Brahmana Prasadam: ಬ್ರಾಹ್ಮಣ ಪ್ರಸಾದಮ್‌, ಇದು ದೇವರ ಹೆಸರಿನಲ್ಲಿ ಮಾಡ್ತಿರೋ ಬುಸ್ನೆಸ್‌ ಖಂಡಿತ ಅಲ್ಲ; ಸುಮನ್ ಭಾರದ್ವಾಜ್
ಕನ್ನಡ ಸುದ್ದಿ  /  ಜೀವನಶೈಲಿ  /  Brahmana Prasadam: ಬ್ರಾಹ್ಮಣ ಪ್ರಸಾದಮ್‌, ಇದು ದೇವರ ಹೆಸರಿನಲ್ಲಿ ಮಾಡ್ತಿರೋ ಬುಸ್ನೆಸ್‌ ಖಂಡಿತ ಅಲ್ಲ; ಸುಮನ್ ಭಾರದ್ವಾಜ್

Brahmana Prasadam: ಬ್ರಾಹ್ಮಣ ಪ್ರಸಾದಮ್‌, ಇದು ದೇವರ ಹೆಸರಿನಲ್ಲಿ ಮಾಡ್ತಿರೋ ಬುಸ್ನೆಸ್‌ ಖಂಡಿತ ಅಲ್ಲ; ಸುಮನ್ ಭಾರದ್ವಾಜ್

ದೇವರು ಯಾರೊಬ್ಬರ ಸ್ವತ್ತಲ್ಲ, ಎಲ್ಲರಿಗೂ ಬೇಕು. ಯಾವ ದೇವಸ್ಥಾನದಲ್ಲಿ ಪ್ರಸಾದವನ್ನು ಫ್ರೀ ಕೊಡ್ತಾರೆ ಹೇಳಿ? ದೇವರ ದರ್ಶನಕ್ಕೆ ಟಿಕೆಟ್‌ ಪಡೆಯಬೇಕು. ಕುಂಕುಮಾರ್ಚನೆಗೆ ದುಡ್ಡು ಕೊಡಬೇಕು. ದೇವಸ್ಥಾನದ ಹೊರಗೆ ಹೂವು, ಹಣ್ಣು, ತೆಂಗಿನಕಾಯಿ, ಕರ್ಪೂರ ಮಾರುವವರು ಮಾಡ್ತಿರೋದು ಏನು?

'ಬ್ರಾಹ್ಮಣ ಪ್ರಸಾದಮ್'
'ಬ್ರಾಹ್ಮಣ ಪ್ರಸಾದಮ್' (PC: Brahmana Prasadam)

ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದ ನಂತರ ಅಲ್ಲಿ ಪ್ರಸಾದ ದೊರೆತರೆ ನಾವೇ ಧನ್ಯ ಎಂದುಕೊಳ್ಳುತ್ತೇವೆ. ದೊರೆತ ಪ್ರಸಾದವನ್ನು ಕಣ್ಣಿಗೆ ಒತ್ತಿಕೊಂಡು ಭಕ್ತಿಯಿಂದ ತಿನ್ನುತ್ತೇವೆ. ದೇವರ ಮಹಿಮೆಯೋ ಏನೋ ಎನ್ನುವಂತೆ ಆ ಪ್ರಸಾದ ಬಹಳ ರುಚಿಯಿರುತ್ತದೆ. ಪ್ರಸಾದ ನಾವು ಬಯಸಿದಷ್ಟು ಸಿಗುವುದಿಲ್ಲ. ಆದರೆ ಅದೇ ವಿವಿಧ ರೀತಿಯ ಪ್ರಸಾದವನ್ನು ನೀವು ತೃಪ್ತಿ ಎನಿಸುವಷ್ಟು ತಿಂದರೆ ಆ ಖುಷಿಗೆ ಪಾರವೇ ಇರುವುದಿಲ್ಲ.

