ತೆಂಗಿನಕಾಯಿ ಬಳಸದೇ ಮಾಡಬಹುದಾದ ಚಟ್ನಿಗಳ ಬಗ್ಗೆ ಇಲ್ಲಿದೆ ಮಾಹಿತಿ, ದರ ಹೆಚ್ಚಳದ ಈ ಹೊತ್ತಿನಲ್ಲಿ ನೀವೂ ಟ್ರೈ ಮಾಡಿ
ತೆಂಗಿನಕಾಯಿ ದರ ದಿನೇ ದಿನೇ ಏರಿಕೆಯಾಗ್ತಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಥಟ್ಟಂತ ತಲೆಗೆ ಬರೋದು ಚಟ್ನಿ ಮಾಡೋದು ಹೇಗಪ್ಪಾ ಅಂತ. ಯಾಕೆಂದ್ರೆ ಸಾಮಾನ್ಯವಾಗಿ ತೆಂಗಿನಕಾಯಿಯಿಂದ ಚಟ್ನಿ ಮಾಡೋದೇ ಹೆಚ್ಚು. ಈ ಸಮಯದಲ್ಲಿ ತೆಂಗಿನಕಾಯಿ ಬಿಟ್ಟು ಬೇರೆ ಯಾವುದೆಲ್ಲಾ ಚಟ್ನಿ ಮಾಡಬಹುದು ನೋಡಿ.
ದೋಸೆ, ಇಡ್ಲಿ, ರೈಸ್‌ಬಾತ್ ಯಾವುದೇ ತಿಂಡಿ ಇರಲಿ ಅದರ ಜೊತೆ ಚಟ್ನಿ ನೆಂಜಿಕೊಂಡು ತಿಂದರೆ ಏನೋ ಸಮಾಧಾನ. ತೆಂಗಿನಕಾಯಿ ಚಟ್ನಿಯ ರುಚಿಯೇ ಬೇರೆ. ಆದರೆ ಬೆಂಗಳೂರಿನಂತಹ ನಗರಗಳಲ್ಲಿ ಕೆಲ ಹೋಟೆಲ್‌ಗಳಲ್ಲೂ ತೆಂಗಿನಕಾಯಿ ಚಟ್ನಿ ಕೊಡುತ್ತಿಲ್ಲ. ಯಾಕೆ ಅಂತಾ ಯೋಚನೆ ಮಾಡ್ತಾ ಇದೀರಾ, ಹೌದು ಅದಕ್ಕೆ ಕಾರಣ ತೆಂಗಿನಕಾಯಿ ಬೆಲೆ ಹೆಚ್ಚಾಗಿರುವುದು.
ಕಳೆದ ವರ್ಷ ತೆಂಗಿನಕಾಯಿ ಇಳುವರಿ ಕಡಿಮೆ, ಈಗ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ಈ ಹೊತ್ತಿನಲ್ಲಿ ಅಡುಗೆಗೆ ತೆಂಗಿನಕಾಯಿ ಬಳಸೋದು ಕಷ್ಟವಾಗಿದೆ. ಅದರಲ್ಲೂ ಬೆಳಗಿನ ತಿಂಡಿಗೆ ಚಟ್ನಿ ಮಾಡಿಲ್ಲ ಅಂದ್ರೆ ಹೇಗೆ ಅಂತ ಬಹಳ ಜನ ಯೋಚನೆ ಮಾಡ್ತಾರೆ. ಅಂತಹವರಿಗಾಗಿ ತೆಂಗಿನಕಾಯಿ ಬಳಸದೇ ಮಾಡಬಹುದಾದ ಚಟ್ನಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಪುದಿನಾ ಚಟ್ನಿ
