Substitutes For Coconut: ಗಗನಕ್ಕೇರಿದೆ ತೆಂಗಿನಕಾಯಿ ಬೆಲೆ: ಅಡುಗೆಯಲ್ಲಿ ರುಚಿ ಕಾಪಾಡಲು ಈ ಪರ್ಯಾಯ ಯೋಚಿಸಿ
ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಇಳುವರಿ ಕಡಿಮೆಯಾಗಿರುವ ಕಾರಣ ಈ ವರ್ಷ ತೆಂಗಿನಕಾಯಿ ದರ ಗಗನಕ್ಕೇರಿದೆ. ಹಾಗಂತ ನಮಗೆ ಅಡುಗೆಯಲ್ಲಿ ತೆಂಗಿನಕಾಯಿ ರುಚಿ ಇಲ್ಲ ಅಂದ್ರೆ ಊಟನೇ ಸೇರೊಲ್ಲ, ಏನ್ ಮಾಡೋದು ಅಂತ ಚಿಂತೆ ಮಾಡ್ಬೇಡಿ. ತೆಂಗಿನಕಾಯಿಗೆ ಪರ್ಯಾಯವಾಗಿ ಏನೆಲ್ಲಾ ಬಳಸುವುದು ಎಂಬುದನ್ನು ಯೋಚಿಸಿ. ಇಲ್ಲಿರುವ ಪರ್ಯಾಯಗಳು ನಿಮಗೆ ಇಷ್ಟವಾಗಬಹುದು ಗಮನಿಸಿ.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಬಹುತೇಕ ಅಡುಗೆಗೆ ತೆಂಗಿನಕಾಯಿ ಬಳಸುತ್ತಾರೆ. ತೆಂಗಿನಕಾಯಿ ಬಳಸದೇ ಚಟ್ನಿ, ಸಾಂಬಾರ್ ಮಾಡುವ ಉದಾಹರಣೆಗಳು ಕಡಿಮೆ. ಕರ್ನಾಟಕದಲ್ಲೂ ತೆಂಗಿನಕಾಯಿ ಪ್ರಿಯರೇ ಹೆಚ್ಚು. ಅದರಲ್ಲೂ ಕರಾವಳಿ ಭಾಗದಲ್ಲಿ ತೆಂಗಿನಕಾಯಿ ಇಲ್ಲದ ಅಡುಗೆ ಭಾರಿ ಕಡಿಮೆ. ತೆಂಗಿನಕಾಯಿ ಹಾಕಿ ತಯಾರಿಸಿದ ಖಾದ್ಯಗಳ ರುಚಿ ಹೆಚ್ಚು. ಆದರೆ ಏನ್ ಮಾಡೋದು, ಈಗ ತೆಂಗಿನಕಾಯಿ ದರ ಗಗನಕ್ಕೇರಿದೆ. ಇದನ್ನು ಕೇಳಿ ಅಡುಗೆಮನೆಯಲ್ಲಿ ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳೋದು ಪಕ್ಕಾ.
ಕಳೆದ ವರ್ಷ ಇಳುವರಿ ಕಡಿಮೆಯಾಗಿದ್ದು ಒಂದು ಕಡೆಯಾದರೆ, ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು ತೆಂಗಿನಕಾಯಿ ದರ ಭಾರಿ ಏರಿಕೆಗೆ ಕಾರಣವಾಗಿದೆ. ಹಾಗಂತ ಚಿಂತೆ ಮಾಡ್ಬೇಡಿ, ತೆಂಗಿನಕಾಯಿ ಬಳಸದೆಯೂ ಅಡುಗೆ ರುಚಿಯಾಗುವಂತೆ ಮಾಡಬಹುದು. ಅದಕ್ಕಾಗಿ ನೀವು ಕೆಲವೊಂದು ಪರ್ಯಾಯಗಳನ್ನು ಹುಡುಕಬೇಕು. ಹಾಗಾದರೆ ತೆಂಗಿನಕಾಯಿಗೆ ಪರ್ಯಾಯವೇನು, ತೆಂಗಿನಕಾಯಿ ಬದಲು ಏನೆಲ್ಲಾ ಬಳಸಬಹುದು ಎಂಬುದನ್ನು ನೋಡೋಣ.
