ಕನ್ನಡ ಸುದ್ದಿ  /  Lifestyle  /  Food Breakfast Recipes How To Make Nutritious South Indian Dish Puttu Easily At Home Food Puttu Recipe Arc

Puttu Recipe: ಪುಟ್ಟ ಮಕ್ಕಳಿಗೂ ಇಷ್ಟವಾಗುವಂತೆ ಕೇರಳ ಶೈಲಿಯ ಪುಟ್ಟು ಮಾಡೋದು ಹೀಗೆ; ಈ ರೆಸಿಪಿಯನ್ನು ನೀವು ಕಲಿಯಿರಿ

ನಿಮ್ಮ ಮಕ್ಕಳಿಗೆ ದಕ್ಷಿಣ ಭಾರತದ ಸಾಂಪ್ರದಾಯಿಕ ಅಡುಗೆಗಳೆಂದರೆ ಇಷ್ಟನಾ? ಅದರಲ್ಲೂ ಹಬೆಯಲ್ಲಿ ಬೇಯಿಸಿದ ಘಮ ಘಮಿಸುವ ಪಾಕವಿಧಾನಗಳನ್ನು ಬೆಳಿಗ್ಗಿನ ತಿಂಡಿಯಲ್ಲಿ ಸವಿಯಲು ಬಯಸುತ್ತಾರಾ? ಹಾಗಾದ್ರೆ ನಿಮ್ಮ ಮಕ್ಕಳಿಗೆ ಇಷ್ಟ ಆಗೋ ಪುಟ್ಟುವನ್ನು ಈ ರೀತಿಯಾಗಿ ತಯಾರಿಸಿ. (ಬರಹ: ಅರ್ಚನಾ ವಿ. ಭಟ್‌)

 ಪುಟ್ಟು ರೆಸಿಪಿ
ಪುಟ್ಟು ರೆಸಿಪಿ

ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳೆಂದರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಅದರ ಪರಿಮಳ, ರುಚಿಗೆ ಮನಸೋಲದವರೇ ಇಲ್ಲ. ಇಲ್ಲಿನ ಊಟದಲ್ಲಿ ಕಾಣಬಹುದಾದ ಬಗೆ ಬಗೆಯ ರುಚಿಗಳನ್ನು ಉಪಹಾರಗಳಲ್ಲೂ ಕಾಣಬಹುದು. ಅವುಗಳಲ್ಲಿ ಬೆಳಗಿನ ತಿಂಡಿಗೆಂದು ತಯಾರಿಸುವ ಪುಟ್ಟು ಸಹ ಒಂದು. ಮೂಲತಃ ಕೇರಳದ ಸಾಂಪ್ರದಾಯಿಕ ಅಡುಗೆಯಾಗಿದ್ದರೂ, ಪುಟ್ಟುವನ್ನು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲೂ ಬಹಳ ಪ್ರೀತಿಯಿಂದ ತಿನ್ನುತ್ತಾರೆ. ಅಕ್ಕಿ ಹಿಟ್ಟು ಮತ್ತು ತೆಂಗಿನ ತುರಿ ಸೇರಿಸಿ ಪುಟ್ಟುವನ್ನು ತಯಾರಿಸಲಾಗುತ್ತದೆ. ಹಬೆಯಲ್ಲಿ ಬೇಯಿಸುವ ಪೌಷ್ಟಿಕ ತಿಂಡಿ ಇದಾಗಿದೆ. ತೆಂಗಿನ ತುರಿಯ ಘಮ ಹೊಂದಿರುವ ಪುಟ್ಟು ರುಚಿಯಾದ ಬೆಳಗಿನ ಉಪಹಾರವಾಗಿದೆ. ಸಾಂಪ್ರದಾಯಿಕ ತಿಂಡಿಯಾದರೂ ಈಗಿನ ಮಕ್ಕಳು ಸಹ ಬಹಳಷ್ಟು ಇಷ್ಟಪಟ್ಟು ಸವಿಯುತ್ತಾರೆ. ಪ್ರತಿದಿನ ಒಂದಲ್ಲ ಒಂದು ಹೊಸ ರುಚಿ ಕೇಳುವು ಮಕ್ಕಳಿಗೆ ಪುಟ್ಟು ಇಷ್ಟವಾದ ತಿಂಡಿಯಾಗುವುದಂತೂ ಖಂಡಿತ. ಪುಟ್ಟು ತಯಾರಿಸಲು ಬಹಳಷ್ಟು ಪದಾರ್ಥಗಳು ಮತ್ತು ಸಮಯ ಬೇಕಾಗಿಲ್ಲ. ಹಾಗಾಗಿ ನಿಮ್ಮ ಮಕ್ಕಳಿಗಾಗಿ ರುಚಿಯಾದ ಪುಟ್ಟುವನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಕೇರಳದ ಶೈಲಿಯಲ್ಲಿಯೇ ಮೃದುವಾಗಿಯೂ ಅಷ್ಟೇ ರುಚಿಯಾಗಿಯೂ ತಯಾರಿಸಬಹುದು. ಮಕ್ಕಳಿಗೆ ಇಷ್ಟವಾಗುವ ಪುಟ್ಟುವನ್ನು ಈ ರೀತಿಯಾಗಿ ತಯಾರಿಸಿ.

