ಬಾಯಲ್ಲಿ ನೀರೂರಿಸುವ ಈ ರೀತಿಯ ಗ್ರೇವಿ ತಯಾರಿಸಿ; ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ
Gravy Making Tips: ಭಾರತ ಹೇಗೆ ವೈವಿಧ್ಯತೆಯಿಂದ ಕೂಡಿರುವ ದೇಶವೋ ಹಾಗೆ ಇಲ್ಲಿನ ಪಾಕಪದ್ಧತಿಯೂ ಅಷ್ಟೇ ವೈಶಿಷ್ಟ್ಯದಿಂದ ಕೂಡಿದೆ. ಅದರಲ್ಲೂ ಮಸಾಲೆಯುಕ್ತ ಆಹಾರಗಳಿಗೆ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಮಸಾಲೆಗಳಿಂದ ಕೂಡಿರುವ ಒಂದೇ ಗ್ರೇವಿಯಿಂದ ವಿಭಿನ್ನ ಬಗೆಯ ಪಾಕವಿಧಾನಗಳನ್ನು ತಯಾರಿಸಬಹುದು. ನೀವೂ ಪ್ರಯತ್ನಿಸಿ. (ಬರಹ: ಪ್ರಿಯಾಂಕಾ ಗೌಡ)
ಭಾರತದಲ್ಲಿ ವಿಭಿನ್ನ ಜನಾಂಗ, ಭಾಷೆ, ಮತಗಳ ಜನರಿದ್ದಾರೆ. ಇಲ್ಲಿ ತರಹೇವಾರಿ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಪ್ರದೇಶದಿಂದ ಪ್ರದೇಶಕ್ಕೆ ಈ ಭಕ್ಷ್ಯಗಳ ವೈವಿಧ್ಯತೆಗಳು ಬದಲಾಗುತ್ತಿರುತ್ತವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತಮ್ಮದೇ ಆದ ಪಾಕಪದ್ಧತಿಯನ್ನು ಜನರು ಅನುಸರಿಸುತ್ತಾರೆ. ಅದರಲ್ಲೂ ಮಸಾಲೆಯುಕ್ತ ಭಕ್ಷ್ಯಗಳನ್ನೇ ಹೆಚ್ಚಾಗಿ ಮಾಡಲಾಗುತ್ತದೆ. ಹಲವಾರು ಮಸಾಲೆ ಸೇರಿಸಿದ ಪಲ್ಯ, ಸಾಂಬಾರ್ ಅನ್ನು ತಯಾರಿಸುವಾಗಲೇ ಅದರ ಸುವಾಸನೆಯು ಮನೆಯು ಸುತ್ತಕ್ಕೂ ಹರಡುತ್ತದೆ. ಪ್ರತಿಯೊಂದು ಭಕ್ಷ್ಯವು ಬೇರೆ-ಬೇರೆಯದ್ದೇ ರುಚಿಯನ್ನು ಹೊಂದಿರುತ್ತದೆ.
ಆದರೆ, ಒಂದೇ ಗ್ರೇವಿಯನ್ನು 50 ರೀತಿಯ ಮತ್ತು ರುಚಿಕರವಾಗಿ ತಯಾರಿಸಬಹುದು. ಈ ಕಿಚನ್ ಹ್ಯಾಕ್ ಖಂಡಿತ ನಿಮ್ಮನ್ನು ಅಚ್ಚರಿಗೊಳಿಸಬಹುದು. ಮಾಸ್ಟರ್ ಶೆಫ್ ಪಂಕಜ್ ಭದೌರಿಯಾ ಅವರು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಈ ಪಾಕಪದ್ಧತಿಯನ್ನು ವಿವರಿಸಿದ್ದಾರೆ. ತ್ವರಿತ ಅಡುಗೆ ಮಾಡುವ ಬಗೆಗೆ ಹೆಸರುವಾಸಿಯಾಗಿರುವ ಪಂಕಜ್, ಸರಳವಾಗಿ ತಯಾರಿಸಬಹುದಾದ ರುಚಿಕರವಾದ ಪಾಕವಿಧಾನದ ಬಗ್ಗೆ ವಿವರಿಸಿದ್ದಾರೆ. ಇದು ವಿವಿಧ ತರಕಾರಿಗಳು ಮತ್ತು ಮಸಾಲೆಗಳ ಮಿಶ್ರಣವಾಗಿದೆ.
ಚಪಾತಿಗೆ ಚನ್ನ ಮಸಾಲೆಯ ಗ್ರೇವಿ ಎಷ್ಟು ಟೇಸ್ಟಿಯಾಗಿರುತ್ತದೆ ಅಲ್ವಾ. ರುಚಿಕರವಾದ ಚನ್ನ ಮಸಾಲೆ, ಘಮಘಮಿಸುವ ಆಲೂ ಮಟರ್ ಇತ್ಯಾದಿ ಖಾದ್ಯವನ್ನು ಪುನರಾವರ್ತಿಸಲು ನೀವು ಬಯುಸುತ್ತೀರಾ? ಇದೇ ಬಗೆಯ ಖಾದ್ಯಗಳನ್ನು ಇನ್ನೊಂದು ರೀತಿಯಲ್ಲೂ ಮಾಡಬಹುದು. ಹಾಗಿದ್ದರೆ, ಅದು ಹೇಗೆ ಅನ್ನೋದನ್ನು ಇಲ್ಲಿ ಗಮನಿಸಿ.
