Baking Powder: ಬೇಕಿಂಗ್ ಪೌಡರ್‌ನ ಆವಿಷ್ಕಾರ ಹೇಗಾಯ್ತು, ಇದನ್ನು ಕಂಡುಹಿಡಿದವರು ಯಾರು? ಇಲ್ಲಿದೆ ಬೇಕಿಂಗ್ ಪೌಡರ್ ಇತಿಹಾಸ
ಆಹಾರಲೋಕದಲ್ಲಿ ಸದ್ಯ ಬೇಕಿಂಗ್ ಪೌಡರ್‌ಗಳದ್ದೇ ಸದ್ದು. ಕೇಕ್‌ನಿಂದ ಹಿಡಿದು ಬನ್‌ವರೆಗೆ ಪ್ರತಿಯೊಂದಕ್ಕೂ ಬೇಕಿಂಗ್ ಪೌಡರ್ ಬಳಸುತ್ತಾರೆ. ಹಾಗಾದ್ರೆ ಈ ಬೇಕಿಂಗ್ ಪೌಡರ್ ಆವಿಷ್ಕಾರ ಹೇಗಾಯ್ತು, ಬೇಕಿಂಗ್ ಪೌಡರ್ ಬಳಸುವ ಮುನ್ನ ಜನರು ಅಡುಗೆಗೆ ಏನು ಬಳಸುತ್ತಿದ್ದರು, ಎಂಬೆಲ್ಲಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಿದ್ದರೆ ಇಲ್ಲಿದೆ ಉತ್ತರ.

ಕೇಕ್, ಬನ್ಸ್ ಇಂತಹ ತಿಂಡಿ ಮಾಡಬೇಕು ಎಂಬ ಯೋಚನೆ ಬಂದ್ರೂ ಸಾಕು ಮೊದಲು ನೆನಪಾಗುವ ಪದಾರ್ಥವೆಂದರೆ ಬೇಕಿಂಗ್ ಸೋಡಾ ಎಂದರೆ ತಪ್ಪಾಗಲಿಕ್ಕಿಲ್ಲ. ಬೇಕಿಂಗ್ ಪೌಡರ್ ಅನ್ನು ಬಳಸಿ ಮಾಡುವಂತಹ ನಾನಾ ವಿಧದ ತಿಂಡಿಗಳು ಯುಟ್ಯೂಬ್‌ಗಳಲ್ಲೂ ಲಭ್ಯವಿದೆ. ಹಾಗಂತ ಬೇಕಿಂಗ್ ಪೌಡರ್ ಕೇವಲ ಅಡುಗೆಗೆ ಮಾತ್ರ ಸೀಮಿತವಲ್ಲ. ಹಿಟ್ಟುಗಳ ಉಬ್ಬುವಿಕೆಗೆ ಸಹಾಯ ಮಾಡುವುದರಿಂದ ಹಿಡಿದು ಅಡುಗೆ ಕೋಣೆಯಲ್ಲಿ ಕಠಿಣ ಕಲೆಯನ್ನು ಹೋಗಲಾಡಿಸುವವರೆಗೂ ಸಹಾಯಕವಾಗಿದೆ. ಹಠಮಾರಿ ಕಲೆಗಳನ್ನು ಹೋಗಲಾಡಿಸುವಲ್ಲಿ ಬೇಕಿಂಗ್ ಸೋಡಾ ಹೀರೋನಂತೆ ಕಾರ್ಯ ನಿರ್ವಹಿಸುತ್ತದೆ.
ಬೇಕಿಂಗ್ ಸೋಡಾ ಆಹಾರದೊಂದಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನೀವು ರಸಾಯನಶಾಸ್ತ್ರದ ಮೊರೆ ಹೋಗಬೇಕು. ಪ್ರಪಂಚಾದ್ಯಂತ ಅನೇಕರು ತಮ್ಮ ಅಡುಗೆಗಳಲ್ಲಿ ಬೇಕಿಂಗ್ ಸೋಡಾ ಬಳಕೆ ಮಾಡುತ್ತಾರೆ. ಅಡುಗೆ ಮನೆಯಲ್ಲಿ ಸ್ಟಾರ್ ಪದಾರ್ಥವಾಗಿ ಬೇಕಿಂಗ್ ಸೋಡಾ ಹೇಗೆ ಬದಲಾಯ್ತು...? ಬೇಕಿಂಗ್ ಸೋಡಾದ ಆವಿಷ್ಕಾರ ಯಾವ ರೀತಿಯಲ್ಲಿ ಆಯ್ತು..? ಎಂಬುದೆಲ್ಲದರ ಬಗ್ಗೆ ನಾವು ತಿಳಿದುಕೊಳ್ಳೋಣ.