ಬೆಂಗಳೂರಿನ ಸುಮನ್ ಭಾರದ್ವಾಜ್

ಪ್ರಸಾದ ಹೇಗೆ ಹೊಟ್ಟೆ ತುಂಬುವಷ್ಟು ಸಿಗುತ್ತೆ ಅನ್ನೊದು ನಿಮ್ಮ ಪ್ರಶ್ನೆ? ಇದಕ್ಕೆ ಉತ್ತರ 'ಬ್ರಾಹ್ಮಣ ಪ್ರಸಾದಮ್'.‌ ಸುಮನ್ ಭಾರದ್ವಾಜ್ ಎನ್ನುವವರು ಬ್ರಾಹ್ಮಣ ಪ್ರಸಾದಮ್ ಕಾನ್ಸೆಪ್ಟ್‌ನಲ್ಲಿ ಹೋಟೆಲ್‌ ಆರಂಭಿಸಿದ್ದಾರೆ. ಸುಮನ್‌ ಬೆಂಗಳೂರಿನ ಹುಡುಗ, ಬಿಕಾಂ ಪದವೀಧರ. ತಂದೆ ರವೀಂದ್ರ ಭಾರದ್ವಾಜ್ ಕ್ಯಾಟರಿಂಗ್‌ ಬ್ಯುಸ್ನೆಸ್‌ ಮಾಡುತ್ತಿದ್ದವರು. ತಾಯಿ ಮಂಜುಳ ಗೃಹಿಣಿ. ಪವನ್‌ ಭಾರದ್ವಾಜ್ ಸುಮನ್‌ ಸಹೋದರ. ಸುಮನ್‌ಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಒಲವು. ಕಾಲೇಜಿನಲ್ಲಿರುವಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಇವರು 'ಸುಪರ್ವ' ಎಂಬ ತಂಡದೊಂದಿಗೆ ಸುಮಾರು 250 ಸ್ಟೇಜ್‌ ಶೋಗಳನ್ನು ನೀಡಿದ್ದಾರೆ. ಗುರು ರಾಘವೇಂದ್ರ ವೈಭವ, ಪಡುವಾರಳ್ಳಿ ಪಡ್ಡೆಗಳು, ಕಂಜೂಸ್‌ ಕಮಂಗಿರಾಯ, ಮಾಯದ ಮನೆ, ಪೌರ್ಣಮಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಿನಿಮಾಗೆ ಕೂಡಾ ತಯಾರಿ ನಡೆಸುತ್ತಿದ್ದಾರೆ.

ಬೆಂಗಳೂರಿನ ಬನಶಂಕರಿಯಲ್ಲಿದೆ 'ಬ್ರಾಹ್ಮಣ ಪ್ರಸಾದಮ್' ಹೋಟೆಲ್
ಬೆಂಗಳೂರಿನ ಬನಶಂಕರಿಯಲ್ಲಿದೆ 'ಬ್ರಾಹ್ಮಣ ಪ್ರಸಾದಮ್' ಹೋಟೆಲ್