ಉಪ್ಪಿಟ್ಟಿಗೆ ಕ್ಯಾರೆಟ್ ತುರಿ
ಉಪ್ಪಿಟ್ಟು ಮಾಡುವಾಗ ಮೇಲ್ಗಡೆ ಕೊಂಚ ತೆಂಗಿನತುರಿ ಉದುರಿಸಿದ್ರೆ ಅದರ ರುಚಿಯೇ ಬೇರೆ. ಹಾಗಂತ ಈಗ ತೆಂಗಿನಕಾಯಿ ಬಳಸೋಕೆ ಭಯ ಆಗುತ್ತೆ ಅಂತ ಚಿಂತೆ ಮಾಡ್ಬೇಡಿ, ತೆಂಗಿನತುರಿ ಬದಲು ಉಪ್ಪಿಟ್ಟಿನ ಮೇಲೆ ಕ್ಯಾರೆಟ್ ತುರಿದು ಹಾಕಿ. ಇದರಿಂದ ಉಪ್ಪಿಟ್ಟಿಗೆ ಹೊಸ ರುಚಿ ಸಿಗುತ್ತೆ. ಇದನ್ನು ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ.
ಚಿತ್ರಾನ್ನಕ್ಕೆ ಈರುಳ್ಳಿ ಹೆಚ್ಚಿಸಿ
ಉಪ್ಪಿಟ್ಟಿನಂತೆ ಚಿತ್ರಾನ್ನಕ್ಕೂ ತೆಂಗಿನಕಾಯಿ ಬಳಸುವ ಅಭ್ಯಾಸ ಕೆಲವು ಕಡೆ ಇದೆ. ಈಗ ತೆಂಗಿನಕಾಯಿ ದರ ಏರಿದೆ, ಏನ್ ಮಾಡೋದು ಅನ್ನೋ ಯೋಚನೆ ಇದ್ರೆ ಗಮನಿಸಿ. ಅದರ ಬದಲು ಈರುಳ್ಳಿ ಜಾಸ್ತಿ ಹಾಕಿ. ಇದರಿಂದ ಚಿತ್ರಾನ್ನದ ರುಚಿ ಹೆಚ್ಚಾಗುತ್ತೆ.
ಸಾಂಬಾರ್‌ಗೆ ಬೇಳೆ ಬಳಸಿ
ದಕ್ಷಿಣ ಭಾರತದಲ್ಲಿ ಅದರಲ್ಲೂ ಕರಾವಳಿ ಭಾಗಗಳಲ್ಲಿ ತೆಂಗಿನಕಾಯಿ ಇಲ್ಲ ಅಂದ್ರೆ ಸಾಂಬಾರ್ ಆಗೋದೇ ಇಲ್ಲ. ಸಾಂಬಾರ್‌ಗೆ ರುಚಿ ಸಿಗಬೇಕು ಅಂದ್ರೆ ತೆಂಗಿನಕಾಯಿ ಬೇಕೇಬೇಕು. ಆದರೆ ಈಗ ತೆಂಗಿನಕಾಯಿ ದರ ಜಾಸ್ತಿ ಆಗಿದೆ ಅಂತ ಭಯ ಪಡಬೇಡಿ. ತೆಂಗಿನಕಾಯಿ ಬದಲು ತರಕಾರಿ ಸಾಂಬಾರ್‌ಗೆ ಬೇಳೆ ಬಳಸಬಹುದು. ಬೇಳೆ ಹಾಗೂ ಸಾಂಬಾರ್ ಪೌಡರ್ ಹಾಕಿ ತಯಾರಿಸಿದ ಸಾಂಬಾರ್ ತಿನ್ನಲು ಸಖತ್ ಆಗಿರುತ್ತೆ.
ಫ್ರೈ, ಡ್ರೈ ಮಾಡಿ
ನೀವು ನಾನ್ ವೆಜ್ ಪ್ರಿಯರಾಗಿದ್ದರೆ ತೆಂಗಿನಕಾಯಿ ಇಲ್ಲದೇ ಹೇಗಪ್ಪಾ ಮೀನು ಸಾರು, ಕೋಳಿ ಸಾರು ಮಾಡೋದು ಅಂತ ಯೋಚಿಸಬಹುದು. ಅದಕ್ಕಾಗಿ ನೀವು ಫ್ರೈ, ಡ್ರೈ ಮಾಡಬಹುದು. ಫಿಶ್ ಫ್ರೈ ಮಾಡಿ. ಚಿಕನ್ ಡ್ರೈ ಐಟಂಗಳನ್ನು ಮಾಡಿ. ಇದರಿಂದ ತೆಂಗಿನಕಾಯಿ ಬಳಸುವ ಅವಶ್ಯಕತೆ ಬರುವುದಿಲ್ಲ.
