ಬಾಯಲ್ಲಿ ನೀರೂರಿಸುವ ಒಡಿಶಾದ 10 ಸಾಂಪ್ರದಾಯಿಕ ಖಾದ್ಯಗಳಿವು; ಜಗನ್ನಾಥ ರಥಯಾತ್ರೆಗೆ ಹೋದ್ರೆ ಇವನ್ನು ಟೇಸ್ಟ್ ಮಾಡೋದು ಮರಿಬೇಡಿ
ಒಡಿಶಾ ಪುರಿಯಲ್ಲಿ ಜಗನ್ನಾಥ ರಥಯಾತ್ರೆ ನಡೆಯುತ್ತಿದ್ದು, ಲಕ್ಷಾಂತರ ಮಂದಿ ಭಾಗವಹಿಸುತ್ತಿದ್ದಾರೆ. ಪ್ರತಿವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ರಥಯಾತ್ರೆ ನಡೆಯುತ್ತದೆ. ಈ ವರ್ಷದ ರಥಯಾತ್ರೆ ಆರಂಭವಾಗಿದ್ದು, ನೀವೂ ಇಲ್ಲಿಗೆ ಭೇಟಿ ನೀಡಿದ್ರೆ ಇಲ್ಲಿನ ಈ 8 ವಿಶೇಷ ಖಾದ್ಯಗಳನ್ನು ಟೇಸ್ಟ್ ಮಾಡದೇ ಬರಬೇಡಿ.
ಭಾರತವು ದೇವಾಲಯಗಳ ನಾಡು. ಇಲ್ಲಿನ ಪ್ರತಿ ದೇಗುಲಗಳೂ ಸಾಕಷ್ಟು ವೈಶಿಷ್ಟ್ಯವನ್ನು ಹೊಂದಿವೆ. ಭಾರತದ ಪ್ರಮುಖ ದೇವಾಲಯಗಳಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಾಲಯವೂ ಒಂದು. ಹಲವು ವಿಶೇಷಗಳ ಮಂದಿರವಿದು. ಇಲ್ಲಿ ಪ್ರತಿವರ್ಷ ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಜಗನ್ನಾಥ ರಥ ಯಾತ್ರೆ ನಡೆಸುತ್ತಾರೆ. ಈ ಬಾರಿ 18ನೇ ವರ್ಷದ ರಥಯಾತ್ರೆ ನಡೆಯುತ್ತಿದ್ದು, ಭಾನುವಾರ (ಜುಲೈ 7) ರಿಂದ ರಥೋತ್ಸವ ಆರಂಭವಾಗಿದೆ. ಒಂದು ವಾರಗಳ ಕಾಲ ನಡೆಯುವ ರಥಯಾತ್ರಗೆ ನೀವು ಹೋಗಬೇಕು ಅಂದುಕೊಂಡಿದ್ದರೆ ಒಡಿಶಾದ ಈ ಪ್ರಸಿದ್ಧ ತಿನಿಸುಗಳನ್ನು ತಪ್ಪದೇ ಟೇಸ್ಟ್ ಮಾಡಿ ಬನ್ನಿ.
ಒಡಿಶಾದ ದೇವಾಲಯಗಳಷ್ಟೇ ಇಲ್ಲಿನ ಆಹಾರ ಖಾದ್ಯಗಳು ಸಾಕಷ್ಟು ವೈವಿದ್ಯತೆಯನ್ನು ಹೊಂದಿವೆ. ಸಸ್ಯಾಹಾರ, ಮಾಂಸಾಹಾರ ಸೇರಿದಂತೆ ಸಿಹಿ ತಿನಿಸುಗಳು ನಿಮ್ಮ ಜಿಹ್ವ ಚಪಲ ತಣಿಸುವುದರಲ್ಲಿ ಅನುಮಾನವಿಲ್ಲ.
