ಕನ್ನಡ ಸುದ್ದಿ  /  Lifestyle  /  Food 5 Weight Loss Friendly Recipes Healthy Methi Leaves Breakfast Recipes Benefits Of Fenugreek Leaves Arc

ತೂಕ ಇಳಿಯೋಕೆ ಹೆಲ್ಪ್‌ ಮಾಡೋ ಮೆಂತ್ಯಸೊಪ್ಪಿನ ರೆಸಿಪಿಗಳಿವು; ಈ ಖಾದ್ಯಗಳು ನಿಮ್ಮ ಮೇಲೆ ಮ್ಯಾಜಿಕ್‌ ಮಾಡೋದು ಸುಳ್ಳಲ್ಲ

ತೂಕ ಇಳಿಸಿಕೊಳ್ಳುವುದರ ಜೊತೆಗೆ ಉತ್ತಮ ಪೋಷಕಾಂಶಗಳ ಸೇವನೆಯೊಂದಿಗೆ ದಿನ ಪ್ರಾರಂಭಿಸಬೇಕು ಅನ್ನುವುದು ನಿಮ್ಮ ಬಯಕೆಯಾಗಿದ್ದರೆ ಅದಕ್ಕೆ ಮೆಂತ್ಯ ಸೊಪ್ಪು ಬೆಸ್ಟ್‌. ಮೆಂತ್ಯ ಸೊಪ್ಪಿನಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಇವು ನಾಲಿಗೆಯ ರುಚಿ ಹೆಚ್ಚಿಸುವುದರ ಜೊತೆಗೆ ದೇಹದ ಪೋಷಣೆಗೂ ನೆರವಾಗುತ್ತದೆ. ಡಯಾಬಿಟಿಸ್‌ ಇರುವವರಿಗೂ ಇದು ಉತ್ತಮ.

ತೂಕ ಇಳಿಯೋಕೆ ಹೆಲ್ಪ್‌ ಮಾಡೋ ಮೆಂತ್ಯಸೊಪ್ಪಿನ ರೆಸಿಪಿಗಳು
ತೂಕ ಇಳಿಯೋಕೆ ಹೆಲ್ಪ್‌ ಮಾಡೋ ಮೆಂತ್ಯಸೊಪ್ಪಿನ ರೆಸಿಪಿಗಳು

ಸದ್ಯಕ್ಕೆ ನಮ್ಮಲ್ಲಿ ಶೇ 80 ರಷ್ಟು ಮಂದಿಯನ್ನು ಕಾಡುವ ಪ್ರಶ್ನೆ ಎಂದರೆ ತೂಕ ಇಳಿಸುವುದು ಹೇಗೆ ಎಂಬುದು. ಇತ್ತೀಚಿನ ಜೀವನಕ್ರಮದಲ್ಲಿ ತೂಕ ಇಳಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಏನೇನೋ ಸರ್ಕಸ್‌ ಮಾಡಿದರೂ ತೂಕ ಕಡಿಮೆ ಆಗೊಲ್ಲ. ಬಾಯಿಗೆ ರುಚಿಸಿದನ್ನು ತಿಂದ ನಂತರವೂ ತೂಕ ಇಳಿಯುವಂತಿದ್ದರೆ ಎಂಬ ಆಲೋಚನೆ ಬಹಳಷ್ಟು ಜನರಲ್ಲಿ ಬಂದಿರಬಹುದು. ಅದಕ್ಕೆ ಮೆಂತ್ಯ ಸೊಪ್ಪು ಉತ್ತಮವಾಗಿದೆ. ತೂಕ ಇಳಿಕೆ ಡಯಟ್‌ ಪ್ಲಾನ್‌ನಲ್ಲಿ ಸೇರಿಸಿಕೊಳ್ಳಬಹುದಾದ ಉತ್ತಮ ಆಹಾರವಿದು. ಮೆಂತ್ಯ ಸೊಪ್ಪು ಹಸಿರು ತರಕಾರಿಗಳಲ್ಲಿ ವಿಶಿಷ್ಟ ಪರಿಮಳ ಹೊಂದಿರುವ ಸೊಪ್ಪು. ಪೋಷಕಾಂಶಗಳ ಗಣಿಯಾಗಿರುವ ಮೆಂತ್ಯ ಸೊಪ್ಪಿನಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಸ್ವಲ್ಪ ಕಹಿ ರುಚಿ ಮತ್ತು ಗಾಢ ಪರಿಮಳ ಹೊಂದಿರುವ ಮೆಂತ್ಯ ಸೊಪ್ಪು ಭಾರತೀಯರು ಇಷ್ಟಪಡುವ ನೆಚ್ಚಿನ ತರಕಾರಿಗಳಲ್ಲೊಂದು. ಮೆಂತ್ಯ ಸೊಪ್ಪಿನಿಂದ ಸಾರು, ಪಲ್ಯ, ಪರಾಠಗಳನ್ನು ತಯಾರಿಸುತ್ತಾರೆ. ಮೆಂತ್ಯ ಸೊಪ್ಪು ಕೇವಲ ಪರಿಮಳವನ್ನಷ್ಟೇ ಹೊಂದಿಲ್ಲ ಇದು ತನ್ನೊಳಗೆ ಅನೇಕ ಪೋಷಕಾಂಶಗಳನ್ನು ಅಡಗಿಸಿಟ್ಟುಕೊಂಡಿದೆ. ಕಬ್ಬಿಣ, ವಿಟಮಿನ್‌ ಎ,ಸಿ ಮತ್ತು ಕೆ ಯನ್ನು ಹೊಂದಿದೆ. ಜೊತೆಗೆ ಅವಶ್ಯಕ ಖನಿಜಗಳು ಇದರಲ್ಲಿವೆ. ಮೆಂತ್ಯ ಸೊಪ್ಪು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ, ದೇಹದ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಹೀಗಾಗಿ ತೂಕ ಇಳಿಕೆಗೆ ಇದು ಉತ್ತಮವಾದ ಆಹಾರವಾಗಿದೆ.