ಪ್ರಾಚೀನ ಯುಗದಲ್ಲಿ ಜನರು ಹಿಟ್ಟನ್ನು ಉಬ್ಬಿಸಲು ಯೀಸ್ಟ್ ಬಳಕೆ ಮಾಡುತ್ತಿದ್ದರು. ಆದರೆ ಇದು ಹಿಟ್ಟನ್ನು ಉಬ್ಬಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು. ಉದಾಹರಣೆ ದೋಸೆ ಅಥವಾ ಇಡ್ಲಿ ಹಿಟ್ಟು ಕೂಡ ಹುದುಗುವುದು ಯೀಸ್ಟ್‌ಗಳಿಂದಲೇ. ಇವುಗಳು ಚೆನ್ನಾಗಿ ಹುದುಗಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ ಎಂಬುದನ್ನು ನಿಮಗೆ ವಿವರಿಸಿ ಹೇಳಬೇಕಾಗಿಲ್ಲ..!
ಬೇಕಿಂಗ್ ಪೌಡರ್ ಇತಿಹಾಸ
1843ರಲ್ಲಿ ಆಲ್ಫ್ರೆಡ್ ಬರ್ಡ್ ಎಂಬ ಬ್ರಿಟಿಷ್ ರಸಾಯನಶಾಸ್ತ್ರಜ್ಞ ಪ್ರಸ್ತುತ ಬಳಕೆ ಮಾಡುತ್ತಿರುವ ಬೇಕಿಂಗ್ ಪೌಡರ್ ಅನ್ನು ಜಗತ್ತಿಗೆ ಪರಿಚಯಿಸಿದನು. ಇದು ಅಡುಗೆ ಸೋಡಾ ಹಾಗೂ ಆಮ್ಲದ ಮಿಶ್ರಣವಾಗಿದ್ದು ತೇವಾಂಶ ಅಥವಾ ಶಾಕದ ಸಂಪರ್ಕಕ್ಕೆ ಬಂದಾಗ ಅದು ಸಕ್ರಿಯಗೊಳ್ಳುತ್ತದೆ. ಹೀಗಾಗಿ 18ನೇ ಶತಮಾನದಿಂದ ಹಿಟ್ಟಿನ ಉಬ್ಬುವಿಕೆ ಪ್ರಕ್ರಿಯೆ ಸರಾಗಗೊಂಡಿತು ಎಂದು ಹೇಳಬಹುದು. ಪ್ರಸ್ತುತ ದಿನಗಳಲ್ಲಿ ಮನೆ ಮನೆಯಲ್ಲಿಯೂ ಬೇಕಿಂಗ್ ಪೌಡರ್ ಲಭ್ಯವಿದೆ. ಬೇಕರ್‌ಗಳಂತೂ ಬೇಕಿಂಗ್ ಪೌಡರ್ ಇಲ್ಲದೇ ಯಾವ ಕೆಲಸವನ್ನೂ ಮಾಡಲಾರರು. ಅಷ್ಟರ ಮಟ್ಟಿಗೆ ಬೇಕಿಂಗ್ ಸೋಡಾ ಹಾಸು ಹೊಕ್ಕಾಗಿದೆ.
