಗಳ ಮೇಲೆ ನಿಧಾನವಾಗಿ ಕೆಲವು ನಿಮಿಷಗಳ ಕಾಲ ಇರಿಸಬಹುದು, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.

ಕಿವಿಯ ಆರೋಗ್ಯವನ್ನು ಪರಿಶೀಲಿಸಿ: ವಿಮಾನ ಪ್ರಯಾಣ ಮುನ್ನ ವೈದ್ಯರಲ್ಲಿ ಕರೆದೊಯ್ದು ಮಗುವಿನ ಕಿವಿಯ ಆರೋಗ್ಯ ಪರಿಶೀಲಿಸುವುದು ಬಹಳ ಮುಖ್ಯ. ನಿಮ್ಮ ಮಗುವಿಗೆ ಕಿವಿ ಸೋಂಕು ಅಥವಾ ಕಿವಿಯ ಒತ್ತಡದ ಸಮಸ್ಯೆ ಇದ್ದರೆ, ವಿಮಾನ ಪ್ರಯಾಣ ಮುನ್ನ ನಿಮ್ಮ ಮಕ್ಕಳ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)