ತೂಕ ಇಳಿಕೆಗೆ ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು ಕಡಿಮೆ ಕ್ಯಾಲೊರಿ ಹೊಂದಿದೆ. ಇದರಲ್ಲಿ ನಾರಿನಾಂಶ ಅಧಿಕವಾಗಿದೆ. ಚಯಾಪಚಯ ಕ್ರಿಯೆಗೆ ಸಹಾಯ ಮಾಡುವ ಮೆಂತ್ಯ ಸೊಪ್ಪು ತೂಕ ಇಳಿಕೆಯ ಡಯಟ್‌ ಪ್ಲಾನ್‌ಗೆ ಅದ್ಭುತ ಸೇರ್ಪಡೆ ಎನ್ನುವುದರಲ್ಲಿ ಅನುಮಾನವಿಲ್ಲ. ಬೆಳಗಿನ ಉಪಹಾರದಲ್ಲಿಯೇ ಮೆಂತ್ಯ ಸೊಪ್ಪನ್ನು ಸೇರಿಸಿಕೊಳ್ಳುವುದರಿಂದ ಇಡೀ ದಿನದ ತೂಕ ಇಳಿಕೆಯ ಪ್ರಯಾಣವನ್ನು ಸುಗಮಗೊಳಿಸುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸಿ, ತೂಕ ನಷ್ಟದ ಗುರಿಯನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ ಬೆಳಗಿನ ಉಪಹಾರವನ್ನು ಮೆಂತ್ಯ ಸೊಪ್ಪು ಬಳಸಿ ತಯಾರಿಸಬಹುದಾದ ಅಡುಗೆಗಳಿಂದ ಪ್ರಾರಂಭಿಸಬಹುದು.