ತಂದೆಯ ಕನಸು ನನಸು ಮಾಡಲು ಆರಂಭಿಸಿದ ಬ್ಯುಸ್ನೆಸ್

ಸುಮನ್‌ ಭಾರದ್ವಾಜ್ ತಂದೆಗೆ ಹೋಟೆಲ್‌ ಆರಂಭಿಸಬೇಕು ಅನ್ನೋದು ಬಹಳ ವರ್ಷಗಳ ಕನಸು. ಸುಮನ್‌ ಕೂಡಾ ಆಕ್ಟಿಂಗ್‌ ಜೊತೆಗೆ ಬ್ರಾಹ್ಮಣ ಪ್ರಸಾದಮ್‌ನಂತ ಬ್ಯುಸ್ನೆಸ್‌ ಆರಂಭಿಸಬೇಕು ಎಂಬ ಕನಸು ಇತ್ತು. ದುರದೃಷ್ಟವಾಶಾತ್‌ ಸುಮನ್‌ ತಂದೆ 2022 ರಲ್ಲಿ ಕಾರ್ಡಿಯಾಕ್‌ ಅರೆಸ್ಟ್‌ ಆಗಿ ನಿಧನರಾದರು. ಅಪ್ಪನ ಕನಸನ್ನು ನನಸು ಮಾಡಲು ನಿರ್ಧರಿಸಿದ ಸುಮನ್‌, ಮೂರೇ ತಿಂಗಳಲ್ಲಿ ಹೊಸ ಬ್ಯುಸ್ನೆಸ್‌ಗೆ ನಾಂದಿ ಹಾಡಿದರು. ಪ್ರಸಾದ ತಿನ್ನಬೇಕೆಂದರೆ ಮತ್ತೆ ದೇವಸ್ಥಾನಕ್ಕೆ ಹೋಗಬೇಕು. ಆದರೆ ಅಂತದ್ದೇ ಪ್ರಸಾದ ಹೊರಗೆ ಸಿಗುವಂತೆ ಆದರೆ ಜನರು ಖಂಡಿತ ಇಷ್ಟಪಟ್ಟು ತಿನ್ನುತ್ತಾರೆ ಎಂಬ ಯೋಚನೆ ಸುಮನ್‌ಗೆ ಬಂತು. ಅದರ ಫಲವೇ ಈ ಹೋಟೆಲ್‌. ಮೊದಲ ದಿನವೇ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.‌

ಮೆನುವಿನಲ್ಲಿ ಏನೆಲ್ಲಾ ಇರುತ್ತೆ?

ಕೆಲವೊಂದು ಬ್ಯುಸ್ನೆಸ್‌ ಆರಂಭವಾಗಿ ಸಕ್ಸಸ್‌ ಆಗಲು ಕೆಲವೇ ವರ್ಷಗಳು ಬೇಕಾಗುತ್ತದೆ. ಅದರೆ ಸುಮನ್‌ ವರ್ಷ ತುಂಬುವಷ್ಟರಲ್ಲಿ ಯಶಸ್ವಿ ಆದರು. ಈ ಆಗಸ್ಟ್‌ಗೆ ಸುಮನ್‌ ಹೋಟೆಲ್‌ ಉದ್ಯಮ ಆರಂಭಿಸಿ ವರ್ಷ ತುಂಬಲಿದೆ. ಇಲ್ಲಿ ಒಂದು ದಿನ ಇರುವ ಫುಡ್‌ ಐಟಮ್‌ ಮತ್ತೊಮ್ಮೆ ತಿನ್ನಬೇಕೆಂದರೆ 15 ದಿನಗಳು ಕಾಯಬೇಕು. ಪ್ರತಿದಿನ 10 ವೆರೈಟಿ ಆದ್ರೂ ಇರುತ್ತೆ. ರಸಾಯನ, ಪಂಚಾಮೃತ, ಹಯಗ್ರೀವ, ಚಿತ್ರಾನ್ನ, ಪುಳಿಯೋಗರೆ, ಒಬ್ಬಟ್ಟು, ಲಾಡು, ಖೀರು, ಪೊಂಗಲ್‌, ಬೆಲ್ಲದ ಅನ್ನ, ಬಿಸಿಬೇಳೆ ಬಾತ್‌, ಮೊಸರನ್ನ, ವಾಂಗಿಬಾತ್‌ ಹೀಗೆ ತರಹೇವಾರಿ ಪ್ರಸಾದಗಳು ಇಲ್ಲಿ ದೊರೆಯುತ್ತದೆ. ಇದನ್ನು ಪ್ರಸಾದಮ್‌ ಅಂತ ಕರೆಯೋಕೆ ಮತ್ತೊಂದು ಕಾರಣ ಇದೆ. ಜನರಿಗೆ ಇದನ್ನು ನೀಡುವ ಮುನ್ನ ಎಲ್ಲಾ ತಿಂಡಿಗಳು ಮನೆಯಲ್ಲೇ ಶ್ರೀ ಚಂದ್ರಮೌಳೇಶ್ವರ , ಸ್ಪಟಿಕ ಶ್ರೀ ಚಕ್ರ, ನರಸಿಂಹ ಸಾಲಿಗ್ರಾಮಕ್ಕೆ ನೈವೇದ್ಯ ಮಾಡಿ ತರಲಾಗುತ್ತದೆ.‌‌