ಇದನ್ನೂ ಓದಿ: Potato Snacks: ಮಳೆಗಾಲದ ಸಂಜೆಗೆ ಪರ್ಫೆಕ್ಟ್ ಸ್ನ್ಯಾಕ್ಸ್ ಬೇಕು ಅಂದ್ರೆ ಈ ಆಲೂಗೆಡ್ಡೆ ರೆಸಿಪಿ ಟ್ರೈ ಮಾಡಿ, ಸಖತ್ ಆಗಿರುತ್ತೆ
ಬೇಕಾಗುವ ಪದಾರ್ಥಗಳು
ಎಣ್ಣೆ- ಅರ್ಧ ಕಪ್, ಈರುಳ್ಳಿ- 4, ಟೊಮೆಟೊ- 8, ಶುಂಠಿ- 4 ತುಂಡು, ಹಸಿರು ಮೆಣಸಿನಕಾಯಿ- 6 ರಿಂದ 8, ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಕೆಂಪು ಮೆಣಸಿನ ಪುಡಿ- 2 ಚಮಚ, ಕೊತ್ತಂಬರಿ ಪುಡಿ- 2 ಚಮಚ, ಅರಿಶಿನ ಪುಡಿ- 1 ಟೀ ಚಮಚ, ಗರಂ ಮಸಾಲಾ ಪುಡಿ- 1 ಟೀ ಚಮಚ, ಕಪ್ಪು ಜೀರಿಗೆ- 1 ಟೀ ಚಮಚ, ಜೀರಿಗೆ- 1 ಟೀ ಚಮಚ, ದಾಲ್ಚಿನ್ನಿ ತುಂಡು- 2, ಬಿರಿಯಾನಿ ಎಲೆ- 2 ರಿಂದ 3, ಹಸಿರು ಏಲಕ್ಕಿ- 5 ರಿಂದ 6, ಲವಂಗ- 7 ರಿಂದ 8, ಗೋಡಂಬಿ- 12 ರಿಂದ 15, ಉಪ್ಪು- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ
ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ. ಜೊತೆಗೆ ಟೊಮೆಟೊಗಳನ್ನು ಸಹ ಕತ್ತರಿಸಿ. ಒಂದು ಬೌಲ್‍ನಲ್ಲಿ, ಪೇಸ್ಟ್ ಅನ್ನು ತಯಾರಿಸಲು ಪುಡಿಮಾಡಿದ ಮಸಾಲೆಗಳನ್ನು ಅರ್ಧ ಕಪ್ ನೀರಿನೊಂದಿಗೆ ಮಿಶ್ರಣ ಮಾಡಿ.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಪೇಸ್ಟ್ ಮಾಡಿದ ಮಸಾಲೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇನ್ನೊಂದು ಬಾಣಲೆಯಲ್ಲಿ ಹೆಚ್ಚಿಟ್ಟ ಈರುಳ್ಳಿಯನ್ನು ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಕತ್ತರಿಸಿದ ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಸೇರಿಸಿ. ಈರುಳ್ಳಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಅದಕ್ಕೆ ಮಾಡಿಟ್ಟ ಮಸಾಲೆ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಫ್ರೈ ಮಾಡಬೇಕು.
ನಂತರ ಕತ್ತರಿಸಿದ ಟೊಮೆಟೊವನ್ನು ಮಿಶ್ರಣ ಮಾಡಿ ಚೆನ್ನಾಗಿ ಬೇಯಿಸಿ. ಎಣ್ಣೆ ಅಂಶ ಮೇಲ್ಮೈಗೆ ಬರುವವರೆಗೂ ಮಸಾಲೆಯನ್ನು ಫ್ರೈ ಮಾಡಬೇಕು. ನಂತರ ಗೋಡಂಬಿ ಪೇಸ್ಟ್ ಅನ್ನು ಬೆರೆಸಿ, 3 ರಿಂದ 4 ನಿಮಿಷಗಳ ಕಾಲ ಕುದಿಸಿ. ಈಗ ಚನ್ನ ಮಸಾಲೆಯಂತೆಯೇ ರುಚಿಕರವಾದ ಗ್ರೇವಿ ಸವಿಯಲು ರೆಡಿ. ಇದನ್ನು ನೀವು ಚಪಾತಿ, ರೋಟಿ ಜೊತೆ ಸೇವಿಸಬಹುದು.
ವಿಭಾಗ