ಆರೋಗ್ಯಕರ ಮೆಂತ್ಯ ಸೊಪ್ಪಿನ 5 ತಿಂಡಿಗಳು

1) ಮೆಂತ್ಯ ಸೊಪ್ಪಿನ ಥೇಪ್ಲಾ

ಗುಜರಾತಿಗಳ ನೆಚ್ಚಿನ ತಿಂಡಿಯಾದ ಥೇಪ್ಲಾ ಬೆಳಗಿನ ಉಪಹಾರಕ್ಕೆ ಪರಿಪೂರ್ಣವಾದ ಆಹಾರ. ಗಾಢ ಪರಿಮಳದ ಜೊತೆಗೆ ಬಾಯಲ್ಲಿ ನೀರೂರಿಸುವ ಥೇಫ್ಲಾವನ್ನು ಮೆಂತ್ಯ ಸೊಪ್ಪಿನಿಂದ ತಯಾರಿಸಲಾಗುತ್ತದೆ. ರುಚಿಯಾಗಿರುವುದರ ಜೊತೆಗೆ ಎಲ್ಲಾ ರೀತಿಯ ಪೋಷಕಾಂಶ, ನಾರಿನಾಂಶಗಳನ್ನು ನೀಡುವುದರಿಂದ ಪರಿಪೂರ್ಣ ಆಹಾರವಾಗಿದೆ. ದಿನಪೂರ್ತಿ ಕೆಲಸ ಮಾಡಲು ಅಗತ್ಯವಿರುವ ಶಕ್ತಿ ನೀಡುತ್ತದೆ.

ಒಂದು ಪಾತ್ರೆಗೆ ಗೋಧಿಹಿಟ್ಟು, ಚಿಕ್ಕದಾಗಿ ಹೆಚ್ಚಿದ ಒಂದು ಕಪ್‌ ಮೆಂತ್ಯ ಸೊಪ್ಪು, ಮೊಸರು ಮತ್ತು ಗರಂ ಮಸಾಲೆ ಪುಡಿ ಸೇರಿಸಿ. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಅಡುಗೆ ಎಣ್ಣೆ ಸೇರಿಸಿ. ಸ್ವಲ್ಪ ನೀರು ಹಾಕಿ ಚೆನ್ನಾಗಿ ನಾದಿಕೊಳ್ಳಿ. ಹಿಟ್ಟು ಮೃದುವಾಗಿರಲಿ. ಚಿಕ್ಕ ಉಂಡೆ ತೆಗೆದುಕೊಂಡು ಲಟ್ಟಿಸಿ. ಚಪಾತಿಯಷ್ಟು ದೊಡ್ಡದಿರಲಿ. ಅದನ್ನು ಎಣ್ಣೆ ಹಾಕಿ ಹೊಂಬಣ್ಣ ಬರುವವರೆಗೆ ಎರಡೂ ಕಡೆ ಬೇಯಿಸಿ. ಮೆಂತ್ಯ ಸೊಪ್ಪಿನ ಥೇಫ್ಲಾ ಸವಿಯಲು ರೆಡಿ. ಚಟ್ನಿ ಪುಡಿ ಮತ್ತು ಮೊಸರು ಅಥವಾ ಗ್ರೀನ್‌ ಚಟ್ನಿ ಇದಕ್ಕೆ ಬೆಸ್ಟ್‌ ಕಾಂಬಿನೇಷನ್‌.

ಮೆಂತ್ಯ ಸೊಪ್ಪು–ಪನೀರ್‌ ಪರಾಠ

ಪರಾಠ ಉತ್ತರ ಭಾರತದ ಪ್ರಮುಖ ಉಪಹಾರಗಳಲ್ಲೊಂದು. ವಿವಿಧ ತರಕಾರಿ, ಸೊಪ್ಪುಗಳನ್ನು ಉಪಯೋಗಿಸಿ ರುಚಿಕರವಾದ ಪರಾಠಗಳನ್ನು ತಯಾರಿಸಲಾಗುತ್ತದೆ. ಮೆಂತ್ಯ ಸೊಪ್ಪು–ಪನೀರ್‌ ಪರಾಠ ಆರೋಗ್ಯಕರ ತಿಂಡಿಗಳಲ್ಲಿ ಒಂದು. ಮೆಂತ್ಯ ಸೊಪ್ಪಿನಲ್ಲಿರುವ ಪೋಷಕಾಂಶಗಳ ಜೊತೆಗೆ ಪನ್ನೀರ್‌ನಲ್ಲಿರುವ ಪ್ರೋಟೀನ್‌ ಸಹ ದೇಹ ಸೇರುತ್ತದೆ. ಹಾಗಾಗಿ ಬಹಳ ಸಮಯದವರೆಗೆ ಹಸಿವನ್ನು ತಡೆಯಬಹುದಾಗಿದೆ.