50ಕ್ಕೂ ಹೆಚ್ಚು ವೆರೈಟಿ ತಿಂಡಿಗಳು ಇಲ್ಲಿ ದೊರೆಯತ್ತವೆ
50ಕ್ಕೂ ಹೆಚ್ಚು ವೆರೈಟಿ ತಿಂಡಿಗಳು ಇಲ್ಲಿ ದೊರೆಯತ್ತವೆ

ಆರಂಭದಲ್ಲಿ ಬನಶಂಕರಿಯ ಪಾರ್ಕ್‌ವೊಂದರ ಬಳಿ ಮೊಬೈಲ್‌ ಕ್ಯಾಂಟೀನ್‌ ಮೂಲಕ ಸುಮನ್‌ ಬ್ಯುಸ್ನೆಸ್‌ ಆರಂಭಿಸಿದರು. ಈಗ ಸಮೀಪದಲ್ಲಿ ಮತ್ತೊಂದು ಹೋಟೆಲ್‌ ಆರಂಭಿಸಿದ್ದಾರೆ. ಮೊಬೈಲ್‌ ಕ್ಯಾಂಟೀನ್‌ನಲ್ಲಿ ಬೆಳಗ್ಗೆ ತಿಂಡಿ ದೊರೆತರೆ, ಹೋಟೆಲ್‌ನಲ್ಲಿ ಮಧ್ಯಾಹ್ನ ಊಟ ದೊರೆಯುತ್ತೆ. ಬಹುತೇಕ ಪ್ರತಿದಿನ ಇಲ್ಲಿ ಜನರು ಮಾರುದ್ದ ಕ್ಯೂ ನಿಂತಿರುತ್ತಾರೆ. ಎಷ್ಟೋ ಜನರು ಇಲ್ಲಿ ತಿಂಡಿ ತಿಂದು, ಮನೆಗೂ ಪಾರ್ಸಲ್‌ ಕೊಂಡೊಯ್ಯುತ್ತಾರೆ. ಹೋಟೆಲ್‌ನಲ್ಲಿ ಊಟ ಮಾಡುವಾಗ ನೀವು ನಿಜಕ್ಕೂ ಯಾವುದೋ ದೇವಸ್ಥಾನದಲ್ಲಿ ಕುಳಿತು ಊಟ ಮಾಡುವ ಅನುಭವ ನೀಡುತ್ತದೆ. ಇಲ್ಲಿ ಅಂಥ ವಾತಾವರಣ ಇದೆ. ಹಾಗೇ ಹೋಟೆಲ್‌ ಒಳಗೆ ಭಕ್ತಿಗೀತೆಗಳನ್ನು ಕೇಳಿ ಊಟ ಮಾಡುತ್ತಿದ್ದರೆ ಆ ಖುಷಿಯನ್ನು ವರ್ಣಿಸಲು ಸಾಧ್ಯವಿಲ್ಲ.

ತಯಾರಿ ಹೇಗಿರುತ್ತೆ?

