ಪಕೋಡಾ, ಬಜ್ಜಿ, ಭುಟ್ಟಾ, ಚಿಪ್ಸ್; ಮಳೆಗಾಲದಲ್ಲಿ ಚಹಾ ಜೊತೆ ಸವಿಯಲು ಗರಿಗರಿ ತಿಂಡಿಗಳು
ಮಳೆಗಾಲದಲ್ಲಿ ಬಾಯಿಗೆ ಗರಿಗರಿಯಾಗಿ ಬಿಸಿಬಿಸಿ ತಿಂಡಿ ಬೇಕು. ಮಳೆ ಸುರಿಯುವಾಗ ರುಚಿಕರ ಸ್ನ್ಯಾಕ್ಸ್‌ಗಾಗಿ ನಾಲಿಗೆಯೇ ನಡೆದು ಹುಡುಕಾಟ ಆರಂಭಿಸುತ್ತದೆ. ಸುರಿಯುವ ಮಳೆ ನಡುವೆ ನೀವು ಮನೆಯಲ್ಲೇ ಮಾಡಿ ಸವಿಯಬಹುದಾದ ರುಚಿಕರ ಭಾರತೀಯ ಸ್ನ್ಯಾಕ್‌ಗಳಿವು.

ವೈವಿಧ್ಯಮಯ ತಿಂಡಿ ತಿನಿಸುಗಳಿಗೆ ಭಾರತ ಹೆಸರುವಾಸಿ. ಭಾರತದ ಬಗ್ಗೆ ತಿಳಿದಿರುವ ಯಾವುದೇ ವಿದೇಶಿಗರು ಕೂಡಾ ಮೊದಲಿಗೆ ಈ ನೆಲದ ಆಹಾರವನ್ನು ನೆನಪಿಸಿಕೊಳ್ಳುತ್ತಾರೆ. ಇನ್ನು ಮಳೆಗಾಲ ಬಂತಂದ್ರೆ ಸಾಕು, ಮನಯಲ್ಲಿ ಮಾತ್ರವಲ್ಲದೆ ಮನೆಯ ಹೊರಗೂ ಬಿಸಿಬಿಸಿ ತಿನಿಸುಗಳನ್ನು ಸವಿಯಲು ಜನರು ಬಯಸುತ್ತಾರೆ. ಸುರಿಯುವ ಮಳೆಯ ನಡುವೆ ಚಹಾ ಅಥವಾ ಕಾಫಿ ಜೊತೆ ಒಂದಷ್ಟು ಕರುಂ ಕುರುಂ ಅನ್ನುವ ಮಸಾಲೆ ತಿಂಡಿಗಳನ್ನು ತಿನ್ನುವುದೇ ಆನಂದ. ಮುಸಲಧಾರೆ ಸುರಿಯುವಾಗ ಅಡುಗೆ ಮನೆಯಲ್ಲಿ ಗರಿ ಗರಿ ತಿಂಡಿ ತಯಾರಾಗುವಾಗ ಮನಸಿನ ಜೊತೆಗೆ ಹೊಟ್ಟೆಯೂ ಅರಳುತ್ತದೆ. ಕ್ಷಣಮಾತ್ರದಲ್ಲಿ ತಿಂಡಿ ಖಾಲಿ.
ಮಳೆಗಾಲದಲ್ಲಿ ಭಾರತದ ತಯಾರಾಗುವ ತಿನಿಸುಗಳು ಅಸಂಖ್ಯಾತ. ದೇಶದ ಒಂದೊಂದು ಭಾಗಗಳಲ್ಲಿ ಒಂದೊಂದು ತಿನಿಸು ಫೇಮಸ್. ಸಾಂಪ್ರದಾಯಿಕ ತಿನಿಸುಗಳು ಒಂದೆಡೆಯಾದರೆ, ಆಧುನಿಕ ಶೈಲಿಯ ಗರಿಗರಿ ತಿಂಡಿಗಳು ಜನಪ್ರಿಯವಾಗಿವೆ. ಅಂಥಾ ವಿಶೇಷ ತಿಂಡಿಗಳನ್ನು ನೋಡೋಣ.