ತಿಳಿಸಾರಿಗೆ ಒಗ್ಗರಣೆಯೇ ರುಚಿ
ತಿಳಿಸಾರು ಮಾಡುವಾಗ ಕೆಲವರು ತೆಂಗಿನಕಾಯಿ ತುರಿದು ಹಾಕಿ ಕುದಿಸುತ್ತಾರೆ. ಅದರ ರುಚಿಯೇ ಬೇರೆ. ಹಾಗಂತ ಈ ಸಮಯದಲ್ಲಿ ತೆಂಗಿನತುರಿ ಬಳಸೋದು ಕಷ್ಟ. ಅದಕ್ಕಾಗಿ ಯೋಚಿಸುವ ಅಗತ್ಯವಿಲ್ಲ. ತಿಳಿಸಾರಿನ ರುಚಿ ಹೆಚ್ಚಿಸಲು ಒಂದು ಒಗ್ಗರಣೆ ಕೊಡಿ. ಆಗ ಎರಡು ತುತ್ತು ಹೆಚ್ಚೇ ತಿಂತೀರಿ.
ಚಟ್ನಿಗೆ ಹುರಿಗಡಲೆ, ಶೇಂಗಾ ಬಳಸಿ
ಅದಕ್ಕೆಲ್ಲಾ ತೆಂಗಿನಕಾಯಿ ಹಾಕಲೇಬೇಕು ಅಂತಿಲ್ಲ. ಆದರೆ ಚಟ್ನಿ ಕಥೆ ಏನು ಅಂತ ಕೇಳ್ಬೇಡಿ. ಚಟ್ನಿಗೆ ಶೇಂಗಾ (ಕಡಲೆಬೀಜ) ಹಾಗೂ ಕಡಲೆಪಪ್ಪು (ಹುರಿಗಡಲೆ) ಜಾಸ್ತಿ ಹಾಕಿ. ಇದರಿಂದ ಸಖತ್ ರುಚಿಯಾಗಿರುವ ಚಟ್ನಿ ಮಾಡಬಹುದು. ತೆಂಗಿನಕಾಯಿಗೆ ಇದು ಒಂದೊಳ್ಳೆ ಪರ್ಯಾಯ ಎನ್ನಬಹುದು.
ಗೋಡಂಬಿ ಹಾಲು
ಕೆಲವು ಅಡುಗೆಗಳಿಗೆ ತೆಂಗಿನಕಾಯಿ ಹಾಲು ಬಳಸಿದ್ರೆ ರುಚಿ ಹೆಚ್ಚು. ಆದರೆ ಈಗ ದರ ಏರಿಕೆಯ ಕಾರಣದಿಂದ ರುಚಿ ಕೊಡಲು ಆಗುವುದಿಲ್ಲ ಅಂತ ಯೋಚಿಸಬೇಡಿ. ಅದರ ಬದಲು ನೀವು ಗೋಡಂಬಿ ನೆನೆ ಹಾಕಿ, ಅದನ್ನು ರುಬ್ಬಿ ಅದರಿಂದ ಹಾಲು ತಯಾರಿಸಬಹುದು. ಗೋಡಂಬಿ ಹಾಲು ಆಹಾರ ರುಚಿಯನ್ನು ಎರಡು ಪಟ್ಟು ಹೆಚ್ಚಿಸುತ್ತೆ.
ಓಟ್ ಮಿಲ್ಕ್
ತೆಂಗಿನಕಾಯಿ ರುಚಿ ಸಿಗಲು ನೀವು ಆಹಾರ ಖಾದ್ಯಗಳಿಗೆ ಓಟ್ ಮಿಲ್ಕ್ ಅನ್ನು ಕೂಡ ಬಳಸಬಹುದು, ಇದು ಇದು ವಿಭಿನ್ನ ರುಚಿಯನ್ನು ನೀಡುತ್ತದೆ. ಆದರೆ ಓಟ್ ಮಿಲ್ಕ್ ರುಚಿ ಎಲ್ಲರಿಗೂ ಇಷ್ಟವಾಗದೇ ಇರಬಹುದು. ಒಮ್ಮೆ ಬಳಸಿ ನೋಡಿ, ಇಷ್ಟವಾದರೆ ಮಾತ್ರ ಮತ್ತೆ ಬಳಸಬಹುದು.
ಮೊಸರು, ಹಾಲು ಬಳಸಿ
ಚಿಕನ್, ಮಟನ್, ಮೊಟ್ಟೆ ಸೇರಿದಂತೆ ಕೆಲವು ಖಾರದ ಅಡುಗೆಗಳಿಗೆ ಕಾಯಿಹಾಲು ಹಾಕುವುದು ಸಾಮಾನ್ಯ. ಆದರೆ ತೆಂಗಿನ ಕಾಯಿ ಬದಲಿಗೆ ಮೊಸರು ಅಥವಾ ದನದ ಹಾಲನ್ನೂ ಹಾಕಬಹುದು. ಆಗ ಅಡುಗೆಯ ರುಚಿಯೂ ಹೆಚ್ಚುತ್ತದೆ.
ವಿಭಾಗ