Tea Varieties: ಟೊಮೆಟೊಯಿಂದ ಪ್ರಾಣಿಗಳ ಮಲದ ಟೀವರೆಗೆ, ಪ್ರಪಂಚದಲ್ಲಿ ತಯಾರಾಗುತ್ತೆ ಕಂಡು ಕೇಳರಿಯದ ಚಿತ್ರವಿಚಿತ್ರ ಚಹಾಗಳು
ಚಹಾ ಪ್ರಪಂಚದಾದ್ಯಂತ ಹಲವರ ಫೇವರಿಟ್ ಪಾನೀಯ. ಚಹಾದಲ್ಲಿ ಹಲವು ಬಗೆಗಳಿವೆ. ಗ್ರೀನ್ ಟೀ, ಬ್ಲ್ಯಾಕ್ ಟೀ, ಕ್ಯಾಮೊಮೈಲ್ ಟೀ ಇಂಥದ್ದನ್ನೆಲ್ಲಾ ನೀವು ಕೇಳಿರಬಹುದು. ಆದರೆ ಟೊಮೆಟೊದಿಂದ, ಪ್ರಾಣಿಗಳ ಮಲದಿಂದಲೂ ಚಹಾ ತಯಾರಿಸುತ್ತಾರೆ ಎಂದರೆ ನೀವು ನಂಬುತ್ತೀರಾ? ಪ್ರಪಂಚದಲ್ಲಿ ತಯಾರಾಗುವ ಚಿತ್ರ ವಿಚಿತ್ರ ಚಹಾದ ಬಗ್ಗೆ ಕೇಳಿದರೆ ನಿಮಗೆ ತಲೆ ತಿರುಗೋದು ಗ್ಯಾರಂಟಿ.
ಚಹಾ ಎಂದರೆ ಸಾಕು ಆಹಾ ಎನ್ನುವ ಅಭಿಮಾನಿ ಬಳಗವೇ ಇದೆ. ಚಹಾದ ಹಿತಕರ ಪರಿಮಳದಿಂದಾಗಿ ಅನೇಕರಿಗೆ ಇದೊಂದು ಅತ್ಯಂತ ಪ್ರಿಯವಾದ ಪಾನೀಯ ಎನಿಸಿದೆ. ವಿಶ್ವದಾದ್ಯಂತ ಚಹಾಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸಾಮಾನ್ಯ ಚಹಾದಿಂದ ಹಿಡಿದು ವಿವಿಧ ರೀತಿಯ ಚಹಾದವರೆಗೂ ಅನೇಕರು ಅನೇಕರ ರೀತಿಯ ಚಹಾದ ರುಚಿಯನ್ನು ನೋಡಿರಬಹುದು. ಆದರೆ ಇಲ್ಲಿ ನಾವು ಹೇಳ ಹೊರಟಿರುವ ಪ್ರಪಂಚದ ಅತ್ಯಂತ ವಿಚಿತ್ರವಾದ ಚಹಾದ ಬಗ್ಗೆ ನೀವು ಹೆಸರು ಕೇಳಿರಲೂ ಸಾಧ್ಯವಿಲ್ಲ.
1. ಟೊಮೆಟೊ ಪುದೀನಾ ಚಹಾ
ನೀವು ನಿತ್ಯ ಕುಡಿಯುವ ಚಹಾಗೆ ಟೊಮೆಟೊ ಹಾಗೂ ಪುದೀನಾ ಎಲೆಗಳನ್ನು ಸೇರಿಸಿದರೆ ಅದರ ಸ್ವಾದ ಹೇಗಿರಬಹುದು..? ನಿಮಗೆ ಇದು ವಿಚಿತ್ರ ಎನಿಸಿದರೂ ಸಹ ಮೊರಕ್ಕೊದ ಅತ್ಯಂತ ಜನಪ್ರಿಯ ಚಹಾದ ಪೈಕಿ ಇದೂ ಒಂದಾಗಿದೆ. ಇನ್ನೂ ಹಣ್ಣಾಗದ ಟೊಮೆಟೊ ಹಾಗೂ ಪುದೀನಾ ಎಲೆಗಳನ್ನು ಬಳಸಿ ತಯಾರಿಸುವ ಈ ಟೀ ಅನೇಕರಿಗೆ ಅಚ್ಚುಮೆಚ್ಚು.
2. ಉಪ್ಪು- ಖಾರ ಚಹಾ
ಸಕ್ಕರೆ ಇರುವ ಚಹಾ ಹಾಗೂ ಸಕ್ಕರೆ ಹಾಕದ ಚಹಾವನ್ನು ನೀವು ಸವಿದಿದ್ದರಬಹುದು. ಆದರೆ ಭಾರತದಲ್ಲಿಯೇ ಇರುವ ಈ ಚಹಾವು ಹೊಸ ಮಾದರಿಯನ್ನು ಹೊಂದಿದೆ. ಭಾರತೀಯ ಮಸಾಲೆ ಪದಾರ್ಥಗಳು ಹಾಗೂ ಉಪ್ಪನ್ನು ಬಳಸಿ ಈ ಚಹಾ ತಯಾರಿಸಲಾಗುತ್ತದೆ.
3. ಪು-ಎರ್ಹ್ ಚಹಾ
ವಿಚಿತ್ರವಾದ ಹೆಸರನ್ನು ಹೊಂದಿರುವ ಈ ಚಹಾ ಚೀನಾ ಮೂಲದ್ದು. ಇದು ಒಂದು ರೀತಿಯಲ್ಲಿ ಮಣ್ಣಿನ ಘಮವನ್ನು ಹೊಂದಿರುವಂತಹ ಅತ್ಯಂತ ವಿಭಿನ್ನವಾದ ಚಹಾ. ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿರುವ ಚಹಾ ಇದಾಗಿದೆ.