ಖಿಸೆಡೆ
ಇದು ಒಡಿಶಾ ಸಾಂಪ್ರದಾಯಿಕ ತಿನಿಸು. ಇದು ಖಿಚಡಿ ರೂಪದಲ್ಲಿ ಇರುವ ಕಾರಣ ಇದನ್ನು ಕಿಚಡಿ ಎಂದೂ ಕರೆಯಬಹುದು. ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ದೇವರಿಗೆ ಅರ್ಪಿಸುವ ವಿಶೇಷ ಭಕ್ಷ್ಯ ಇದಾಗಿದೆ. ಶುದ್ಧ ತುಪ್ಪದಲ್ಲಿ ಬೇಯಿಸಿದ ಅಕ್ಕಿ ಹಾಗೂ ಮಸಾಲೆಗಳ ಸಂಗ್ರಮ ಈ ತಿನಿಸು. ಇದನ್ನು ಪಾಪಡ್ ಹಾಗೂ ಮೊಸರಿನೊಂದಿಗೆ ಬಡಿಸುತ್ತಾರೆ. ಇದು ನಾಲಿಗೆ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಹೊಟ್ಟೆಯನ್ನೂ ತಣಿಸುತ್ತದೆ.
ಚುಂಗ್ಡಿ ಮಲೈ
ನೀವು ಸಮುದ್ರಾಹಾರ ಪ್ರಿಯರಾಗಿದ್ದರೆ ಚುಂಗ್ಡಿ ಮಲೈ ಅನ್ನು ತಪ್ಪದೇ ಟೇಸ್ಟ್ ಮಾಡಬೇಕು. ಇದು ಒಡಿಶಾ ಕರಾವಳಿ ಶೈಲಿಯ ಖಾದ್ಯ. ತೆಂಗಿನ ಹಾಲು ಹಾಗೂ ಮಸಾಲೆಗಳಿಂದ ಸಮೃದ್ಧವಾಗಿರುವ ಸಿಗಡಿ ಖಾದ್ಯ ಇದಾಗಿದೆ. ಇದರೊಂದಿಗೆ ಬಾಸುಮತಿ ಅಕ್ಕಿಯ ಘಮವು ಈ ಖಾದ್ಯಕ್ಕೆ ವಿಶೇಷ ರುಚಿ ನೀಡುತ್ತದೆ.
ಮಚ್ಚಾ ಘಂಟಾ
ಆಲೂಗಡ್ಡೆ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಮಸಾಲೆಗಳ ಸಮೃದ್ಧ ಮಿಶ್ರಣದಿಂದ ತಯಾರಿಸಲಾದ ಆಕರ್ಷಕ ಮೀನಿನ ಮೇಲೋಗರವಾದ ಮಚ್ಚಾ ಘಂಟಾ ಒಡಿಶಾದ ಐಕಾನಿಕ್ ಖಾದ್ಯಗಳಲ್ಲಿ ಒಂದು. ಇದನ್ನು ಮೀನು ಬಳಸದೇ ಸಸ್ಯಹಾರಿಗಳಿಗೂ ತಯಾರಿಸಲಾಗುತ್ತದೆ, ಇದನ್ನು ದುರ್ಗಾಮಾತೆಯ ಇಷ್ಟದ ಖಾದ್ಯ ಎಂದು ಒಡಿಶಾ ಜನರು ನಂಬಿದ್ದಾರೆ.
ದಾಲ್ಮಾ
ಒಡಿಶಾದ ದಾಲ್ಮಾ ಭಾರತದ ಇತರ ಪ್ರದೇಶಗಳಲ್ಲಿ ಕಂಡುಬರುವ ಸಾಂಪ್ರದಾಯಿಕ ದಾಲ್‌ಗೆ ವಿಶಿಷ್ಟವಾದ ತಿರುವನ್ನು ನೀಡುತ್ತದೆ. ಹುರಿದ ಮೂಂಗ್ ದಾಲ್ ಮತ್ತು ಪಪ್ಪಾಯಿ, ಕುಂಬಳಕಾಯಿ ಮತ್ತು ಯಾಮ್‌ನಂತಹ ತರಕಾರಿಗಳನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಆವಿಯಲ್ಲಿ ಬೇಯಿಸಿದ ಅನ್ನದೊಂದಿಗೆ ಈ ದಾಲ್ಮಾ ಸೇರಿಸಿ ತಿಂದರೆ ಅದೇ ಸ್ವರ್ಗ.