ಪಕೋಡಾ
ಬಹುತೇಕ ಎಲ್ಲಾ ಕಡೆ ಮಳೆಗಾಲದಲ್ಲಿ ಪಕೋಡಾ ಫೇಮಸ್. ಮಳೆಗಾಲದ ಪ್ರಮುಖ ತಿಂಡಿ ಎಂದರೂ ತಪ್ಪಲ್ಲ. ಈರುಳ್ಳಿ ಪಕೋಡಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಉಳಿದಂತೆ ಆಲೂಗಡ್ಡೆ, ಪನೀರ್ ಸೇರಿದಂತೆ ವಿವಿಧ ತರಕಾರಿಗಳಿಂದ ಪಕೋಡಾ ಮಾಡುತ್ತಾರೆ. ತರಾಕಾರಿಗಳ ಮಿಶ್ರಣದ ಪಕೋಡ ಕೂಡಾ ತುಂಬಾ ರುಚಿಕರ. ಮಸಾಲೆಯುಕ್ತ ಕಡಲೆ ಹಿಟ್ಟಿನಲ್ಲಿ ತರಕಾರಿ ಮಿಶ್ರಣವನ್ನು ಅದ್ದಿ ಎಣ್ಣೆಯಲ್ಲಿ ಕರಿದ ತಿಂಡಿ ಚಟ್ನಿಯೊಂದಿಗೆ ಸವಿಯುವುದೇ ಖುಷಿ.
ಬಜ್ಜಿ
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ವಿವಿಧ ಬಗೆಯ ಬಜ್ಜಿಗಳು ತಯಾರಾಗುತ್ತವೆ. ಮಳೆಗಾಲದಲ್ಲಿ ಹತ್ತು ಹಲವು ವೆರೈಟಿಯ ಬಜ್ಜಿ ತಯಾರಾಗುತ್ತವೆ. ಪಕೋಡದಂತೆಯೇ ಬಜ್ಜಿಯನ್ನು ಬಾಳೆಹಣ್ಣುಗಳು, ಆಲೂಗಡ್ಡೆ, ದೀಹಲಸು, ಗೆಣಸು ಸೇರಿದಂತೆ ಕೆಲವು ತರಕಾರಿಗಳನ್ನು ಹೋಳು ಮಾಡಿ ಮಾಡಲಾಗುತ್ತದೆ. ಗರಿಗರಿ ತಿಂಡಿ ತಿನ್ನಲು ರುಚಿಕರ.
ಭುಟ್ಟಾ
ಮಹಾರಾಷ್ಟ್ರದಲ್ಲಿ ಜನಪ್ರಿಯ ತಿಂಡಿ ಇದು. ಹುರಿದ ಬುಟ್ಟಾ ಅಥವಾ ಜೋಳವನ್ನು ತಿನ್ನುವ ಬಳಗ ದೊಡ್ಡದಿದೆ. ಮಳೆಗಾಲದಲ್ಲಿ ಬೀದಿ ವ್ಯಾಪಾರಿಗಳು ತಾತ್ಕಾಲಿಕ ಸ್ಟಾಲ್ ತೆರೆದು ಇದನ್ನು ಮಾರಾಟ ಮಾಡುತ್ತಾರೆ. ಕೆಂಡ ತುಂಬಿದ ಬೆಂಕಿಯಿಂದ ಜೋಳವನ್ನು ಹುರಿದು ಅದಕ್ಕೆ ಉಪ್ಪು-ಖಾರ ಹಚ್ಚಿ ಕೊಡುತ್ತಾರೆ. ಬಿಸಿಬಿಸಿ ಜೋಳವನ್ನು, ಕೈಯಲ್ಲಿ ಹಿಡಿದು ತಿನ್ನುವುದು ಖುಷಿ.