ಇಷ್ಟೆಲ್ಲಾ ತಯಾರಿ ನಡೆಸಲು ಸುಮನ್‌ ಹಾಗೂ ತಂಡ ಬೆಳಗಿನ ಜಾವ 1 ಗಂಟೆಗೆ ಏಳಬೇಕು. ಸಹೋದರ ಪವನ್‌ ಹಾಗೂ ತಾಯಿ, ಸುಮನ್‌ಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇಲ್ಲಿ ತಯಾರಾಗುವ ಬಹುತೇಕ ತಿಂಡಿಗಳನ್ನು ಸುಮನ್‌ ತಾಯಿ ತಯಾರಿಸುತ್ತಾರೆ. ಸುಮಾರು 35 ಮಂದಿ ಶಿಫ್ಟ್‌ ಪ್ರಕಾರ ಕೆಲಸ ಮಾಡುತ್ತಾರೆ. ಬೆಳಗ್ಗೆ 4 ಗಂಟೆಗೆಲ್ಲಾ ತಿಂಡಿ ತಯಾರಾಗುತ್ತದೆ. 4.30ಕ್ಕೆ ದೇವರಿಗೆ ನೈವೇದ್ಯ ಮಾಡಿದ ಬಳಿಕ ಬೆಳಗ್ಗೆ 7 ಗಂಟೆ ವೇಳೆಗೆ ಜನರಿಗೆ ಪ್ರಸಾದ ದೊರೆಯಲಿದೆ. ಇಲ್ಲಿ 30 ರೂ. ನಿಂದ 100 ರೂ. ವರೆಗೆ ಒಂದೊಂದು ಪ್ರಸಾದಕ್ಕೂ ಬೆಲೆ ನಿಗದಿ ಆಗಿದೆ. ಮಧ್ಯಾಹ್ನದ ಊಟ 199 ರೂಪಾಯಿ. ಬೆಳಗಿನ ತಿಂಡಿಗೆ ದೊನ್ನೆ, ಮಧ್ಯಾಹ್ನಕ್ಕೆ ಬಾಳೆಎಲೆ ಬಳಸಲಾಗುತ್ತೆ. ಬೆಳಗ್ಗೆ 10 ಗಂಟೆವರೆಗೂ ತಿಂಡಿ ದೊರೆಯುತ್ತದೆ. ಮತ್ತೆ ಮಧ್ಯಾಹ್ನ 12.30 ರಿಂದ 3 ವರೆಗೂ ಊಟ ಸಿಗುತ್ತದೆ. ಹೋಟೆಲ್‌ನಲ್ಲಿ ಸುಮಾರು 25 ಜನರು ಕುಳಿತು ತಿನ್ನುವಷ್ಟು ಜಾಗ ಇದೆ. ಸೋಮವಾರ ರಜೆ ಇರುತ್ತದೆ.

 ಜನರು ಸರತಿ ಸಾಲಿನಲ್ಲಿ ನಿಂತು ಬ್ರಾಹ್ಮಣ ಪ್ರಸಾದಮ್‌ನಲ್ಲಿ ಊಟ, ತಿಂಡಿ ಸವಿದು ಬರುತ್ತಾರೆ.
ಜನರು ಸರತಿ ಸಾಲಿನಲ್ಲಿ ನಿಂತು ಬ್ರಾಹ್ಮಣ ಪ್ರಸಾದಮ್‌ನಲ್ಲಿ ಊಟ, ತಿಂಡಿ ಸವಿದು ಬರುತ್ತಾರೆ.

ಎಲ್ಲದಕ್ಕೂ ದೇವರ ಆಶಿರ್ವಾದ ಬೇಕು

ಪ್ರಸಾದ ಎಂದರೆ ಜನರಿಗೆ ಉಚಿತವಾಗಿ ನೀಡಬೇಕು, ನೀವು ಹಣ ಪಡೆಯುತ್ತಿದ್ದೀರಿ ಎಂಬ ಪ್ರಶ್ನೆಗೆ ಸುಮನ್‌ ಉತ್ತರಿಸಿದ್ದು ಹೀಗೆ. ''ಇದು ದೇವರ ಹೆಸರಿನಲ್ಲಿ ನಡೆಯುತ್ತಿರುವ ಬ್ಯುಸ್ನೆಸ್‌ ಅಲ್ಲ, ದೇವರ ಆಶೀರ್ವಾದದಿಂದ ಮಾಡುತ್ತಿರುವ ಬ್ಯುಸ್ನೆಸ್.‌ ದೇವರು ಯಾರೊಬ್ಬರ ಸ್ವತ್ತಲ್ಲ, ಎಲ್ಲರಿಗೂ ಬೇಕು. ಹಾಗೇ ನೋಡೋಕೆ ಹೋದ್ರೆ ಯಾವ ದೇವಸ್ಥಾನದಲ್ಲಿ ಫ್ರೀ ಪ್ರಸಾದ ಕೊಡ್ತಾರೆ ಹೇಳಿ? ದೇವರ ದರ್ಶನಕ್ಕೆ ಟಿಕೆಟ್‌ ಪಡೆಯಬೇಕು. ಕುಂಕುಮಾರ್ಚನೆಗೆ ದುಡ್ಡು ಕೊಡಬೇಕು. ಕೊನೆಗೆ ಪ್ರಸಾದ ಪಡೆಯಲು ಕೂಡಾ ದುಡ್ಡು ಕೊಡಬೇಕು. ದೇವಸ್ಥಾನದ ಹೊರಗೆ ಹೂವು, ಹಣ್ಣು, ತೆಂಗಿನಕಾಯಿ, ಕರ್ಪೂರ ಮಾರುವವರು ಮಾಡುತ್ತಿರುವುದು ಏನು? ನಾನು ಜನರು ಇಷ್ಟ ಪಡುವ ತಿಂಡಿಯನ್ನು ಅವರಿಗೆ ಕೊಟ್ಟು ಹಣ ಪಡೆಯುತ್ತಿದ್ದೇನೆ.