ಮಕ್ಕಳಿಗೆ ಇಷ್ಟವಾಗುವ ಪುಟ್ಟು ಹೀಗೆ ತಯಾರಿಸಿ

ಬೇಕಾಗುವ ಸಾಮಗ್ರಿಗಳು: ಅಕ್ಕಿ - 2 ಕಪ್‌, ತೆಂಗಿನತುರಿ - 1 ಕಪ್‌, ಉಪ್ಪು, ನೀರು

ತಯಾರಿಸುವ ವಿಧಾನ

* ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು, 1–2 ಗಂಟೆಯ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ಸೋಸಿ, ಒಂದು ಸ್ವಚ್ಛವಾದ ಬಟ್ಟೆಯ ಮೇಲೆ ಹರಡಿ. ಅರ್ಧ ಗಂಟೆ ಬಿಟ್ಟು ಮಿಕ್ಸಿ ಜಾರ್‌ಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಅದನ್ನು ಗಾಳಿಸಿಕೊಳ್ಳಿ.

* ಈಗ 2 ಕಪ್‌ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿಕೊಳ್ಳಿ.

* ಆರಿದ ನಂತರ ಅದಕ್ಕೆ ಉಪ್ಪು ಸೇರಿಸಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಪುಟ್ಟು ಹಿಟ್ಟನ್ನು ಕಲಿಸಿಕೊಳ್ಳಿ. ಹಿಟ್ಟನ್ನು ಕೈಯಲ್ಲಿ ಹಿಡಿದು ಒತ್ತಿದಾಗ ಅದು ಉಂಡೆಯಂತಾಗಬೇಕು. ಆ ಹದಕ್ಕೆ ಹಿಟ್ಟನ್ನು ಕಲಿಸಿಕೊಳ್ಳಿ.

* ಇನ್ನೊಂದು ಪಾತ್ರೆಯಲ್ಲಿ ತೆಂಗಿನ ತುರಿ ತೆಗೆದುಕೊಳ್ಳಿ. ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಮಿಕ್ಸ್‌ ಮಾಡಿಕೊಳ್ಳಿ.

* ಪುಟ್ಟು ಅಚ್ಚು ತೆಗೆದುಕೊಳ್ಳಿ. ಅದರಲ್ಲಿ 2 ಚಮಚ ತೆಂಗಿನ ತುರಿ ತುಂಬಿಸಿ. ನಂತರ 4 ಚಮಚ ಅಕ್ಕಿ ಹಿಟ್ಟನ್ನು ಅದರ ಮೇಲೆ ಹರಡಿ. ಒಂದು ಲೇಯರ್‌ ತೆಂಗಿನ ತುರಿ, ಇನ್ನೊಂದು ಲೇಯರ್‌ ಅಕ್ಕಿ ಹಿಟ್ಟಿನಂತೆ ಪೂರ್ತಿ ಪುಟ್ಟು ಅಚ್ಚನ್ನು ತುಂಬಿಸಿ.

* ಪುಟ್ಟು ಅಚ್ಚಿನ ಮುಚ್ಚಳವನ್ನು ಮುಚ್ಚಿ. ಅದನ್ನು ಪುಟ್ಟು ಮಾಡುವ ಪಾತ್ರೆಗೆ ನೀರು ಹಾಕಿ, ಅದರ ಮೇಲೆ ಪುಟ್ಟು ಅಚ್ಚನ್ನಿಟ್ಟು ಫಿಕ್ಸ್‌ ಮಾಡಿ. ಸುಮಾರು 8–10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ.

* ಪುಟ್ಟು ಅಚ್ಚಿನಿಂದ ಪುಟ್ಟುವನ್ನು ನಿಧಾನವಾಗಿ ತೆಗೆಯಿರಿ. (ಅಚ್ಚಿನ ಜೊತೆಗೆ ಬರುವ ಕಡ್ಡಿಯನ್ನು ಉಪಯೋಗಿಸಿ). ಪುಟ್ಟುವನ್ನು ಕಡಲೆ ಸಾಂಬಾರ ಅಥವಾ ಚಿಕನ್‌ ಕರಿಯೊಂದಿಗೆ ಸರ್ವ್‌ ಮಾಡಿ.

ವಿಭಾಗ