ಪಾಖಲಾ ಭಟ
ಬೇಯಿಸಿದ ಅನ್ನವನ್ನು ನೀರಿನಲ್ಲಿ ಮತ್ತು ಹುಳಿ ಮೊಸರಿನಲ್ಲಿ ನೆನೆಸಿ ಮತ್ತು ರೋಮಾಂಚಕ ಪಖಲಾ ದಿಬಾಸಾ ಹಬ್ಬದ ಸಮಯದಲ್ಲಿ ಪಾಪಡ್, ಹುರಿದ ಮೀನು, ಆಲೂಗಡ್ಡೆ ಮತ್ತು ಬಡಿ ಚೂರದಂತಹ ಸೈಡ್‌ಡಿಶ್‌ಗಳೊಂದಿಗೆ ಬಡಿಸುವ ಈ ರಿಫ್ರೆಶ್ ಭಕ್ಷ್ಯದ ಸ್ವಾದವನ್ನು ಅನುಭವಿಸಿಯೇ ತಿರಬೇಕು.
ಗುಪ್ಚುಪ್
ಗೋಲ್‌ಗಪ್ಪ ಎಂದು ಕರೆಯುವ ಬೀದಿ ಆಹಾರವನ್ನು ಒಡಿಶಾದಲ್ಲಿ ಗುಪ್ಚುಪ್ ಎಂದು ಕರೆಯುತ್ತಾರೆ. ಗೋಧಿಹಿಟ್ಟು, ಮೈದಾಹಿಟ್ಟು, ರವೆಯಿಂದ ತಯಾರಿಸಿದ ಈ ತಿಂಡಿಯನ್ನು ದೊಡ್ಡವರು ಮಕ್ಕಳು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಒಡಿಶಾಕ್ಕೆ ಹೋದ್ರೆ ನೀವು ಈ ತಿಂಡಿಯನ್ನು ಮಿಸ್ ಮಾಡುವಂತಿಲ್ಲ.
ಚೆನ ಪೋಡ
ಚೀಸ್ ಹಾಗೂ ರವೆಯಿಂದ ತಯಾರಿಸಿದ ವಿಶೇಷ ಖಾದ್ಯವಿದು. ಚೆನಾ ಪೋಡಾ ಇದರ ಹೆಸರೇ ಭಿನ್ನ, ಇದೊಂದು ಸಿಹಿ ಖಾದ್ಯವಾಗಿದ್ದು ನಿಮಗೆ ಇಷ್ಟ ಆಗೋದು ಪಕ್ಕಾ. ಕ್ಯಾರಮೆಲೈಸ್ಡ್ ಸಕ್ಕರೆ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಇದನ್ನು ತಿಂದರೆ ನೀವು ಬೆರಳು ನೆಕ್ಕೋದು ಪಕ್ಕಾ. ಅಷ್ಟು ರುಚಿಯಾಗಿರುತ್ತದೆ ಈ ತಿನಿಸು.
