ಹಳದಿ, ಹಸಿರು ಬಾಳೆಹಣ್ಣು ಮಾತ್ರ ನಿಮಗೆ ಗೊತ್ತಾ? ಹಾಗಾದ್ರೆ ಕೆಂಪು ಬಾಳೆಹಣ್ಣಿನ ಆರೋಗ್ಯ ಪ್ರಯೋಜನ ಖಂಡಿತ ತಿಳಿದುಕೊಳ್ಳಿ
ನೀವು ಎಲ್ಲಿಗಾದ್ರೂ ಹೋದಾಗ ಕೆಂಪು ಬಾಳೆಹಣ್ಣು ನೋಡಿರಬಹುದು ಇಲ್ಲವೇ ಹೆಸರು ಕೇಳಿರಬಹುದು. ಅದೇನೋ ಹೊಸ ರೀತಿಯ ಹಣ್ಣು ಎಂದು ದೂರ ಇರಬೇಡಿ. ಅದರಲ್ಲಿರುವ ಈ ಪ್ರಯೋಜಗಳನ್ನು ಮೊದಲು ತಿಳಿದುಕೊಳ್ಳಿ. (ಬರಹ: ಅರ್ಚನಾ ವಿ.ಭಟ್)
ಬಾಳೆಹಣ್ಣು ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಒಂದು ಹಳದಿ ಬಣ್ಣದ್ದು ಅಥವಾ ಹಸಿರು ಬಣ್ಣದು. ಆದರೆ ಕೆಂಪು ಬಾಳೆಹಣ್ಣು ಕೂಡಾ ಇದೆ. ಕೆಲವು ಪ್ರದೇಶಗಳಲ್ಲಿ ಮಾತ್ರ ಅದನ್ನು ಹೆಚ್ಚಾಗಿ ಕಾಣಬಹುದು. ಈ ಕೆಂಪು ಬಾಳೆಹಣ್ಣಿಗೆ ಕೆಂದಾಳೆ ಎಂದೂ ಕರೆಯುತ್ತಾರೆ. ಈ ಬಾಳೆಯ ತವರು ಆಗ್ನೇಯ ಏಷ್ಯಾ. ವಿಶ್ವದಲ್ಲಿ ಅನೇಕ ವಿವಿಧ ಜಾತಿಯ ಬಾಳೆಹಣ್ಣುಗಳನ್ನು. ಕೆಂಪು ಬಾಳೆಹಣ್ಣು ಸುಕ್ರೋಸ್ ಮತ್ತು ಫ್ರುಕ್ಟೋಸ್ ಹೊಂದಿರುತ್ತದೆ. ಇದು ಸಂಪೂರ್ಣವಾಗಿ ಹಣ್ಣಾದಾಗ ಹಳದಿ ಬಾಳೆಹಣ್ಣಿಗಿಂತಲೂ ಸಿಹಿಯಾಗಿರುತ್ತದೆ. ಕೆಂಪುಬಾಳೆಯಲ್ಲಿ ಬೀಟಾ ಕೆರಾಟಿನ್ ಮತ್ತು ವಿಟಮಿನ್ ಸಿ ಆಂಟಿಒಕ್ಸಿಡೆಂಟ್ಗಳು ಪ್ರಮುಖವಾಗಿ ಕಂಡುಬರುತ್ತದೆ. ಇದು ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
ಕೆಂಪು ಬಾಳೆಹಣ್ಣಿನ ಆರೋಗ್ಯ ಪ್ರಯೋಜನಗಳು
ನಾರಿನಂಶ ಅಧಿಕವಾಗಿರುತ್ತದೆ
ಕೆಂಪು ಬಾಳೆಹಣ್ಣಿನಲ್ಲಿ ನಾರಿನಾಂಶ ಅಧಿಕವಾಗಿರುತ್ತದೆ. 100 ಗ್ರಾಂ ಹಣ್ಣಿನಲ್ಲಿ 2 ಗ್ರಾಂ ನಾರಿನಾಂಶವಿರುತ್ತದೆ ಎಂದು ಐಎಫ್‌ಸಿಟಿ ಹೇಳಿದೆ. ಇದರಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಗೆ ಪೂರಕವಾಗಿದೆ. ಇದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿರುವ ಪ್ರೊಬಯಾಟಿಕ್‌ಗಳು ಕರುಳಿನ ಆರೋಗ್ಯವನ್ನು ಸುಧಾರಿಸುತ್ತವೆ.