ಗೋಧಿ ಹಿಟ್ಟಿಗೆ ಸಣ್ಣದಾಗಿ ಹೆಚ್ಚಿದ ಮೆಂತ್ಯ ಸೊಪ್ಪು ಮತ್ತು ತುರಿದ ಪನ್ನೀರ್‌ ಸೇರಿಸಿ. ಅದಕ್ಕೆ ಸ್ವಲ್ಪ ಗರಂ ಮಸಾಲೆ, ಉಪ್ಪು ಮತ್ತು ಒಂದು ಚಮಚ ಎಣ್ಣೆ ಸೇರಿಸಿ ಹಿಟ್ಟನ್ನು ನಾದಿಕೊಳ್ಳಿ. ಮೃದುವಾದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತೆಗೆದುಕೊಂಡು ಲಟ್ಟಿಸಿ. ಅದನ್ನು ತವಾ ಮೇಲೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಬೆಳಗಿನ ಉಪಹಾರ ಸವಿಯಿರಿ.

ಮೆಂತ್ಯ–ಹೆಸರು ಬೇಳೆ ಇಡ್ಲಿ

ದಕ್ಷಿಣ ಭಾರತದವರಿಗೆ ಇಡ್ಲಿ ಎಂದರೆ ಬಹಳ ಅಚ್ಚುಮೆಚ್ಚು. ವಾರದಲ್ಲಿ ಒಮ್ಮೆಯಾದರೂ ಬೆಳಗಿನ ತಿಂಡಿಗೆ ಇಡ್ಲಿ ತಿನ್ನಲಾಗುತ್ತದೆ. ನೀವು ಪೌಷ್ಟಿಕಾಂಶಯುಕ್ತ ಲಘ ಆಹಾರ ಸೇವಿಸಬೇಕು ಅಂತಿದ್ರೆ, ಮೆಂತ್ಯ–ಹೆಸರುಬೇಳೆ ಇಡ್ಲಿ ಮಾಡಬಹುದು. ಪ್ರೋಟೀನ್‌ ಮತ್ತು ಫೈಬರ್‌ ಅಂಶ ಅಧಿಕವಾಗಿರುವ ಈ ಇಡ್ಲಿ ಒಂದು ಪರಿಪೂರ್ಣ ತಿಂಡಿಯಾಗುವುದರಲ್ಲಿ ಎರಡು ಮಾತಿಲ್ಲ.

ನೆನೆಸಿದ ಹೆಸರು ಬೇಳೆ ಮತ್ತು ಮೆಂತ್ಯ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದಕ್ಕೆ ಉಪ್ಪು, ಮೊಸರು ಮತ್ತು ಫ್ರುಟ್‌ ಸಾಲ್ಟ್‌ ಸೇರಿಸಿ. ಇಡ್ಲಿ ಮೌಲ್ಡ್‌ಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ 10 ನಿಮಿಷಗಳ ಕಾಲ ಬೇಯಿಸಿ. ಮೆಂತ್ಯ –ಹೆಸರು ಬೇಳೆ ಇಡ್ಲಿ ರೆಡಿ. ಸಾಂಬಾರ್‌ ಅಥವಾ ಚಟ್ನಿಯೊಂದಿಗೆ ಸರ್ವ್‌ ಮಾಡಿ.

ಪಾಲಕ್–ಮೆಂತ್ಯ ಸೊಪ್ಪು ಚೀಲ್ಹಾ

ಲಘು ಮತ್ತು ಪೌಷ್ಟಿಕ ಆಹಾರ ಆಯ್ಕೆ ಮಾಡಿಕೊಳ್ಳಬೇಕೆಂದಿದ್ದರೆ ಪಾಲಕ್‌–ಮೆಂತ್ಯ ಸೊಪ್ಪು ಚೀಲ್ಹಾ ಉತ್ತಮ. ಇದು ವಿಟಮಿನ್‌ ಮತ್ತು ಖನಿಜಗಳಿಂದ ಕೂಡಿದ್ದು ಪರಿಪೂರ್ಣ ತಿಂಡಿಯಾಗಬಲ್ಲದು. ಪಾಲಕ್‌ ಸೊಪ್ಪಿನಲ್ಲಿ ಕಬ್ಬಿಣಾಂಶ ಅಧಿಕವಾಗಿದ್ದು, ಆಂಟಿ ಆಕ್ಸಿಡೆಂಟ್‌ನಿಂದ ಕೂಡಿದೆ. ಮೆಂತ್ಯ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್‌ ಮತ್ತು ನಾರಿನಾಂಶ ಇರುವುದರಿಂದ ಜೀರ್ಣಕ್ರಿಯೆಗೆ ಉತ್ತಮವಾಗಿದೆ.