ಈ ತಿಂಡಿಗಳನ್ನು ತಯಾರಿಸಲು ಯಾವುದೇ ಕೃತಕ ಸಾಮಗ್ರಿಗಳನ್ನು ಬಳಸುವುದಿಲ್ಲ. ಈರುಳ್ಳಿ ಬೆಳ್ಳುಳ್ಳಿ ಕೂಡಾ ಇರುವುದಿಲ್ಲ. ಶುದ್ಧ ತುಪ್ಪ , ಗಾಣದ ಎಣ್ಣೆ ಬಳಸುತ್ತೇವೆ. ಜನರಿಗೆ ಒಳ್ಳೆ ಊಟ ಒದಗಿಸುತ್ತಿದ್ದೇನೆ. ಹಾಗೇ ಜನರು ಕೂಡಾ ತೃಪ್ತಿಯಿಂದ ತಿಂದು ದುಡ್ಡು ಕೊಟ್ಟು ಹೋಗ್ತಾರೆ. ಅನೇಕ ಸೆಲೆಬ್ರಿಟಿಗಳು ಇಲ್ಲಿ ಊಟ ಮಾಡಿ ನಮಗೆ ಕಾಂಪ್ಲಿಮೆಂಟ್ಸ್‌ ನೀಡಿದ್ದಾರೆ, ಜನರಿಗೆ ಸುಲಭವಾಗಿ ಪ್ರಸಾದ ದೊರೆಯುವಂತೆ ಆಗಬೇಕು, ಜನರು ಮರೆಯುತ್ತಿರುವ ಸಾಂಪ್ರದಾಯಿಕ ಆಹಾರಗಳನ್ನು ಅವರಿಗೆ ಮತ್ತೆ ನೆನಪಿಸಬೇಕು ಎನ್ನುವುದು ನನ್ನ ಉದ್ದೇಶ''

ಸೆಲೆಬ್ರಿಟಿಗಳು ಕೂಡಾ ಇಲ್ಲಿನ ರುಚಿಗೆ ಮಾರು ಹೋಗಿದ್ದಾರೆ
ಸೆಲೆಬ್ರಿಟಿಗಳು ಕೂಡಾ ಇಲ್ಲಿನ ರುಚಿಗೆ ಮಾರು ಹೋಗಿದ್ದಾರೆ