ಹೃದಯದ ಆರೋಗ್ಯ ಕಾಪಾಡುತ್ತದೆ
ಕೆಂಪು ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂ ಹೃದಯದ ಕೆಲಸಗಳಿಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಎಲೆಕ್ಟ್ರೋಲೈಟ್‌ಗಳು ಹೃದಯದ ಆರೋಗ್ಯ ಕಾಪಾಡುತ್ತವೆ. ಒಂದು ದಿನಕ್ಕೆ ಬೇಕಾಗುವ 15 ಪ್ರತಿಶತ ಪೊಟ್ಯಾಸಿಯಂ ಅನ್ನು ಈ ಕೆಂಪು ಬಾಳೆಹಣ್ಣೊಂದೇ ಒದಗಿಸುತ್ತದೆ ಎಂಬುದು ತಜ್ಞರು ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಇಲ್ಲಿದೆ ಪತಂಗಾಸನದ ಪ್ರಯೋಜನ; ಇದೊಂದು ಆಸನ ಮಾಡಿದರೆ ಸಾಕು ಮಹಿಳೆಯರ ಅರ್ಧಕ್ಕರ್ಧ ಸಮಸ್ಯೆಗೆ ಸಿಗುತ್ತೆ ಪರಿಹಾರ
ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆ
100ಗ್ರಾಂ ಕೆಂಪು ಬಾಳೆಹಣ್ಣಿನಲ್ಲಿ 25 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಸಿಗುತ್ತವೆ. ಕೆಂಪು ಬಾಳೆಯಲ್ಲಿ ಗೈಸಮಿಕ್ ಇಂಡೆಕ್ಸ್ 45 ರಷ್ಟಿದೆ. ಇದು ಉಳಿದವುಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಿದೆ. ಹಾಗಾಗಿ ಕಡಿಮೆ ಗೈಸಮಿಕ್ ಇಂಡೆಕ್ಸ್ ಮತ್ತು ನಾರಿನಾಂಶ ಇದರಲ್ಲಿರುವುದರಿಂದ ಇದನ್ನು ಮಧುಮೇಹ ಹೊಂದಿದವರೂ ಕೂಡಾ ಸೇವಿಸಬಹುದಾಗಿದೆ.
ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ
ಕಣ್ಣಿನ ದೃಷ್ಟಿ ಮತ್ತು ಕೆಲಸಗಳಿಗೆ ವಿಟಮಿನ್ ಎ ಅತ್ಯಂತ ಪ್ರಮುಖವಾಗಿದೆ. ಕೆಂಪು ಬಾಳೆಹಣ್ಣು ಬೀಟಾ–ಕೆರಟಿನ್ ಮತ್ತು ಲ್ಯುಟಿನ್‌ನ ಉತ್ತಮ ಮೂಲವಾಗಿದೆ. ಇದು ಕಣ್ಣಿನ ದೃಷ್ಟಿಗೆ ಪೂರಕವಾಗಿದೆ. ಹಾಗಾಗಿ ದೃಷ್ಟಿ ನಷ್ಟಕ್ಕೆ ಕಾರಣವಾಗುವ ಕಣ್ಣಿನ ಕಾಯಿಲೆ ತಡೆಗಟ್ಟಲು ಸಹಾಯ ಮಾಡುತ್ತದೆ.
ಆಂಟಿಒಕ್ಸಿಡೆಂಟ್ ಹೇರಳವಾಗಿದೆ
ಕೆಂಪು ಬಾಳೆಹಣ್ಣಿನಲ್ಲಿ ಕ್ಯಾರೊಟಿನಾಯ್ಡ್ಸ್, ವಿಟಮಿನ್ ಸಿ ಮತ್ತು ಆ್ಯಂಥೋಸಿನೈನ್ ಇರುತ್ತದೆ ಎಂದು 2018ರಲ್ಲಿ ಬಿಡುಗಡೆಯಾದ ಫುಡ್ ಕೆಮೆಸ್ಟ್ರೀ ಸಂಶೋಧನಾ ಜರ್ನಲ್ ಹೇಳಿದೆ. ಈ ಎಲ್ಲಾ ಆಂಟಿಒಕ್ಸಿಡೆಂಟ್‌ಗಳು ಫ್ರೀರ್‍ಯಾಡಿಕಲ್‌ಗಳಿಂದ ಉಂಟಾಗುವ ಕೋಶಗಳ ನಾಶವನ್ನು ತಡೆಯುತ್ತವೆ. ಫ್ರೀರ್‍ಯಾಡಿಕಲ್‌ಗಳಿಂದ ಉಂಟಾಗುವ ಒಕ್ಸಿಡೇಟಿವ್ ಒತ್ತಡ, ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಪ್ರಯೋಜನಕಾರಿಯಾಗಿದೆ.