ಕಡ್ಲೆಹಿಟ್ಟಿಗೆ ಚಿಕ್ಕದಾಗಿ ಹೆಚ್ಚಿದ ಮೆಂತ್ಯ ಮತ್ತು ಪಾಲಕ್‌ ಸೊಪ್ಪು ಸೇರಿಸಿ. ಅದಕ್ಕೆ ಸ್ವಲ್ಪ ಚಿರೋಟಿ ರವಾ, ಚಿಕ್ಕದಾಗಿ ಕತ್ತರಿಸಿದ ಹಸಿರು ಮೆಣಸಿನ ಕಾಯಿ, ಕೊತ್ತೊಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ದೋಸಾ ಹಿಟ್ಟಿನ ಹದದಲ್ಲಿ ಹಿಟ್ಟನ್ನು ತಯಾರಿಸಿಕೊಳ್ಳಿ. ಪ್ಯಾನ್‌ ಬಿಸಿಯಾದ ನಂತರ ಈ ಹಿಟ್ಟನ್ನು ಅದರ ಮೇಲೆ ಹರಡಿ. ದೋಸೆಯ ರೀತಿಯಲ್ಲಿ ಮಾಡಿ. ಎಣ್ಣೆ ಅಥವಾ ತುಪ್ಪ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ಚಟ್ನಿ ಇದಕ್ಕೆ ಉತ್ತಮ ಕಾಂಬಿನೇಷನ್‌.

ಮೆಂತ್ಯ–ಹೆಸರು ಕಾಳು ಚೀಲ್ಹಾ

ಮೆಂತ್ಯ–ಪಾಲಕ್‌ ಚೀಲ್ಹಾ ತಯಾರಿಸಿದಂತೆ ಮೆಂತ್ಯ–ಹೆಸರು ಕಾಳು ಚೀಲ್ಹಾ ತಯಾರಿಸಬಹುದು. ಹೆಸರು ಬೇಳೆಯು ಪ್ರೊಟೀನ್‌ಗಳ ಖಜಾನೆಯಾಗಿದೆ. ಹಾಗಾಗಿ ಇದು ಪರ್ಫೆಕ್ಟ್‌ ಬ್ರೆಕ್‌ಪಾಸ್ಟ್‌ ಆಗಬಲ್ಲದು. ಇದು ಡಯಾಬಿಟಿಸ್‌ ಇರುವವರಿಗೂ ಉತ್ತಮಾಗಿದೆ.

ನೆನೆಸಿದ ಹೆಸರುಕಾಳಿಗೆ ಜೀರಿಗೆ, ಹಸಿರುಮೆಣಸಿನ ಕಾಯಿ, ಸ್ವಲ್ಪ ಇಂಗು ಮತ್ತು ನೀರು ಸೇರಿಸಿ ಗ್ರೈಂಡ್‌ ಮಾಡಿಕೊಳ್ಳಿ. ಅದಕ್ಕೆ ಕಡ್ಲೆಹಿಟ್ಟು, ಉಪ್ಪು ಮತ್ತು ಚಿಕ್ಕದಾಗಿ ಹೆಚ್ಚಿದ ಮೆಂತ್ಯ ಸೊಪ್ಪು ಸೇರಿಸಿ ಹಿಟ್ಟು ತಯಾರಿಸಿಕೊಳ್ಳಿ. ಅದನ್ನು ದೋಸೆಯಂತೆ ಪ್ಯಾನ್‌ ಮೇಲೆ ಹರಡಿ, ಎಣ್ಣೆ ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರೆಗೂ ಬೇಯಿಸಿ. ಚಟ್ನಿಯ ಜೊತೆ ಸವಿಯಿರಿ.

(This copy first appeared in Hindustan Times Kannada website. To read more like this please logon to kannada.hindustantimes.com)