ತುಳಿಯಲು ಯತ್ನಿಸಿದವರೆಷ್ಟೋ

ಬೆಳೆಯುವವರನ್ನು ತುಳಿಯುವ ಎಷ್ಟೋ ಜನರನ್ನು ನೋಡಿದ್ದೇವೆ. ಸುಮನ್‌ಗೆ ಕೂಡಾ ಈ ಅನುಭವ ಆಗಿದೆ. ಕಡಿಮೆ ಸಮಯದಲ್ಲಿ ಸಕ್ಸಸ್‌ ಕಂಡ ಸುಮನ್‌ ಬೆಳವಣಿಗೆ ಸಹಿಸಲಾರದೆ ಅನೇಕರು ಸೋಷಿಯಲ್‌ ಮೀಡಿಯಾ, ಮಾಧ್ಯಮಗಳಿಗೆ ಹಣ ನೀಡಿ ನೆಗೆಟಿವ್‌ ಕಾಮೆಂಟ್‌ ಹಾಕಿಸಿರುವುದುಂಟು. ಪ್ರಸಾದವನ್ನು ಉಚಿತವಾಗಿ ನೀಡಿ ಎಂದು ಗಲಾಟೆ ಮಾಡಿರುವವರೂ ಇದ್ದಾರೆ. ''ನನಗೆ ತಿಳಿದಿರುವ ಮಟ್ಟಿಗೆ ಈ ಕಾನ್ಸೆಪ್ಟ್‌ ದೇಶದಲ್ಲೇ ಮೊದಲು. ಉತ್ತರ ಭಾರತದಿಂದ ಕೂಡಾ ಅನೇಕ ಯೂಟ್ಯೂಬರ್‌ಗಳು ಬಂದು ಇಂಟರ್‌ವ್ಯೂ ಮಾಡಿದ್ದಾರೆ. ತಮಿಳುನಾಡು, ಆಂಧ್ರದಿಂದ ಕೂಡಾ ಬಂದಿದ್ದಾರೆ. ಯಾರನ್ನೂ ನಾನು ಕರೆಸಿಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ತಿಳಿದು ಜನರು ಇಲ್ಲಿ ಬಂದು ಹೋಗಿದ್ದಾರೆ. ಸಿಹಿಕಹಿ ಚಂದ್ರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇಲ್ಲಿ ಬಂದು ಊಟದ ರುಚಿ ನೋಡಿ ಹೊಗಳಿದ್ದಾರೆ. ಹಾಳು ಮಾಡುವವರು ನೂರು ಜನ ಇದ್ದರೂ ಕಾಯಲು ದೇವರೊಬ್ಬನಿದ್ದಾನೆ'' ಅದು ಸಾಕು ಎನ್ನುತ್ತಾರೆ ಸುಮನ್.‌

ಹೋಟೆಲ್‌ ಬುಸ್ನೆಸ್‌, ಔಟ್‌ ಡೋರ್‌ ಕ್ಯಾಟರಿಂಗ್‌ ಕೆಲಸದಲ್ಲಿ ಬ್ಯುಸಿ ಇರುವುದರಿಂದ ಸುಮನ್‌ ಭಾರದ್ವಾಜ್ ಕೆಲವು ದಿನಗಳ ಮಟ್ಟಿಗೆ ಆಕ್ಟಿಂಗ್‌ ನಿಲ್ಲಿಸಿದ್ದಾರೆ. ಆದಷ್ಟು ಬೇಗ ಸುಮನ್‌ ಮತ್ತೆ ನಟನೆಗೆ ವಾಪಸ್‌ ಬರಲಿ, ಆಕ್ಟಿಂಗ್‌, ಬ್ಯುಸ್ನೆಸ್‌ ಎರಡರಲ್ಲೂ ಇನ್ನಷ್ಟು ಯಶಸ್ಸು ಕಾಣಲಿ ಎಂದು ಹಾರೈಸೋಣ. ಹಾಗೇ ನೀವು ಬೆಂಗಳೂರಿಗರಾದರೆ ಒಮ್ಮೆ 'ಬ್ರಾಹ್ಮಣ ಪ್ರಸಾದಮ್'ನಲ್ಲಿ ತಿಂಡಿ ಸವಿದು ಬನ್ನಿ. ಅಡ್ರೆಸ್‌ ಇಲ್ಲಿದೆ.

97, ಶ್ರೀ ಸಾಯಿ ಪ್ಲಾಜಾ, 21ನೇ ಮುಖ್ಯರಸ್ತೆ, ಸಿದ್ದಣ್ಣ ಲೇ ಔಟ್‌, ಬನಶಂಕರಿ 2ನೇ ಹಂತ, ಬೆಂಗಳೂರು

- ರಕ್ಷಿತ

ಈ ಕಾಲಂ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ

ಇ-ಮೇಲ್‌: ht.kannada@htdigital.in

ಇಂಥಹ ಮತ್ತಷ್ಟು ಅಂಕಣಗಳನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

Whats_app_banner