ತೆಂಗಿನಕಾಯಿ ಚಟ್ನಿ ಬದಲಿಗೆ ಪುದಿನಾ ಚಟ್ನಿ ಮಾಡಬಹುದು. ಇದಕ್ಕೆ ನೀವು ಹಸಿಮೆಣಸು, ಪುದಿನಾ ಸೊಪ್ಪು, ಕಡಲೆಪಪ್ಪು, ಉಪ್ಪು, ಈರುಳ್ಳಿ, ಜೀರಿಗೆ ಹಾಕಿದ್ರೆ ಸೂಪರ್ ಟೇಸ್ಟಿ ಆಗಿರೋ ಚಟ್ನಿ ರೆಡಿ ಆಗುತ್ತೆ. ಇದು ಆರೋಗ್ಯಕ್ಕೂ ಉತ್ತಮ, ಇದರ ರುಚಿಯೂ ಅದ್ಭುತವಾಗಿರುತ್ತೆ. ಇದನ್ನು ದೋಸೆ, ಇಡ್ಲಿ ಮಾತ್ರವಲ್ಲ ಅನ್ನದ ಜೊತೆ ನೆಂಜಿಕೊಂಡು ತಿನ್ನಲೂ ಸೂಪರ್ ಆಗಿರುತ್ತೆ. ಇದನ್ನ ಮಾಡಿಟ್ಟು ಬಾಟಲಿಯಲ್ಲಿ ತುಂಬಿಸಿಟ್ಟುಕೊಂಡು ತಿನ್ನಬಹುದು.
ಟೊಮೆಟೊ ಚಟ್ನಿ
ಟೊಮೆಟೊ ಚಟ್ನಿ ನೀವು ಒಮ್ಮೆ ತಿಂದ್ರೆ ಬೇರೆ ತಿನ್ಬೇಕು ಅಂತ ನಿಮಗೆ ಅನ್ನಿಸೋದೇ ಇಲ್ಲ. ಯಾಕಂದ್ರೆ ಇದರ ರುಚಿ ಅದ್ಭುತವಾಗಿರುತ್ತೆ. ಟೊಮೆಟೊ ಚಟ್ನಿಗೆ ತೆಂಗಿನಕಾಯಿ ಅವಶ್ಯವಿಲ್ಲ. ಟೊಮೆಟೊ ಬೇಯಿಸಿ ಸ್ಮ್ಯಾಶ್ ಮಾಡಿ, ಹಸಿಮೆಣಸು, ಈರುಳ್ಳಿ, ಉಪ್ಪು ಸೇರಿಸಿ ಒಂದು ಒಗ್ಗರಣೆ ಕೊಟ್ರೆ ಸೂಪರ್ ಟೇಸ್ಟಿ ಟೊಮೆಟೊ ಚಟ್ನಿ ರೆಡಿ ಆಗುತ್ತೆ. ಇದು ದೋಸೆ, ಇಡ್ಲಿ ಮಾತ್ರವಲ್ಲ ಅನ್ನದ ಜೊತೆ ನೆಂಚಿಕೊಂಡು ತಿನ್ನಲು ಕೂಡ ಸಖತ್ ಆಗಿರುತ್ತೆ.
ಹುರಿಗಡಲೆ ಚಟ್ನಿ
ತೆಂಗಿನಕಾಯಿ ಬದಲು ಹುರಿಗಡಲೆ ಚಟ್ನಿ ಮಾಡಬಹುದು. ಇದರ ರುಚಿಯೂ ಅದ್ಭುತ. ಇದನ್ನು ಸಾಮಾನ್ಯವಾಗಿ ಕೆಲವು ಕಡೆ ನಿತ್ಯ ಬಳಕೆ ಮಾಡುತ್ತಾರೆ. ತೆಂಗಿನಕಾಯಿ ದರ ಜಾಸ್ತಿ ಇದ್ದಾಗ, ನೀವು ನೀವು ಹುರಿಗಡಲೆ ಚಟ್ನಿ ಮಾಡಬಹುದು. ದೋಸೆ, ಇಡ್ಲಿಗೆ ಇದು ಸ್ಪೆಷಲ್ ರುಚಿ ಕೊಡುತ್ತೆ.