ರಾಸಬಲಿ
ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಹುಟ್ಟಿಕೊಂಡ ಸಿಹಿ ಖಾದ್ಯ ರಾಸಬಲಿ. ಸುವಾಸನೆಯ ಹಾಲಿನಿಂದ ಮಾಡಲ್ಪಟ್ಟಿದೆ ಮತ್ತು ಏಲಕ್ಕಿಗಳಿಂದ ಅಲಂಕರಿಸಲ್ಪಟ್ಟಿದೆ. ಇದನ್ನು ಒಡಿಶಾ ಪುರಿ ಜಗನ್ನಾಥ ದೇಗುಲದಲ್ಲಿ ಚಪ್ಪನ್ ಭೋಗನ ಭಾಗವಾಗಿ ಕೂಡ ನೀಡಲಾಗುತ್ತದೆ. ಇದು ಮತ್ತೆ ಮತ್ತೆ ಬೇಕೆನ್ನಿಸುವ ಖಾದ್ಯವಾಗಿದೆ.
ಕನಿಕಾ
ಕನಿಕಾ ಒಡಿಶಾದ ಸಾಂಪ್ರದಾಯಿಕ ಆಹಾರವಾಗಿದ್ದು, ಹಬ್ಬಗಳು, ಪೂಜೆಗಳು ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಸ್ಥಳೀಯರು ಹೆಚ್ಚಾಗಿ ಇದನ್ನು ತಯಾರಿಸುತ್ತಾರೆ. ಚಪ್ಪನ್ ಭೋಗ್‌ನಲ್ಲಿ ಜಗನ್ನಾಥನಿಗೆ ಬಡಿಸುವ 56 ಪದಾರ್ಥಗಳಲ್ಲಿ ಈ ಸಿಹಿ ಪುಲಾವ್ ಕೂಡ ಒಂದು. ಇದನ್ನು ಬಾಸ್ಮತಿ ಅಕ್ಕಿ, ತುಪ್ಪ, ಸಕ್ಕರೆ, ಗೋಡಂಬಿ, ಒಣದ್ರಾಕ್ಷಿ, ದಾಲ್ಚಿನ್ನಿ, ಏಲಕ್ಕಿ ಮತ್ತು ಇತರ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ.
ಪಿಲಾಫ್
ತರಕಾರಿ ಪುಲಾವ್‌ನಂತೆಯೆ, ಪಿಲಾಫ್ ಒಡಿಶಾದಲ್ಲಿ ಅತ್ಯಂತ ರುಚಿಕರವಾದ ಅಕ್ಕಿ ಭಕ್ಷ್ಯಗಳಲ್ಲಿ ಒಂದಾಗಿದೆ.ಈ ಖಾದ್ಯವನ್ನು ತಯಾರಿಸಲು, ನೆನೆಸಿದ ಅಕ್ಕಿಯನ್ನು ಎಣ್ಣೆ, ಮಸಾಲೆಗಳು, ಈರುಳ್ಳಿ, ಬೆಳ್ಳುಳ್ಳಿ ಮತ್ತು ಕತ್ತರಿಸಿದ ತರಕಾರಿಗಳಲ್ಲಿ ಸ್ವಲ್ಪ ಸಮಯದವರೆಗೆ ಹುರಿಯಲಾಗುತ್ತದೆ ಮತ್ತು ಸ್ವಲ್ಪ ನೀರು ಸೇರಿಸಿ ಸುಮಾರು ಅರ್ಧ ಘಂಟೆಯವರೆಗೆ ಬೇಯಿಸಲಾಗುತ್ತದೆ. ಪಿಲಾಫ್ ಅನ್ನು ಒಣ ಹಣ್ಣುಗಳು ಮತ್ತು ಮಾಂಸದೊಂದಿಗೆ ತಯಾರಿಸಬಹುದು.
ನೀವು ಒಡಿಶಾ ಪ್ರವಾಸಕ್ಕೆ ಹೋದ್ರೆ ಅಲ್ಲಿ ಏನೆಲ್ಲಾ ತಿನ್ನಬಹುದು ಎಂದು ಕುತೂಹಲ ನಿಮಗಿದ್ದರೆ ಈ ಆಹಾರಗಳನ್ನು ಟೇಸ್ಟ್ ಮಾಡಬಹುದು ನೋಡಿ.