ವಡಾ ಪಾವ್
ಮಹಾರಾಷ್ಟ್ರದ ಸಾಂಪ್ರದಾಯಿಕ ಆಹಾರ ವಡಾ ಪಾವ್. ಇದು ಇಲ್ಲದಿದ್ದರೆ ಮಾರಾಠಿಗರ ಜೀವನವೇ ಇಲ್ಲವೇನೋ ಎಂಬಷ್ಟು ವಡಾಪಾವ್ ಫೇಮಸ್. ಇದನ್ನು ಭಾರತದ ಬರ್ಗರ್ ಎಂದೇ ಕರೆಯಲಾಗುತ್ತದೆ. ಇದು ಮಸಾಲೆಯುಕ್ತ ಆಲೂಗಡ್ಡೆ ವಡಾವನ್ನು, ಪಾವ್ (ಬನ್) ನಡುವೆ ಸ್ಯಾಂಡ್‌ವಿಚ್ ರೀತಿಯಲ್ಲಿ ಇಟ್ಟು ಸರ್ವ್ ಮಾಡಲಾಗುತ್ತದೆ. ಗರಿಗರಿಯಾದ ವಡಾ ಹಾಗೂ ಮೃದುವಾದ ಪಾವ್ ಮಸಾಲೆಯುಕ್ತ ಚಟ್ನಿಯೊಂದಿಗೆ ಮಳೆಗೆ ಸವಿಯಲು ಹೆಚ್ಚು ಮಜಾ.
ಧೋಕ್ಲಾ
ಗುಜರಾತ್‌ನ ತುಂಬಾ ಜನಪ್ರಿಯ ತಿಂಡಿ ಧೋಕ್ಲಾ. ಅಕ್ಕಿ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಿದ ಖಾರ ತಿಂಡಿಯನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಕೇಕ್ ರೀತಿಯಲ್ಲಿ ಕಾಣುವ ಧೋಕ್ಲಾ ಮೇಲೆ ಸಾಸಿವೆ, ಹಸಿರು ಮೆಣಸಿನಕಾಯಿಗಳು ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಲಾಗುತ್ತದೆ. ಬಾಯಿಗೆ ಗರಿಗರಿ ತಿಂಡಿ ಅಲ್ಲವಾದರೂ, ಮಳೆಗೆ ಬಿಸಿಬಿಸಿ ತಿನ್ನಲು ರುಚಿಕರ.
ಚಹಾ ಹಾಗೂ ಬಿಸಿಬಿಸಿ ಚಿಪ್ಸ್
ಕರ್ನಾಟಕದಲ್ಲಿ, ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಬಾಳೆಕಾಯಿ ಮತ್ತು ಹಲಸಿನಕಾಯಿ ಚಿಪ್ಸ್ ತುಂಬಾ ಫೇಮಸ್. ಮಳೆ ಸುರಿಯುವಾಗ ಚಹಾ ಜೊತೆಗೆ ಈ ಹಾಟ್ ಚಿಪ್ಸ್ ತಿನ್ನುವುದು ಸ್ವರ್ಗ ಸುಖ. ಈ ಚಿಪ್ಸ್ ಅನ್ನು ತೆಂಗಿನ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದರೆ ಆ ಪರಿಮಳಕ್ಕೆ ಮನಸೋಲುವುದು ಪಕ್ಕಾ.
ಇನ್ನಷ್ಟು ರೆಸಿಪಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Paneer Dosa: ಬೆಳಗಿನ ಉಪಾಹಾರಕ್ಕೆ ಈ ರೀತಿ ಪನೀರ್ ದೋಸೆ ಮಾಡಿ, ಮಕ್ಕಳು ಕೂಡ ಇಷ್ಟಪಟ್ಟು ತಿನ್ನೋದು ಪಕ್ಕಾ

ವಿಭಾಗ