4. ಬೆಣ್ಣೆ ಚಹಾ
ನೇಪಾಳದ ಎತ್ತರದ ಪ್ರದೇಶಗಳಲ್ಲಿ ಸಿಗುವ ಈ ಚಹಾವು ಚಹಾಕ್ಕೆ ಸಂಪೂರ್ಣ ಹೊಸ ಆಯಾಮವನ್ನೇ ನೀಡುತ್ತಿದೆ. ನೇಪಾಳಿಯರು ಇದನ್ನು ಪೋ ಚಾ ಎಂದು ಕರೆದರೆ ನಾವೆಲ್ಲ ಇದೆ ಬೆಣ್ಣೆ ಚಹಾ ಎಂದು ಹೆಸರಿಡಬಹುದು. ಅಂದಹಾಗೆ ಇದು ಹಸುವಿನ ಹಾಲಿನ ಬೆಣ್ಣೆಯಿಂದ ತಯಾರಿಸುವ ಚಹಾವಲ್ಲ. ಚಹಾ ಎಲೆಗಳನ್ನು ಉಪ್ಪು ಹಾಗೂ ಯಾಕ್ ಪ್ರಾಣಿಯ ಹಾಲಿನಿಂದ ತಯಾರಿಸಿದ ಬೆಣ್ಣೆಯೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ.
5. ಬಗ್ ಪೂಪ್ ಚಹಾ
ಪೂಪ್ ಎಂದರೆ ಮಲ ಅಲ್ವೇ ಎಂದು ನೀವು ಯೋಚನೆ ಮಾಡಿದ್ದರೆ ನೀವು ಎಂದುಕೊಂಡಿದ್ದು ಸರಿಯಾಗಿಯೇ ಇದೆ. ಅತ್ಯಂತ ವಿಚಿತ್ರವಾದ ಈ ಚಹಾವು ಇಂಡೋನೇಷ್ಯಾದಲ್ಲಿ ಹುಟ್ಟಿಕೊಂಡಿದೆ. ಸಿವೆಟ್ ಬೆಕ್ಕುಗಳು ತಿಂದು ಮಲ ವಿಸರ್ಜನೆ ಮೂಲಕ ಹೊರಹಾಕಿದ ಕಾಫಿ ಬೀಜಗಳಿಂದ ಇದನ್ನು ತಯಾರಿಸಲಾಗುತ್ತದೆ. ಕಾಫಿ ಬೀಜದಿಂದ ತಯಾರಿಸುವ ಪಾನೀಯವನ್ನು ಚಹಾ ಎಂದು ಕರೆಯಲು ಸಾಧ್ಯವಿಲ್ಲವಾದರೂ ಸಹ ಚಹಾ ಪ್ರಿಯರೇ ಇದನ್ನು ಹೆಚ್ಚಾಗಿ ಸವಿಯುತ್ತಾರೆ.
6. ಚೀಸ್ ಚಹಾ
ಇತ್ತೀಚಿನ ವರ್ಷಗಳಲ್ಲಿ ಏಷ್ಯಾದಲ್ಲಿ ಭಾರೀ ಸದ್ದು ಮಾಡುತ್ತಿರುವ ಚಹಾ ಇದಾಗಿದೆ. ಸಾಂಪ್ರದಾಯಿಕ ಚಹಾಕ್ಕೆ ಚೀಸ್ ಫೋಮ್ ಅನ್ನು ಹಾಕುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ಸಿಹಿ ಹಾಗೂ ಖಾರದ ಸುವಾಸನೆ ಹೊಂದಿರುತ್ತದೆ.
7. ಪಂಗಾ ಸಗಣಿ ಚಹಾ
ಭಾರತದ ಅರುಣಾಚಲ ಪ್ರದೇಶದಲ್ಲಿ ಸಿಗುವ ಚಹಾ ಇದು. ಕಾಡುಗಳಲ್ಲಿ ಕಾಣಿಸುವ ನೀರೆಮ್ಮೆಗಳ ಸಗಣಿಯಲ್ಲಿ ಚಹಾದ ಎಲೆಗಳನ್ನು ಅದ್ದುವ ಮೂಲಕ ಈ ಚಹಾ ತಯಾರಾಗುತ್ತದೆ. ಈ ಚಹಾ ಔಷಧೀಯ ಗುಣಗಳನ್ನು ಹೊಂದಿರುತ್ತದೆ ಎನ್ನಲಾಗಿದೆ. ವಿಶಿಷ್ಠ ಸುವಾಸನೆ ಹಾಗೂ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಈ ಚಹಾವನ್ನು ಅಲ್ಲಿನ ಸ್ಥಳೀಯ ಬುಡಕಟ್ಟು ಜನಾಂಗದವರು ಹೆಚ್ಚಾಗಿ ಸೇವಿಸುತ್ತಾರೆ.
ನೋಡಿದ್ರಲ್ಲ ಪ್ರಪಂಚದಲ್ಲಿ ಸಿಗುವ ವಿವಿಧ ಬಗೆಯ ಚಹಾಗಳನ್ನ. ನೀವು ಟೀ ಪ್ರಿಯರಾಗಿದ್ದರೆ ಈ ಬಗೆ ಬಗೆಯ ಚಹಾಗಳನ್ನು ಒಮ್ಮೆಯಾದ್ರೂ ಸವಿಯಲೇಬೇಕು.
ವಿಭಾಗ