ಬದನೆಕಾಯಿ ಚಟ್ನಿ
ನೀವು ಊಟಕ್ಕೆ ಚಟ್ನಿ ಮಾಡ್ಬೇಕು ಅಂತಿದ್ರೆ ತೆಂಗಿನಕಾಯಿ ಬದಲು ಬದನೆಕಾಯಿ ಚಟ್ನಿ ಮಾಡಬಹುದು. ಬದನೆಕಾಯಿ, ಹಸಿಮೆಣಸು, ಬೆಳ್ಳುಳ್ಳಿ ಬೇಯಿಸಿ ಸ್ಮ್ಯಾಶ್ ಮಾಡಿ. ಇದಕ್ಕೆ ಈರುಳ್ಳಿ ಹೆಚ್ಚಿ ಹಾಕಿ, ಹುಣಸೆರಸ ಸೇರಿಸಿದ್ರೆ ಸಖತ್ ಟೇಸ್ಟಿ ಆಗಿರೋ ಬದನೆಕಾಯಿ ಚಟ್ನಿ ಸಿದ್ಧವಾಗುತ್ತೆ.
ಶೇಂಗಾ ಚಟ್ನಿ
ಶೇಂಗಾ ಚಟ್ನಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಳಕೆ ಹೆಚ್ಚು. ಇದು ಕೂಡ ರುಚಿಯ ಜೊತೆ ಆರೋಗ್ಯಕ್ಕೂ ಉತ್ತಮ. ಶೇಂಗಾ ಚಟ್ನಿ ಕೂಡ ನೀವು ಒಮ್ಮೆ ತಿಂದ್ರೆ ಮತ್ತೆ ಮತ್ತೆ ಇದನ್ನು ಮಾಡಿ ತಿಂತೀರಿ. ಶೇಂಗಾ ಹುರಿದು, ಇದಕ್ಕೆ ಹಸಿಮೆಣಸು, ಬೆಳ್ಳುಳ್ಳಿ, ಉಪ್ಪು, ಹುಣಸೆರಸ ಸೇರಿಸಿ ರುಬ್ಬಿ. ನಂತರ ಒಂದು ಒಗ್ಗರಣೆ ಕೊಟ್ಟು, ಹೆಚ್ಚಿದ ಈರುಳ್ಳಿ ಸೇರಿಸಿದ್ರೆ ಸೂಪರ್ ಟೇಸ್ಟಿ ಆಗಿರೋ ಶೇಂಗಾ ಚಟ್ನಿ ತಿನ್ನಲು ಸಿದ್ಧವಾಗುತ್ತೆ.
ಕೊತ್ತಂಬರಿ ಸೊಪ್ಪಿನ ಚಟ್ನಿ
ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ತೆಂಗಿನಕಾಯಿ ಬಳಸದೇ ಮಾಡಿದ್ರೆ ಅದನ್ನು ಒಂದು ತಿಂಗಳ ಕಾಲ ಹಾಗೆ ಇಟ್ಟು ತಿನ್ನಬಹುದು. ಇದನ್ನು ಮಾಡೋದು ಕೂಡ ಬಲು ಸುಲಭ. ಕೊತ್ತಂಬರಿ ಸೊಪ್ಪು, ಹಸಿಮೆಣಸು, ಬೆಳುಳ್ಳಿ ಹುರಿದುಕೊಂಡು ಅದನ್ನು ನೀರು ಸೇರಿಸದೇ ದಪ್ಪನಾಗಿ ರುಬ್ಬಿಕೊಳ್ಳಬೇಕು. ಆಮೇಲೆ ಒಂದು ಒಗ್ಗರಣೆ ಕೊಡಬೇಕು. ಇದರ ರುಚಿ ಅದ್ಭುತವಾಗಿರುತ್ತೆ.
ವಿಭಾಗ