ರಕ್ತದೊತ್ತಡ ನಿಭಾಯಿಸುತ್ತದೆ
100 ಗ್ರಾಂ ಕೆಂಪು ಬಾಳೆಹಣ್ಣಿನಲ್ಲಿ 313 ಮಿಗ್ರಾಂ ನಷ್ಟು ಪೊಟ್ಯಾಸಿಯಂ ಇರುತ್ತದೆ. ಪೊಟ್ಯಾಸಿಯಂ ಮತ್ತು ಮ್ಯಾಗ್ನೇಸಿಯಂಗಳು ವಾಸೊಡಿಲೇಷನ್ ಗುಣವನ್ನು ಹೊಂದಿದೆ. ಅಂದರೆ ರಕ್ತನಾಳಗಳಿಗೆ ವಿಶ್ರಾಂತಿಯನ್ನು ಒದಗಿಸಲು ಸಹಾಯ ಮಾಡುತ್ತವೆ. ಅದರಿಂದ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಅತಿಥಿಗಳು ಬಂದಾಗ ಯಾವ ಸಿಹಿತಿಂಡಿ ಮಾಡ್ಲಿ ಎಂದು ಯೋಚನೆನಾ? ಇಲ್ಲಿದೆ ನೋಡಿ ಒಂದು ಸಿಂಪಲ್ ರಸಗುಲ್ಲ ರೆಸಿಪಿ
ಕೆಂಪು ಬಾಳೆಹಣ್ಣು ಸೇವಿಸುವುದರಿಂದ ಆಗುವ ತೊಂದರೆಗಳು
ಕೆಂಪು ಬಾಳೆಹಣ್ಣಿನಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿದೆ. ಆದರೆ ಕೆಲವರಿಗೆ ಇದರಿಂದ ತೊಂದರೆಗಳಾಗಬಹುದು. ಇದರಲ್ಲಿರುವ ಪ್ರೊಟೀನ್ ಕೆಲವು ಸಂದರ್ಭಗಳಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು. ದಿನವೊಂದಕ್ಕೆ ಒಂದಕ್ಕಿಂತ ಹೆಚ್ಚು ಕೆಂಪು ಬಾಳೆಹಣ್ಣನ್ನು ತಿನ್ನುವುದರಿಂದ ಹೊಟ್ಟೆ ಉಬ್ಬುರ, ವಾಂತಿ, ವಾಕರಿಕೆ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಗಾಗಿ ಮಿತವಾಗಿ ತಿನ್ನಲು ಸಲಹೆ ನೀಡಲಾಗುತ್ತದೆ.
ಕೆಂಪು ಬಾಳೆಹಣ್ಣನ್ನು ಹೇಗೆಲ್ಲಾ ತಿನ್ನಬಹುದು?
- ಕೆಂಪು ಬಾಳೆಹಣ್ಣನ್ನು ಮಧ್ಯಾಹ್ನ ಅಥವಾ ಸಂಜೆಯ ಸ್ನಾಕ್ಸ್ ಆಗಿ ತಿನ್ನಬಹುದು.
- ಸ್ಮೂಥಿ ಮತ್ತು ಯೊಗಾರ್ಟ್‌ಗಳಲ್ಲಿ ಸೇರಿಸಿಕೊಳ್ಳಬಹುದು.
- ಕೆಂಪು ಬಾಳೆಹಣ್ಣಿನಿಂದ ಮಫಿನ್ ಮತ್ತು ಬ್ರೆಡ್ ತಯಾರಿಸಬಹುದು.
- ಪ್ಯಾನ್‌ಕೇಕ್, ಮಿಲ್ಕ್‌ಶೇಕ್ ಮತ್ತು ಪುಡ್ಡಿಂಗ್‌ಗಳಲ್ಲಿಯೂ ಸೇರಿಸಿಕೊಳ್ಳಬಹುದು.
ನೋಡಿದ್ರಲ್ಲ ಕೆಂಪು ಬಾಳೆಹಣ್ಣಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು. ಬರೀ ಹಳದಿ, ಹಸಿರು ಬಾಳೆಹಣ್ಣುಗಳನ್ನು ಮಾತ್ರ ಸೇವಿಸುವ ಬದಲಿಗೆ ಆಗಾಗ ಕೆಂಪು ಬಾಳೆಹಣ್ಣುಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ.