ಮಕ್ಕಳ ಲಂಚ್ ಬಾಕ್ಸ್‌ಗೆ ಸ್ಪೆಷಲ್‌ ರೆಸಿಪಿ ಮಾಡಬೇಕು ಅಂತಿದ್ರೆ, ಇದನ್ನ ಟ್ರೈ ಮಾಡಿ; ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಲಂಚ್ ಬಾಕ್ಸ್‌ಗೆ ಸ್ಪೆಷಲ್‌ ರೆಸಿಪಿ ಮಾಡಬೇಕು ಅಂತಿದ್ರೆ, ಇದನ್ನ ಟ್ರೈ ಮಾಡಿ; ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ

ಮಕ್ಕಳ ಲಂಚ್ ಬಾಕ್ಸ್‌ಗೆ ಸ್ಪೆಷಲ್‌ ರೆಸಿಪಿ ಮಾಡಬೇಕು ಅಂತಿದ್ರೆ, ಇದನ್ನ ಟ್ರೈ ಮಾಡಿ; ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ

ಶಾಲೆಗೆ ಹೋಗುವ ಮಕ್ಕಳ ಊಟದ ಡಬ್ಬಿಗೆ ಏನೇ ಹಾಕಿ ಕಳುಹಿಸಿದ್ರು ಅರ್ಧ ತಿಂದು ವಾಪಾಸ್‌ ತರ್ತಾರೆ ಅನ್ನೋದು ಬಹುತೇಕ ತಾಯಂದಿರ ಮಾತು, ಅದಕ್ಕಾಗಿ ನೀವು ಬಾಯಿಗೂ ರುಚಿಯಾಗಿರುವ, ಆರೋಗ್ಯಕ್ಕೂ ಹಿತ ಎನ್ನಿಸುವ ಸ್ಪೆಷಲ್‌ ರೆಸಿಪಿಗಳನ್ನು ಟ್ರೈ ಮಾಡಬೇಕು. ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾ. (ಬರಹ: ಪ್ರಿಯಾಂಕ ಪಿ.)

ಮಕ್ಕಳ ಲಂಚ್ ಬಾಕ್ಸ್‌ಗೆ ಸ್ಪೆಷಲ್‌ ರೆಸಿಪಿ ಮಾಡಬೇಕು ಅಂತಿದ್ರೆ, ಇದನ್ನ ಟ್ರೈ ಮಾಡಿ; ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ
ಮಕ್ಕಳ ಲಂಚ್ ಬಾಕ್ಸ್‌ಗೆ ಸ್ಪೆಷಲ್‌ ರೆಸಿಪಿ ಮಾಡಬೇಕು ಅಂತಿದ್ರೆ, ಇದನ್ನ ಟ್ರೈ ಮಾಡಿ; ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ

ಎಲ್ಲಾ ತಾಯಂದಿರಿಗೂ ತಮ್ಮ ಮಕ್ಕಳಿಗೆ ಊಟ ಮಾಡಿಸುವುದು ದೊಡ್ಡ ಟಾಸ್ಕ್. ಶಾಲೆಗೆ ಹೋಗುವ ಮಕ್ಕಳಾಗಿದ್ದರೆ, ಅವರನ್ನು ಬೆಳಗ್ಗೆ ಎಬ್ಬಿಸಿ, ಸ್ನಾನ ಮಾಡಿಸಿ, ತಿಂಡಿ ತಿನ್ನಿಸಿ, ಸ್ನಾಕ್ಸ್-ಲಂಚ್ ಬಾಕ್ಸ್ ಕೊಟ್ಟು, ಸ್ಕೂಲ್ ಬಸ್ ಹತ್ತಿಸಿ ಮನೆಗೆ ಮರಳುವಷ್ಟರಲ್ಲಿ ಉಸ್ಸಪ್ಪಾ ಅಂತಾ ಆಗಿಬಿಡುತ್ತದೆ. ಅದರಲ್ಲೂ ಮಕ್ಕಳ ಲಂಚ್ ಬಾಕ್ಸ್ ಗೆ ಏನು ಮಾಡಿ ಕಳುಹಿಸುವುದು ಅನ್ನೋದೆ ದೊಡ್ಡ ಚಿಂತೆ. ಬೆಳಗ್ಗೆ ಬೇಗನೆ ಎದ್ದು ಮಕ್ಕಳಿಗೆ ತಿಂಡಿ ರೆಡಿ ಮಾಡಿ ಬಾಕ್ಸ್ ಗೆ ಹಾಕಿ ಕೊಟ್ಟು ಕಳುಹಿಸಿದರೆ ಸಾಕಾಗಲ್ಲ. ಮಕ್ಕಳು ತಿಂದಿದ್ದಾರೋ ಇಲ್ಲವೋ ಎಂಬ ಯೋಚನೆ ಕಾಡುತ್ತದೆ. ಮನೆಗೆ ಮರಳಿದ ಬಳಿಕ ಎಲ್ಲಾ ತಾಯಂದಿರು ಮೊದಲು ನೋಡುವುದೇ ಲಂಚ್ ಬಾಕ್ಸ್ ಖಾಲಿಯಾಗಿದೆಯಾ ಎಂದು. ಒಂದುವೇಳೆ ಊಟವನ್ನು ಹಾಗೆಯೇ ವಾಪಸ್ ತಂದರೆ, ಇನ್ನೇನಪ್ಪಾ ಕೊಟ್ಟು ಕಳುಹಿಸುವುದು ಎಂಬ ಚಿಂತೆ ಕಾಡುವುದು ಸಹಜ.

ಮಕ್ಕಳಿಗೆ ಆರೋಗ್ಯಕರ ಮತ್ತು ರುಚಿಕರವಾದ ಊಟ ಕೊಟ್ಟು ಕಳುಹಿಸುವುದು ಮಾತ್ರವಲ್ಲ ಅದು ನೋಡಲು ವಿಶಿಷ್ಟವಾಗಿದ್ದರೆ ಖಂಡಿತಾ ಮಕ್ಕಳು ತಿನ್ನುತ್ತಾರೆ. ಪ್ರತಿದಿನ ಒಂದೇ ರೀತಿಯ ಖಾದ್ಯ ಕಳುಹಿಸುವ ಬದಲು ಡಿಫರೆಂಟ್ ಆಗಿರುವ ಆಹಾರವನ್ನು ಪ್ಯಾಕ್ ಮಾಡಿ ಕೊಡಬೇಕು. ಮಕ್ಕಳು ಖಂಡಿತಾ ಊಟ ಖಾಲಿ ಮಾಡುವುದರಲ್ಲಿ ಸಂಶಯವೇ ಇಲ್ಲ. ಮಕ್ಕಳಿಗಾಗಿ ಕೆಲವು ಭಕ್ಷ್ಯಗಳು ಹಾಗೂ ಅದನ್ನು ಮಾಡುವ ಪಾಕವಿಧಾನದ ಬಗ್ಗೆ ಇಲ್ಲಿ ತಿಳಿಸಲಾಗಿದೆ:

ಆಲೂಗಡ್ಡೆ ಮತ್ತು ಕಡಲೆ ಕಾಳು ರ್ಯಾಪ್ ರೆಸಿಪಿ ತಯಾರಿಸಿ. ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಸಂಶಯವೇ ಇಲ್ಲ. ಇದನ್ನು ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ:

ಆಲೂಗಡ್ಡೆ ಮತ್ತು ಕಡಲೆ ರೋಲ್‌ ರೆಸಿಪಿ

ಬೇಕಾಗುವ ಪದಾರ್ಥಗಳು: ಆಲೂಗಡ್ಡೆ, ಆಲಿವ್ ಎಣ್ಣೆ, ಈರುಳ್ಳಿ, ಜೀರಿಗೆ, ಅರಿಶಿನ, ಗರಂ ಮಸಾಲೆ, ಕಡಲೆ, ಜೇನುತುಪ್ಪ, ಬಟಾಣಿ ಕಾಳು, ಕೊತ್ತಂಬರಿ ಸೊಪ್ಪು, ಚಪಾತಿ, ಅಡುಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆಯನ್ನು ಕುದಿಸಿ ಚೆನ್ನಾಗಿ ಮ್ಯಾಶ್ ಮಾಡಿ ಅದನ್ನು ಪಕ್ಕಕ್ಕೆ ಇರಿಸಿ. ನಂತರ ಬಾಣಲೆಯಲ್ಲಿ, ಮಧ್ಯಮ ಉರಿಯನ್ನಿಟ್ಟುಕೊಂಡು ಸ್ವಲ್ಪ ಆಲಿವ್ (ಅಡುಗೆ) ಎಣ್ಣೆಯನ್ನು ಹಾಕಿ. ಅದಕ್ಕೆ ಒಂದು ಕತ್ತರಿಸಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದು ಬೆಂದ ನಂತರ 1 ಟೀ ಚಮಚ ಜೀರಿಗೆ, ½ ಟೀಚಮಚ ಅರಿಶಿನ ಪುಡಿ ಮತ್ತು 2 ಟೀ ಚಮಚ ಗರಂ ಮಸಾಲೆಯನ್ನು ಹಾಕಿ ಹುರಿಯಿರಿ. ನಂತರ ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಈರುಳ್ಳಿ ಮಿಶ್ರಣಕ್ಕೆ ಸೇರಿಸಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ನೀರು ಸೇರಿಸಿ, ಅದಕ್ಕೆ ಬೇಯಿಸಿದ ಕಡಲೆ ಕಾಳು, 1 ಚಮಚ ಜೇನುತುಪ್ಪ, 1 ಕಪ್ ಬೇಯಿಸಿದ ಬಟಾಣಿ ಕಾಳು ಮತ್ತು ಕತ್ತರಿಸಿದ ಕೊತ್ತಂಬರಿ ಸೇರಿಸಿ, ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ.

ಮೇಲೆ ತಿಳಿಸಿದ ಮಿಶ್ರಣ ಸಿದ್ಧವಾದ ಬಳಿಕ ಚಪಾತಿ ಮೇಲೆ ಈ ಆಲೂಗಡ್ಡೆ-ಕಡಲೆ ಮಿಶ್ರಣವನ್ನು ಹಾಕಿ ಸ್ಟಫ್ಡ್ ಮಾಡಿ. ನಂತರ ಈ ಸ್ಟಫ್ಡ್ ಅನ್ನು ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಕರವಾದ ಖಾದ್ಯ ಸವಿಯಲು ರೆಡಿ.

ತರಕಾರಿ ರೋಲ್‌ ರೆಸಿಪಿ

ಬೇಕಾಗುವ ಪದಾರ್ಥಗಳು: ರೊಟ್ಟಿ, ಅಡುಗೆ ಎಣ್ಣೆ, ಜೀರಿಗೆ, ಈರುಳ್ಳಿ ಸೊಪ್ಪು (ಸ್ಪ್ರಿಂಗ್ ಆನಿಯನ್), ಶುಂಠಿ-ಬೆಳ್ಳುಳ್ಳಿ ಪೇಸ್ಟ್, ತರಕಾರಿಗಳು (ನಿಮಗಿಷ್ಟವಾದ ಯಾವುದೇ ಮಿಶ್ರ ತರಕಾರಿ), ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ಟೊಮೆಟೊ ಕೆಚಪ್, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ½ ಟೀ ಚಮಚ ಜೀರಿಗೆ ಸೇರಿಸಿ. ನಂತರ ಸಣ್ಣದಾಗಿ ಹೆಚ್ಚಿದ 1 ಸ್ಪ್ರಿಂಗ್ ಆನಿಯನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ 1 ಟೀ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದು ನಿಮಿಷ ಹುರಿಯಿರಿ.

ಇನ್ನೊಂದೆಡೆ ನಿಮಗಿಷ್ಟವಾದ ತರಕಾರಿಗಳನ್ನು ಆರಿಸಿ, ಅವುಗಳನ್ನು ತೊಳೆದು ನುಣ್ಣಗೆ ಕತ್ತರಿಸಿ ಬೇಯಿಸಿ. ಇದಕ್ಕೆ ½ ಟೀಚಮಚ ಗರಂ ಮಸಾಲಾ, ½ ಟೀ ಚಮಚ ಅರಿಶಿನ ಪುಡಿ, ½ ಮೆಣಸಿನ ಪುಡಿ, ಮತ್ತು 3 ರಿಂದ 4 ಟೀ ಚಮಚ ಟೊಮೆಟೋ ಕೆಚಪ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, 2 ರಿಂದ 3 ನಿಮಿಷ ಬೇಯಿಸಿ. ನಂತರ ಇದನ್ನು ಚಪಾತಿಯ ಮಧ್ಯದಲ್ಲಿ ಹರಡಿ ಸ್ಟಫ್ಡ್ ಮಾಡಿದರೆ ಸಾಕು, ರುಚಿಕರವಾದ ಖಾದ್ಯ ಸವಿಯಲು ರೆಡಿ.

ಚೀಸೀ ಟೋರ್ಟಿಲ್ಲಾ ರೋಲ್‌

ಬೇಕಾಗುವ ಪದಾರ್ಥಗಳು: ಚೀಸ್, ಅಡುಗೆ ಎಣ್ಣೆ, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಆಮ್ಚೂರ್ (ಒಣಗಿದ ಮಾವಿನ ಪುಡಿ), ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪು, ಆಲೂಗಡ್ಡೆ, ರೊಟ್ಟಿ/ಚಪಾತಿ, ಹಸಿರು ಚಟ್ನಿ, ಈರುಳ್ಳಿ, ಸೇವ್.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ ಸೇರಿಸಿ. ನಂತರ ಸಣ್ಣದಾಗಿ ಹೆಚ್ಚಿದ 1 ಶುಂಠಿ, ಸಣ್ಣದಾಗಿ ಹೆಚ್ಚಿದ 3 ಬೆಳ್ಳುಳ್ಳಿ, ಲವಂಗ ಮತ್ತು 1 ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಒಂದು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ 1 ಟೀ ಚಮಚ ಕೊತ್ತಂಬರಿ ಪುಡಿ, 1⁄2 ಟೀಚಮಚ ಕೆಂಪು ಮೆಣಸಿನ ಪುಡಿ, 1⁄2 ಟೀ ಚಮಚ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಟೀ ಚಮಚ ಒಣಗಿದ ಮಾವಿನ ಪುಡಿ (ಆಮ್ಚೂರ್), 1⁄2 ಟೀ ಚಮಚ ಗರಂ ಮಸಾಲಾ ಪುಡಿ, ಮತ್ತು 2 ಟೀ ಚಮಚ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಹಿಸುಕಿದ ಆಲೂಗಡ್ಡೆಯನ್ನು ಈ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ರೊಟ್ಟಿ ಅಥವಾ ಚಪಾತಿ ತೆಗೆದುಕೊಂಡು ಅದನ್ನು ನಾಲ್ಕು ವಿಭಾಗಗಳಂತೆ ವಿಂಗಡಿಸಿ. ಚಪಾತಿಯ ಕೆಳ ಎಡಭಾಗದಲ್ಲಿ 2 ಚಮಚ ಹಸಿರು ಚಟ್ನಿಯನ್ನು ಹಾಕಿ. ಮೇಲಿನ ಎಡಭಾಗದಲ್ಲಿ, 2 ಟೀ ಚಮಚ ಮಾಡಿಟ್ಟಿರುವ ಆಲೂಗಡ್ಡೆ ಮಿಶ್ರಣವನ್ನು ಹರಡಿ. ಇನ್ನೊಂದು ಭಾಗದಲ್ಲಿ ಈರುಳ್ಳಿಯನ್ನಿಟ್ಟರೆ, ಇನ್ನುಳಿದ ಒಂದು ಭಾಗದಲ್ಲಿ ಕೆಚಪ್ ಸವರಿ, ಸೇವ್ ಹಾಕಿ. ಬಳಿಕ ಮೇಲೆ ಚೀಸ್ ಹಾಕಿ ಒಂದೊಂದಾಗಿ ಮಡಿಚಿ.

ಸ್ಟೌವ್ ಅನ್ನು ಮಧ್ಯಮ ಉರಿಯಲ್ಲಿಟ್ಟು ಪ್ಯಾನ್‌ನಲ್ಲಿ 1/4 ಟೀ ಚಮಚ ಎಣ್ಣೆಯನ್ನು ಬಿಸಿ ಮಾಡಿ. ಒಂದು ಬದಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ 1-2 ನಿಮಿಷಗಳ ಕಾಲ ಬೇಯಿಸಿ. ನಂತರ ಫ್ಲಿಪ್ ಮಾಡಿ ಹೀಗೆ ಚೀಸ್ ಕರಗುವ ತನಕ ಬೇಯಿಸಿದರೆ ರುಚಿಕರವಾದ ಚೀಸೀ ಟೋರ್ಟಿಲ್ಲಾ ರ್ಯಾಪ್ ಸವಿಯಲು ಸಿದ್ಧ.

Whats_app_banner