ದಿನವೂ ಒಂದೇ ರೀತಿ ತಿಂಡಿ ತಿಂದು ಬೇಸರವಾಗಿದ್ಯಾ: ಹಾಗಿದ್ದರೆ ಈ ರೀತಿ ಗೋಲಿ ಇಡ್ಲಿ ಮಾಡಿ ಸವಿಯಿರಿ
ದಿನವೂ ಒಂದೇ ರೀತಿ ತಿಂಡಿ ತಿಂದು ಬೋರ್ ಆಗಿದ್ಯಾ?ಹಾಗಿದ್ದರೆ ಬೇರೆ ರೀತಿಯ ಉಪಹಾರ ಖಾದ್ಯಗಳನ್ನು ಟ್ರೈ ಮಾಡಬಹುದು. ವೆರೈಟಿ ದೋಸೆ, ಇಡ್ಲಿ, ಕಡುಬು, ಪಡ್ಡು ಹೊರತುಪಡಿಸಿದರೆ ಗೋಲಿ ಇಡ್ಲಿಗಳನ್ನು ತಯಾರಿಸಬಹುದು. ತಿನ್ನಲು ಬಹಳ ರುಚಿಕರವಾಗಿರುವ ಈ ರೆಸಿಪಿ ತಯಾರಿಸುವುದು ತುಂಬಾನೇ ಸುಲಭ.

ಮನೆಗಳಲ್ಲಿ ಸಾಮಾನ್ಯವಾಗಿ ಬೆಳಗ್ಗೆ ತಿಂಡಿಗೆ ದೋಸೆ, ಉಪ್ಪಿಟ್ಟು ತಯಾರಿಸಲಾಗುತ್ತದೆ. ಇದನ್ನೇ ತಿಂದು ತಿಂದು ನಿಮಗೆ ಬೋರ್ ಆಗಿದ್ಯಾ? ಹಾಗಿದ್ದರೆ ಬೇರೆ ರೀತಿಯ ಉಪಹಾರ ಖಾದ್ಯಗಳನ್ನು ಟ್ರೈ ಮಾಡಬಹುದು. ವೆರೈಟಿ ದೋಸೆ, ಇಡ್ಲಿ, ಕಡುಬು, ಪಡ್ಡು ಹೊರತುಪಡಿಸಿದರೆ ಗೋಲಿ ಇಡ್ಲಿಗಳನ್ನು ತಯಾರಿಸಬಹುದು. ದಕ್ಷಿಣ ಭಾರತದಲ್ಲಿ ಇಡ್ಲಿ ಬಹಳ ಜನಪ್ರಿಯ ಬೆಳಗ್ಗಿನ ತಿಂಡಿ. ಇದೇ ರೀತಿ ಗೋಲಿ ಇಡ್ಲಿ ಎಂಬುದು ಕೂಡ ಒಂದು ಜನಪ್ರಿಯ ಉಪಹಾರವಾಗಿದೆ. ಗೋಲಿ ಇಡ್ಲಿಗಳ ಹೊರಭಾಗ ಗರಿಗರಿಯಾಗಿದ್ದು, ಮೃದುವಾಗಿರುತ್ತದೆ. ಈ ಪುಟಾಣಿ ಇಡ್ಲಿಗಳು ಬೆಳಗಿನ ಉಪಾಹಾರಕ್ಕೆ ಪರಿಪೂರ್ಣ ಆಯ್ಕೆಯಾಗಿದೆ. ಈ ತಿಂಡಿಯನ್ನು ತಯಾರಿಸುವುದು ತುಂಬಾನೇ ಸರಳ. ಇವು ರುಚಿಕರವಾದದ್ದು ಮಾತ್ರವಲ್ಲ ಪೌಷ್ಠಿಕಾಂಶದಿಂದಲೂ ಕೂಡಿದೆ. ನೋಡಲು ರಸಗುಲ್ಲದಂತೆ ಕಾಣುವ ಈ ಗೋಲಿ ಇಡ್ಲಿಯನ್ನು ತ್ವರಿತವಾಗಿ ತಯಾರಿಸಬಹುದು. ಇಡ್ಲಿಯಂತೆ ಹಿಟ್ಟನ್ನು ಹುದುಗಿಸುವ ಅಗತ್ಯವಿಲ್ಲ. ದಿನವೂ ಒಂದೇ ರೀತಿಯ ತಿಂಡಿ ತಿಂದು ಬೇಸರವಾಗಿದ್ದರೆ ಈ ರೆಸಿಪಿಯನ್ನು ಖಂಡಿತಾ ಟ್ರೈ ಮಾಡಬಹುದು. ಇದನ್ನು ಹೇಗೆ ತಯಾರಿಸಬಹುದು, ಇಲ್ಲಿದೆ ಮಾಹಿತಿ.
ಗೋಲಿ ಇಡ್ಲಿ ತಯಾರಿಸುವುದು ವಿಧಾನ
ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು- ಎರಡು ಕಪ್, ನೀರು- ಎರಡು ಕಪ್, ಉಪ್ಪು- ಅರ್ಧ ಟೀ ಚಮಚ, ತುಪ್ಪ ಅಥವಾ ಎಣ್ಣೆ- 2 ಚಮಚ, ಸಾಸಿವೆ- ಅರ್ಧ ಟೀ ಚಮಚ, ಕಡಲೆಕಾಯಿ- ಅರ್ಧ ಟೀ ಚಮಚ, ಎಳ್ಳು ಬೀಜ- 2 ಟೀ ಚಮಚ, ಕರಿಮೆಣಸು- 2, ಜೀರಿಗೆ- ಚಿಟಿಕೆ, ಹಸಿರು ಮೆಣಸಿನಕಾಯಿಗಳು- 2, ಶುಂಠಿ- ಸ್ವಲ್ಪ, ಕೊತ್ತಂಬರಿ ಪುಡಿ- 2 ಟೀ ಚಮಚ.
ಗೋಲಿ ಇಡ್ಲಿ ತಯಾರಿಸುವ ವಿಧಾನ: ಮೊದಲು ಒಂದು ದೊಡ್ಡ ಕಡಾಯಿಯನ್ನು ತೆಗೆದುಕೊಂಡು ಅದರಲ್ಲಿ ನೀರು ಸುರಿಯಿರಿ. ಸ್ವಲ್ಪ ಉಪ್ಪು ಮತ್ತು ತುಪ್ಪ ಸೇರಿಸಿ ಬಿಸಿ ಮಾಡಿ. ನೀರು ಕುದಿ ಬಂದಾಗ ಅಕ್ಕಿ ಹಿಟ್ಟು ಹಾಕಿ ಕಲಸಿ. ಹಿಟ್ಟಿಗೆ ಸಮನಾಗಿ ನೀರು ತೆಗೆದುಕೊಂಡರೆ ಅದು ಸರಿಯಾಗುತ್ತದೆ. ಹಿಟ್ಟು ಎಲ್ಲಾ ನೀರನ್ನು ಹೀರಿಕೊಳ್ಳುತ್ತದೆ. ಇದನ್ನು ಸ್ಟೌವ್ ಮೇಲೆ ಇರಿಸಿ, ಕನಿಷ್ಠ ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಡಿ. ಹಿಟ್ಟು ಸ್ವಲ್ಪ ತೇವ ಮತ್ತು ಮುದ್ದೆಯಾಗುತ್ತದೆ. ನಂತರ ಹಿಟ್ಟನ್ನು ಬಟ್ಟಲಿಗೆ ವರ್ಗಾಯಿಸಿ ಸ್ವಲ್ಪ ತಣ್ಣಗಾದ ಬಳಿಕ ಚಪಾತಿ ಹಿಟ್ಟು ಕಲಸಿದಂತೆ ಕೈಯಿಂದ ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ಸ್ವಲ್ಪ ಬಿಸಿ ನೀರನ್ನು ಸಿಂಪಡಿಸಿ ಹಿಟ್ಟು ಸೇರಿಸಿ. ನಂತರ ಅದರಿಂದ ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಸಣ್ಣ ಉಂಡೆಗಳನ್ನು ಮಾಡಿ. ಈ ಉಂಡೆಗಳನ್ನು ಇಡ್ಲಿ ಕುಕ್ಕರ್ ಪಾತ್ರೆಯಲ್ಲಿ ಹಾಕಿ ಬೇಯಿಸಿ. ಕನಿಷ್ಠ ಹತ್ತು ನಿಮಿಷಗಳ ಕಾಲ ಸ್ಟೀಮ್ ಮಾಡಿ.
ರುಚಿಗಾಗಿ, ಒಂದು ಚಮಚ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಮೆಣಸು, ಇಂಗು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ತುರಿದ ಶುಂಠಿ ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಬಹುದು. ಇದನ್ನು ಹಿಟ್ಟಿಗೂ ಸೇರಿಸಿ ಮಿಶ್ರಣ ಮಾಡಿ ಉಂಡೆ ಮಾಡಬಹುದು. ಅಥವಾ ಆವಿಯಲ್ಲಿ ಬೇಯುತ್ತಿರುವ ಗೋಲಿ ಇಡ್ಲಿಗಳ ಮೇಲೆ ನಿಧಾನವಾಗಿ ಈ ಹಿಟ್ಟನ್ನು ಸುರಿಯಬಹುದು. ಇದು ಅಂಟಿಕೊಳ್ಳುವಂತೆ ಮಾಡಲು ಎಲ್ಲವನ್ನೂ ಮಿಶ್ರಣ ಮಾಡಬೇಕು. ಇಷ್ಟು ಮಾಡಿದರೆ ಗೋಲಿ ಇಡ್ಲಿ ಸವಿಯಲು ಸಿದ್ಧ. ಬೇಕಿದ್ದರೆ ಮೇಲೆ ಕೊತ್ತಂಬರಿ ಸೊಪ್ಪು ಹಾಕಬಹುದು. ಇದನ್ನು ಚಟ್ನಿಯೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.

ವಿಭಾಗ