ಪಾಕ ವಿಧಾನಗಳಲ್ಲಿ ಬೇಕಿಂಗ್ ಸೋಡಾವನ್ನು ಬಳಕೆ ಮಾಡದೇ ಗೋಧಿ ಅಥವಾ ಮೈದಾ ಹಿಟ್ಟಿನಿಂದ ನಮಗೆ ಬೇಕಾಗುವ ತಿಂಡಿಗೆ ಹಿಟ್ಟು ಹದಗೊಳಿಸುವುದು ಕಷ್ಟಸಾಧ್ಯವಾಗಿದೆ. ಅಲ್ಲದೇ ಸಸ್ಯಾಹಾರಿ ಪ್ರಿಯರು ಮೊಟ್ಟೆಯನ್ನು ಬಳಸದೇ ಬೇಕಿಂಗ್ ಮಾಡಲು ಸಹಾಯಕವಾದ ಪದಾರ್ಥ ಕೂಡ ಬೇಕಿಂಗ್ ಪೌಡರ್ ಆಗಿದೆ.
18ನೇ ಶತಮಾನದಿಂದ ಇಲ್ಲಿಯವರೆಗೆ ಬೇಕಿಂಗ್ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಅನುಭವಿ ಬಾಣಸಿಗರು ಅಡುಗೆ ಎಂದರೆ ರಸಾಯನ ಶಾಸ್ತ್ರ ಎಂದು ಒಪ್ಪಿಕೊಳ್ಳುತ್ತಾರೆ. ಆದ್ದರಿಂದ ಬೇಕಿಂಗ್ ಪೌಡರ್ ಕೂಡ ಬೇಕಿಂಗ್ ಕ್ಷೇತ್ರದಲ್ಲಿ ಹಾಸು ಹೊಕ್ಕಾಗಿದೆ. ಬೇಕಿಂಗ್ ಪೌಡರ್ ಅನ್ನು ಯಾವ ಉದ್ದೇಶಕ್ಕೆಂದು ಆವಿಷ್ಕಾರ ಮಾಡಲಾಯ್ತೋ ಪ್ರಸ್ತುತ ದಿನದಲ್ಲಿ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಅವುಗಳ ಬಳಕೆಯಾಗುತ್ತಿದೆ ಎಂಬುದನ್ನು ನಾವು ನಿರ್ಲಕ್ಷಿಸುವಂತಿಲ್ಲ.
ಬೇಕಿಂಗ್ ಪೌಡರ್ ಹೇಗೆ ಕಾರ್ಯ ನಿರ್ವಹಿಸುತ್ತದೆ..?
ಬೇಕಿಂಗ್ ಪೌಡರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವಾಗ ನಾವು ಅದು ಆಹಾರದೊಂದಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದು ಟಾರ್ಟರ್ ಕೆನೆ(ಆಮ್ಲ) ಹಾಗೂ ಅಡಿಗೆ ಸೋಡಾ(ಬೇಸ್) ಹಾಗೂ ಪಿಷ್ಠ ಪದಾರ್ಥಗಳನ್ನು ಹೊಂದಿರುತ್ತದೆ. ಇದು ತೇವಾಂಶ ಅಥವಾ ಶಾಖದೊಂದಿಗೆ ಸಂಪರ್ಕಕ್ಕೆ ಬಂದಾದ ಬೇಸ್ ಹಾಗೂ ಆಮ್ಲ ಪ್ರತಿಕ್ರಿಯಸದಂತೆ ತಡೆಯುತ್ತದೆ.
ಅಡುಗೆ ಸೋಡಾವನ್ನು ಹೊಂದಿರುವ ಯಾವುದೇ ಮಿಶ್ರಣವು ಶಾಖ ಅಥವಾ ನೀರಿಗೆ ಒಡ್ಡಿಕೊಂಡಾಗ ಇದರಲ್ಲಿ ಇರುವ ಆಮ್ಲ ಹಾಗೂ ಬೇಸ್ ಪ್ರತಿಕ್ರಿಯಿಸಲು ಆರಂಭಿಸುತ್ತದೆ ಹಾಗೂ ಕಾರ್ಬನ್ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಹಿಟ್ಟಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ರೀತಿಯಾಗಿ ನೀವು ಮೃದು ಮೃದುವಾದ ಪದಾರ್ಥಗಳನ್ನು ಬೇಕಿಂಗ್ ಸೋಡಾದಿಂದ ತಯಾರಿಸಲು ಸಾಧ್ಯವಾಗುತ್ತದೆ.

ವಿಭಾಗ